ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಟ್ರೈನ್( ಕಿರುಚಿತ್ರ)

ಅದು “ಗಾಂಧಿ ಪಾರ್ಕ್” ಕಿರುಚಿತ್ರದ ಪ್ರಾರಂಭದ ದೃಶ್ಯದಲ್ಲಿ ತಾಯಿ ಮಗ ಪಾರ್ಕ್ ನ ಪ್ರವೇಶ ಮಾಡುತ್ತಾರೆ , ಹುಡುಗ ಸುಮಾರು ಎಂಟು ಹತ್ತು ವರ್ಷ ಪ್ರಾಯದವನು, ಸಾಧಾರಣ ಬಟ್ಟೆ ಧರಿಸಿರುವ ತಾಯಿ ಮಗ ಬಡ ಕುಟುಂಬದವರಂತೆ  ಕಾಣುತ್ತಾರೆ, ಹುಡುಗ ಅತ್ಯುತ್ಸಾಹದಿಂದ ಅಲ್ಲಿ ಬಗೆ ಬಗೆ ಆಟದಲ್ಲಿ ತೊಡಗಿರುವ ಮಕ್ಕಳನ್ನೆಲ್ಲ ನೋಡುತ್ತಿದ್ದಾನೆ.
     ಆಟ ಆಡುತ್ತಿರುವವರನ್ನು ದಾಟಿಕೊಂಡು ಮುಂದೆ ಬಂದಂತೆ ಅವನ ಕಣ್ಣಿಗೆ ಕಾಣುವುದು ಪುಟಾಣಿ ಟ್ರೈನ್_ ರೈಲ್ವೆ ಟ್ರ್ಯಾಕ್ (ರೈಲು ಹಳಿ),  ದೂರದಿಂದ ಬರುತ್ತಿರುವ ರೈಲಿ ನೆಡೆಗೆಹುಡುಗನ ದೃಷ್ಟಿ ಬೀಳುತ್ತದೆ.
    ಆಸೆ ಕಣ್ಣುಗಳಿಂದ ಅಮ್ಮನ ಕಡೆಗೆ ನೋಡುತ್ತಾ ಹುಡುಗ “ಅಮ್ಮ ಆ ರೈಲಿನಲ್ಲಿ ನಾವು ಹೋಗೋಣ” ಎನ್ನುತ್ತಾನೆ. ಮಗನ ಆಸೆ ಪೂರೈಸಲು ಆ ತಾಯಿ ಟಿಕೆಟ್ ಕೌಂಟರ್ ನ ಬಳಿಗೆ ತೆರಳುತ್ತಾಳೆ. ಮಕ್ಕಳಿಗೆ ಹತ್ತುರೂ ದೊಡ್ಡವರಿಗೆ 20 ಟಿಕೆಟ್ ಎಂದಾಗ ತನ್ನ ಸೆರಗಿನ ತುದಿಯಲ್ಲಿ ಕಟ್ಟಿದ್ದ ಬಿಡಿ ಕಾಸನ್ನು ಎಣಿಸುತ್ತಾಳೆ, ಅವಳ  ಬಳಿ ಇರುವ ಕಾಸನೆಲ್ಲಾ ಸೇರಿಸಿದರೆ ಮಗನನ್ನು ಕಳುಹಿಸಲು ಸಾಧ್ಯವಾಗುವಷ್ಟು ಹಣ ಮಾತ್ರ ಇರುತ್ತದೆ. ಮಗನಿಗೆ ಮಾತ್ರ ಟಿಕೆಟ್ ಕೊಂಡ ಅವಳು ಮಗನನ್ನು ಟ್ರೈನ್ ಹತ್ತಿಸಲು ಕರೆತರುತ್ತಾಳೆ.
         ಪುಟಿದೇಳುವ ಚೆಂಡಿನಂತೆ ಕುಣಿಯುತ್ತ, ಸ್ವರ್ಗವನ್ನೇ ಪಡೆದಷ್ಟು ಸಂತೋಷದಿಂದ ರೈಲು ಏರುವ ಹುಡುಗ ಆರಿಸಿಕೊಳ್ಳುವ ಜಾಗ ಡ್ರೈವರ್ ನ ಪಕ್ಕದಲ್ಲಿ ಇರುವ ಸೀಟು , ಜಗತ್ತನ್ನು ಗೆದ್ದಷ್ಟು ಖುಷಿಯಿಂದ ರೈಲಿನಲ್ಲಿ ಕುಳಿತು ಮುಂದೆ ಸಾಗುತ್ತಾನೆ ಹುಡುಗ, ತನ್ನ ಮಗನ ಸಂತೋಷ ಕಂಡು ತೃಪ್ತಳಾಗುವ ಆ ತಾಯಿ, ಮಗನೆಡೆಗೆ ಕೈ ಬೀಸುತ್ತಾಳೆ.
