ನಲ್ಲೆ ನಿನಗೆಂದೆ ತಂದಿರುವೆ ಮಲ್ಲೆ ಹೂ ಮಾಲೆ

ಲಹರಿ ಸಂಗಾತಿ

ನಲ್ಲೆ ನಿನಗೆಂದೆ ತಂದಿರುವೆ ಮಲ್ಲೆ ಹೂ ಮಾಲೆ

ಜಯಶ್ರೀ.ಜೆ.ಅಬ್ಬಿಗೇರಿ

ಪ್ರೀತಿಯ ನಲ್ಲ ಕಬ್ಬಿನ ಸಿಹಿ ಜಲ್ಲೆ,

ಅಚಾನಕ್ಕಾಗಿ ನೀ ದೊರೆತ ಹಿಂದಿನ ಕತೆ ಹೇಳಬೇಕೆಂದರೆ : ಮೊದಲೇ ನನಗೆ ಬಂಧು ಬಳಗ ಯಾರೂ ಇರಲಿಲ್ಲ. ನನಗಾಗಿ ಜೀವ ಹಿಡಿದುಕೊಂಡಿದ್ದ ತಾಯಿ ಅನ್ನೋ ಜೀವವೂ ಹಾರಿ ಹೋಯಿತು. ನಾನಾಗ ಅಕ್ಷರಶಃ ಅನಾಥನಾಗಿದ್ದೆ. ಜೀವನೋಪಾಯಕ್ಕಾಗಿ ಕನ್ನಡ ಮೀಡಿಯಮ್ ಹುಡುಗಿಯರಿಗೆ ಇಂಗ್ಲೀಷ್ ಪಾಠ ಹೇಳುತ್ತ ನಾಕಾರು ಕಾಸು ಗಳಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಒಂದು ದಿನ ನನ್ನ ಸಣ್ಣ ಕುಟೀರದ ಮುಂದೆ ಒಂದು ಕೆಂಪನೆಯ ಸ್ಕೂಟರ್ ಬಂದು ನಿಂತಿತು. ಬೆಳ್ಳನೆಯ ತೆಳ್ಳನೆಯ ಸುಂದರಾಂಗಿ ಗೇಟ್ ತೆರೆದು ಒಳಗೆ ಬಂದಳು. ಆಗಲೇ ಸಂಜೆಯಾಗಿತ್ತು ಮೈಮನಗಳೆರಡೂ ದಣಿದಿದ್ದವು. ಎಷ್ಟೇ ಆಯಾಸ, ಬೇಸರ, ಸಿಟ್ಟು, ಒತ್ತಡಗಳಿದ್ದರೂ ಉಕ್ಕುವ ಹಾಲಿಗೆ ತುಸು ನೀರು ಹಾಕಿದರೆ ಹಾಲು ಕೆಳಗಿಳಿಯುವಂತೆ ಚೆಂದದ ಹುಡುಗಿಯರು ಕಣ್ಣಿಗೆ ಬಿದ್ದರೆ ಸಾಕು ಅರೆಕ್ಷಣದಲ್ಲಿ ಆಯಾಸವೆಲ್ಲ ಮಾಯವಾಗುವುದು ಎಂದೆನಿಸಿ ನಸುನಕ್ಕೆ. ನಿನ್ನ ಕಂಡ ಕ್ಷಣವೇ ನವೋಲ್ಲಾಸ ತನ್ನಿಂದ ತಾನೇ ಮನಸ್ಸು ದೇಹವನ್ನು ಆವರಿಸಿತು. ನಿನ್ನಂದ ಕಣ್ತುಂಬಿಸಿಕೊಳ್ಳಬೇಕೆಂದು ಮುಚ್ಚಿದ ಬಾಗಿಲು ತೆರೆದೆ. ಪುಟ್ಟ ಪೋರಿಯೊಬ್ಬಳು ನಿನ್ನೊಡನಿದ್ದಳು.ಅವಳ ಹೆಸರು ಹೇಳಿ,”ನಾಳೆಯಿಂದ ಇವಳು ನಿಮ್ಮ ಕಡೆ ಟ್ಯೂಷನ್ ಬರ‍್ತಾಳೆ.” ಎಂದೆ. ನನಗಾಗ ಹಿಗ್ಗೋ ಹಿಗ್ಗು. ನಿನ್ನ ತಂಗಿಯ ಟ್ಯೂಷನ್ ನೆಪದಲ್ಲಿ ದಿನವೂ ಚೆಂದದ ಚೆಂಗುಲಾಬಿಯ ಮೊಗವನ್ನು ನೋಡಬಹುದು ಗೆಳೆತನ ಬೆಳೆಸಬಹುದು ನಂತರ ಪ್ರೇಮಕ್ಕೆ ತಿರುಗಿಸಬಹುದು ಅಂತೆಲ್ಲ ಕ್ಷಣಾರ್ಧದಲ್ಲಿ ಎಲ್ಲೆಲ್ಲೋ ಹೋಗಿ ಬಂತು ಹುಚ್ಚು ಖೋಡಿ ಮನಸ್ಸು.

