ಕಾವ್ಯ ಸಂಗಾತಿ
ಡಾ. ಮಾಸ್ತಿ ಬಾಬು ಕವಿತೆ-
ಅಮ್ಮನ ನೆನಪು
ಇಂದೇಕೋ ಕಾಡುತಿಹುದು
ಅಮ್ಮನ ನೆನಪು
ಮರಳಿ ಬಯಸುತಿಹುದು ಮನ
ಅಮ್ಮನ ಪ್ರೀತಿಯ
ಅಮ್ಮನ ಮಡಿಲಲಿ ಮಗುವಾಗಿ
ಮಲಗಿ ಜೋಗುಳ ಕೇಳುವ ಭಾವ ಮೂಡಿಹುದು ಮನದಲಿ
ಅವ್ವ ಒಮ್ಮೆ ಬರಬೇಕು ಹಾಡಲು
ಅಮ್ಮನ ಕೈ ತುತ್ತನು ಸವಿಯಲು ಬಯಸುತಿಹುದು ನನ್ನೀ ಮನ
ಅಮ್ಮನ ಸವಿ ನುಡಿಯ ಕೇಳಲು
ಕಾತುರದಿ ಕಾಯುತಿಹುದು ಎನ್ನ ಮನ
ಅಮ್ಮನ ನಗು ಮುಖವು ಕಣ್ಮುಂದೆ ಇದ್ದರೂ
ಅಮ್ಮನೊಮ್ಮೊ ನೋಡುವ ಬಯಕೆ
ಹಾಸ್ಯವ ಮಾಡುತ ಅಮ್ಮನ ಮೊಗದಲಿ ಚಂದ್ರನಗೆ ಕಾಣುವಾಸೆ ಮೂಡಿಹುದು
ಅಮ್ಮನ ಕನಸನು ನನಸು ಮಾಡುತಿಹೆನು
ಇದ ನೋಡಲು ಅಮ್ಮನೊಮ್ಮೆ ಬರಬೇಕು
ಬಂದು ಮಗನ ನೋಡಿ ಸಂತಸ ಪಡಬೇಕು
ನನ್ನವ್ವ ಇದನು ಅಪ್ಪನಿಗೂ ಮುಟ್ಟಿಸಬೇಕು
ಅವ್ವನ ಹರಕೆ ಅವ್ವನ ವ್ರತ
ಅವ್ವನ ಚಿನ್ನದ ಗುಣ
ಅವ್ವನ ಕರುಣೆ ದೀನದಲಿತರಿಗೆ ನೀಡಿದ ಸಾಂತ್ವಾನ ಸಹಾಯ ಹಸ್ತವ ಮರೆಯಲಾಗದು ಎಂದೆಂದೂ
ಎನ್ನ ಹೃದಯ ಬಡಿತವಾಗಿಹಳು
ಎನ್ನ ಉಸಿರಲಿ ಉಸಿರಾಗಿಹಳು
ನಾ ನಡೆವ ಹಾದಿಗೆ ಶ್ರೀರಕ್ಷೆಯಾಗಿಹಳು
ಆದರೂ ಅಮ್ಮನ ಕಾಣುವ ಹಂಬಲ ಮತ್ತೆ ಮತ್ತೆ ಬರುತಿದೆ
ಜೀವನದಲಿ ಎಲ್ಲವೂ ಇದೆ
ಅಮ್ಮನೆಂಬ ಮಾಣಿಕ್ಯವೊಂದಿಲ್ಲ
ಆ ಮಾಣಿಕ್ಯವ ಮಗದೊಮ್ಮೆ ಕಣ್ತುಂಬ ನೋಡಲು ಮನವು ಕಾದು ನಿಂತಿಹುದು
ಅಮ್ಮನ ನೆನಪು ಕಾಡುತಿಹುದು ಇಂದು.
ಡಾ. ಮಾಸ್ತಿ ಬಾಬು