ಪುಸ್ತಕ ಸಂಗಾತಿ
ಬಿ.ಶ್ರೀನಿವಾಸವರ ಕೃತಿ
‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’
ಅವಲೋಕನ ದೇವರಾಜ್ ಹುಣಸಿಕಟ್ಟಿ
ಕ್ರೌರ್ಯಕ್ಕೆ ಅದೆಷ್ಟು ಮುಖಗಳು,ಮನುಷ್ಯನ ಓಟದ ಹಪಾಹಪಿಯಲಿ ಬರಿದಾಗುತ್ತಿರುವ ಅಂತಃಕರಣ, ದುರಾಸೆಯಿಂದಾಗಿ ಒಂದು ನೆಲ ಮೂಲ ಸಂಸ್ಕೃತಿಯ ಅಳಿವು , ತಣ್ಣಗೆ ಮೌಲ್ಯಗಳ ಅವಸಾನ….ಇವೆಲ್ಲವನ್ನೂ ಸಲೀಸಾಗಿ ಶಬ್ದಗಳಿಗೆ ಇಳಿಸಿದ್ದಾರೆ ಶ್ರೀ ಯುತ ಬಿ.ಶ್ರೀ ನಿವಾಸ ರವರು “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಕೃತಿಯಲ್ಲಿ.
ಇದನ್ನ ಸಣ್ಣ ಕಥೆಯೋ,ಮಿನಿ ಕಥೆಯೋ,ನ್ಯಾನೋ ಕಥೆಯೋ ಇನ್ನ್ಯಾವುದೋ ಪ್ರಕಾರದ ಕಥೆಯ ಕೃತಿಯೆಂದು ಕರೆದು ಕೊಳ್ಳುವುದು ಓದುಗರಿಗೆ ಬಿಟ್ಟು… ತಮಗೆ ಕಾಡಿದ ತಾವು ನೋಡಿದ,ತಮಗೆ ಹೊಳೆದ
ದಟ್ಟ ವಿಷಾದದ ಘಟನೆ ಸಂಗತಿಗಳನ್ನು,ಪ್ರಶ್ನೆಗಳನ್ನೂ ಹರಿವಿ ತಣ್ಣಗೆ ಓದುಗುನಿಗೂ ದಾಟಿಸುವ ಪ್ರಯತ್ನ ಈ ಕೃತಿಯದ್ದು ಅನಿಸುತ್ತೆ ನನಗೆ.
ಆ ಮೂಲಕ ಎಲ್ಲರೊಳಗಿನ ಜೀವ ತಂತುಗಳು ನಿಶ್ ಕ್ರಿಯ ಗೊಳ್ಳದಂತೆ ಬಡಿದು ಜೀವ ತುಂಬುವ ಕೆಲಸ ಮಾಡುವಲ್ಲಿ,ಚಿಂತನೆಗೆ ಹಚ್ಚುವಲ್ಲಿ ಇಲ್ಲಿಯ ಗುರುತಿಲ್ಲದ ಚಿತ್ರಗಳ ಕಥೆಗಳು ಸಫಲವಾಗುತ್ತವೆ. ಅವರ ಅನುಭವಗಳನ್ನ ಅವರು ಐದು ಉಪ ಶೀರ್ಷಿಕೆ ಅಡಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ….
*ಸಂಡೂರಿನ ಚಿತ್ರಗಳು
*ಅಗುಳಿನಷ್ಟೇ ಕಥೆಗಳು
* ಕೋರ್ಟಿನ ಚಿತ್ರಗಳು
* ಬದುಕಿನ ಚಿತ್ರಗಳು
* ಕೊರೋನಾ ಕಾಲದಲ್ಲಿ
ಆ ಕಥೆಗಳಲ್ಲಿ ಕೆಲವು ಎದೆಗೆ ತಾಗುತ್ತವೆ,ಕೆಲವು ಕಂಬನಿ ಮಿಡಿಯುವಂತೆ ಮಾಡುತ್ತವೆ,ಕೆಲವು ದೀರ್ಘ ನಿಟ್ಟುಸಿರು ಹೊರ ಹಾಕಿಸುತ್ತವೆ,ಮತ್ತೆ ಕೆಲವು ಸುಮ್ನೆ ಓದಿಸಿ ಕೊಳ್ಳುತ್ತಲೇ ಪ್ರಜ್ಞೆಗೆ ಪ್ರಶ್ನೆ ಹಾಕುತ್ತವೆ.ಸುಮ್ನೆ ಕೆಲವು ನೋಡಿ.