ಅನುಮಾನವೇ ಇಲ್ಲ ನಾನೀಗ ಪ್ರೇಮ ರೋಗಿ ಅಂತ ನನಗೆ ಖಾತರಿ ಆಗಿ ಹೋಗಿದೆ. ನಿನಗಿಂತ ಅಪರೂಪದ ಸುಂದರಿಯರನ್ನು ಕಣ್ಣು ಕಂಡರೂ, ಕಣ್ಣಲ್ಲೇ ಬಾಚಿ ತಬ್ಬುವ ನಿನ್ನ ಕಲೆ ಅವರ‍್ಯಾರಿಗೂ ತಿಳಿದಿಲ್ಲ ಅಂತ ಅನಿಸುತ್ತಿದೆ. ಮನಸ್ಸು ಸಹ ನಿನ್ನ ಹಾಗೆ ಯಾರೂ ಇಲ್ಲ ಅಂತ ಹೇಳುತ್ತಿದೆ. ನಿಜಕ್ಕೂ ನೀನೇ ಸುಂದರ ಸೋಜಿಗ ಅನ್ನೋ ಭಾವ ಬರುತ್ತಿದೆ. ಈ ಜಗ ಬದಲಾಗಿದೆ ನಿನ್ನಿಂದಲೇ ಎಂಬ ಹುಚ್ಚು ಕಾಡುತ್ತಿದೆ. ಚೂರು ನೀ ಸನಿಹ ಬಂದರೂ ಸಾಕು ಎಂದೂ ಕಾಣದ ತುಸು ನಸು ನಾಚಿಕೆ ಒಳಗೊಳಗೆ ಹರಿಹಾಯುತ್ತಿದೆ. ಹರಿದಂಗಾಗುತ್ತಿದೆ ಮಾಯಗಂಗೆ ಎದೆಯೊಳಗೆ. ಹಗಲಿರುಳು ನಿನ್ನದೇ ಕನವರಿಕೆ. ಅನುಕ್ಷಣವೂ ನೀನೇ ಬೇಕೆನ್ನುವ ಚಡಪಡಿಕೆ. ಅಬ್ಬಬ್ಬಾ! ಕಾಮನಬಿಲ್ಲು ಮೂಡುವುದು ಹೃದಯದ ಆಕಾಶದೊಳಗೆ. ಹೀಗೆಲ್ಲ ನಿನ್ನ ಬಗ್ಗೆ ಹೇಳುತ್ತ ಹೋದಂತೆ ಭಾಷೆ ಕೂಡ ಖಾಲಿ ಖಾಲಿ ಎನ್ನುವ ಅಚ್ಚರಿ ಮೂಡುತ್ತೆ. ಇದೇನು ಪ್ರೇಮಕವಿ ಬರೆದ ರೀತಿ ಪ್ರೀತಿ ಗೀತಿ ಅಂತ ತೋಚಿದ್ದನ್ನು ಗೀಚುತ್ತಿದ್ದೇನೆ ಅಂತ ನಿರ್ಲಕ್ಷ್ಯ ಮಾಡ ಬೇಡ ನಲ್ಲೆ. ಇದು ಒಂದು ಹೃದಯದ ವಿಷಯ ಅಲ್ಲಲ್ಲ ಎರಡು ಹೃದಯಗಳ ಮಿಲನದ ವಿಷಯ.

