ಡಾ ಅನ್ನಪೂರ್ಣ ಹಿರೇಮಠ/ಆಲಸ್ಯ ಒಳ್ಳೆಯದಲ್ಲ

ಲೇಖನ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಆಲಸ್ಯ ಒಳ್ಳೆಯದಲ್ಲ

ಆಲಸ್ಯ ಒಂದು ಹೇಡಿತನಕ್ಕೆ ಸಮ, ಯಾವುದೇ ಚಿಕ್ಕ ಕೆಲಸ ಆಗಿರಲಿ, ದೊಡ್ಡ ಕೆಲಸ ಆಗಿರಲಿ, ಉತ್ಸಾಹದಿಂದ ಮಾಡಿದರೆ ಮಾತ್ರ ಕೆಲಸ ಒಳ್ಳೆಯ ಪರಿಣಾಮದಿಂದ ಬೇಗ ಮುಗಿಯಬಲ್ಲದು. ಆಲಸ್ಯಂ ದರಿದ್ರ ಲಕ್ಷಣಂ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದು ಸತ್ಯವಾದ ಮಾತು .ದರಿದ್ರ ಎಂದರೆ ದಡ್ಡತನ, ಬುದ್ಧಿಗೆಡಿತನ, ಹೇಡಿತನ, ಬಡತನ ,ಕತ್ತಲೆಯನ್ನು ಹೋಲುವ ಒಂದು ವಿಷಯ. ಆಲಸ್ಯದಿಂದ ಮಾಡಿದ ಯಾವ ಕಾರ್ಯವು ಒಳ್ಳೆಯದಾಗಲು ಸಾಧ್ಯವಿಲ್ಲ ,ಆಲಸ್ಯದಿಂದಿರುವ ಮನುಷ್ಯ ಜೀವನದಲ್ಲಿ ಏನೂ ಸಾಧಿಸಲಾರ, ಎಂದಿಗೂ ಮುಂದೆ ಬರಲಾರ, ಮಾಡಿದರಾಯಿತು ಬಿಡಿ, ಅದ ನಾಳೆ ಮಾಡುವೆ. ಇನ್ನೂ ದಿನ ಇವೆಯಲ್ಲ  ಎಂದು ಹೇಳುವವ ಏನೂ ಜೀವನದಲ್ಲಿ ಸಾಧಿಸಲಾರ. ಮಾಡಲಾರ. ಇಂದಿನದನ್ನು ಇಂದೇ ಮಾಡಿ ಮುಗಿಸುವ ಮನಸ್ಥಿತಿ ಇರಬೇಕು. ಇದಾ ?ಈಗಲೇ ಮಾಡುವೆ ಬಿಡಿ ಅದರಲ್ಲಿ ಏನಿದೆ? ಎನ್ನುವ ಹುಮ್ಮಸ್ಸು ಇರಬೇಕು. ಎಂತಹ ಕೆಲಸವಾಗಿರಲಿ ಪ್ರಯತ್ನಪಟ್ಟರೆ ಬಂದೆ ಬರುತ್ತದೆ, ಮಾಡಿಯೇ ತೀರುವೆ ಎಂಬ ಛಲವಿರಬೇಕು. ಅಂದಾಗ ಮಾತ್ರ ನಮ್ಮ ಜೀವನ, ನಾವು ಎಲ್ಲವೂ ನಗುತ್ತಿರಬಹುದು.

