ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಹನಿಗಳು
- ಜೋಕೆ.!
ಗೆಳತಿ ಶೃಂಗಾರದ ಪರಿಧಿ ಮೀರಿ
ಅಶ್ಲೀಲತೆಯೆಡೆ ಜಾರದಂತೆ ಎಚ್ಚರ
ಕೊಂಚ ಪದ ಲಯ ತಪ್ಪಿದರೂ..
ಸಚ್ಚಾರಿತ್ರ್ಯಕ್ಕೇ ಬಂದೀತು ಸಂಚಕಾರ.!
- ಫಲಿತಾಂಶ.!
ತುಸು ತುಂಟತನ ತರಲೆ ಕೀಟಲೆ
ಸಭ್ಯ ಸರಸ ಸಲ್ಲಾಪ ಲೀಲೆಯಿರೆ
ಓದುಗನ ಮೊಗದಿ ಮಂದಹಾಸ
ಬರಿದೆ ಪೋಲಿಪದಗಳ ಧಾಂದಲೆ
ಮತ್ತೇರಿಸೊ ಭಾವ ಶೃಂಖಲೆಯಿರೆ
ಅಕ್ಷರಶಃ ವಾಕರಿಕೆಯ ಭಾಸ.!
- ಮೌಲ್ಯ.!
ಗೆಳೆಯಾ ನನ್ನಯ ಬರಹಗಳ ಮಂದಿ
ಕದ್ದುಮುಚ್ಚಿ ಓದುವುದರಲಿಲ್ಲ ಯಶಸ್ಸು
ಮನಬಿಚ್ಚಿ ಎಲ್ಲರೆದುರು ವಾಚಿಸುದರಲ್ಲಿದೆ
ನನ್ನಯ ಅಕ್ಷರಗಳ ಯಶಸ್ಸು ಶ್ರೇಯಸ್ಸು.!
- ಅಪಾಯ.!
ಸುಲಭ ಪ್ರಚಾರ ಪ್ರಸಿದ್ದಿ ಸಿಕ್ಕೀತೆಂದು
ಅಗ್ಗದ ಬರಹ ಬರೆದು ಮುಗ್ಗಾಗಬೇಡಿ
ಎದುರು ಚಪ್ಪರಿಸಿ ಚಪ್ಪಾಳೆ ಹೊಡೆವವರೆ
ಹಿಂದೆ ‘ಛೀ’ ಎನ್ನುತ ಹೀಗಳೆವರು ನೋಡಿ.!
ತೊಡಿಸುವರು ಕುಹಕ ಕಳಂಕದ ಬೇಡಿ.!
- ಪರಿಣಾಮ.!
ಪದ ಶೃಂಗಾರದ ಪರಿಮಳವಾಗಿ
ಮೋಹಕವಾಗಿ ಪುಳಕಗೊಳಿಸಿದರೆ
ಕಾವ್ಯಸೌರಭ ಘಮಘಮಸಿ ಘಮಲು
ಪದಗಳು ಅಶ್ಲೀಲತೆಯ ಝಳವಾಗಿ
ಮಾದಕವಾಗಿ ಉನ್ಮಾದಗೊಳಿಸಿದರೆ
ಕಾಮಕೇಳಿಯ ಹಸಿಬಿಸಿ ಅಮಲು.!
- ಜಾಗ್ರತೆ.!
ಪ್ರಾಯದ ಹಾದಿ ತಪ್ಪಿಸಲು ಮುಗಿಬಿದ್ದು
ಸಾವಿರ ಮಂದಿ ನಿಂತಿಹರು ಸರತಿಯಲ್ಲಿ.!
ಬರಹಗಾರರೂ ಕಿಚ್ಚುಹಚ್ಚಲು ನಿಂತರೆ
ಕಾಯುವವರಾರು ಹೇಳಿ ಧರೆಯಲ್ಲಿ.?
ನೆನಪಿರಲಿ ಕವಿಗಳೇ ನಿಮಗೂ ಕೂಡ
ಹರೆಯದ ಮಕ್ಕಳಿಹರು ಮನೆಯಲ್ಲಿ.!
ಎ.ಎನ್.ರಮೇಶ್.ಗುಬ್ಬಿ.