vatsala

ಅಂಕಣ ಬರಹ

ವತ್ಸಲಾ ಶ್ರೀಶ

ನಾವುಮರೆತ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ರಾಜಮಣಿ ಸರಸ್ವತಿ
(ಭಾರತದ ಅತ್ಯಂತ ಕಿರಿಯ ಗೂಢಾಚಾರಿಣಿ)

ರಾಜಮಣಿ ಅವರು ಬರ್ಮಾದ (ಇಂದಿನ ಮ ಯನ್ಮಾರ್ ) ರಂಗೂನ್‌ನಲ್ಲಿ 1927 ರ ಜನವರಿ 11 ರಂದು ಜನಿಸಿದರು . ಆಕೆಯ ತಂದೆ ಅಲ್ಲಿ ಚಿನ್ನದ ಗಣಿ ಹೊಂದಿದ್ದರು ಮತ್ತು ರಂಗೂನ್‌ನ ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದರು.

ಅದೊಂದು ದಿನ ರೇಡಿಯೋದಲ್ಲಿ ಬಂದ ಸುದ್ದಿಗೆ ಇಡೀ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ರಾಜ ಮಣಿಗೆ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಪೂರ್ಣವಾಗಿ ಅರ್ಥವಾಗದಿದ್ದರೂ ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿತ್ತು. ಅಂತಹ ಯಾವ ವಿಷಯ ಕೇಳಿ ಎಲ್ಲರೂ ಸ್ತಂಭೀಭೂತರಾದರೆಂದು ಅವಳಿಗೆ ಅರ್ಥವಾಗಲಿಲ್ಲ. ನಂತರ ಗೊತ್ತಾಯಿತು ಭಗತ್ ಸಿಂಗ್ ಅವರಿಗೆ ನೇಣು ಶಿಕ್ಷೆ ಘೋಷಣೆಯಾಗಿತ್ತು. ಮಾರನೆಯ ದಿನ ಭಗತ್ ಸಿಂಗ್ ಬಗ್ಗೆ ದಿನಪತ್ರಿಕೆಯಲ್ಲಿ ಅವರ ವಿಷಯವನ್ನು ಓದಿ, ಅವರ ಶೌರ್ಯ, ಕ್ರಾಂತಿಕಾರಿ ಧೋರಣೆಯಿಂದ ತೀವ್ರ ಪ್ರಭಾವಕ್ಕೊಳಗಾದಳು. ರಾಜಮಣಿಯ ತಂದೆ ತುಂಬಾ ಶ್ರೀಮಂತರು ಹಾಗೂ ಪ್ರಭಾವಿ ವ್ಯಕ್ತಿಯೂ ಆಗಿದ್ದುದರಿಂದ ಅವರ ಮನೆಗೆ ಹಲವಾರು ದೊಡ್ಡ ದೊಡ್ಡ ವ್ಯಕ್ತಿಗಳು ಬಂದು ಹೋಗುತ್ತಿದ್ದರು. ಹಾಗೆಯೇ ಅಂದೂ ಆ ಮನೆಗೆ ಒಬ್ಬ ದೊಡ್ಡ ವ್ಯಕ್ತಿ ಆಗಮಿಸುವುದರಲ್ಲಿದ್ದರು.ಎಲ್ಲರೂ ಆ ವ್ಯಕ್ತಿಯನ್ನು ಎದುರುಗೊಳ್ಳಲು ಹೋಗಿದ್ದರೆ ಭಗತ್ ಸಿಂಗ್ ವಿಚಾರಧಾರೆಗಳನ್ನು ಓದಿ ಪ್ರಭಾವಿತಳಾಗಿದ್ದ ರಾಜಮಣಿ ಮಾತ್ರ ಪಿಸ್ತೂಲಿನಿಂದ ಗುರಿ ಇಡುವುದನ್ನು ಅಭ್ಯಾಸ ಮಾಡುತ್ತಿದ್ದಳು. ಮನೆಗೆ ಬಂದ ಆ ವ್ಯಕ್ತಿ ರಾಜಮಣಿಯ ಬಳಿಗೆ ಬಂದು ತಲೆ ಸವರಿ ಮಗೂ ಹಿಂಸೆಯ ದಾರಿ ಎಂದಿಗೂ ತಪ್ಪು.ಬದುಕಿನಲ್ಲಿ ಅಹಿಂಸೆಯನ್ನು ಪಾಲಿಸಬೇಕು ಎಂದಾಗ ರಾಜಮಣಿ ಅವರಿಗೆ ಏನೂ ಉತ್ತರಿಸದೆ ಮೌನವಾದಳು. ಅವಳು ಮನದಲ್ಲೇ, ಹಾಗಾದರೆ ಬ್ರಿಟಿಷರು ಮಾಡುತ್ತಿರುವುದೇನು? ಹಿಂಸೆ ಅಲ್ಲವೇ.. ಅವಳು ಪುನಃ ಗುರಿ ಇಡುತ್ತಾಳೆ. ಈ ಬಾರಿ ಬಂದೂಕಿನ ಗುರಿ ನಿಖರವಾಗಿತ್ತು. ಮುಂದಿದ್ದ ವಸ್ತು ಇವಳ ಗುಂಡೇಟಿಗೆ ಛಿದ್ರವಾಗಿತ್ತು.. ಅವಳಿಟ್ಟ ಗುರಿಯಂತೆ ಅವಳ ನಿರ್ಧಾರವೂ ದೃಢವಾಗಿತ್ತು. ಅಂದು ತಲೆ ನೇವರಿಸಿ ಅಹಿಂಸೆ ಬೋಧಿಸಿ ಹೋಗಿದ್ದ ವ್ಯಕ್ತಿ ಬೇರಾರೂ ಆಗಿರದೆ ಮಹಾತ್ಮ ಗಾಂಧೀಜಿಯವರಾಗಿದ್ದರು…