ಆಲಸ್ಯದಿಂದ ಇಲ್ಲದ ರೋಗ ರುಜಿನಗಳು, ವ್ಯಾದಿ, ಬೇನೆಗಳು ಬಂದು ವಕ್ಕರಿಸುತ್ತವೆ. ಆಲಸ್ಯವು ಒಂದು ದೊಡ್ಡ ವ್ಯಾದಿಯೇ ಇದ್ದಂತೆ .ನಮ್ಮ ಶಕ್ತಿ ,ಉತ್ಸಾಹ ಎಲ್ಲವನ್ನೂ ನುಂಗಿ ಕಸಿದುಕೊಂಡು ಬಿಡುವ ಕೆಲಸವನ್ನು ಆಲಸ್ಯ ಮಾಡಿ ಬಿಡುತ್ತದೆ.
ಇಂದಿನ ಈ ದಿನಗಳಲ್ಲಿ ಅನೇಕ ತಾಂತ್ರಿಕ ಸಲಕರಣೆಗಳು ತಂತ್ರಜ್ಞಾನದ ಅತಿ ಹೆಚ್ಚಿನ ಬಳಕೆಯಿಂದಾಗಿ ಮನುಷ್ಯ ಈಗ ಶ್ರಮ ವ್ಯಯಿಸಿ ಕೆಲಸ ಮಾಡುವುದು ಕಡಿಮೆಯಾಗಿಬಿಟ್ಟಿದೆ. ಎಲ್ಲವೂ ಮಷೀನ್ ಗಳ ಮೇಲೆ ಕೆಲಸಗಳು ನಡೆಯುತ್ತಿರುವುದರಿಂದ ಕುಂತು ಹೇಳುವುದು ಕೂಡ ಬೇಡವಾದ ಪರಿಸ್ಥಿತಿಗೆ ಜನ ಇಂದು ಬಂದು ನಿಂತಿದ್ದಾರೆ. ಮನೆಯಲ್ಲಿ ಎಲ್ಲದಕ್ಕೂ ಆಳು, ಅಡಿಗೆ ಮಾಡಲು ಕೂಡ ಬೇಜಾರು ಪಟ್ಟುಕೊಳ್ಳುವ ಸ್ಥಿತಿ ಬಂದಿದೆ ಉದಾಹರಣೆಗೆ ತಿಂಡಿ ಬೇಕಾದರೆ ಜಮೇಟೊದಂತಹ ಅನೇಕ ಆನ್ಲೈನ್ ವ್ಯಾಪಾರಸ್ಥರಿಂದ ಸಾಮಾನುಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳುವುದು ಎರಡು ಹೆಜ್ಜೆ ನಡೆಯದಷ್ಟು ಆಲಸಿಗಳಾಗಿದ್ದಾರೆ ಇಂದು, ರೊಟ್ಟಿ ಉಪ್ಪಿನಕಾಯಿ ತಯಾರಿಸಿದ ಸಾಂಬಾರ್ ಏನು ಬೇಕೆನಿಸಿದರು ಎಲ್ಲವನ್ನು ಕೊಂಡು ತಿನ್ನುವ ಪರಿಸ್ಥಿತಿಗೆ ಜನ ಒಗ್ಗಿ ಹೋಗಿಬಿಟ್ಟಿದ್ದಾರೆ. ಎಲ್ಲದಕ್ಕೂ ಬೇರೆಯವರನ್ನು ಆಶ್ರಯಿಸಿ ಆಲಿಸಿಗಳಾಗಿ ಕುಂತಲ್ಲಿ ತಿಂದು ತಿಂದು ಕಾಯ ಬೆಳೆಸಿಕೊಳ್ಳುತ್ತಿದ್ದಾರೆ. ನಡೆದಾಡಲು ಆಗದು, ಸರಿಯಾಗಿ ಉಸಿರಾಡಲು ಆಗದು, ಮತ್ತೆ ಬೊಜ್ಜು ಇಳಿಸಿಕೊಳ್ಳಲು ವ್ಯಾಯಾಮ ಯೋಗ ಜಿಮ್ ಇಂತಹ ಕ್ಲಾಸ್ಗಳಿಗೆ ಹೋಗುವುದು ಎಂತಹ ವಿಪರ್ಯಾಸ ನೋಡಿ? ಇದರಿಂದ ಬಿಪಿ ಶುಗರ್ ಮುಂತಾದ ರೋಗಗಳಿಗೆ ಬಲಿಯಾಗಿ ಆರೋಗ್ಯ ಕೂಡ ಹದಗೆಡಿಸಿಕೊಂಡು ಡಾಕ್ಟರ್ಗಳಿಗೆ ಹಣ ನೀಡುವುದು. ತಮ್ಮ ಕೆಲಸ ತಾವು ಮಾಡಿಕೊಳ್ಳದಷ್ಟು ಆಲಸಿಗಳು ಈಗ ಎಲ್ಲೆಲ್ಲೂ ತುಂಬಿದ್ದಾರೆ. ಕೆಲಸ ಬೇಡ ಶ್ರಮ ಬೇಡ ಹಣ ಗಳಿಸುವ ಮಾರ್ಗೋಪಾಯಗಳನ್ನು ಹುಡುಕುತ್ತಾ ಕಪಟ ,ಮೋಸದ ಕಾಯಕದಲ್ಲಿ ತೊಡಗಿದವರನ್ನು ನಾವು ನೋಡುತ್ತೇವೆ. ಪ್ರತಿಯೊಬ್ಬರು ಕುಳಿತು ತಿನ್ನಲು ರೂಡಿ ಮಾಡಿಕೊಂಡು ತಮ್ಮ ದುಸ್ಥಿತಿಯೊಂದಿಗೆ ಸಮಾಜವನ್ನು ದುಸ್ಥಿತಿಗೆ ತಂದೊಡ್ಡಿದ್ದಾರೆ.