       ಆದರೆ ಆ ಹುಡುಗನ ಸಂತೋಷ ಕೆಲವೇ ಕ್ಷಣಗಳಲ್ಲಿ ಕೊನೆಗೊಳ್ಳುತ್ತದೆ, ಆ ಗಳಿಗೆಗೆ ಅಲ್ಲಿಗೆ ಬರುವ ಮೇಲಧಿಕಾರಿ ಆ ಹುಡುಗನ ಕನಸನ್ನು ಭಗ್ನಗೊಳಿಸುತ್ತಾನೆ. ರೈಲಿನ ಮುಂದಿನ ಸೀಟಿನಿಂದ ಹಿಂದಿನ ಸೀಟಿಗೆ ಹುಡುಗನನ್ನು ನಿರ್ದಾಕ್ಷಿಣ್ಯವಾಗಿ ಹೊತ್ತೊಯ್ದು ಕೂಡಿಸಲಾಗುತ್ತದೆ, ಅವನ ಬದಲಿಗೆ ಆ ಜಾಗದಲ್ಲಿ ಕುಳಿತುಕೊಳ್ಳುವುದು ಅಧಿಕಾರಿಯ ಮಗು.
        ಕಪ್ಪು ಬೆಳಕಿನಲ್ಲಿ ಚಿತ್ರಿತಗೊಂಡಿರುವ ಈ ಕಿರು ಚಿತ್ರ ‘ಟ್ರೈನ್ ‘ಕೇವಲ 10 ನಿಮಿಷದದ್ದು, ಇದು ಮೂಕಿಚಿತ್ರವಾಗಿದ್ದು ಚಾರ್ಲಿ ಚಾಪ್ಲಿನ್ ಚಿತ್ರಗಳ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಚಾಪ್ಲಿನ್ ನ್ನ ಚಿತ್ರಗಳಲ್ಲಿ ಕಾಣುತ್ತಿದ್ದ  ವಿಷಾದ ಛಾಯೆಯನ್ನು ಇಲ್ಲಿಯೂ ಕಾಣಬಹುದಾಗಿದೆ.
      ಬಡವರ ಮಕ್ಕಳ ಕನಸುಗಳು ಹಾಗೂ ಅವುಗಳು ಭಂಗವಾದಾಗ ಉಂಟಾಗುವ ನಿರಾಶಾದಾಯಕ ಸ್ಥಿತಿಯನ್ನು ಇಲ್ಲಿ ಬಹು ಮಾರ್ಮಿಕವಾಗಿ ಕಾಣಬಹುದಾಗಿದೆ.
  ಪುಟ್ಟ ಮಕ್ಕಳ ಆಸೆಗಳಿಗೆ , ಕನಸುಗಳಿಗೆ ಅಂತಸ್ತಿನ ಸಿರಿತನದ ಮುಲಾಜು ತಿಳಿದಿರುವುದಿಲ್ಲ, ಅಲ್ಲಿ ಹುಟ್ಟಿಕೊಳ್ಳುವುದು ಪುಟ್ಟ ಪುಟ್ಟ ಆಸೆಗಳು , ಮಕ್ಕಳ ಪುಟ ಆಸೆಗಳನ್ನು  ಈಡೇರಿಸುವಲ್ಲಿ ಮಾತ್ರ ಬಹಳ ವ್ಯತ್ಯಾಸ , ಚಿಟಿಕೆ ಹೊಡೆಯುವುದರಲ್ಲಿ ಶ್ರೀಮಂತರ ಮಕ್ಕಳಿಗೆ ದೊರೆಯುವ ಆಟಿಕೆಗಳು, ಈಡೇರುವ  ಬೇಡಿಕೆಗಳು ಬಡ ಮಕ್ಕಳಿಗೆ ಬಹು ದುಬಾರಿ. ಬಾಲ್ಯದ ಆ ಸಣ್ಣ-ಸಣ್ಣ ಆಸೆಗಳನ್ನು , ಕನಸುಗಳನ್ನು ಈಡೇರಿಸಿಕೊಳ್ಳಲು ಆ ಮಕ್ಕಳು ಪಡುವ ಪ್ರಯಾಸ ಅದು ಈಡೇರಿದಾಗ ಅವರಲ್ಲಿ ಕಾಣುವ ತೃಪ್ತಿ, ಸಿಗದಿದ್ದಾಗ ಆಗುವ ವೇದನೆ ಕಣ್ಣಿಗೆ ಕಟ್ಟುವಂಥದ್ದು, ಮನಸ್ಸಿಗೆ ಮುಟ್ಟುವಂಥದ್ದು. ಅಂತಹದೊಂದು ಸಂವೇದನೆಯನ್ನು ಈ ಕಿರು ಚಿತ್ರದಲ್ಲಿ ನಾವು ಕಾಣಬಹುದಾಗಿದೆ ಮಾತಿನಲ್ಲಿ ದಾಟಿಸಲಾಗದ ಹಲವಾರು ಭಾವನೆಗಳನ್ನು ಸಣ್ಣ ಸಣ್ಣ ವಿಷಯಗಳನ್ನು ಇಲ್ಲಿ ಮೌನವೂ ಬಹು ಯಶಸ್ವಿಯಾಗಿ ದಾಟಿಸಿದೆ .