ಅಂದು ಭಗತ್ ಸಿಂಗ್ ರನ್ನು ನೇಣಿಗೇರಿಸಿದುದರ  ಬಗ್ಗೆ ಧ್ವನಿಯೆತ್ತಿದವರು ಒಬ್ಬರೇ ಒಬ್ಬರಾಗಿದ್ದರು ಅವರು ಸುಭಾಷ್ ಚಂದ್ರ ಬೋಸ್. ಸುಭಾಷ್ ಚಂದ್ರ ಬೋಸರ ಈ ದಿಟ್ಟತನದ ಮಾತುಗಳು ಪತ್ರಿಕೆಯಲ್ಲೆಲ್ಲಾ ಪ್ರಕಟವಾಗಿತ್ತು.ಇದನ್ನು ಓದಿ ಪ್ರಭಾವಿತಳಾದ ಪುಟ್ಟ ರಾಜಮಣಿ ಅವರ ಎಲ್ಲಾ ಭಾವಚಿತ್ರಗಳನ್ನು ಅವರ ಭಾಷಣಗಳ ಮುಖ್ಯಾಂಶಗಳನ್ನು‌ ಸಂಗ್ರಹಿಸತೊಡಗಿದಳು. ನೇತಾಜಿಯ ಆರ್ಮಿಯಲ್ಲಿ ತಾನು ಸೇರಿಕೊಳ್ಳಬೇಕೆಂದು ಕನಸು ಕಂಡಳು.ನೇತಾಜಿಯ ಮಾತಿನಿಂದ ಅವಳಂತೆ ಪ್ರಭಾವಿತರಾದವರು ಇನ್ನೂ ಹಲವರಿದ್ದರು..ಏಕೆಂದರೆ ನೇತಾಜಿಯ ವ್ಯಕ್ತಿತ್ವವೇ ಅಂತಹದು..ಸ್ವಾತಂತ್ರ್ಯ ಪಡೆದುಕೊಳ್ಳಬೇಕೆಂಬ ತುಡಿತ ಅಂತಹುದು.ಸ್ವಾತಂತ್ರ್ಯದ ಹೊರತಾದ ಬೇರೆ ಕನಸುಗಳಿರದವರು.. ರಾಜಮಣಿ ಮಾತ್ರವಲ್ಲದೆ
 ರಂಗೂನ್ ನಲ್ಲಿದ್ದ ಒಂದು ಸಕ್ಕರೆ ಕಾರ್ಖಾನೆಯ ಕಾರ್ಮಿಕರು, ಅವರ ತಾಯಂದಿರು, ಪತ್ನಿಯರು,ಪುಟ್ಟ ಪುಟ್ಟ ಮಕ್ಕಳು ನೇತಾಜಿ ಎಂದರೆ ದೇಶವನ್ನೇ ಬದಲಾಯಿಸಬಹುದಾದ ಜಾದೂಗಾರ ಎಂದು ತಿಳಿದಿದ್ದರು. ರಾಜಮಣಿ ನೇತಾಜಿಯ  ಭೇಟಿಗಾಗಿ ಕಾಯುತ್ತಿದ್ದಳು. ಅದಕ್ಕಾಗಿ ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತಿದ್ದಳು. ಅದಾಗಲೇ ಜಪಾನ್ ದೇಶದ 80,000 ಸೈನಿಕರು ಮೂವತ್ತು ಸಾವಿರ ಯುದ್ಧ ಕೈದಿಗಳನ್ನು ಸೇರಿಸಿ ನೇತಾಜಿಯವರು ಐಎನ್ಎ ಕಟ್ಟಿದ್ದರು.

