ಆಗಸ್ಟ್ 6 : ಹಿರೋಶಿಮಾ ಡೇ : ಒಂದು ಚಿಂತನೆ

ವಿಶೇಷ ಲೇಖನ

ಆಗಸ್ಟ್ 6 : ಹಿರೋಶಿಮಾ ಡೇ : ಒಂದು ಚಿಂತನೆ

ಕೆ. ಎನ್. ಚಿದಾನಂದ 

ಆಗಸ್ಟ್ 6 : ಹಿರೋಶಿಮಾ ಡೇ : ಒಂದು ಚಿಂತನೆ

ವರ್ತಮಾನದ ಜಗತ್ತು ಏಕೆ ಶಾಂತಿಯನ್ನು ಬಯಸುತ್ತದೆ? ಜಾಗತಿಕ ಸಂಸ್ಥೆಯಾದ ವಿಶ್ವಸಂಸ್ಥೆಯು ಶಾಂತಿಯನ್ನು ಪದೇ ಪದೇ ಒತ್ತಿ ಹೇಳುತ್ತಲೇ ಇರುತ್ತದೆ ಏಕೆ ? ಜಗತ್ತು ಶಾಂತಿಯನ್ನು ಬಯಸಲು ಕಾರಣಗಳೇನು? ಇದಕ್ಕೆ ಹಿನ್ನೆಲೆಯ ನಿದರ್ಶನಗಳೇನಾದರೂ ಇವೆಯೇ? ಶಾಂತಿ ಮತ್ತು ಸುಭದ್ರತೆಯನ್ನು ತನ್ನ ಧ್ಯೇಯವಾಗಿರಿಸಿಕೊಂಡ ವಿಶ್ವ ಸಂಸ್ಥೆಯು ಆಗಿಂದಾಗ್ಗೆ ಶಾಂತಿಯನ್ನು ಉದ್ದೇಶಿಸಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತವೆ ? ಶಾಂತಿ , ಸುಭದ್ರತೆ, ಸುವ್ಯವಸ್ಥೆಯ ಅಗತ್ಯವಿದೆಯೆ ? ಒಂದಾನೊಂದು ಕಾಲದಲ್ಲಿ ಬರ್ಬರ ಜನಾಂಗಗಳು ಲೆಕ್ಕವಿಲ್ಲದಷ್ಟು ಹೀನಾಯ ಮತ್ತು ಹಿಂಸಾತ್ಮಕ ಘಟನೆಗಳನ್ನು ಈ ಜಗತ್ತಿನಲ್ಲಿ ನಡೆಸಿವೆ. ಮುಂದಿನ ಹಂತಗಳಲ್ಲಿ ಕಾಲಕ್ರಮೇಣ ಶಾಂತಿಯುತ ಜೀವನಕ್ಕೂ ಕಾಲಿಟ್ಟಂತಹ ನಿದರ್ಶನಗಳೂ ಇವೆ. ಆದರೆ ಶಾಂತಿಯುತ ಜೀವನ ಶಾಶ್ವತತೆಯನ್ನು ಕಾಣಲಿಲ್ಲ. ವಿಶ್ವದ ದುಷ್ಟಕೂಟಗಳು ಮತ್ತೆ ಮತ್ತೆ ಬರ್ಬರತೆಯನ್ನು ನಡೆಸುತ್ತಾ ಬಂದವು. ದುರ್ಘಟನೆಗಳಿಗೆ ಅಂತ್ಯವೆಂದು ? ಎಂಬ ಪ್ರಶ್ನೆ ಎಲ್ಲರಲ್ಲೂ ಜಿಜ್ಞಾಸೆಗೆ ಒಳಗಾಯಿತು. ಇಂತಹ ದುರ್ಘಟನೆಗಳಲ್ಲಿ ವಿಶ್ವದ ಎರಡನೇ ಮಹಾಯುದ್ಧ (1939 – 1945 ) ವು ಒಂದೆನಿಸಿದೆ. ಮಹಾಯುದ್ಧದ ಅಂತ್ಯವು ರಣಭೀಕರ ದುರಂತ ಘಟನೆಯೊಂದಿಗೆ ಕೊನೆಯಾಯಿತು. ಆ ದುರ್ಘಟನೆಯನ್ನು ಆಗಸ್ಟ್ 6 ನೇ ತಾರೀಖಿನ “ಹಿರೋಶಿಮಾ ದಿನ ” ವೆಂದು ಇಡೀ ವಿಶ್ವದೆಲ್ಲೆಡೆ ಸ್ಮರಿಸಲಾಗುತ್ತಿದೆ. ಆ ದುರ್ಘಟನೆಯನ್ನು ಸ್ಮರಿಸಿಕೊಂಡರೆ ಜಪಾನ್ ದೇಶದ ಹೃದಯವು ಇಂದಿಗೂ ನಡುಗುತ್ತದೆ. ಅದು ಭಯಂಕರವಾದ ಕೋಲಾಹಲವನ್ನು ಉಂಟು ಮಾಡಿದ ದಿನವಾಗಿದೆ.