   ಬಾಲಕನ ಪುಟಾಣಿ ರೈಲಿನಲ್ಲಿ ಪಯಣಿಸಬೇಕೆಂಬ ತವಕ ನಮಗೂ ನಮ್ಮ ಬಾಲ್ಯದ ದಿನಗಳನ್ನು ನೆನಪಿಗೆ ತರದಿರಲಾರದು, ಮಾಲ್ ಗಳು   ಇಲ್ಲದಿದ್ದ ಆ ಕಾಲದ ಬಾಲ್ಯದಲ್ಲಿ ಇದ್ದುದು ಅಮಿತ ಉತ್ಸಾಹ, ಕೇವಲ ಐದು ಪೈಸೆಯ ಪೆಪ್ಪರ್ಮೆಂಟು, 25 ಪೈಸೆ  ಐಸ್ ಕ್ಯಾಂಡಿ ಗಳು . ಪುಟ್ಟ ಪಾರ್ಕ್ಗಳು , ರಸ್ತೆಗಳು, ನಮ್ಮ ಬಾಲ್ಯದ ಮೈದಾನವಾಗಿದ್ದವು. ಈ ಪುಟ್ಟ ಪಾರ್ಕ್  ಸಹ ನಮ್ಮನ್ನು ಬಾಲ್ಯದ ದಿನಗಳಿಗೆ ಕೊಂಡಯ್ಯ ಬಲ್ಲವು
        ಅಧಿಕಾರಿಗಳ , ಶ್ರೀಮಂತರ ಹಮ್ಮು ಅಹಂಕಾರಗಳು ಬಡವರ ಕನಸುಗಳನ್ನು ಹೇಗೆ ಸುಲಭವಾಗಿ ಕಸಿದುಕೊಳ್ಳಬಲ್ಲವೂ ಹೇಗೆ ಹೊಸಕಿಹಾಕಬಲ್ಲವೂ ಎಂಬುದನ್ನು ಈ ಕಿರುಚಿತ್ರದಲ್ಲಿ ಕಾಣಬಹುದಾಗಿದೆ.
        ಮಾತಿನ ಮೆರವಣಿಗೆ ಇಲ್ಲದೆ ಮೌನವನ್ನೇ ಆಧರಿಸಿ ದಾಟಿಸಬೇಕಾದ ವಿಷಯಗಳನ್ನು ಮನಮುಟ್ಟುವಂತೆ ತಿಳಿಸಿರುವುದು ಚಿತ್ರದ ವಿಶೇಷ. ನಿರ್ದೇಶಕ ವಿನಯ್ ಕುಮಾರ್ ಈ ಕಿರುಚಿತ್ರಕ್ಕಾಗಿ ಉತ್ತಮ ಚೌಕಟ್ಟನ್ನು ನೀಡಿ ಭರವಸೆ ಹುಟ್ಟಿಸುತ್ತಾರೆ.
       ಮಿಂಚು ಕಣ್ಣಿನ ಗುಂಗುರು ಕೂದಲಿನ ಪುಟ್ಟ ಹುಡುಗ ಹಾಗೂ ಆತನ ತಾಯಿಯ ಪಾತ್ರಧಾರಿಗಳು ಅತ್ಯುತ್ತಮ ಅಭಿನಯ ನೀಡಿ ಮನಸ್ಸು ಗೆಲ್ಲುತ್ತಾರೆ, ಇನ್ನು ರೈಲ್ವೆ ಗಾರ್ಡ್ ಟಿಕೆಟ್ ನೀಡುವ ವ್ಯಕ್ತಿಯು ಪಾತ್ರ ಅಭಿನಯವೂ ಚೆನ್ನಾಗಿ ಮೂಡಿ ಬಂದಿದೆ . ಕಪ್ಪು ಬೆಳಕಿನ ಛಾಯಾಗ್ರಹಣ ಚಿತ್ರಕಥೆಗೆ ವಿಶೇಷ ಮೆರಗುನೀಡಿದೆ.
