ಮಾಳೇಟಿರ ಸೀತಮ್ಮ ವಿವೇಕ್ ಕೊಡಗಿನ ಸ್ವತಂತ್ರ ಹೋರಾಟಗಾರರು

ಮಾಳೇಟಿರ ಸೀತಮ್ಮ ವಿವೇಕ್

ಕೊಡಗಿನ ಸ್ವತಂತ್ರ ಹೋರಾಟಗಾರರು

ಚಿತ್ರಕೃಪೆ:ಗುಗಲ್

ಮೊದಲಿಗೆ ಹೇಳಬೇಕೆಂದರೆ ಕೊಡಗು ಬ್ರಿಟೀಷರ ಆಳ್ವಿಕೆಯಲ್ಲಿ ತಮ್ಮ ತಮ್ಮ ಆಚಾರ ವಿಚಾರಗಳಲ್ಲಿಯೆ ಇದ್ದಂತಹ ನೆಲೆ ಮೂಲದ ಗಣತಂತ್ರ ವ್ಯವಸ್ಥೆಯ ರೀತಿಯನ್ನೇ ಅನುಭವಿಸಿತ್ತು ಎಂದೆ ಹೇಳಬಹುದು., ಏಕೆಂದರೆ ಪರಕೀಯರ ಆಳ್ವಿಕೆಯ ಆ ದಿನಗಳಲ್ಲಿ ಅವರಿಂದಾಗುತ್ತಿದ್ದ ನ್ಯಾಯ ಅನ್ಯಾಯಗಳೆಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತ ತನ್ನ ಗತಿಯಲ್ಲೇ ಇರುತ್ತಿದ್ದ ಭಾರತದ ಇತರ ಪ್ರದೇಶಗಳಿಗಿಂತ, ಅದರಲ್ಲೂ ಬ್ರಿಟೀಷರಿಗೆ ಹೆಚ್ಚಿನ ತಕರಾರಿಲ್ಲದೆ ಆಳಲು ಸಾಧ್ಯವಾಗಿದ್ದ ಪ್ರದೇಶವೆಂದರೆ ಅದು ಕೊಡಗಾಗಿತ್ತು, ಬ್ರಿಟೀಷರು ಬಂದಾಗಲೂ ಕೊಡಗು ಇಕ್ಕೇರಿಯ ಲಿಂಗರಾಜರೂ ಆಳಿದಂತೆ ಸಹಜ ಆಳ್ವಿಕೆಗೊಳಪಟ್ಟ ಪ್ರಾಂತ್ಯವಾಗಿತ್ತು. ಹಾಗಿದ್ದರೂ ಭಾರತ ಸ್ವತಂತ್ರ ಸಂಗ್ರಾಮದ ಕಿಡಿ ಇಡೀ ಭಾರತಕ್ಕೆ ಹಚ್ಚಿದ್ದ ಕಿಚ್ಚಾಗಿದ್ದರಿಂದ ಅಂತಹ ಸಂಗ್ರಾಮಕ್ಕೆ ದೇಶದ ಪ್ರತೀ ಸಂಸ್ಥಾನ, ನಾಡು, ಪ್ರಾಂತ್ಯ, ಹೋಬಳಿಯ ಜನರು ದುಮುಕ್ಕಿದ್ದರು. ಅದರಂತೆ ಸಂಗ್ರಾಮದ ಕಿಚ್ಚು ಆಗ ಕೊಡಗಿನಲ್ಲೂ ಹಬ್ಬಿತ್ತು.
ವಿದೇಶಿ ಮಹಿಳೆಯಾದರೂ ಅನ್ನಿಬೆಸೆಂಟ್ ಭಾರತದ ಸ್ವ ಆಡಳಿತ ವ್ಯವಸ್ಥೆಯ ಬೆಂಬಲಗಾರ್ತಿಯಾಗಿ ತನ್ನ ಬರವಣಿಗೆಗಳಿಂದಲೇ ಜನರನ್ನು ಬಡಿದೆಬ್ಬಿಸಿದ್ದು ಗಾಂಧೀಜಿಯವರಿಗೂ ಸ್ಪೂರ್ತಿಯಾಗಿತ್ತು. ಗಾಂಧೀಜಿಯವರ ಅಹಿಂಸಾವಾದದೊಂದಿಗೆ ಆರಂಭಗೊಂಡ ಭಾರತ ಸ್ವತಂತ್ರ ಹೋರಾಟ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು. ಅದರಂತೆ ಕೊಡಗಿನಿಂದಲೂ ಗಾಂಧೀಜಿಯವರ “ಕ್ವಿಟ್ ಇಂಡಿಯಾ” ಚಳವಳಿಗೆ ಬೆಂಬಲವಾಗಿ ನಿಂತ ಕೊಡಗಿನ 260ಕ್ಕೂ ಅಧಿಕ ಸ್ವತಂತ್ರ ಹೋರಾಟಗಾರರು ಮತ್ತು ಜೈಲು ಸೇರಿದ 80 ಹೋರಾಟಗಾರರ ಪಟ್ಟಿಯೇ ಇಂದು ನಮ್ಮಲ್ಲಿದೆ.
ಅದರಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು ಕೊಡಗಿನ ಗಾಂಧಿ ಎಂದು ಕರೆಯಲ್ಪಟ್ಟ ಭಾರತ ಕಾಂಗ್ರೆಸ್ ಕಮಿಟಿಯಲ್ಲಿದ್ದ ಪಂದ್ಯಂಡ ಬೆಳ್ಯಪ್ಪ ಮತ್ತು ತಮ್ಮ ಹಾಲುಣಿಸುವ ಕಂದನೊಂದಿಗೆ ಜೈಲು ಸೇರಿದ್ದ ಅವರ ಪತ್ನಿ ಸೀತಮ್ಮ. ಇನ್ನು ಪಾರುವಂಗಡ ಕುಶಾಲಪ್ಪ, ಇವರು 1928ರಲ್ಲಿ ಕಲ್ಕತ್ತ ಕಾಂಗ್ರೆಸ್ ಸಮಾವೇಶದಿಂದ ಹಿಂದಿರುಗುವಾಗ ದಾರಿ ಮಧ್ಯದಲ್ಲೆ ಸಂಶಯಾಸ್ಪದ ಸಾವನ್ನಪ್ಪಿದ್ದರು. ಅದರಂತೆ “ಕಾವೇರಿ” ಎಂಬ ಹೆಣ್ಣು ಮಗಳು ಸ್ವತಂತ್ರ ಸಂಗ್ರಾಮಕ್ಕೆ ಇಳಿಯಲು ಸೂಕ್ತ ಸಹಕಾರ ಸಿಗದ ಕಾರಣ ಕಾಲುಗಳನ್ನು ಬಿಗಿದುಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಕೊಡಗಿನ ಇತಿಹಾಸ ಎಂದಿಗೂ ಮರೆಯಲಾರದಂತಹ ಘಟನೆ… 1920ರಲ್ಲಿ ಆರಂಭವಾದ ‘ಕೊಡಗು ವೀಕ್ಲಿ’ ಎಂಬ ಪತ್ರಿಕೆ ದೇಶದ ಸ್ವತಂತ್ರ ಸಂಗ್ರಾಮದ ವಿಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿತ್ತು, ಇದರಲ್ಲಿ ಸಿ ಎಂ ಪೂಣಚ್ಚ ಮತ್ತು ಪಂದ್ಯಂಡ ಬೆಳ್ಯಪ್ಪ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ರಾಜಕೀಯ ವಿಷಯಗಳನ್ನು ಯಥೇಚ್ಚವಾಗಿ ಮುದ್ರಿಸಲಾಗುತ್ತಿತ್ತು ಅದರಂತೆ ವಿರಾಜಪೇಟೆಯಲ್ಲಿ ಸರಾಯಿ ನಿಷೇಧಕ್ಕೆ ಕರೆ ನೀಡಿದಾಗ ಕೈಲ್ ಪೊಳ್ದ್ ಹಬ್ಬದಲ್ಲಿ ಪ್ರತಿವರ್ಷ 2,742ಗ್ಯಾಲನ್ ಸಾರಾಯಿ ಮಾರಾಟವಾಗುತ್ತಿದ್ದದ್ದು 229ಗ್ಯಾಲನ್ ಇಳಿದಿತ್ತು. ಜೊತೆಗೆ ವಿದೇಶಿ ಮಾಲುಗಳ ಬಹಿಷ್ಕಾರವನ್ನೂ ಕೈಗೆತ್ತಿಕೊಂಡಿತ್ತು. ಮಲ್ಲೇಂಗಡ ಚಂಗಪ್ಪ, ಬಿ.ಜಿ ಗಣಪಯ್ಯ, ಮಂಡೆಪಂಡ ಕಾರ್ಯಪ್ಪನವರು 1930ರಲ್ಲಿ ಐರೋಪ್ಯ ಧ್ವಜ ಕೆಳಗಿಳಿಸಿ ಭಾರತದ ರಾಷ್ಟ್ರೀಯ ಧ್ವಜವನ್ನು ಮಡಿಕೇರಿ ಕೋಟೆಯಲ್ಲಿ ಹಾರಿಸಿದ್ದು ವಿಶೇಷವಾಗಿತ್ತು. ಅದೇ ಸಮಯದಲ್ಲಿ ಸಿ.ಎಂ. ಪೂಣಚ್ಚನವರು ಕರಪತ್ರ ಅಚ್ಚು ಹಾಕಿ ಹಂಚಿದಾಗ ಅವರನ್ನು ಅಚ್ಚುಯಂತ್ರದೊಂದಿಗೆ ಹಿಡಿದು ಒಂಭತ್ತು ತಿಂಗಳು ಕಠಿಣ ಕಾರಾಗೃಹ ವಾಸಕ್ಕೆ ತಳ್ಳಲಾಗಿತ್ತು. ಗಾಂಧೀಜಿಯವರ ಪ್ರಭಾವ ಹೆಚ್ಚುತ್ತಿದ್ದಂತೆ ಕೊಡಗಿನ ವಿರಾಜಪೇಟೆ, ಹುದಿಕೇರಿ, ಮಡಿಕೇರಿಯಲ್ಲಿ ಸಾರ್ವಜನಿಕ ಸ್ವತಂತ್ರ ಸಂಗ್ರಾಮ ಸಭೆಗಳು ಹೆಚ್ಚು ಹೆಚ್ಚು ಜರುಗಿದ್ದವು. ಮಡಿಕೇರಿ ಸೆಂಟ್ರಲ್ ಹೈಸ್ಕೂಲ್ ಮಕ್ಕಳು ಕೂಡ ಚಳವಳಿಯಲ್ಲಿ ಭಾಗವಹಿಸಿ 10ದಿನ ಶಾಲೆ ಮುಚ್ಚುವಂತೆ ಮಾಡಿದ್ದರು. ಆಗ ಕೆಲವು ವಿದ್ಯಾರ್ಥಿಗಳನ್ನೇ ಬಂಧಿಸಲಾಗಿತ್ತು… ವೆಂಕಟರಾವ್, ರಂಗನಾಥ್ ದಿವಾಕರ್, ಕಮಲಾದೇವಿ ಚೊಟ್ಟಪಾಡ್ಯ ಮುಂತಾದ ಖ್ಯಾತನಾಮರು ಕೊಡಗಿಗೆ ಆಗಮಿಸಿ ಮತ್ತಷ್ಟು ಸ್ಪೂರ್ತಿದಾಯಕ ಮಾತುಗಳನ್ನಾಡಿ ಜನರನ್ನು ಹುರಿದುಂಬಿಸಿದ್ದರು.