ಉದಾಹರಣೆಗೆ….
ಉರಿ
**
” ಉರಿಯುರುವುದು ಒಲೆಗಳೆಂದು ಯಾರು ಹೇಳಿದರು ನಿಮಗೆ?
ಬೇಕಿದ್ದರೆ ಮುಟ್ಟಿ ನೋಡಿ…..
ಹಸಿದ ಹೊಟ್ಟೆಗಳನ್ನು….”
ಕಂಪಲ್ಸರಿ
****
ಬಸವಣ್ಣ ಮತ್ತೆ ಹುಟ್ಟಿ ಬಂದರೂ ಕೆಳಗಿಳಿಯುವಂತಿಲ್ಲ!
ಕುದುರೆ ಸವಾರಿ ಕಂಪಲ್ಸರಿ!
ಬುಲೆಟ್ ಟ್ರೈನ್
****
ಬುಲೆಟ್ ಟ್ರೈನ್ ಬರುವುದಂತೆ..ಯಾರೋ ಉದ್ಘರಿಸಿದರು.
” ಟ್ರೈನ್ ಅವರದೆ…,ಬುಲೆಟ್ ಅವರದೇ…..
ಸೀಳುವುದು ಎದೆ ಮಾತ್ರ ನಮ್ಮದೇ…”
ಹೊಲ ಕಳೆದುಕೊಂಡ ರೈತ ಬುಲೆಟ್ ಗಿಂತ ವೇಗವಾಗಿ ಉತ್ತರಿಸಿದ.
ಅದರಲ್ಲೂ ಅವರು ಸಂಡೂರಿನ ಚಿತ್ರಗಳಲ್ಲಿ ಕಟ್ಟಿ ಕೊಟ್ಟ ಕಥೆಗಳು ಒಂದು ಗಣಿಗಾರಿಕೆ ಹೇಗೆ ಒಂದಿಡೀ ನೆಲ ಮೂಲ ಸಂಸ್ಕೃತಿ, ಸಂಪತ್ತು ಎರಡನ್ನು ಗುಡಿಸಿ ಬರಡಾಗಿಸಿದೆ ಅನ್ನೋದನ್ನು ನೇರವಾಗಿ ಓದುಗನಿಗೆ ದಾಟಿ ಸುವಲ್ಲಿ ಸಫಲವಾಗಿವೆ. ಅದಕ್ಕಿಂತಲೂ ಮನುಷ್ಯ ಹಣದ ಬೆಂಬತ್ತಿ ತನ್ನ ಎದೆಯ ಮುಂಬತ್ತಿಯ ಬೆಳಕು ಕಳಕೊಂಡಾನ್ ಅನ್ನೋದನ್ನು ಹೃದಯ ಸ್ಪರ್ಶಿಯಾಗಿ ಹೇಳಿದ್ದಾರೆ.
ಉದಾಹರಣೆಗೆ..
ಮುಸ್ಸಂಜೆಯ ಚಿತ್ರ
*****
ಈ ಬದಿಯಲ್ಲಿ ಅಪ್ಪನ ಹುಡುಕುತ್ತ ನಿಂತ ಹುಡುಗ..
ಆ ಬದಿಯಲ್ಲಿ
ಗಿರಾಕಿ ಹುಡುಕುತ್ತ ನಿಂತ ಅವ್ವ…
ಇದು ಸೊಂಡೂರಿನ ಮುಸ್ಸಂಜೆಯ ಚಿತ್ರ…!
ನೆತ್ತರು
**
ಸುರಿವ ಮಳೆಗೆ ಹರಿಯುವ
ಕೆಂಪು ನೀರು
ಬೋಳು ಗುಡ್ಡದ ತುದಿಗೆ ಕುಂತ ಅನಾಥ ಹುಡುಗ ಕೇಳುತ್ತಿದ್ದಾನೆ..
