ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ತಣಿಯಬೇಕು ಮಣಿಪುರ
ಇಳೆಯ ಮಳೆಯ
ಚೆಲುವ ನಾಡು
ಹಸಿರ ಉಸಿರ
ಅರುಣೋದಯ ಬೀಡು
ನಿತ್ಯ ರೋಷ ದ್ವೇಷ
ರಾಗ ರುಧಿರ ಬಾಳು
ಮಣಿಯ ರೋದನ
ನೋವ ಗೂಡು
ವೇದನ ಆವೇದನ
ಸಂವೇದನವಿರದ
ರಕ್ಕಸರ ಕಾಡು
ಹೂವ ಹೊಸೆವ ಸೇಡು..
ಸುಸ್ಮಿತೆಯ ಅಸ್ಮಿತೆ
ಅಳಿಸುವ ಹುನ್ನಾರದ
ಕರುಳ ಬಗೆವ ಇರುಳ
ನೋವ ಹಾಡು….
ಹೊತ್ತಿ ಉರಿವ ಎದೆ
ಬಾನಲಿ ಮತ್ತೆ ಮೂಡಿ
ಬರಲಿ ಶಾಂತಿ ಚಂದಿರ
ಕೆಂಪಳಿದು ತಂಪಾಗಲಿ ಮಂದಿರ..
ತಣಿದು ಮಣಿಪುರ
ನುಡಿಯಬೇಕು ಸುಸ್ವರ
ಒಡಲ ದಳ್ಳುರಿ ನೀಗಿ
ಚಿಗುರಿ ಶಾಂತಿ ಮಾಮರ…
ಅನುಮಾನದ ಅಗ್ನಿಕುಂಡದಿ
ನಿರಪರಾಧಿ ಸೀತೆಯ ಬಲಿ…
ರೋಷದ ಕುಲುಮೆಯಲ್ಲಿ
ಬೆತ್ತಲಾದ ಬೆಟ್ಟದ ಮಣಿಗಳ ದನಿ.
ನಾರಿ ಮೊಗದ ಮೇಲೆ
ನಗು ನವಿಲು ನಲಿದು
ಕುಣಿದು ತಣಿದು
ಹಾಲ ಹಳ್ಳ ಹರಿಯಲಿ…
ಗುಳೆ ಹೋದ ಕನಸುಗಳು
ಮತ್ತೆ ಮರಳಿ ಬಂದು
ಕಟ್ಟಲಿ ಗೂಡು
ಗುಲ್ಮೊಹರ್ ಬನದ ನಾಡಲಿ…
ಇಂದಿರಾ ಮೋಟೆಬೆನ್ನೂರ.
ಮೇಡಂ, ನಿಮ್ಮ ಸುಂದರ ಮನಸ್ಸಿನ ಪ್ರತಿರೂಪದಂತೆ ಈ ಕವನವು ಸುಂದರವಾಗಿದೆ.. ಸಾಹಿತ್ತಿಕವಾಗಿ ಅಲ್ಲದೆ ತಮ್ಮ ವಸುದೈವ ಕುಟುಂಬಕಂ ಮನೋಭಾವನೆ ಕವನದ ತುಂಬಾ ಕಾಣುತ್ತದೆ.. ಆ ನಮ್ಮ ಜನವೆಲ್ಲ ನೋವಿನಿಂದ ಹೊರ ಬಂದು.. ಸುಂದರವಾಗಿ ಬಾಳಲೆಂದು ಹಾರೈಸುವ, ಬೇಡಿಕೊಳ್ಳುವ ತಮ್ಮ ಸುಂದರ ಮನಸ್ಸಿಗೊಂದು ನಮನ.. ಧನ್ಯವಾದಗಳು..
ಕವನದ ಆಶಯಕ್ಕೆ ಸ್ಪಂದಿಸಿದ ತಮ್ಮ ಕವಿ ಹೂ ಮನಸಿಗೆ
ವಂದನೆಗಳು……