1945ರ ಆಗಸ್ಟ್‌ 6ರ ಮುಂಜಾನೆ “ಲಿಟ್ಲ ಬಾಯ್‌ ” ಎಂಬ ಹೆಸರಿನ 4030 ಕಿ.ಗ್ರಾಂ. ತೂಕದ ಅಣುಬಾಂಬ್‌ ಅನ್ನು ಹಿಡಿದುಕೊಂಡು ಬಾಂಬರ್‌ ವಿಮಾನವನ್ನು ಅದರ ಪೈಲೆಟ್‌ ಪೌಲ್‌ ದಿ ಟಿಬೆಟ್ಸ್‌ ಜಪಾನ್‌ ದೇಶದತ್ತ ಹಾರಿಸಿದ್ದ. ಅವನ ಜತೆ ಅವರ ಸಹ ಪೈಲಟ್‌ಗಳಾಗಿದ್ದ ಕ್ಯಾ|| ವಿಲಿಯಂ ಪರ್ಸನ್‌ ಹಾಗೂ ಲೇ|| ಮೋರಿಸ್‌ ಜೆಪ್ಸಿನ್‌ ಇಬ್ಬರೂ ಬಾಂಬ್‌ ಸ್ಪೋಟಕ್ಕೆ ಕ್ಷಣಗಣನೆ ಮಾಡುತ್ತಿದ್ದರು. ಬೆಳಗಿನ ಸಮಯ ಸುಮಾರು ಎಂಟು ಗಂಟೆಯಿರಬಹುದು. ಸುಮಾರು ಸಾವಿರ ಅಡಿಗಳಷ್ಟು ಎತ್ತರದಿಂದ ಹಿರೋಶಿಮಾದ ಕೇಂದ್ರ ಭಾಗವನ್ನು ಗುರಿಯಾಗಿಸಿ ಬಾಂಬ್‌ ಎಸೆಯಲಾಯಿತು. ಇಡೀ ನಗರಕ್ಕೆ ನಗರವೇ ಛಿದ್ರವಾಗಿ ಹೋಯಿತು.ಇದರ ಪ್ರಬಲ ವಿಕಿರಣ ದೂರ ದೂರಕ್ಕೂ ವ್ಯಾಪಿಸಿ 42 ಚದರ ಮೈಲಿಗಳಷ್ಟು ಪ್ರದೇಶವನ್ನು ಕ್ಷಣಾರ್ಧದಲ್ಲಿ ನಾಶಮಾಡಿತು. ಈ ಘಟನೆಯಲ್ಲಿ ಸಾಕಷ್ಟು ಜನ ಕಾಣೆಯಾದರೆ ಇನ್ನಷ್ಟು ಜನರು ವಿಕಿರಣದ ದುಷ್ಪರಿಣಾಮಕ್ಕೆ ಒಳಗಾದರು. ಎರಡು ದಿನಗಳ ಕಾಲ ಹಿರೋಶಿಮಾ ನಗರ ಸ್ಥಬ್ಧವಾಗಿತ್ತು. ಜಪಾನ್‌ನ ಹಿರೋಶಿಮಾದಲ್ಲಿ ನಡೆದ ಅಣುಬಾಂಬ್‌ ದಾಳಿಯಿಂದಾಗಿ ಈಗಲೂ ಅಲ್ಲಿನ ಜನರು ಇದರ ಸಮಸ್ಯೆಯಿಂದ ಹೊರಬಂದಿಲ್ಲ. ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಜಪಾನ್ 1945 ರಲ್ಲಿ ವಿಶ್ವದಲ್ಲೇ ಅತ್ಯಂತ ಕರಾಳ ದುರ್ಘಟನೆಗೆ ಸಾಕ್ಷಿಯಾಗಿದ್ದು, ಈಗ ಎಪ್ಪತ್ತೆಂಟು ವರ್ಷಗಳೇ ಮುಗಿದಿವೆ. ಆಗಸ್ಟ್ 6 ಅಂದರೆ ಈ ದಿನ, ಜಪಾನಿನ ನಗರಗಳಾದ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಅಮೆರಿಕಾ ದೇಶವು ಪರಮಾಣು ಬಾಂಬ್‌ಗಳನ್ನು ಸ್ಫೋಟಿಸಿತ್ತು. ಈ ವಿನಾಶದ ಬಳಿಕ ಜಪಾನ್‌ ಬೇಷರತ್ತಾದ ಶರಣಾಗತಿಗೆ ಕಾರಣವಾಯಿತು ಎಂದು ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ.