ಅದಿರು ಅಗೆದವರ ಬೆವರು ಆಗಿರ ಬಹುದೇ ನೆತ್ತರು….!!
ನಿಧನ
***
ಅದೊಂದು ಪುಟ್ಟ ಹಳ್ಳಿ, ಮಳೆ ಬಿದ್ದರೆ ಹರೆಯ ಬರುತಿತ್ತು.
ಅದೋ ಅಲ್ಲಿ ಕಾಣುತ್ತಿದೆಯಲ್ಲ ಅದೇ ಸಾಲಿಗುಡಿ.ಅದೇ ಸಾಲಿ ಗುಡಿಯಲ್ಲಿ ಹನೀಫ್ ಬಡಿಗೇರ್ ಮಾಸ್ತರ್ ಹಳ್ಳಿಯ ಕೈ ಹಿಡಿದು ಅ ಆ ಇ ಈ ತಿದ್ದಿಸಿದ್ದರು.
ಇಂತಹ ಮಾಸ್ತರು ಮೊನ್ನೆಯ ದಿನ ತೀರಿಕೊಂಡರು.ನಂಬಲಾಗಲಿಲ್ಲ ಊರಿನ ಅದೇ ಸಾಲಿಯಲ್ಲಿ ಕಲಿತವನೊಬ್ಬ ಶಾಲಾಭಿವೃದ್ಧಿ ಸದಸ್ಯ.
ಬಂದವರಿಗೆಲ್ಲ ” ನಮ್ಮ ಸಾಲೇಗ ಮುಸಲರ….ಸಾಬರ ಹುಡುಗರನ್ನ ಸನೇವಕ್ಕ ಬಿಟ್ಟಕಂಡಿಲ್ಲ ” ಹೆಮ್ಮೆಯಿಂದ ಹೇಳಿದ.
ಹನೀಫ್ ಮಾಸ್ತರ ತೀರಿ ಹೋದದ್ದು ಖಚಿತವಾಯಿತು.!!
ಹೀಗೆ ನಮ್ಮ ಕಂಗಳ ತೇವಗೊಳಿಸುತ್ತಲೆ ನಮ್ಮ ರಕ್ತ ಕುದಿಯ ಇನ್ನಷ್ಟು ಹೆಚ್ಚಿಸಬಲ್ಲ,ನಮ್ಮ ಮೆದುಳು ಹೃದಯದ ಕೊಂಡಿಯ ಅಂತರ ಗುರುತಿಸಿ ಚಿಕಿತ್ಸೆ ನೀಡಬಲ್ಲ ಅನೇಕ ಕಥೆಗಳು ಇಲ್ಲಿವೆ.
ಈ ಸಂಕಲನಕ್ಕೆ ರಹಮತ್ ತರೀಕೆರೆ ಸರ್ ಮುನ್ನುಡಿ ಬರೆದಿದ್ದಾರೆ.ಅವರೇ ಹೇಳುವಂತೆ ಇಲ್ಲಿರುವ ನುಡಿ ಚಿತ್ರಗಳು ಲೋಕದ ನೋವಿಗೆ ಮಿಡಿ ಯುವ ಸಂವೇದನೆ ಓದುಗನಿಗೆ ಆವರಿಸಿಕೊಂಡು ನಿಟ್ಟುಸಿರು ಹೊಮ್ಮತ್ತೆ,ಮನಸ್ಸು ಮಂಕಾಗುತ್ತೆ ಅನ್ನೋದನ್ನ ನಾನು ಅನುಭವಿಸಿದ್ದೇನೆ ಈ ಕೃತಿ ಓದಿದಾಗ.ಇನ್ನು ಈ ಕೃತಿಗೆ ಬಸವರಾಜ್ ಹೂಗಾರ ಸರ್ ಬೆನ್ನುಡಿ ಇದೆ.ಅವರು ಹೇಳುವಂತೆ ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು ಈ ಸಣ್ಣ ರೂಪಕಗಳಲ್ಲಿ ಜೀವ ಸಾಕ್ಷಿ ಹುಡುಕುವ ಕಥೆಗಳಿವು.ಇವು ಕೃತಿಗೆ ಸಂದ ಆತ್ಮ ಸಾಕ್ಷಿ ಮಾತುಗಳು ಎಂಬುದು ನನ್ನ ಅಭಿಪ್ರಾಯ ಕೂಡ.
