ಜಯಂತಿ ಸುನಿಲ್ ಕವಿತೆ-ಗಜಲ್

ಕಾವ್ಯ ಸಂಗಾತಿ

ಜಯಂತಿ ಸುನಿಲ್

ಗಜಲ್

ಜಾತಿಯ ಮಧ್ಯೆ ಪ್ರೀತಿಯ ಗೋಡೆಕಟ್ಟಲು ನೀವು ಸವೆಸಿದ ದಿನಗಳೆಷ್ಟು?
ಜೀವನಸಾರವೇ ತಿಳಿಯದೆ ಧರ್ಮ-ಧರ್ಮಗಳ ನಡುವೆ ಕಟ್ಟಿದ ಗೋಡೆಗಳೆಷ್ಟು?

ಒಂದರ ಮೇಲೊಂದು ಭಿನ್ನ ಸಂಸ್ಕೃತಿಯ ಅಲೆಗಳು ಅಲೆದಾಡುತ್ತಿರುವಾಗ…
ಅನುಭವದ ಪ್ರವಾಹದೊಳಗೆ ಲೀನವಾಗದ ಸಂಸ್ಕಾರಗಳೆಷ್ಟು?

ನಮ್ಮದಲ್ಲದ ಸರಕಿಗೆ ಕಾವಲುಕಾಯುವ ಗೋಜೇಕೆ?
ನಿಮ್ಮತನದ ಸರಹದ್ದುಗಳ ಹೊರಚಾಚುವಿನಲ್ಲಿ ಬಿತ್ತಿಬೆಳೆಸಿದ ಸ್ವಾರ್ಥದ ಬೀಜಗಳೆಷ್ಟು?

ಹುಟ್ಟು ಸಾವಿನ ಮಹಾಪೂರಣವು ಭುವಿಯ ಎದೆಯ ಮೇಲೆ ಹಾಡಾಗಿದೆ
ಗುಟ್ಟಿನ ಕಾಡಿನೊಳಗೆ ಸಂಚರಿಸುವ ಪಯಣಿಗರೇ ನಿಮ್ಮ ಹಾದಿಯಲ್ಲಿ ಕವಲೊಡೆದ ದಾರಿಗಳೆಷ್ಟು..?

ಮಣ್ಣು, ಹೆಣ್ಣು,ಹೊನ್ನೆಂಬ ಭೋಗಭಾಗ್ಯಕ್ಕೆ ಹಾತೊರೆವ ಮಂದಿಯೆ…
ಕಲ್ಲು ತುಂಬಿದ ಏರುಪೇರಿನ ನೆಲದಲ್ಲಿ ನೀವು ಏರಿದ ಕುದುರೆಗಳೆಷ್ಟು?

ಮತ್ಯಾರದೋ ಹೆಜ್ಜೆ ಗುರುತಿನ ಮೇಲೆ ನಡೆವ ಹುನ್ನಾರ ಬಲ್ಲವರೇ..
ಬೇಡಿಕೊಂಡರೂ ಓಗೊಡದ ನಿಮ್ಮ ಸಾಮ್ರಾಜ್ಯದಲ್ಲಿ ಮಸೆದ ಕತ್ತಿಗಳೆಷ್ಟು?

ಎಲ್ಲ ಕಟ್ಟುಗಳನ್ನು ಮೀರಿದ ಸ್ಥಳ ಎಲ್ಲಿಹುದೆಂದು ಕಾಣದಾದಿರಿ
ಜಗವನೇ ಜಯಿಸುವ ಹುಂಬತನದಲ್ಲಿ ಸುತ್ತು ಬಳಸಿದ ದಾರಿಯಲ್ಲಿ ನೀವು ನಡೆಸಿದ ಯುಧ್ಧಗಳೆಷ್ಟು?


ಜಯಂತಿ ಸುನಿಲ್

Leave a Reply

Back To Top