ಜಾಗತಿಕ ಇತಿಹಾಸದಲ್ಲಿ ಎರಡನೇ ಮಹಾಯುದ್ದವು ಜನಜೀವನವನ್ನು ನರಕ ಸದೃಶವನ್ನಾಗಿಸಿದ ರೌದ್ರಾವತಾರ ತಾಳಿದ ಘಟನೆಯಾಗಿದೆ. 1939 ರಲ್ಲಿ ಆರಂಭವಾದ ಎರಡನೇ ಮಹಾಯುದ್ಧವು ಆರು ವರ್ಷಗಳಾದರೂ ಅಂತ್ಯಗೊಂಡಿರಲಿಲ್ಲ. ನೇರ ಹಣಾಹಣಿ ಬಹುತೇಕ ನಿಂತಿದ್ದರೂ ಶೀತಲ ಸಮರ ಮುಂದುವರಿದೇ ಇತ್ತು. ಯುದ್ಧದಲ್ಲಿ ಮಿತ್ರ ರಾಷ್ಟ್ರಗಳು ಮತ್ತು ಶತ್ರುರಾಷ್ಟ್ರಗಳು ಎಂಬ ಎರಡು ಬಣಗಳಿದ್ದವು. ಮಿತ್ರರಾಷ್ಟ್ರಗಳ ಪರ ಅಮೆರಿಕ ಸಂಯುಕ್ತ ಸಂಸ್ಥಾನ, ಬ್ರಿಟನ್, ಫ್ರಾನ್ಸ್, ಸೋವಿಯತ್ ಒಕ್ಕೂಟವು ಒಂದುಗೂಡಿದ್ದವು, ಜರ್ಮನ್, ಇಟಲಿ ಮತ್ತು ಜಪಾನ್ ದೇಶಗಳ ವಿರುದ್ಧ ಕಾದಾಟ ನಡೆಸುತ್ತಿದ್ದವು. ಹೀಗೆಯೇ ವೈಷಮ್ಯ ಮುಂದುವರಿದು ಪುಟ್ಟ ದೇಶ ಜಪಾನ್‌ ಮೇಲೆ ಅಮೆರಿಕ ದೇಶವು ದಾಳಿಗಳ ಸುರಿಮಳೆಗೈದಿತ್ತು. ಯಾವಾಗ ಜಪಾನ್‌ ಸೈನಿಕರು ಅಮೆರಿಕದ ಸೈನಿಕರನ್ನು ಮಣಿಸಿದರೋ, ಇದರಿಂದ ಕೆರಳಿದ ಅಮೆರಿಕ ಯುದ್ಧ ನಿಲ್ಲಿಸುವ ಸಲುವಾಗಿ ಮಹಾ ಪ್ರಮಾದವನ್ನೇ ಮಾಡಿತು. ಅದುವೇ ಆ ಆಗಸ್ಟ್‌ 6 ರ ದಿನ ನಡೆದ ದುರ್ಘಟನೆ.

