ಕಾವ್ಯ ಸಂಗಾತಿ
ಸುಜಾತಾ ಪಾಟೀಲ ಸಂಖ
ನನ್ನವ್ವ ಹೇಳಿದ ಪಾಠ
ಕೇಳು ಮಗಳೇ ಹೇಳುವೆ ನಿನಗೆ
ಬಾಳನು ಬೆಳಗುವ ಪಾಠವನು
ಮುಂದಿನ ದಿನಗಳ ಸುಂದರ ಬದುಕಿಗೆ
ನೀ…ಪಾಲಿಸು ಈ ಸೂತ್ರವನು.
ನಗುತ ಬದುಕುವ ಜೀವನ ಪಾಠವ
ಮಾಧರಿ ಎನಿಸು ಎಲ್ಲರಿಗೆ
ಹಿರಿಯರ ಜೊತೆಗೆ ಹಾಕದೆ ವಾದವ
ಪ್ರೀತಿಯಿಂದ ಬಾಳು ಪ್ರತಿಘಳಿಗೆ.
ತಂದೆಯ ಮಾತಿಗೆ ಶಿರಸಾ ವಹಿಸು
ತಪ್ಪನ್ನು ಎಂದಿಗೂ ಮಾಡದಿರು
ವೇಳೆಯ ಕಡೆಗೆ ಗಮನ ವಹಿಸು
ಗೊಡ್ಡು ಮಾತನ್ನು ಹೇಳದಿರು.
ಮಾತಿಗೆ ಮುನ್ನ ಮನದಲ್ಲಿ ಯೊಚಿಸು
ಇತಿಮಿತಿಯಲಿ ಮಾತನು ಹೇಳು
ಮಾತನು ಕೊಟ್ಟರೆ ಅದನುಳಿಸು
ಸತ್ಯವನ್ನೇ ಯಾವಾಗಲೂ ಹೇಳು.
ಕಾಯಕವೇ ಕೈಲಾಸ ಎನ್ನು
ಯಾವದಕೂ ಆಶೆ ಮಾಡದಿರು
ಅವ್ವ ಜೊತೆಯಿರುವಳೆಂಬ ನಂಬಿಕೆಯನ್ನು
ಹುಸಿಯೆಂದು ದುಃಖ ಪಡದಿರು.
ಬೇಡದವರ ಜೊತೆ ಜಗಳವ ಮಾಡದೆ
ಮೌನಿಯಾಗಿ ದೂರವಿದ್ದು ಬಿಡು
ದೊರಕದ ವಸ್ತುವನೆಂದಿಗೂ ಬಯಸದೆ
ಸೊಗಸಿದೆ ಇದರಲ್ಲಿ ಎಂದು ಬಿಡು.
ಶರಣರ ಮಾರ್ಗದಿ ನೀ ನಡಿ
ಹೆಸರು ಕೀರ್ತಿ ಬಯಸದಿರು
ದಾಸೋಹ ತತ್ವ ನಿತ್ಯ ಹಿಡಿ
ಸಿರಿ ಸಂಪತ್ತಿನ ಗುಲಾಮ ಆಗದಿರು.
ಸುಜಾತಾ ಪಾಟೀಲ ಸಂಖ
One thought on “ಸುಜಾತಾ ಪಾಟೀಲ ಸಂಖ ಕವಿತೆ-ನನ್ನವ್ವ ಹೇಳಿದ ಪಾಠ”