ಕಾಡಿ ಬೇಡಿ ನಾನು ನಿನ್ನ ಪ್ರೇಮಿಯಾದೆ. ತಿಳಿಯುತ್ತಿಲ್ಲ ಗೆಳತಿ ನೀನೇಕೆ ಹೀಗೆ ಮೌನಿಯಾದೆ. ಅದೆಲ್ಲಿ ಮಾಯವಾದೆ ಮಾಯಗಂಗೆ ಹಂಗೆ. ನೀನಿಲ್ಲದೇ ಹಾಡು ಹಗಲೇ ಬದುಕಲ್ಲಿ ಕತ್ತಲು ಕವಿದಿದೆ. ಕೂಗುತ್ತಿರುವೆ ನಿನ್ನ ಹೆಸರ ಆ ಬಾನೆತ್ತರ ಕೇಳೋ ತರ. ಕೇಳುತ್ತಿಲ್ಲವೇ ನಿನಗೆ ನನ್ನೀ ಸ್ವರ. ಹೇ, ಹೇಳು ಏನಾಯಿತು? ಹೇಗಾಯಿತು? ಏಕಾಯಿತು? ಜನಜಂಗುಳಿಯಲ್ಲೂ ನಾನೀಗ ಖಾಲಿ ಖಾಲಿ. ಹಾಕುತ್ತಿದ್ದೇನೆ ಹೆಜ್ಜೆ ಹೇಗ್ಹೇಗೋ ಒಲವೆಂಬ ಗುರಿ ಕಾಣದೆ. ಇಂಥದೊಂದು ದಾಳಿ ನನ್ನಂತಹ ಮೃದು ಜೀವ ತಾಳಬಲ್ಲುದೇ? ಉಕ್ಕೇರುವ ಯೌವ್ವನದಲ್ಲಿ ಮೌನವಾಗಿ ಒಂಟಿಯಾಗಿ ಸರಸ ಸಲ್ಲಾಪವಿಲ್ಲದೇ ಎಷ್ಟು ಕಾಲ ಕಳೆಯಬಹುದು? ಒಂಟಿತನ ನನ್ನನ್ನು ಕಾಡುತ್ತಿದೆಯೇ? ಎಲ್ಲಕ್ಕೂ ಮಿಗಿಲಾಗಿ ಈ ಜೀವದ ಜೊತೆ ನೀನಿಲ್ಲವೆಂಬ ಚಿಂತೆ ಜೀವ ತಿನ್ನುತ್ತಿದೆಯೇ? ಒಂದೂ ತಿಳಿಯುತ್ತಿಲ್ಲ. ಅಚ್ಚರಿ ಪಡುವಂತಿಲ್ಲ, ನೀನಿಲ್ಲದ ಹುಚ್ಚಿನಲ್ಲಿ ನಾನು ಮೂಗನಾದರೆ. ಇದೆಲ್ಲ ನಿನ್ನ ನಲ್ಲನ ನೊಂದ ಹೃದಯದ ಪ್ರವರ.
ನೀನೆಂದ್ರೆ ಏನೋ ಆಕರ್ಷಣೆ. ಮಾತಿನಲ್ಲಿ ಏನೋ ಒಂಥರದ ರೋಚಕತೆಯಿದೆ. ಮೌನದಲ್ಲೂ ಏನೋ ಸೆಳೆತವಿದೆ. ಹೀಗಾಗಿ ನಾ ನಿನ್ನ ಅಭಿಮಾನಿಯಾದೆ. ಕಳೆದ ಎರಡು ವರ್ಷದಲ್ಲಿ ಪ್ರೀತಿಗೆ ತಿರುಗಿದ ನಿನ್ನ ಸ್ನೇಹ ಜತೆಗಿದ್ದರೆ ಸಾಕು ನೆಮ್ಮದಿ ನೆಲೆಗೊಳ್ಳುತ್ತಿತ್ತು.