ಒಂದು ದಿನ ರಾಜಮಣಿ  ಶಾಲೆಯಿಂದ ಬರುವಾಗ ನೇತಾಜಿ ರಂಗೂನ್  ಗೆ ಆಗಮಿಸುತ್ತಾರೆ ಎಂಬ ವಿಷಯ ತಿಳಿಯಿತು. ಅವಳು ಹಿಗ್ಗಿಹೋದಳು.. ನೇತಾಜಿಯವರು ಅಲ್ಲಲ್ಲಿ ನಡೆಸಿದ ಭಾಷಣದಲ್ಲಿ  “ದೇಶಕ್ಕಾಗಿ ನಿಮ್ಮ ಪ್ರಾಣ ಬೇಕಾಗಿದೆ. ಏಕೆಂದರೆ ನಮ್ಮೆಲ್ಲರ ತಾಯಿ ಭಾರತಿ ಬದುಕುಳಿಯಬೇಕಾಗಿದೆ”. ಹಾಗೆಯೇ “ನೀವು ರಕ್ತ ನೀಡಿ ನಾನು ಸ್ವಾತಂತ್ರ್ಯ ತಂದು ಕೊಡುತ್ತೇನೆ” ಎಂಬಂತಹ ರೋಮಾಂಚನಗೊಳಿಸುವ ಮಾತುಗಳು ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುತ್ತಿತ್ತು.

  ಆಗ ನೇತಾಜಿಯೊಂದಿಗೆ ಬಂದ ಕಾರ್ಯಕರ್ತರು  ಐ ಎನ್ ಎ ಕಟ್ಟುವುದಕ್ಕಾಗಿ, ಸೈನ್ಯದ ಖರ್ಚಿಗಾಗಿ ರಂಗೂನ್  ನಲ್ಲಿ  ದೇಣಿಗೆ ಸಂಗ್ರಹಿಸಿಕೊಂಡಿರುತ್ತಾರೆ.ತಾನೂ ಏನಾದರೂ ಕೊಡಬೇಕು ಎಂದು ಅಂದುಕೊಂಡ ರಾಜಮಣಿ ತನ್ನೆಲ್ಲಾ ಆಭರಣಗಳನ್ನು ದೇಣಿಗೆ ಸಂಗ್ರಹಿಸುವವರಿಗೆ ನೀಡುತ್ತಾಳೆ. ಕೆಲವು ದಿನ ಕಳೆದಿತ್ತು. ಒಂದು ದಿನ ಅವಳು ಶಾಲೆಯಿಂದ ಬಂದಾಗ ನೇತಾಜಿಯವರು ಅವಳ ಮನೆಯಲ್ಲಿದ್ದರು. ಅವಳಿಗೆ ಸಂತಸ ತಡೆಯಲಾಗಲಿಲ್ಲ. ಆದರೆ ಅವರು ಅವಳ ಆಭರಣ ಹಿಂತಿರುಗಿಸಲು ಬಂದಿದ್ದಾರೆ ಎಂದು ತಿಳಿದಾಗ  16 ವರ್ಷದವಳಾಗಿದ್ದ ರಾಜಮಣಿಗೆ ಸಿಟ್ಟು  ಬಂದಿತ್ತು. ತಮ್ಮ ಸಂಘಟನೆ ಎಲ್ಲರಿಗೂ ಎಂದಾದ ಮೇಲೆ ನೀವು ಇದನ್ನು ತೆಗೆದುಕೊಳ್ಳಲೇಬೇಕು ಎಂದು ಹಠ ಹಿಡಿದಳು. ಆದರೂ ಅಷ್ಟು‌ ದೊಡ್ಡ ಮೊತ್ತದ  ಆಭರಣ ತೆಗೆದುಕೊಳ್ಳಲು ನೇತಾಜಿ ಒಪ್ಪದಿದ್ದಾಗ ಅವಳು ತನ್ನನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವ ಷರತ್ತು ವಿಧಿಸಿದಳು. ನೀನಿನ್ನೂ ಚಿಕ್ಕ ವಯಸ್ಸಿನವಳೆಂದು ಎಷ್ಟು ಹೇಳಿದರೂ ಕೇಳದೆ ಹಠ ಹಿಡಿದಳು .ಅವಳ ಹಟ, ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಅವಳ ಛಲ ಎಲ್ಲವನ್ನೂ ನೋಡಿದ ನೇತಾಜಿಯವರು ಅವಳಿಗೆ ಸರಸ್ವತಿ ಎಂದು ನಾಮಕರಣ ಮಾಡುತ್ತಾರೆ. ಸರಸ್ವತಿಯ ಹಟಕ್ಕೆ ಮಣಿದ ನೇತಾಜಿಯವರು ಅವಳನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಾರೆ. ಮೊದಲು ಅವಳಿಗೆ ಗಾಯಾಳುಗಳನ್ನು ಶುಶ್ರೂಷೆ ಮಾಡುವ ದಾದಿಯ ತರಬೇತಿ ನೀಡಲಾಯಿತು. ಆದರೆ ಅವಳಿಗೆ ಆ ಕೆಲಸಕ್ಕಿಂತಲೂ ಸೈನ್ಯದೊಳಗೆ ಕೆಲಸ ಮಾಡಬೇಕೆಂಬ ತುಡಿತವಿತ್ತು. ಅದೊಂದು ದಿನ ಐಎನ್ಎ ಸೈನಿಕನೊಬ್ಬ ಇಂಗ್ಲೀಷರೊಂದಿಗೆ ಮಾತನಾಡುವುದನ್ನು ಹಾಗೂ ಅವರಿಂದ ಹಣವನ್ನು ಪಡೆದುಕೊಳ್ಳುವುದನ್ನು ನೋಡುತ್ತಾಳೆ. ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡುತ್ತಿರುವುದೆಂದು ಅವಳಿಗೆ ತಿಳಿಯಿತು. ರಂಗೂನ್ ಪಟ್ಟಣದಿಂದ 7km ದೂರದಲ್ಲಿರುವ ಸೈನ್ಯದ ತರಬೇತಿ ಸ್ಥಳಕ್ಕೆ ಹೋಗಿ ನೇತಾಜಿಯವರೊಂದಿಗೆ ಆ ವಿಷಯವನ್ನು ಹೇಳಿದಾಗ ಅವರು ಅದರ ಬಗ್ಗೆ  ವಿಚಾರಣೆ ನಡೆಸಲು ಒಬ್ಬನನ್ನು ಕಳುಹಿಸುತ್ತಾರೆ.  