ನಾವು ಎಷ್ಟೇ ಜಾಣರಿದ್ದರೂ, ಸುಂದರರಿದ್ದರೂ ಆಲಸ್ಯವಿದ್ದರೆ ಅದು ನಮ್ಮನ್ನು ಹೇಡಿಯನ್ನು, ದಡ್ಡನನ್ನು, ಕುರೂಪಿಯನ್ನು ಮಾಡಿಬಿಡುತ್ತದೆ .ಆಲಸ್ಯ ಹೊಂದಿದ ವ್ಯಕ್ತಿಯನ್ನು ಯಾರೂ ಇಷ್ಟಪಡರು .ಎಲ್ಲರೂ ಅವನೆ! ಬಿಡಿ? ಅದು ಕುಂತಲ್ಲೇ ಕುಂತಿರುತ್ತದೆ. ಅವನಿಗೆ ಏಳಾಕ ಎಂಟು ದಿನ ಬೇಕ, ಅವನಿಗೆ ಏನು ಹೇಳ್ತಿ ? ಅದೆಂದ ಮಾಡೀತ ಬಿಡ, ಅದಕ್ಕೇನ ನೀಗತೈತಿ? ಹಿಂಗ ತಿಳಿದಂಗ ಜನ ಮಾತಾಡಿ ಕಿಮ್ಮತ್ತ ಕೊಡುದ ಬಿಟ್ಟು ಬಿಡ್ತಾರೆ ,ಅದು ನಮ್ಮನ್ನು ಚಿತ್ತ ವಿಕಲನನ್ನಾಗಿಸಿ, ವ್ಯರ್ಥ ಕಾಲಹರಣ ಮಾಡಲು ಕಲಿಸಿಕೊಡುತ್ತದೆ. ಕಾರಣ ಆಲಸ್ಯ ಒಳ್ಳೆಯದಲ್ಲ ಬಂದದ್ದು ಬರಲಿ ಎಂದು ಮುನ್ನುಗ್ಗುತ್ತಿರಬೇಕು. ಎಡರು ತೊಡರುಗಳಿಗೆ ಎದೆಗೊಟ್ಟು ನಡೆಯುತ್ತಿರಬೇಕು. ಎಡವಿದರೆ ಹೆದರದೆ ಮತ್ತೆ ಎದ್ದು ಸಾಗುತಿರಬೇಕು. ಅಂದಾಗ ನಮ್ಮ ಹುಟ್ಟಿಗೆ ಒಂದು ಅರ್ಥ ಬರುತ್ತದೆ. ಹುಟ್ಟಿದ ಮೇಲೆ ಏನಾದರೂ ಒಂದು ಸಾಧಿಸಿಯೇ ಹೋಗಬೇಕು. ಎಲ್ಲವನ್ನು ಕೊಡವಿಕೊಂಡು ಮೆಲೆದ್ದಾಗ ಮಾತ್ರ ಅಂದುಕೊಂಡಂತೆ ಜೀವಿಸಬಹುದು. ಭೂಮಿಗೆ ಭಾರವಾಗಿ ಬದುಕು ಸಾಗಿಸಬಾರದು. ಆಲಸ್ಯ ಯಾರಿಗೂ ಎಂದಿಗೂ ಒಳ್ಳೆಯದಲ್ಲ. ಒಳ್ಳೆಯದನ್ನು ಅದು ಮಾಡುವುದಿಲ್ಲ .ಕಾರಣ ಆಲಸ್ಯವನ್ನು ಬದಿಗಿರಿಸಿ ಹುಮ್ಮಸ್ಸಿನಿಂದ ಜೀವನ ಸಾಗಿಸಬೇಕು. ಗಟ್ಟಿಯಾದಾಗಲಿ ದೇವರು ಭೇಟಿಯಾಗುತ್ತಾನೆ.


ಡಾ ಅನ್ನಪೂರ್ಣ ಹಿರೇಮಠ

2 thoughts on “ಡಾ ಅನ್ನಪೂರ್ಣ ಹಿರೇಮಠ/ಆಲಸ್ಯ ಒಳ್ಳೆಯದಲ್ಲ

Leave a Reply

Back To Top