ಕಾವ್ಯ ಸಂಗಾತಿ
ನಾಗೊಂಡಹಳ್ಳಿ ಸುನಿಲ್
ಬೆತ್ತಲಾದ ಕತ್ತಲು
ಬೆಳದಿಂಗಳ ಬಯಕೆಗೆ ಬೆತ್ತಲಾದ ಕತ್ತಲು
ಸಾವಿನ ಮನೆಯಲ್ಲಿ ಸಾಸಿವೆ ಹುಡುಕುತ್ತಿದೆ ಮೌನವಾಗಿ ಸುತ್ತಲು
ನಸುಕಿನ ಇಬ್ಬನಿಯಲ್ಲಿ ಕನಸು
ನನಸಿಗೆ ನಯವಾಗಿ ನೇಣು ಬಿಗಿಯುತ್ತಿತ್ತು,
ತಾರೆಗಳ ಮೋಹದಲ್ಲಿ ಹಸಿ ಹಸಿವು ಮಸಿ ಬಳಿದು ಹುಸಿಯಾಗಿತ್ತು.
ಮಧು ತುಂಬಿದ ಮಲ್ಲಿಗೆ
ಮೆಲ್ಲಗೆ ಉಸಿರುಗಟ್ಟಿಸುತ್ತಿದೆ
ತುಂಬು ಚಂದ್ರನ ಅಂಗಳದಲ್ಲೂ ಈಗ
ತುಂಬೆ ಹೂವೂ ಇಲ್ಲ,
ಸೇಡು ತುಂಬಿದ ಸೂರ್ಯನಲ್ಲಾದರೂ ಒಂದು ಪಾರಿಜಾತ ಅರಳಲಿ.
ಉಸಿರಿಗೆ ಉಸಿರಾಗುವ ಜೀವಪರತೆಗಳು
ಪತರಗುಟ್ಟಿ ಪಾತರಗಿತ್ತಿಯ ಹೆಗಲೇರಿವೆ
ಹೆಪ್ಪುಗಟ್ಟಿ ತುಂಬಿಕೊಂಡಿದ್ದ ಮೇಘದಲ್ಲಿ
ತುಂಬಿಕೊಳ್ಳಬೇಕಾಗಿರುವುದು ಎಳ್ಳಷ್ಟೂ ಕಾಣಲಿಲ್ಲ
ತುಂಬಿಕೊಂಡಿವೆ ಎಲ್ಲೆಲ್ಲೂ ಮೋಹ, ಮತ್ಸರ, ಕ್ರೌರ್ಯ, ಜಿದ್ದು,ಗದ್ದುಗೆಗಳ ಬಿಸಿ ಮಳೆಯ ತುಂತುರು ಹನಿ.
ಪಾದ ಊರಲು ಬಿಡದ
ಕಾದ ನೆಲವೂ ಸೌಮ್ಯವಾಗಿ ಸ್ವಾಮ್ಯತೆ ಪಡೆದಿದೆ.
ಕತ್ತಲು ಬತ್ತಿ ಬೆಳದಿಂಗಳ ಬೆಳಕಿಗೆ ನೆಪವಾಗಲು
ಗುಡುಗು, ಸಿಡಿಲು, ಮಿಂಚುಗಳು ಮೌನವಾಗಬೇಕಿದೆ
ಮೌನವಾಗಬೇಕಿದೆ…
ನಾಗೊಂಡಹಳ್ಳಿ ಸುನಿಲ್