1945 ರ ಆಗಸ್ಟ್ 6 ರಂದು ಹಿರೋಶಿಮಾ ಮೇಲೆ ಅಮೆರಿಕ ಅಣುಬಾಂಬ್ ದಾಳಿ ನಡೆಸಿತ್ತು. ಮಾರ್ಪಡಿಸಿದ ಬಿ -29 ಯುರೋನಿಯಂ ಗನ್ ಮಾದರಿಯ ಬಾಂಬ್ ಅನ್ನು “ಲಿಟಲ್ ಬಾಯ್” ಎಂಬ ಹೆಸರಿನಿಂದ ಹಿರೋಷಿಮಾದಲ್ಲಿ ಬ್ರಿಟಿಷರ ಒಪ್ಪಿಗೆಯೊಂದಿಗೆ ಸ್ಫೋಟಿಸಿತು. ಇದರಿಂದಾಗಿ ಹಿರೋಶಿಮಾದಲ್ಲಿ 1.40 ಲಕ್ಷ ಜನರು ಸಾವನ್ನಪ್ಪಿದ್ದರೆಂದು ಅಂದಿನ ವರದಿ ತಿಳಿಸುತ್ತದೆ. ಅಂದರೆ ಹಿರೋಶಿಮಾದ ಜನಸಂಖ್ಯೆಯ ಶೇ. 40ರಷ್ಟು ಜನರು ಈ ದಾಳಿಯಿಂದಾಗಿ ಪ್ರಾಣ ಕಳೆದುಕೊಂಡರು. ಈ ಬಾಂಬ್ ದಾಳಿ ಬಳಿಕವೂ ಜಪಾನ್‌ನಿಂದ ತಕ್ಷಣದ ಶರಣಾಗತಿ ಬರದಿದ್ದಾಗ, “ಫ್ಯಾಟ್ ಮ್ಯಾನ್” ಎಂದು ಕರೆಯಲ್ಪಡುವ ಮತ್ತೊಂದು ಬಾಂಬ್ ಅನ್ನು ಮೂರು ದಿನಗಳ ನಂತರ ಅಂದರೆ ಆಗಸ್ಟ್ 9 ರಂದು ನಾಗಸಾಕಿಯ ಮೇಲೆ ಹಾಕಲಾಯಿತು. ಈ ವಿನಾನಕಾರಿ ದಾಳಿಯಲ್ಲಿ 2,26,000 ಜನರು ಸಾವನ್ನಪ್ಪಿದರು ಮತ್ತು ಇಡೀ ನಗರವೇ ನೆಲಸಮಗೊಂಡಿತು ಎಂದು ಇತಿಹಾಸದ ವರದಿಗಳಿಂದ ಗೊತ್ತಾಗುತ್ತದೆ.

