ಕಳಪೆ ಡಾಂಬರು ರಸ್ತೆ -ಗಂಗಾಧರ ಬಿ ಎಲ್ ನಿಟ್ಟೂರ್.

ಕಾವ್ಯ ಸಂಗಾತಿ

ಕಳಪೆ ಡಾಂಬರು ರಸ್ತೆ –

ಗಂಗಾಧರ ಬಿ ಎಲ್ ನಿಟ್ಟೂರ್.

ಎಂದೋ ಹಾಕಿದ ಡಾಂಬರಿನ
ನಿಶಾನೆ ಉಳಿಸಿಕೊಂಡ ರಸ್ತೆಯಲ್ಲಿ
ಮುರಿದು ಬಿದ್ದ ಸಂಬಂಧಗಳ
ತೇಪೆ ಎದ್ದು ಕಾಣುತಿದೆ ಅಲ್ಲಲ್ಲಿ

ಗುಂಡಿ ಗುದುಕಲು ಲೆಕ್ಕಿಸದೆ
ನಾ ನೀ ಮೇಲೆಂಬ ಜಿದ್ದಿಗೆ ಬಿದ್ದು
ಓಟ ಕಿತ್ತ ವಾಹನಗಳ ಧೂಳು
ಹತ್ತು ಹಲವು ತಿರುವುಗಳಲ್ಲಿ

ಮೂಗು ಹಿಡಿದು
ಕಣ್ಣಿಗೆ ಕತ್ತಲು ಕವಿದರೂ
ನಿಲ್ಲದ ಪಯಣ ನಿತ್ಯ ಸಾಗುತಿದೆ
ಮದುವೆಗೋ ಮಸಣಕೋ
ತಿಳಿಯದ ಜೀವ ಜೀವಿಗಳ ಮೆರವಣಿಗೆ

ತಿರುವು ಮುರುವಿನ ನಡುವೆ
ಅವ್ಯಕ್ತ ಮುಖಗಳ ಮುಖಾಮುಖಿ
ಪರಿಚಯದ ತರುವಾಯ
ಒಂದುಗೂಡಿ ಸಾಗದ ವಿಷಣ್ಣತೆ
ಆಗಾಗ್ಗೆ ಕಣ್ಣು ಉಜ್ಜಿ ಕೊಂಡಾಗ ದಾರಿ ಸ್ಪಷ್ಟ
ಆಗೊಮ್ಮೆ ಈಗೊಮ್ಮೆ ಸರಾಗ ಉಸಿರಾಟ

ವಿಳಾಸ ಹುಡುಕುವ ಭರದಲಿ
ಹೀಗೂ ಉಂಟೇ ಎಂಬಂತೆ
ತಮ್ಮ ತಾವು ಮರೆತ
ಆ ದಾರಿಯ ಎಲ್ಲರಿಗೂ
ಕಾಡುತ್ತಿರುವ ಮತ್ತದೇ ಪ್ರಶ್ನೆ
ಮನುಷ್ಯರಾಗುವುದು ಯಾವಾಗ


ಗಂಗಾಧರ ಬಿ ಎಲ್ ನಿಟ್ಟೂರ್.

Leave a Reply

Back To Top