ಇನ್ನು ಲೇಖರು ಅಂತ:ಕರಣ ಹುಡುಕುತ್ತ…ಎಂಬ ಶೀರ್ಷಿಕೆಯ ಮಾತಿನಲ್ಲಿ ಹೀಗೆ ಹೇಳಿದ್ದಾರೆ….ಊರು ಆಹುತಿಯಾಗಿ ಬಿಟ್ಟಿತು.ಮನುಷ್ಯರು ಕೂಲಿ ಯಂತ್ರಗಳಾಗಿ ಹೋದರು.ಮನುಷ್ಯನೇ ಸಂಶೋಧಿಸಿದ ಮೂಲ ಕಸಬುಗಳಾದ ಕೃಷಿ,ಬಡಗಿತನ,ಕ್ರೀಡೆ ಹಾಗೂ ಮೈಥುನಗಳು ಸಹ ಕೇವಲ ಯಾಂತ್ರಿಕವೆಂಬಂತೆ ಆಗಿ ಹೋದವು.
ಇದು ನನ್ನ ಪ್ರಕಾರ ಅವರ ಇಡೀ ಸಂಕಲನದ ಕಥನಗಳ ಸಂಕಟರೂಪವಾಗಿ ಅನುರಣಿಸಿದೆ.ಇನ್ನೊಂದು ಮಾತು ಜೊತೆಗೆ ಹೀಗೆ ಯಾವುದೇ ಘಟನೆಯನ್ನು ಕಥೆ ಆಗಿಸುವಾಗ ಇನ್ನಷ್ಟು ಕಲಾತ್ಮಕತೆ ಜರೂರತ್ತು ಇತ್ತು ಅಂತಾ ಕೂಡ ನನಗೆ ಅನ್ನಿಸಿತು. ಅಂತೆಯೇ ಹೃದಯದ ಮಾತಿಗೆ ಅದರ ಹಂಗ್ ಯಾಕೆ ಅಲ್ವಾ.ಇಂತಹ ಕೃತಿಯನ್ನು ನಮ್ಮ ಮುಂದೆ ಓದಿಗೆ ಇತ್ತ ಶ್ರೀಯುತರು ಇನ್ನಷ್ಟು ಬರೆಯಲಿ ಎಂದೇ ಆಶಿಸುತ್ತೇನೆ.
ಈ ಕೃತಿಯನ್ನು ಕೊಪ್ಪಳದ ತಳಮಳ ಪ್ರಕಾಶನ ಪ್ರಕಟಿಸಿದೆ.ಈ ಕೃತಿಯ ಬೆಲೆ 200ರೂ ಮಾತ್ರ.
ಕೃತಿಗಾಗಿ ಸಂಪರ್ಕಿಸಿ – 9945629427
“ಕ್ರಿಕೆಟ್ ಮ್ಯಾಚಿನ ದಿನ” ಬರಹದಲ್ಲಿ ಸಿಡಿಯುವ ಪಟಾಕಿಗಳಲ್ಲಿ ಬೆಳಕಿರುವುದಿಲ್ಲ ” ಎಂದು ಗುರುತಿಸುವ ಸಹೃದಯಿ ಲೇಖಕರು ಅಷ್ಟೇ ಮೆದುವಾಗಿ…
ಮಳೆ ಬಂದರೆ ಹಳ್ಳಿಗೆ ಹರೆಯ ಬಂದಂತೆ ಅಂತಾ ಹೇಳುವ ಕವಿ,ಕಥೆಗಾರ ಶ್ರೀನಿವಾಸ ಸರ್ ಅವರಿಗೆ ಎಂತ ಹೇಳಲಿ…ಶುಭ ಕೋರುತ್ತೇನೆ ಅಷ್ಟೇ.
—————————————-
ದೇವರಾಜ್ ಹುಣಸಿಕಟ್ಟಿ