ಟ್ಯೂಷನ್ ಸೂಟಿಯಿರುವಾಗ ಮನೆಯಲ್ಲಿ ಏನೋ ನೆಪ ಹೇಳಿಕೊಂಡು ಬಂದು ಮಾತನಾಡಿಸಿ ನಕ್ಕು ನಗಿಸುತ್ತಿದ್ದ ಪರಿ ಮರೆಯಲಾಗದು. ಏರು ಯೌವ್ವನದ ಏರಿಳಿತಗಳನ್ನು ಪರಿಚಯಿಸಿದವಳು ನೀನು. ಹೆದರದಿರು, ನಮ್ಮೊಂದಿಗೆ ಸೂರ‍್ಯ ಚಂದ್ರ ಚುಕ್ಕಿಗಳ ಹಾರೈಕೆಯಿದೆ ಒಂದಾಗೋಣ ಒಂದಾಗಿರೋಣ ಎನ್ನುತ್ತಿದ್ದವಳು.
ಎಷ್ಟೋ ಸಲ ಕುಟೀರಕ್ಕೆ ಬಂದು ಹೋಗಿ ಮಾಡಿದವಳು. ಒಂದು ಸಲವೂ ಕೆಟ್ಟದಾಗಿ ನಡೆದುಕೊಳ್ಳದ ರೀತಿ ಕಂಡು ಬೆರಗಾದವಳು.

ಅದೊಂದು ರವಿವಾರ ನೀನೇ ಕೈಯಾರೆ ಮಾಡಿದ ವಿಧವಿಧವಾದ ಭಕ್ಷ್ಯ ಭೋಜನದ ಜೊತೆ ಸಿಹಿಯನ್ನು ಕೈಯಲ್ಲಿ ಹಿಡಿದು ಬಂದೆ. ಪಿಕ್‌ನಿಕ್‌ಗೆ ಹೋಗೋಣವೆಂದೆ. ಬೈಕ್ ಮೇಲೆ ಹೋಗುವಾಗ ನಿನ್ನೆದೆ ಬೆನ್ನಿಗೆ ತಾಗಿದ ರೀತಿಗೆ ಹೃದಯ ಬಡಿತ ಹಿಡಿತಕ್ಕೆ ಸಿಗದಂತಿತ್ತು. ಎದೆ ತಾಳ ತಪ್ಪುತ್ತಿತ್ತು.ಇದು ಸಾಲದೆಂಬಂತೆ ನಿನ್ನ ಸುಶ್ರಾವ್ಯ ದನಿಯಲ್ಲಿ ಪ್ರೇಮಗೀತೆಗಳು ಗರಿಗೆದರಿ ಹಾರಿ ಹಾಡುತ್ತಿದ್ದವು. ಈ ನಡುವೆ ಚೆಂದದ ವನ ಕಂಡು ಬೈಕ್ ಗಕ್ಕನೇ ನಿಂತಿತು.