ಹಾಗೆಯೇ ಅಂದ ಅವಳ ಸೈನ್ಯಕ್ಕೆ ಸೇರುವ ಬಹುದಿನದ ಕನಸು  ನನಸಾಗಿತ್ತು. ನೇತಾಜಿಯವರು ಅವಳ ಕೆಲಸದಿಂದ ಸಂತೋಷಗೊಂಡು ಅವಳನ್ನು  ತಮ್ಮ ಸೈನ್ಯಕ್ಕೆ ಸೇರಿಸಿಕೊಂಡರು. ಅಲ್ಲಿ ಹಲವಾರು ಕಷ್ಟಕರವಾದ ತರಬೇತಿಗಳನ್ನು ನೀಡಲಾಯಿತು. ಬಂದೂಕು ತರಬೇತಿಯಾಗಿದ್ದರೂ  ಬಂದೂಕುಗಳನ್ನು ಚಲಾಯಿಸಲು ಅವಳಿಗೆ ಅನುಮತಿ ನೀಡಲಿಲ್ಲ.ಅವಳು ಹಾಗೂ ತರಬೇತಿ ಪಡೆದ ಕೆಲ‌ ಮಹಿಳಾ ಸೈನಿಕರ  ಒತ್ತಾಯದ‌ ಕೋರಿಕೆಗೆ ಮಣಿದು  1942 ರಲ್ಲಿ, ರಾಜಮಣಿ ಯನ್ನು ಹಾಗೂ‌ ಕೆಲವು‌ಮಹಿಳಾ‌ಸೈನಿಕರನ್ನು   INA ಯ ರಾಣಿ ಆಫ್ ಝಾನ್ಸಿ ರೆಜಿಮೆಂಟ್‌ಗೆ ನೇಮಕಮಾಡಿಕೊಳ್ಳಲಾಯಿತು .ಆದರೆ ರಾಜಮಣಿ ಹಾಗೂ ಇನ್ನೊಬ್ಬಳನ್ನು ಬೇರೆ ಕೆಲಸಕ್ಕೆ ನಿಯಮಿಸಿದರು. ಅಂದರೆ ಸೈನ್ಯದ ಮಿಲಿಟರಿ ಗುಪ್ತಚರ ವಿಭಾಗಕ್ಕೆ ಸೇರಿಸಲಾಯಿತು. (ಮುಂದೆ ಸರಸ್ವತಿ ರಾಜಮಣಿಯವರು ಅತ್ಯಂತ ಕಿರಿಯ ಭಾರತೀಯ ಮಹಿಳಾ ಗೂಢಚಾರಿಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.. )ಅವರ ತಲೆ ಕೂದಲನ್ನು ಕತ್ತರಿಸಿ ಇಬ್ಬರನ್ನೂ ಹುಡುಗರಂತೆ ಮಾಡಿದರು. ನಂತರ ಇಂಗ್ಲೀಷರ ಕ್ಯಾಂಪಿನಲ್ಲಿ ಕೆಲಸಗಾರರಂತೆ ಹೋಗಿ ಗೂಢಚರ್ಯೆ ಕೆಲಸವನ್ನು ಮಾಡಬೇಕೆಂದು ತಿಳಿಸಿದರು. ನೇತಾಜಿ ಇರುವ ಕ್ಯಾಂಪ್ ನಿಂದ 700 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಬ್ರಿಟಿಷ್ ಕ್ಯಾಂಪ್ ಒಂದರಲ್ಲಿ ಕೊನೆಗೂ ಕೆಲಸ ದೊರೆಯುತ್ತದೆ.. ಬ್ರಿಟಿಷ್ ಕ್ಯಾಂಪುಗಳಲ್ಲಿ ಬೂಟ್ ಪಾಲಿಶ್ ಮಾಡುವುದು, ನೀರು ಕೊಡುವುದು, ಟೀ ತಂದು ಕೊಡುವುದು ಇಂತಹ ಕೆಲಸಗಳನ್ನು ಮಾಡುತ್ತಾ ಬ್ರಿಟಿಷರ ಹೆಜ್ಜೆ ಹೆಜ್ಜೆಗಳ ಬಗ್ಗೆ ಮಾಹಿತಿ ಸಂಗ್ರಹಿಸ ತೊಡಗಿದರು. ಸ್ವಲ್ಪ ಸಮಯದ ಬಳಿಕ ಯಾವುದೇ ಬಗೆಯ ಬೀಗವನ್ನು ತೆರೆದು ಅಲ್ಲಿಯ ಮಾಹಿತಿಗಳನ್ನು ಸಂಗ್ರಹಿಸುವಷ್ಟು ತಮ್ಮ ಬೇಹುಗಾರಿಕಾ ಕೆಲಸದಲ್ಲಿ ಯಶಸ್ವಿಯಾದರು.. ಹಾಗೂ ಸಂಗ್ರಹಿಸಿದ ಮಾಹಿತಿಗಳನ್ನುನೇತಾಜಿಯವರಿಗೆ ರವಾನಿಸುತ್ತಿದ್ದರು.1943 ರಲ್ಲಿ ಭಾರತದ ಗಡಿಗಳಿಗೆ ಬೋಸ್ ಅವರ ರಹಸ್ಯ ಭೇಟಿಯ ಸಂದರ್ಭದಲ್ಲಿ ಬ್ರಿಟಿಷರು ಹತ್ಯೆ ಮಾಡುವ ಯೋಜನೆಯನ್ನು ಬಹಿರಂಗಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಎರಡನೇ ವಿಶ್ವ ಯುದ್ಧದಲ್ಲಿ ಗಾಂಧೀಜಿಯವರ ಇಚ್ಛೆಯ ವಿರುದ್ಧವಾಗಿ ಜಪಾನಿಗೆ ನೇತಾಜಿಯವರು ಬೆಂಬಲ ನೀಡುತ್ತಾರೆ. ಶತ್ರುವಿನ  ಶತ್ರುವಿನೊಂದಿಗೆ ಮಿತ್ರತ್ವ ಬೆಳೆಸಬೇಕೆಂಬುದು ನೇತಾಜಿಯವರ ನಿಲುವಾಗಿತ್ತು. ದಿನಗಳು ಕಳೆಯುತ್ತಿದ್ದವು. ರಾಜಮಣಿ ಹಾಗೂ  ಅವಳ ಗೆಳತಿ ಅಪಾಯವನ್ನು ಎದುರು ಹಾಕಿಕೊಂಡು ಕೆಲಸ ಮಾಡುತ್ತಿದ್ದರು.