ಎ.ಎನ್.ರಮೇಶ್. ಗುಬ್ಬಿಯವರ ಕವಿತೆ-ಚಿದಂಬರ ರಹಸ್ಯ.!

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ಚಿದಂಬರ ರಹಸ್ಯ.!

ಹುಟ್ಟುತ್ತಲೆ ಹಣೆಗಂಟಿಸಿ ಸಾವಿನ ಚೀಟಿ
ಕಳುಹುವನು ಆ ಅದೃಶ್ಯ ಸೃಷ್ಟಿಯ ಮೇಟಿ
ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ನಿಚ್ಚಳ
ಸದಾ ಬೆನ್ನ ಹಿಂದೆಯೇ ಮರಣ ಬೇತಾಳ.!

ಪ್ರತಿ ಸಾವಿನ ನಂತರವೂ ಮತ್ತದೇ ಚರ್ಚೆ
ಮರಣ ಕಾರಣಗಳ ವಿಮರ್ಶೆ ಪರಾಮರ್ಶೆ
ಏನೇ ಮಾಡಿದರೂ ಬಿಡಿಸಲಾಗದು ಒಗಟು
ಅರಿಯಲಾಗದು ಅರ್ಥೈಸಲಾಗದು ಗುಟ್ಟು.!

ಹಲುಬುತ್ತೇವೆ ಕೆಲವು ಅಕಾಲಿಕ ಸಾವೆಂದು
ಹೇಳಿ ಯಾರ ಸಾವು ತಾನೆ ಸಕಾಲಿಕವೆಂದು?
ಕರೆಯದೆ ಬಯಸದೆ ಬರುವ ಸಾವಿನ ಅತಿಥಿ
ಹೇಳಿ ಯಾರ ಮನ-ಮನೆಗೆ ತಾನೆ ಸಂಪ್ರೀತಿ.?

ಯಾರರಿವು ಅಂದಾಜಿಗೆ ಸಿಕ್ಕಿದೆ ಸಾವಿನಹೆಜ್ಜೆ.?
ಕೇಳಿದವರಾರು ಮುಂಚೆಯೇ ಅದರ ಕಾಲ್ಗೆಜ್ಜೆ
ಸುಳಿವು ಸೂಚನೆ ಕೊಡದಂತ ನೀತಿ ಧರ್ಮ
ಯುಗ ಯುಗದಿಂದ ಬಿಟ್ಟುಕೊಟ್ಟಿಲ್ಲ ಮರ್ಮ.!

ತಾಳೆ ಹಾಕಿದರೂ ಆಹಾರ ಆಚಾರ ಪರಿಕ್ರಮ
ಬೇರೆಬೇರೆ ಜೀವ ಜೀವನಶೈಲಿಗಳ ನಿತ್ಯ ಕ್ರಮ
ಸಾವಿನ ಸಂಭಾವ್ಯತೆಗಿಲ್ಲ ಏಕ ನೀತಿ ನಿಯತಿ
ಪ್ರತಿ ಸಾವು ಒಂದಕಿಂತ ಒಂದು ಭಿನ್ನ ರೀತಿ.!

ಬೇಕಾಬಿಟ್ಟಿ ಬಾಳಿದವರೆಲ್ಲ ಅಲ್ಪಾಯುಷಿಯಲ್ಲ
ಕಟ್ಟುಪಾಡಲಿ ಬದುಕಿದವರೆಲ್ಲ ಶತಾಯುಷಿಯಲ್ಲ
ಬಾಳಿನ ರೀತಿಗು ಸಾವಿನ ನೀತಿಗು ಸಂಬಂಧವಿಲ್ಲ
ಸಾವಿನೆದುರು ಯಾವ ಸಿದ್ದಾಂತ ವೇದಾಂತವಿಲ್ಲ.!

ದೇಹದ ಪ್ರತಿ ಅಂಗಾಗಕು ಇಹರು ತಜ್ಞವೈದ್ಯ
ಹೃದಯ ಜಠರಗಳನೇ ಕಸಿಮಾಡಬಲ್ಲ ನೈಪುಣ್ಯ
ಆದರೂ ಭೇದಿಸಲಾಗಿಲ್ಲ ಸಾವಿನಗುಟ್ಟು ಐತಿಹ್ಯ
ಶೋಧಿಸಲಾಗಿಲ್ಲ ಜನನ-ಮರಣದ ಅನೂಹ್ಯ.!

ಅಳುವರೆಷ್ಟು ಬಡಿದುಕೊಂಡರು ಬಾಯಿಬಾಯಿ
ನಗುವ ಆ ವಿಧಾತ ಬಿಡುವುದೇ ಇಲ್ಲ ಬಾಯಿ.!


ಎ.ಎನ್.ರಮೇಶ್. ಗುಬ್ಬಿ.

One thought on “ಎ.ಎನ್.ರಮೇಶ್. ಗುಬ್ಬಿಯವರ ಕವಿತೆ-ಚಿದಂಬರ ರಹಸ್ಯ.!

  1. ಸೃಷ್ಟಿಕರ್ತನ ಕರಾಮತ್ತನ್ನು ಕಣ್ಕಟ್ಟು ವಂತೆ ತೋರಿಸಿದಿರಾ ಸರ್ ಅಭಿನಂದನೆಗಳು

Leave a Reply

Back To Top