ಅದೊಂದು ವಿಚಿತ್ರವಾದ ಗಿಡಗಳ ವನ. ಆಕಾಶದಷ್ಟು ಎತ್ತರಕ್ಕೆ ಬೆಳೆದಿರುವ ಮರಗಳು. ನದಿಯ ಜಲಧಾರೆಗಳು ಎತ್ತರದಿಂದ ಕೆಳಕ್ಕೆ ಬೀಳುವ ದೃಶ್ಯ ಹೊಳೆಯುವ ಮುತ್ತಿನ ಮಾಲೆಯಂತಿತ್ತು. ನೀರಿನ ಝರಿಗಳ ಜುಳು ಜುಳು ನಾದ ಅದರೊಂದಿಗೆ ವಿವಿಧ ಪಕ್ಷಿಗಳ ಕಲರವ ತುಂಬಿಕೊಂಡಿತ್ತು. ಶಿಖರವು ಅಂಬರವನ್ನು ಚುಂಬಿಸುವಂತಿತ್ತು. ಸೂರ‍್ಯಮಂಡಲಕ್ಕೆ ತಾಗುತ್ತದೆಯೇನೋ ಎಂಬಂತೆ ಕಾಣುತ್ತಿತ್ತು. ಅದ್ಭುತ ದೃಶ್ಯ ನೋಡಿದ ಅನುಭವ ರಮ್ಯವಾಗಿತ್ತು.

ಬೆಟ್ಟದ ಕಲ್ಲುಬಂಡೆಗಳ ಮೇಲೆ ನಮ್ಮಿಬ್ಬರ ಹೆಸರು ಕೆತ್ತಿದೆ.ಜೋಡಿ ಹೆಸರು ಕಂಡು ಮನಸ್ಸು ಹುಚ್ಚೆದ್ದು ಕುಣಿಯಿತು‌. ಪಕ್ಕಕ್ಕಿದ್ದ ಕಲ್ಲು ಬಂಡೆಯ ಮೇಲೆ ಅಕ್ಕ ಪಕ್ಕ ಕೂತು ಸುಖಾ ಸುಮ್ಮನೆ ನಕ್ಕೆವು. ಅದಾವ ಗಳಿಗೆಯಲ್ಲಿ ಕೈ ಬೆರಳುಗಳು ಒಂದಾದವೋ ಗೊತ್ತೇ ಆಗಲಿಲ್ಲ. ಅದ್ಹೇಗೆ ಧೈರ‍್ಯ ಬಂತೋ ಗೊತ್ತಿಲ್ಲ ಅಧರಗಳನು ಅಧರಗಳಿಂದ ಬಂಧಿಸಿದೆ. ನಿನ್ನ ಬಿಗಿದಪ್ಪುಗೆಯ ರೀತಿಗೆ ನಾ ಬಿಟ್ಟೂ ಬಿಡದೇ ಮುಖದ ತುಂಬೆಲ್ಲ ಹೂಮುತ್ತುಗಳ ಮಳೆ ಹರಿಸಿದೆ. ಜಿದ್ದಿಗೆ ಬಿದ್ದವಳಂತೆ ನೀನೂ ನನ್ನ ಮುತ್ತುಗಳಲಿ ಮುಚ್ಚಿದೆ. ನಾನೇ ನೀನಾಗಿದ್ದ ಕಾಲವದು. ಅಳಿಲು ಮೊಲ ಗುಬ್ಬಚ್ಚಿಗಳು ನಮ್ಮ‌ ಒಲವಿನ ರೀತಿ ಕಂಡು ಬೆರಗಾಗಿದ್ದವು. ತಾವೂ ಒಲವಿನಲಿ ಬೆರೆಯಲು ತಮ್ಮ ಸಂಗಾತಿ ಹುಡುಕಿ ಹೊರಟಿದ್ದವು. ಕೈ ನಿನ್ನೆದೆಯ ಮೆದು ಭಾಗ ಸ್ಪರ್ಶಿಸುತ್ತಿದ್ದಂತೆ ಒಮ್ಮೆಲೇ ಬೆಚ್ಚಿ ಬಿದ್ದು ದೂರ ಸರಿದೆ.
ಅವತ್ತು ಹಾಗೆ ಹೋದವಳು ಇವತ್ತಿನವರೆಗೂ ಕಂಡಿಲ್ಲ.