ಅವರ ಸೈನ್ಯಕ್ಕೆ ಶಸ್ತ್ರಾಸ್ತ್ರ ಗಳು ಬೇಕಾಗಿದ್ದವು. ಬ್ರಿಟಿಷರಲ್ಲಿ ಹೇರಳವಾದ ಶಸ್ತ್ರಾಸ್ತ್ರಗಳಿದ್ದವು.. ಅವುಗಳನ್ನು ಕದ್ದು ತಮ್ಮ ಸೈನ್ಯಕ್ಕೆ ಕಳುಹಿಸುತ್ತಿದ್ದರು. ಒಂದು ವರ್ಷ ಕಳೆದಿತ್ತು. ಅದೊಂದು ದಿನ ಅವಳ ಜೊತೆಗಾತಿಯಾದ ದುರ್ಗಾ ಬ್ರಿಟಿಷರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾಳೆ.. ಸೈನ್ಯದ ನಿಯಮದಂತೆ ಸಿಕ್ಕಿಹಾಕಿಕೊಂಡವರು ಸಾವು ಬಂದರೆ ಸಾವಿಗೆ ಶರಣಾಗಬೇಕು.ಹಾಗೂ ಉಳಿದವರು ತಪ್ಪಿಸಿಕೊಂಡು ಬಂದುಬಿಡಬೇಕು ಎಂಬುದು.. ಜೊತೆಗಾತಿಯಾದ ದುರ್ಗಾಳನ್ನು ಬಿಟ್ಟು ಹೋಗಲು ಸರಸ್ವತಿ ಸಿದ್ದಳಿರಲಿಲ್ಲ. ಅವಳು ಮತ್ತೊಮ್ಮೆ ತನ್ನ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಾಳೆ. ಬರ್ಮಾದ ಪ್ರಾದೇಶಿಕ ಉಡುಪನ್ನು ಧರಿಸಿ ಜೈಲಿಗೆ ಹೋಗುತ್ತಾಳೆ. ಅಲ್ಲಿ ಅಧಿಕಾರಿ ಹೊರಹೋದ ಕೂಡಲೇ ತನ್ನ ಕೈಚಳಕದಿಂದ ಬೀಗವನ್ನು ತೆರೆದು ದುರ್ಗಾಳನು ಕರೆದುಕೊಂಡು ಓಡುತ್ತಾಳೆ. ಹಿಂಬಾಲಿಸಿಕೊಂಡು ಬಂದ ಬ್ರಿಟಿಷರ ಗುಂಡು ಸರಸ್ವತಿಯ ಕಾಲಿಗೆ ತಾಗುತ್ತದೆ. ಗುಂಡಿನ ಏಟಿನೊಂದಿಗೆ ರಾಜಮಣಿ ಹಾಗೂ ದುರ್ಗಾ ಓಡುತ್ತಾರೆ.. ಓಡಿ ಓಡಿ ಕಾಡಿನ  ಮರದ ಮೇಲೆ ಹೋಗಿ ಕುಳಿತುಕೊಳ್ಳುತ್ತಾರೆ.. ಬ್ರಿಟಿಷರಿಂದ ತಪ್ಪಿಸಿಕೊಂಡು ಮೂರು ದಿನಗಳ ಕಾಲ ಅದೇ ಮರದಲ್ಲಿ ಇರುತ್ತಾರೆ. ನಾಲ್ಕನೆಯ ದಿನ ಕಾಡಿನುದ್ದಕ್ಕೂ ನಡೆದು ಒಂದು ರಸ್ತೆಯನ್ನು ಬಂದು ಸೇರುತ್ತಾರೆ. ಅಲ್ಲಿ ಒಂದು ವಾಹನದ ಮೂಲಕ ಎಂಟು ಗಂಟೆಗಳ ಕಾಲ ಪ್ರಯಾಣಿಸಿ ತಮ್ಮ ಕ್ಯಾಂಪ್ ಬಂದು ಸೇರುತ್ತಾರೆ..ತಲುಪಿದ ಕೂಡಲೇ ಅಲ್ಲೇ‌ ಕುಸಿದು ಬೀಳುತ್ತಾರೆ. ಆರೈಕೆಯಿಂದ‌ ಚೇತರಿಸಿಕೊಂಡ ಅವರಿಗೆ   ತಮ್ಮ ಸ್ವಂತ  ಮನೆಗೆ ತಲುಪಿದಂತೆ ಅನಿಸುತ್ತದೆ.
ಸ್ವಲ್ಪ ದಿನಗಳ ಬಳಿಕ ನೇತಾಜಿ ಅವರಿಂದ ಪತ್ರವೊಂದು ಬರುತ್ತದೆ. ಅದರಲ್ಲಿ ಅವಳ ಕಾರ್ಯವನ್ನು ಶ್ಲಾಘಿಸಿ ಭಾರತದ ಅತ್ಯಂತ ಕಿರಿಯ ಗೂಢಚಾರಿಣಿ ಎಂದು ಕರೆಯುತ್ತಾರೆ.. ಇದರಿಂದ ರಾಜಮಣಿ ತುಂಬಾ ಸಂತೋಷಕೊಳ್ಳುತ್ತಾಳೆ..

