ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಬೇಡವೆಂದರೂ ಬಸಿದು ಬೊಗಸೆ ತುಂಬ
ಪ್ರೀತಿ ನೀಡುತಿದ್ದೆ ಖಾಲಿಯಾಯಿತೇ ಈಗ ?
ಬೇಕಿಲ್ಲವೆಂದರೂ ಕರೆದು ಒಲವ ಬಣ್ಣ
ಎರಚುತ್ತಿದ್ದೆ ಒಲ್ಲವಾಯಿತೇ ಈಗ ?
ತುಸುವೆಂದರೇ ತುಸುವೂ ನನಗಾಗಿ
ನಿನ್ನೆದೆಯು ಹಸಿಯಾಗಲಿಲ್ಲ
ಆದರೂ ಇರದ ಆದರದ ಸೋನೆ
ಸುರಿಸುತಿದ್ದೆ ಬೇಸಿಗೆಯಾಯಿತೇ ಈಗ?
ಕಣ್ಣಿಂದ ಬಲು ದೂರವೇ ಸರಿಸಿಟ್ಟಿದ್ದ
ಮೋಹದ ಕನಸದು
ಒಲ್ಲೆಂದರೂ ಕಣ್ ತುಂಬಿಸಿ ಕೈ ಹಿಡಿದು
ತೋರಿಸುತಿದ್ದೆ ಹಗಲಾಯಿತೇ ಈಗ?
ಮನ ಬಿಚ್ಚಿಟ್ಟು ಮಾತಾಡಲು ಶತಮಾನದ
ಬಿಡುವೇ ಇರುತಿತ್ತು ಅಂದು
ಕೇಳದಿದ್ದರೂ ಹೇಳುವ ತುಡಿತವೊಂದಿತ್ತು
ಬರಿದಾಯಿತೇ ಈಗ ?
‘ವಾಣಿ’ಯ ಭಾವನೆಗಳನು ಬಗೆ ಬಗೆದು
ಹೊರತಂದು ಹೊಸಕಿ ಹಾಕಿದೆ
ನೀನೆಂದರೇ ಬದುಕೆಂದು ಸಾರಿದ
ಸುಂದರ ಸುಳ್ಳಿಗೆ ಸಾವಾಯಿತೇ ಈಗ ?
ವಾಣಿ ಯಡಹಳ್ಳಿಮಠ
Very nice written mam keep going
Thank u so much Ma’am