ಹಿರೋಷಿಮಾದಲ್ಲಿ ನಡೆದ ಅಣುಬಾಂಬ್ ಸ್ಫೋಟವು ಇಡೀ ವಿಶ್ವವನ್ನೇ ತಲ್ಲಣಗೊಳಿಸಿತು. ಈ ಅಣು ಬಾಂಬ್ ಸ್ಫೋಟದ ನಂತರ ತಕ್ಷಣವೇ ಸುಮಾರು 70,000 ರಿಂದ 80,000 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ತಿಂಗಳುಗಳು ಮತ್ತು ವರ್ಷಗಳ ನಂತರದ ಬಾಂಬ್ ಸ್ಫೋಟದ ಪರಿಣಾಮದಿಂದ ಎರಡೂ ನಗರಗಳಲ್ಲಿ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡರು. ಜಪಾನಿನ ಅಧಿಕೃತ ವರದಿಯ ಪ್ರಕಾರ ಹಿರೋಷಿಮಾದಲ್ಲಿನ ಶೇಕಡಾ 69 ರಷ್ಟು ಕಟ್ಟಡಗಳು ಆ ದಿನ ನಾಶವಾಗಿದ್ದವು ಎಂದು ತಿಳಿದುಬರುತ್ತದೆ. ಈ ವಿನಾಶದ ನಂತರ ಮತ್ತಷ್ಟು ಭೀಕರ ಪರಿಣಾಮ
ತಲೆದೋರಿತು. ಜಪಾನಿನ ಪ್ರಜೆಗಳು ಈ ಬಾಂಬ್ ದಾಳಿ ನಡೆದು ಸಾಕಷ್ಟು ಎಪ್ಪತ್ತೆಂಟು ವರ್ಷಗಳೇ ಕಳೆದರೂ ಸಹ ಇಂದಿಗೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಮಟ್ಟದ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರು. ಹಿರೋಶಿಮಾ ತನ್ನನ್ನು ಶಾಂತಿ ನಗರವೆಂದು ಮರುಶೋಧಿಸಲು ಪ್ರಯತ್ನಿಸಿತು ಮತ್ತು ಇಂದಿನವರೆಗೂ ವಿಶ್ವದಾದ್ಯಂತ ಪರಮಾಣು ನಿಶ್ಶಸ್ತ್ರೀಕರಣವನ್ನು ಉತ್ತೇಜಿಸುತ್ತಿದೆ.

ಈ ಘಟನೆಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಂದೆ ಬಾಂಬ್‌ ತಯಾರಿಕೆ ನಿಷೇಧಿಸಿ ವಿಶ್ವಶಾಂತಿ ಸಾರಲೆಂದು ಹಿರೋಶಿಮಾದಲ್ಲಿ ಶಾಂತಿವನ ಉದ್ಯಾನದ ಸ್ಥಾಪನೆಯಾಯಿತು. ಶಾಂತಿವನದ ಮೂಲೆಯಲ್ಲಿ ಅಣುಬಾಂಬಿನ ವಿಧ್ವಂಸಕ್ಕೆ ಸಾಕ್ಷಿಯಾಗಿ ಹಿರೋಶಿಮಾ ಶಾಂತಿ ಸ್ಮಾರಕ ಸ್ಥಾಪಿಸಲಾಯಿತು. ಈ ಹಿನ್ನೆಲೆ ಈ ದಿನವನ್ನು ಹಿರೋಶಿಮಾ ದಿನ ಎಂದು ಜಪಾನೀಯರು ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಯಗೊಂಡ ವಿಶ್ವದ ಪ್ರಮುಖ ರಾಷ್ಟ್ರಗಳು ವಿದ್ವಂಸಕ ಕೃತ್ಯಗಳನ್ನು ಕೊನೆಗೊಳಿಸಬೇಕು ಮತ್ತು ವಿಶ್ವಶಾಂತಿಯನ್ನು ಮರುಸ್ಥಾಪಿಸಬೇಕೆಂದು ವಿಶ್ವ ಸಂಸ್ಥೆಯನ್ನು 1945ರ ಅಕ್ಟೋಬರ್ 24 ರಂದು ಸ್ಥಾಪಿಸುವ ಮೂಲಕ ವಿಶ್ವದಲ್ಲಿ ಶಾಂತಿಯ ಸಂದೇಶವನ್ನು ಸಾರುತ್ತಿದೆ. ವಿಶ್ವ ಶಾಂತಿಯ ಸ್ಥಾಪನೆಯಲ್ಲಿ ಭಾರತವು ವಿಶ್ವಸಂಸ್ಥೆಗೆ ಬೆನ್ನೆಲುಬಾಗಿ ನಿಂತಿದೆ ಎಂಬುದೇ ಸಂತಸದ ವಿಷಯ.


ಕೆ. ಎನ್. ಚಿದಾನಂದ 

Leave a Reply

Back To Top