1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿ ಕ್ಕಿತು ಇದಕ್ಕಿಂತ…ಎರಡು ವರ್ಷ ಮುಂಚೆಯೇ ನೇತಾಜಿ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುತ್ತಾರೆ..  ಈ ಸಾವನ್ನು ನಂಬಲಾಗದೆ ಐಎನ್ಎ ಸೈನಿಕರೆಲ್ಲರೂ ನೇತಾಜಿಯವರದ ದಾರಿ ಕಾಯುತ್ತಲೇ ಇದ್ದರು..ಮುಂದೆ ನೇತಾಜಿಯವರ ಅನುಪಸ್ಥಿತಿಯಲ್ಲಿ ಸೈನ್ಯವನ್ನು ಮುನ್ನಡೆಸಲು ಯಾರೂ ಇಲ್ಲದ ಕಾರಣ ಸೈನ್ಯ ಚದುರಿಹೋಯಿತು.ಸರಸ್ವತಿಯ ತಂದೆ ತಾಯಿ ತಮ್ಮ ವ್ಯಾಪಾರ ವಹಿವಾಟು ಗಳನ್ನು ಬಿಟ್ಟು ಭಾರತದಲ್ಲಿ ಬಂದು ನೆಲೆಸುತ್ತಾರೆ. ಸರಸ್ವತಿ ರಾಜಮಣಿಯು ತನ್ನ 20ನೇ ವಯಸ್ಸಿನಲ್ಲಿ ತನ್ನ ತಂದೆ ತಾಯಿಯನ್ನು ಸೇರಿಕೊಳ್ಳುತ್ತಾಳೆ. 1971 ರವರೆಗೆ ಐಎನ್ಎಯಲ್ಲಿದ್ದ ಯಾರಿಗೂ ಸ್ವಾತಂತ್ರ ಹೋರಾಟಗಾರರ ಪಟ್ಟ ಸಿಕ್ಕಲ್ಲೇ ಇಲ್ಲ…ತಮ್ಮ ಜೀವನದ ಅಂತಿಮ ಕ್ಷಣಗಳವರೆಗೂ ರಾಜಮಣಿಯವರಿಗೆ ತಾವು ಮಾಡಿದ ಸ್ವಾತಂತ್ರ್ಯ ಹೋರಾಟ ಸರಿಯಾಗಿ ಗುರುತಿಸಲ್ಪಡಲಿಲ್ಲ ಎಂಬ ನೋವು ಕಾಡುತ್ತಿತ್ತು.

ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ. ಸರಸ್ವತಿ ರಾಜಮಣಿ ಅವರು ಜನವರಿ 13, 2018 ರಂದು ಹೃದಯ ಸ್ತಂಭನದಿಂದ ನಿಧನರಾದರು. ಅವರ ಅಂತಿಮ ವಿಧಿಗಳನ್ನು ಚೆನ್ನೈನ ರಾಯಪೆಟ್ಟಾ, ಪೀಟರ್ಸ್ ಕಾಲೋನಿಯಲ್ಲಿ ನಡೆಸಲಾಯಿತು.


ವತ್ಸಲಾ ಶ್ರೀಶ

ಶ್ರೀಮತಿ ವತ್ಸಲಾ ಶ್ರೀಶ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲಾಜೆ ಎಂಬಲ್ಲಿ ಶ್ರೀಮತಿ ರತ್ನ ಹಾಗೂ ಶ್ರೀ ಎ. ನಾರಾಯಣ ರಾವ್ ಇವರ ಸುಪುತ್ರಿಯಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇರಳದ ಗಡಿಭಾಗವಾದ ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಪಡೆದುಕೊಂಡರು.ನಂತರ ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪಡೆದುಕೊಂಡು ಪದವಿಪೂರ್ವ ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಮುಗಿಸಿದರು. ವಿರಾಜಪೇಟೆಯ ಸರ್ವೋದಯ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆದು ಈಗ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೊಡಗಿನ ಶ್ರೀಶಕುಮಾರ್ ಅವರನ್ನು ವಿವಾಹವಾದ ನಂತರ ವಿರಾಜಪೇಟೆಯ ಕಡಂಗ ಮರೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ವತ್ಸಲಾ ಶ್ರೀಶರವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಶಿಕ್ಷಕಿಯಾಗಿ‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸರಕಾರಿ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಣ್ಣ ಕತೆ ,ಕವನ, ಲೇಖನ, ಷಟ್ಪದಿಗಳು,ಇತರ ಛಂದೋಬದ್ಧ ರಚನೆಗಳು, ವಿಮರ್ಶೆ,ಹಾಯ್ಕು,ಗಝಲ್ ಮುಂತಾದವುಗಳನ್ನು ರಚಿಸುತ್ತಾರೆ. ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ,೨೦೨೩ ರ ಬನವಾಸಿಯ ಕದಂಬೋತ್ಸವ ಸೇರಿ ಹೊರಜಿಲ್ಲೆಗಳ ಹಾಗೂ ಜಿಲ್ಲೆಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುತ್ತಾರೆ.ಇವರು ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುತ್ತಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದೆ.೨೦೨೧ ರಲ್ಲಿ ಇವರ ಕವನ ಸಂಕಲನ ಭ್ರಾಜಿತ – “ಬೆಳಕಿನಕಡೆಗೊಂದು ಪಯಣ” ಬಿಡುಗಡೆಯಾಗಿದ್ದು ಜನಮನ್ನಣೆ ಪಡೆದಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಹಲವಾರು ಎಲೆಮರೆಯ ಕಾಯಿಯಂತೆ ಇದ್ದ ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ಕೊಡಗಿನ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯು ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಿದೆ.ಇವರು ಬರೆಯುವ ನ್ಯಾನೋ ಕತೆಗಳು ಜನಪ್ರಿಯತೆ ಗಳಿಸಿವೆ.ವತ್ಸಲಾ ಶ್ರೀಶ ಇವರು ‘ವಿಶ್ರುತಾತ್ಮ’ ಅಂಕಿತನಾಮದೊಂದಿಗೆ ಮುಕ್ತಕಗಳನ್ನು ಹಾಗೂ ‘ತಪಸ್ಯಾ’ ಕಾವ್ಯನಾಮದೊಂದಿಗೆ ಗಝಲ್ ಗಳನ್ನು ರಚಿಸುತ್ತಾರೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ವತಿಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಗಜ಼ಲ್ ಕೃತಿಯು ಕೊಡಗಿನ‌ ಮೊದಲ‌ ಗಜ಼ಲ್ ಕೃತಿಯಾಗಿ ಹೊರಬಂದಿದೆ.

One thought on “

Leave a Reply

Back To Top