ಆಗ ಕೊಡಗಿನ ಮೂಲೆ ಮೂಲೆಗಳಿಂದ ಜನರು ಜಾತಿಪಂಥ ಮರೆತು ಸ್ವತಂತ್ರ್ಯ ಸಂಗ್ರಾಮಕ್ಕೆ ದುಮುಕ್ಕಿದ್ದರು. 1942ರಲ್ಲಿ ಸಿ ಎಂ ಪೂಣಚ್ಚನವರು ಬೊಂಬೆಯಿಂದ ಬ್ರಿಟೀಷ್ ವಿರೋದಿ ಕಾಂಗ್ರೆಸ್ ಅಧಿವೇಶನದಿಂದ ಹಿಂದಿರುಗುವಾಗ ಬಂಧಿಸಲಾಗಿತ್ತು, ಮತ್ತೆ ಕೆಲವರನ್ನು ಮದ್ರಾಸ್ ಅಧಿವೇಶನದಲ್ಲಿ ಬಂಧಿಸಲಾಗಿತ್ತು. ಈ ಬಂಧನದಲ್ಲಿ ಕೊಡಗಿನ ಅನೇಕ ವಿದ್ಯಾರ್ಥಿ ಮುಖಂಡರು ಜೈಲು ಪಾಲಾಗಿದ್ದರು. ಹೀಗೆ ಭಾರತದ ಸ್ವತಂತ್ರ್ಯಕ್ಕೆ ಆನೇಕ ಕೊಡಗು ಮಹನೀಯರ ತ್ಯಾಗ ಸಾಧನೆ ಅನನ್ಯವಾಗಿತ್ತು.., ಹೀಗೆ ಭಾರತದ ಆರ್ಥಿಕತೆಯನ್ನು ಹಿಂಡಿ ಹೀರಿ ಬರಿದು ಮಾಡಿದ್ದ ಬ್ರಿಟೀಷ್ ಆಡಳಿತ ಮುಕ್ತಾಯಗೊಳಿಸಲು ನಾಡಿನ ಮೂಲೆ ಮೂಲೆಗಳಿಂದಲೂ ಜನರು ಚಳವಳಿಗಳು ಹಾಗು ಸ್ವತಂತ್ರ ಪೂರ್ವ ಸಂಗ್ರಾಮಕ್ಕೆಂದೆ ಧುಮುಕಿದ್ದರು. ಕೆಲವು ಹೋರಾಟಗಾರರು ಕ್ರಾಂತಿಕಾರಿ ಮಾರ್ಗ ಹಿಡಿದಿದ್ದರೆ ಕೆಲವರು ಶಾಂತಿಯ ಮಾರ್ಗ ಹಿಡಿದಿದ್ದರು. ಆದರೆ ಅಹಿಂಸಾ ಮಾರ್ಗ ಅತ್ಯಧಿಕ ಸಂಖ್ಯೆಯಲ್ಲಿ ಜನರನ್ನು ಸಂಗ್ರಾಮಕ್ಕೆ ಇಳಿಯಲು ಪ್ರೇರೇಪಿಸಿತ್ತು. ನಂತರದ ದಿನಗಳಲ್ಲಿ ಶಾಂತಿಯುತವಾಗಿ ಪ್ರತಿಭಟಿಸಿದ್ದ ಸ್ವತಂತ್ರ್ಯ ಹೋರಾಟಗಾರರ ಹೆಸರುಗಳು ಶಾಂತವಾಗಿಯೆ ಕಣ್ಮರೆಯಾಗುತ್ತ ಬಂದಿರುವುದು ವಿಷಾದನೀಯ. ಆ ಎಲ್ಲ ಮಹಾತ್ಮರನ್ನು ಸ್ಮರಿಸುತ್ತ ಇಂದು ನಾನು ಸರ್ವರಿಗು 76ನೇ ಸ್ವತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರುತ್ತಿದ್ದೇನೆ


ಮಾಳೇಟಿರ ಸೀತಮ್ಮ ವಿವೇಕ್

Leave a Reply

Back To Top