ಅದೆಲ್ಲ ನನಗರಿವಿಲ್ಲದೇ ಆಗಿದ್ದು. ಏಕಾಂತ ಲೋಕಾಂತಗಳಲ್ಲೆಲ್ಲ ನೀನೇ ಇರೋದು. ಜೀವನದ ವಿಕಾಸ ಮತ್ತು ವಿಲಾಸ ನಿಂತಿದೆ ನಿನ್ನೊಂದಿಗೆ ಬೆಸೆದು ನಿನ್ನ ಗೆಳತಿಯರ ಮಾತಿನ ಅಂತೆ ಕಂತೆ ಸಂತೆಲಿ ಬಿದ್ದು ಬೇಯುತಿರುವೆ. ಎಂಬ ವಿಷಯ ತಿಳಿದು ನೋವಾಯಿತು. ನಾ ಹೇಳದೇ ನನ್ನ ಹೃದಯದ ಭಾಷೆ ತಿಳಿದವಳು ನೀನು. ಇಷ್ಟು ತಿಳಿಯದೇ ನಿನಗೆ. ಹಕ್ಕಿಗೆ ರೆಕ್ಕೆ ಬಂದೊಡನೆ ತನ್ನ ಗೂಡಿನಿಂದ ಹಾರಿ ಹೋಗುವಂತೆ. ಯೌವ್ವನದ ಹಾದಿಯಲ್ಲಿ ಹಾಕಿದ ತಪ್ಪೆಜ್ಜೆ ಅದು. ಇದೊಂದು ಸಲ ಮುನಿಸು ಬಿಟ್ಟು ಮನ್ನಿಸು. ಎದೆಯೆಂಬ ಪ್ರೀತಿಯ ಮಹಲಿಗೆ ನೀನು ಬಲಗಾಲಿಟ್ಟು ಬಂದು ಬಿಡು. ನಲ್ಲೆ ನಿನಗೆಂದೇ ತಂದಿರುವೆ ಮಲ್ಲೆ ಹೂ ಮಾಲೆ.

ಮುತ್ತಿನಂತಹ ಜಲಬಿಂದುಗಳ ಕಾಪಿಟ್ಟುಕೊಂಡು ಕೊಡಲು ಕಾದಿರುವೆ. ಅಂದ್ಹಾಗೆ ನಾನೀಗ ಸರಕಾರಿ ಶಾಲೆ ಹಳ್ಳಿ ಮೇಷ್ಟ್ರು ಟ್ಯೂಷನ್ ಮಾಡುವಂತಿಲ್ಲ. ಆದರೆ ಮೂರು ಗಂಟಿನ ನಂಟಿನ ಪರವಾನಿಗೆ ಪಡೆದು ನಿನಗೆ ಪ್ರೀತಿ ಪ್ರೇಮದ ಟ್ಯೂಷನ್ ಹೇಳಲು ಅಭ್ಯಂತರವಿಲ್ಲ. ಸರಸದ ಮಂಚದ ಮೇಲೆ ಮುಗಿಯದ ನವಿರಾದ ಪ್ರಣಯದ ಪಯಣಕೆ ತುದಿಗಾಲಲ್ಲಿ ನಿಂತಿರುವೆ. ಸತಾಯಿಸದೆ ಬೇಗ ಬಾ ಒಂದಾಗಲು ನಲ್ಲೆ. ಒಂದಾಗಿರೋಣ ಜೀವನವೆಂಬ ಚಂದನವನದಲ್ಲಿ ಜೀಕುತ ಸಮರಸದ ಉಯ್ಯಾಲೆ.
ಇಂತಿ ನಿನ್ನಂತರಂಗ
ಬಲ್ಲ ನಲ್ಲ
ಮಲ್ಲ ( ಮಲ್ಲೇಶ)


ಜಯಶ್ರೀ.ಜೆ.ಅಬ್ಬಿಗೇರಿ

One thought on “ನಲ್ಲೆ ನಿನಗೆಂದೆ ತಂದಿರುವೆ ಮಲ್ಲೆ ಹೂ ಮಾಲೆ

  1. ಸುಂದರವಾದ ಭಾವ

Leave a Reply

Back To Top