ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ತರಹಿ ಗಜಲ್
ತರಹಿ ಗಜಲ್
(ಶಮಾ ಜಮಾದಾರ ಅವರ ಮತ್ಲಾ ಕ್ಕೆ)
,ಎದೆಯ ಬಾಗಿಲನು ನೀನು ತಟ್ಟಬಾರದಿತ್ತು
ಕನಸುಗಳ ಮಹಲನು ನಾನು ಕಟ್ಟಬಾರದಿತ್ತು
ಭಾವಗಳ ಅಲೆಯಲ್ಲಿ ನಾನು ತೇಲಬಾರದಿತ್ತು
ಮೌನದಲಿ ಮನವ ನೀನು ಮುಟ್ಟಬಾರದಿತ್ತು
ಮನದ ಮಾಮರದಿ ಕೋಗಿಲೆ ಉಲಿಯಬಾರದಿತ್ತು
ಎದೆಯ ಬನದಲಿ ಒಲವ ಮಲ್ಲಿಗೆಒಟ್ಟಬಾರದಿತ್ತು
ಬಿತ್ತಿದ ಭಾವ ಮೊಳಕೆ ಒಡೆದು ಹೆಮ್ಮರವಾಗಿದೆ
ಕಣ್ಣ ಪಲುಕಿನಲಿ ಮೆರೆಸಿ ಕಾಲಡಿ ಮೆಟ್ಟಬಾರದಿತ್ತು
ರೆಪ್ಪೆ ಮಿಡಿದ ಕನಸುಗಳಿಗೆ ಬೆನ್ನುಡಿ ಬರೆದೆಯಲ್ಲ
ಮನದ ಬಾನಲಿ ಮುದ್ದುಚಂದಿರ ಹುಟ್ಟಬಾರದಿತ್ತು
ಮಳೆಬಿಲ್ಲ ಜೀಕಿ ಓಕುಳಿಯಲಿ ಮೀಯಿಸಿದೆಯಲ್ಲ
ಹೂಹಾಸ ಹಾಸಿ ಮುಳ್ಳ ಬಣವೆಗೆ ಅಟ್ಟಬಾರದಿತ್ತು
ಇಂದುವಿನ ಮನದಂಗಳದಿ ಬೆಳದಿಂಗಳ ಚಿತ್ತಾರ
ಪ್ರೀತಿ ಸುರಿಸಿ ಶಶಿ ಮೋಡದ ಕದ ತಟ್ಟಬಾರದಿತ್ತು
ಇಂದಿರಾ ಮೋಟೆಬೆನ್ನೂರ.