ಸರೋಜಾ ಎಸ್.ಅಮಾತಿ,ಮುಂಬೈ ಕವಿತೆ-ಮೂಕ ಸಾಕ್ಷಿ

ಕಾವ್ಯ ಸಂಗಾತಿ

ಸರೋಜಾ ಎಸ್.ಅಮಾತಿ,ಮುಂಬೈ

ಮೂಕ ಸಾಕ್ಷಿ

ಶೃಂಗಾರಗೊಳ್ಳಬೇಕಾದ ಅನಿವಾರ್ಯತೆ ದರ್ಪಣಕ್ಕೂ ಗೊತ್ತು
ಅಸಹ್ಯವನ್ನೆಲ್ಲ ಸಹಿಸಿಕೊಂಡು ಬದುಕುವ ಜರೂರತ್ತಾದರೂ ಏನಿತ್ತು!?

ಗಂಟೆಗೊಮ್ಮೆ ನವವಧುವಿನಂತೆ
ಅಲಂಕಾರಗೊಳ್ಳುವ ಮಂಚದ ದಿಂಬೇ ಸುಖದ ಸಂಪತ್ತಿನಲ್ಲೂ ಕಣ್ಣೀರೊರೆಸುವ ಸಖಿ…ಸುಖಿ

ಹಾಸಿದ ಚಿತ್ತಾರಕ್ಕೆ ಚೀತ್ಕಾರವೆತ್ತುವಷ್ಟು ಹಕ್ಕಿಲ್ಲ
ಸೀರೆಯಂಚಿನಲಿ ಮಿಂಚುವ ಹಕ್ಕಿಗೆ ಹಾರಲು ರೆಕ್ಕೆಯೇ ಇಲ್ಲ

ಬಯಕೆಯ ಹೆದರಿಕೆಯಿಂದ ಬಿಗಿಯಾಗುವ ರವಿಕೆಗೂ ಬರ
ಹಸಿದ ಹೆಬ್ಬುಲಿಗಳಂತೆರಗಿ
ಗಾಯದ ಮೇಲೆ ಬರೆ
ಎಳೆಯುವವರೇ ಎಲ್ಲ

ಸ್ಪರ್ಶವೆಂಬುದು ಚುಚ್ಚುವ ಮುಳ್ಳಾಗಿ ಅಳಿಸುತ್ತಿದೆ,
ಹರುಷ ಕಾಣದ ದೇಹ
ಹಣ ಹಿಡಿವ ದಲ್ಲಾಳಿಗೂ ಹಿಡಿ ಶಾಪ ಹಾಕಿದೆ

ಅಂಗಾಂಗದ ಸಿರಿಗೆ ಬೆರಗಾದವರಿಗೆಲ್ಲ
ಅವಳಂತರಂಗದ ತೊಳಲಾಟವೇಕೆ!?..
ಕ್ಷಣವೊಂದರ ಭ್ರಮರಕ್ಕೆ ಹೂವಿನೊಡಲಾಳದ ಗೊಡವೆ ಬೇಕೇ

ನಿತ್ಯ ನಾಕದಂತಿರುವ ನರಕದಲ್ಲಿ
ಚಕಾರವೆತ್ತದ ಚಚ್ಚೌಕ ಕೋಣೆಯ ಗೋಡೆಗಳೇ ಮೂಕ ಸಾಕ್ಷಿ… ಚಚ್ಚೌಕ ಕೋಣೆಯ ಗೋಡೆಗಳೇ ಮೂಕ ಸಾಕ್ಷಿ!!!


ಸರೋಜಾ ಎಸ್.ಅಮಾತಿ,ಮುಂಬೈ

2 thoughts on “ಸರೋಜಾ ಎಸ್.ಅಮಾತಿ,ಮುಂಬೈ ಕವಿತೆ-ಮೂಕ ಸಾಕ್ಷಿ

  1. ಮಾರ್ಮಿಕವಾಗಿದೆ ಕವನ ಸರೋಜಾ…
    ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top