ಮಾಯದ ಕನ್ನಡಿ-ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ

ಕಾವ್ಯ ಸಂಗಾತಿ

ಮಾಯದ ಕನ್ನಡಿ

ಸಂತೆಬೆನ್ನೂರು ಫೈಜ್ನಟ್ರಾಜ್

ಮನದ ಹೊಲ
ನೂರು ಕಳೆಗಳ ಕಡಲು ಮೂಲೆಗಂಟಿದ ಜೇಡ
ನಿನ್ನೆಗಳ ಅಳಿಸಲು ನೇಯ್ದಿದೆ ಬಲೆ!

ಕಣ್ಣ ಕಾಡು
ಎದುರಾದ ಮಿಕಗಳ ಹೊಡೆದು
ಕೆಡವಲು ಹುನ್ನಾರ,
ಹೊಲಕ್ಕೆ ಕಾಲಿಟ್ಟವರೆಲ್ಲಾ ಮಾಲೀಕರು
ಹರಗದ ಹೊಲ ಎಷ್ಟು ನೋಡಿಕೊಂಡರೇನು
ಬಿಳಿ ಗಡ್ಡ ಕೆರೆ ಕೆರೆದು ಗಾಯ ಮಾಡಿಕೊಂಡಂತೆ!

ಅಂಗುಲಿಮಾಲ ಬದುವಿನಲ್ಲಿ ಪಹರೆ
ಮೇಯಲು ಬಂದವರೆಲ್ಲಾ ಹೊಲಕೆ ಬಲಿ
ಹೊಲವೆಂದರೇನು ಫಸಲು ಇದೆ
ಇಲ್ಲವೆಂಬ ಮಾಯದ ಕನ್ನಡಿ ಹಿಡಿದು ಕನಸುಗಳಿಗೆ
ಕಿಡಿ ಹೊತ್ತಿಸಬೇಕು
ಕಳೆ ಬೂದಿಯಾಗುವುದಾ ಕಾದು ನೋಡಬೇಕು
ಅವನೊಬ್ಬ ಬರಬೇಕೆಂದು ನಿಟ್ಟುಸಿರ
ತರಂಗದಲ್ಲಿ ಹೊಲದ ಮಾಲೀಕ ಎದರು ನೋಟ!

ನಗುವ ನೇಗಿಲ ಹೆಗಿಲಿಗಿಟ್ಟು ಒಳಹೊರ ಎತ್ತುಗಳ ಕಟ್ಟಿ
ಬರಬೇಕಿದೆ ಬುದ್ಧನೆಂಬೋ ರೈತ
ಶತಮಾನಗಳು ಸವೆದವು, ನಕ್ಕ ಹೂ ಅಲ್ಲೊಇಲ್ಲೋ
ಮತ್ತೆ ಮತ್ತೆ ಬುದ್ಧ ಕೂತು ಏಳುವ ಮರಗಳು
ಅಮ್ಮನ ತುತ್ತಂತೆ ಅಪರೂಪ!

ಹೊಲದ ವಿಷವನಿಳಿಹಿ ಅನ್ನ ಹುಟ್ಟಿಸುವ
ನೇಗಿಲಯೋಗಿ ಇಂದಿನ ತುರ್ತು
ಬುದ್ಧ ಬರುವ ಸೂಚನೆ ಕಮ್ಮಿ!
ಎದೆಯ ಕಡಲಿನಲ್ಲಿ ಎಷ್ಟೊಂದು ಮಥನ
ಕಡೆದಷ್ಟೂ ವಿಷವೇ ; ಅಮೃತಕ್ಕೆ
ಕಡಲಿಗಿಳಿಯಬೇಕಷ್ಟೆ!


ಸಂತೆಬೆನ್ನೂರು ಫೈಜ್ನಟ್ರಾಜ್

2 thoughts on “ಮಾಯದ ಕನ್ನಡಿ-ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ

Leave a Reply

Back To Top