ಡಾ ಅನ್ನಪೂರ್ಣ ಹಿರೇಮಠ-ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

ಬಳಿ ಸುಳಿ ಸುಳಿದು ಅಂಗಲಾಚಿದ ಪ್ರೇಮವನು ಅಪ್ಪಿದರೆ ಅಪರಾಧವೇ ಶಿವ
ತಾನೇ ಬಯಸಿ ಬಯಸಿ ಬಂದ ಸ್ನೇಹವನು ಸ್ವೀಕರಿಸಿದರೆ ಅಪರಾಧವೇ ಶಿವ

ಮರೆಯಲಾರೆನೆಂದೆಂದಿಗೆಂದು ನೆಚ್ಚಿಸಿದಾಗ ನಂಬಿದರೆ ಅಪರಾಧವೇ ಶಿವ
ಕಷ್ಟ ಮರೆಸಿ ನಲಿವನೇ ನೀಡಿ ನಗಿಸುವೆನೆಂದಾಗ ನಕ್ಕರೆ ಅಪರಾಧವೇ ಶಿವ

ಹುದುಗಿದ ಪ್ರೀತಿಯನು ಬಡಿದಬ್ಬಿಸಿದಾಗ ಮುತ್ತಿಸಿದರೆ ಅಪರಾಧವೇ ಶಿವ
ಹುಣ್ಣಾದ ನೋವಿಗೆ ಔಷಧಿಯಾಗುವೆನೆಂದಾಗ ನೋಡಿದರೆ ಅಪರಾಧವೇ ಶಿವ

ಸಖ್ಯವನೇ ಅರಿಯದ ತನುವು ಪ್ರೇಮಸ್ಪರ್ಶದೆ ಮೈಮರೆತರೆ ಅಪರಾಧವೇ ಶಿವ
ಹೂತಿಟ್ಟ ಹೊನ್ನಾಸೆಗಳ ತೀರಿಸುವೆನೆಂದಾಗ ಅರಳಿದರೆ ಅಪರಾಧವೇ ಶಿವ

ಬಚ್ಚಿಟ್ಟ ಸಾವಿರ ಮಾತಿಗೆ ಉಸಿರಾಗುವೆನೆಂದಾಗ ದನಿಯಾದರೆ ಅಪರಾಧವೇ ಶಿವ
ದುಃಖವೆಲ್ಲ ಮರೆಸಿ ಸಂತಸವನೆ ಸುರಿಯುವೆನೆಂದಾಗ ನಲಿದರೆ ಅಪರಾಧವೇ ಶಿವ

ಜನ್ಮ ಜನ್ಮದಲ್ಲೂ ನಿನಗಾಸರೆ ಆಗಿರುವೆನೆಂದಾಗ ಸೆರೆಯಾದರೆ ಅಪರಾಧವೇ ಶಿವ
ನಲುಗದ ಸಂಬಂಧಕ್ಕೆ ಸೇತುವೆಯಾಗುವೆನೆಂದಾಗ ಕೈ ಹಿಡಿದರೆ ಅಪರಾಧವೇ ಶಿವ

ಒಲವ ದೋನಿಯಲಿ ತುಸುದೂರ ಕರೆದೊಯ್ದು ಮರೆತರೆ ಅಪರಾಧವಲ್ಲವೆ ಶಿವ
ಇಲ್ಲದಾಸೆಗಳ ಹುಟ್ಟುಹಾಕಿ ಹಂಬಲಗಳ ಉರಿಸುತ ದೂರಾದರೆ ಅಪರಾಧವಲ್ಲವೇ ಶಿವ


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top