      ಚಿತ್ರಕ್ಕೆ ಒದಗಿ ಒದಗಿಸಿರುವ ಹಿನ್ನೆಲೆ ಸಂಗೀತವು ಚೆನ್ನಾಗಿದೆ ಚಿತ್ರಕಥೆಗೆ ಪೂರಕವಾಗಿದೆ . ಸತ್ಯ ಹೆಗಡೆ ನಿರ್ಮಾಣ ಸಂಸ್ಥೆಯ ಈ ಕಿರುಚಿತ್ರ ” ಟ್ರೈನ್ ” ವಿಭಿನ್ನ ಕಥೆಯಿಂದ ಮನಮುಟ್ಟುವ ದೃಶ್ಯಗಳಿಂದ ಪೋಣಿಸಲ್ಪಟ್ಟಿದೆ.
       ಬೆಟ್ಟದ ಹೂವಿನ ಬಾಲಕ ಕಾಡುಮೇಡು ಅಲೆದು ಹೂವನ್ನು ಕಿತ್ತು ತಂದು ಶರ್ಲಿ ಮೇಡಂ ಗೆ ಕೊಟ್ಟು ಹಣ ಪಡೆದು ಕೂಡಿಟ್ಟು ಕನಸುಗಳನ್ನು ಕಟ್ಟುತ್ತಾನೆ. ಈ ಕಿರುಚಿತ್ರದಲ್ಲಿ ತನ್ನ ಬೆವರಿನ ದುಡಿಮೆಯ ಕೂಡಿಟ್ಟ ಕಾಸನ್ನು ಸೆರಗಲ್ಲಿ ಕಟ್ಟಿಕೊಂಡು ಬಂದ ತಾಯಿ, ಮಗನ ಆಸೆಯನ್ನು ಈಡೇರಿಸಲು ಹೊರಡುತ್ತಾಳೆ ,ಮತ್ತೊಮ್ಮೆ ಬಡವರ ಆಸೆಗಳ ಪೂರೈಕೆಗಳಿಗೆ ಶ್ರಮ ಹೆಚ್ಚು ಎಂಬುದನ್ನು ಮನವರಿಕೆ ಮಾಡುತ್ತಾಳೆ…!
        ಬಡವರ ಕನಸುಗಳ ಪ್ರತೀಕವಾದ ಗಾಂಧಿಯ ಹೆಸರಿನ  ಇಲ್ಲಿನ ಗಾಂಧಿ ಪಾರ್ಕ್ ಚಿತ್ರದ ಕಥೆಗೆ ಪೂರಕವಾಗಿದೆ ಒಮ್ಮೆ ನೋಡಿ ಮನ ತುಂಬಿಕೊಳ್ಳಬೇಕಾದ ಕಿರುಚಿತ್ರವಿದು .ಯುಟ್ಯೂಬ್ ನಲ್ಲಿ ಉಚಿತವಾಗಿ ಲಭ್ಯವಿದೆ.
         
ತಾರಾಗಣ -ಪ್ರತಿಭಾ ಎಂ .ವಿ ,ಮೊಹಮ್ಮದ್ ಇಸಾಕ್ ನೇಹಾ ಹೆಗ್ಡೆ, ಭೂಮಿ ,ಮಿಥುನ್ ಪೈ ,ಸತ್ಯಂ ,ಕಾರ್ತಿಕ್ ಗೌಡ ಇತರರು
ನಿರ್ದೇಶನ -ವಿನಯ್ ಕುಮಾರ್ ಎಂ .ಜಿ
ಸಹನಿರ್ದೇಶನ -ಕಲ್ಲೇಶ್ ನಾಯಕ್ ಕುಂಚೇನ ಹಳ್ಳಿ
ಛಾಯಾಗ್ರಹಣ -ನಂದೀಶ್ ರಾಮ್
ಸಂಕಲನ -ಮೋಹನ್ ಎಲ್ (ರಂಗ ಕಹಳೆ)
ಸಂಗೀತ-ವೈಶಾಕ್ ಭಾರ್ಗವ್
               ರಡ್ರೇಕ್ ಸೋಲೋ ಮನ್


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top