ಕಾವ್ಯಗಳಿಗೆ ಕುಂಚದ ಮೆರಗು ತಂದ ಶಂಕರಪ್ಪ ಕೆ.ಎನ್.ಗೊರೂರು ಅನಂತರಾಜು

ವ್ಯಕ್ತಿ ಪರಿಚಯ

ಕಾವ್ಯಗಳಿಗೆ ಕುಂಚದ ಮೆರಗು ತಂದ ಶಂಕರಪ್ಪ

ಪರಿಚಯ:

ಕೆ.ಎನ್.ಗೊರೂರು ಅನಂತರಾಜು

ಹಾಸನ ಜಿಲ್ಲಾ ಹೊಯ್ಸಳೋತ್ಸವದಲ್ಲಿ  ಬಹಳ ದಿನಗಳ ಹಿಂದೆ ನಡೆದ ಕಾವ್ಯ ಗಾಯನ-ಕುಂಚ-ನೃತ್ಯ ವೇದಿಕೆ ಕಾರ್ಯಕ್ರಮದಲ್ಲಿ ಕವಿಗಳು ಕವನ ವಾಚಿಸುವಾಗಲೇ ಪ್ರೇಕ್ಷಕರೆದುರು ಕವನಗಳ ಭಾವಾರ್ಥವನ್ನು  ಗ್ರಹಿಸಿ ನಿಂತು ಸ್ಥಳದಲ್ಲಿಯೇ ಚಿತ್ರ ರೂಪದಲ್ಲಿ  ತೆರೆದಿಟ್ಟಿದ್ದರು ಹಾಸನದ ಚಿತ್ರ ಕಲಾವಿದ  ಶಂಕರಪ್ಪ ಕೆ.ಎನ್.ಅವರು. ಈ ಸಂದರ್ಭ ಸ್ವತ: ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ನಾನು ಇವರ ಕಲಾ ಕೌಶಲ್ಯವನ್ನು ಕಣ್ತುಂಬಿಕೊಂಡಿದ್ದೇನೆ. ಈ ರೀತಿಯ ಕಲೆಗಾರಿಕೆಯಲ್ಲಿ ಪ್ರಸಿದ್ಧರಾಗಿರುವ  ಶ್ರೀನಿವಾಸ ವರ್ಮರಿಂದ ಪ್ರಭಾವಿತರಾಗಿ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕಾವ್ಯಕ್ಕಷ್ಟೇ ಅಲ್ಲಾ ವೀಣಾವಾದನ, ಗಮಕ ವಾಚನಕ್ಕೂ ಸೈ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಾಡು ಕೇಳಿ ಸಾರ್ವಜನಿಕರೆದುರು ಚಿತ್ರ ಬಿಡಿಸಿರುವ ಚತುರ ಕಲೆಗಾರ.


ಅರಸೀಕರೆ ತಾ. ಕಲ್ಯಾಡಿಯಲ್ಲಿ ಶ್ರೀಮತಿ ಬೈರಮ್ಮ ಶ್ರೀ ನಂಜುಂಡಪ್ಪ ದಂಪತಿಗಳ ಪುತ್ರರಾಗಿ ದಿ. ೩೧-೫-೧೯೭೦ರಂದು ಜನಿಸಿದ ಇವರು ಸದ್ಯ ಹಾಸನದ ವಾಸಿ. ಹಾಸನದ ಅರವಿಂದ ವಿದ್ಯಾ ಸಂಸ್ಥೆ, ವಿಜಯ ಇಂಗ್ಲೀಷ್‌ ಶಾಲೆ, ಎ.ಎಲ್.ಕೆ.ಸರ್ಕಾರಿ ಪ.ಪೂ.ಕಾಲೇಜು, ಬೆಳ್ಳೂರು ನಂತರ ೨೦೨೩ರಿಂದ ಇದೇ ಬೆಳ್ಳೂರಿನ  ಆರ್.ಡಿ.ಎಸ್.ಸ.ಬಾ. ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿಪ್ಲೊಮಾ ಇನ್‌ ಡ್ರಾಯಿಂಗ್ ಮತ್ತು ಫೈಂಟಿಂಗ್‌ ಕೋರ್ಸ್, ಬೆಂಗಳೂರಿನ ಕೆನ್‌ ಸ್ಕೂಲ್‌ ಆಫ್‌ ಆಟ್ಸ್೯ ನಲ್ಲಿ ಡ್ರಾಯಿಂಗ್ ಮಾಸ್ಟರ್‌ ಡಿಪ್ಲೊಮಾ, ಹುಬ್ಬಳ್ಳಿಯ ವಿಜಯ ಮಹಂತೇಶ್ವರ ಮಹಾ ವಿದ್ಯಾಲಯದಿಂದ ಮಾಸ್ಟರ್‌ ಆಫ್ ಫೈನ್‌ ಆಟ್ಸ್೯ ಮಾಡಿದ್ದಾರೆ. ದೊಡ್ಡಬಳ್ಳಾಪುರದ ಬೆನ್‌ಜಿನ್ ಪಾರ್ಕ್ ಚಿತ್ರಕಲಾ ತರಬೇತಿ ಶಿಬಿರ ಪುಷ್ಪಗಿರಿ ಹೊಯ್ಸಳ ಮಹೋತ್ಸವ ಮತ್ತೊಮ್ಮೆಇಲ್ಲಿಯೇ ನಡೆದ ಚಿತ್ರಕಲಾ ಶಿಬಿರ, ಕಾರ್ಕಳ-ಮಣ್ಣಿನ ಮಾದರಿ ತಯಾರಿಕೆ ಶ್ರವಣಬೆಳಗೊಳ-ರಾಜ್ಯಮಟ್ಟದ ಜಲವರ್ಣ ಪ್ರಕೃತಿ ಚಿತ್ರಣ ಶಿಬಿರ, ಮತ್ತು  ಇಲ್ಲಿಯೇ ಕವಿಗಳ ಭಾವಚಿತ್ರ ರಚನೆ, ಮಂಡ್ಯ-ಅಮೃತ ಮಹೊತ್ಸವ ಕ್ಯಾಂಪ್, ಆದಿ ಚುಂಚುನಗಿರಿ-ರಾಷ್ಟಮಟ್ಟದ ಚಿತ್ರಕಲಾ ಶಿಬಿರ, ಮೇಲುಕೋಟೆ ಮತ್ತು ಹಾರನಹಳ್ಳಿಯ ಜಲವರ್ಣ ಚಿತ್ರ ರಚನೆ, ತುಮಕೂರು ಸಿದ್ಧಗಂಗಾ ಮಠದ ಪೈಂಟಿಂಗ್‌ ಕ್ಯಾಂಪ್, ಚಿತ್ರದುರ್ಗ-ಲಲಿತ ಕಲಾ ಅಕಾಡೆಮಿಯ ಮುಂಗಾರು ಚಿತ್ರಕಲಾ ಶಿಬಿರ ಸೇರಿದಂತೆ ಹಲವು ಬಗೆಯ ಕಲಾ ಕ್ಯಾಂಪ್‌ನಲ್ಲಿ ಭಾಗವಹಿಸಿ ತಮ್ಮ ಕಲಾ ಕೌಶಲ್ಯ ವೃದ್ಧಿಸಿಕೊಂಡವರು, . ೨೦೧೮-ಬೆಂಗಳೂರಿನ ವೆಂಕಟಪ್ಪ   ಅಟ್೯  ಗ್ಯಾಲರಿಯಲ್ಲಿ, ೨೦೨೨-ಕಲ್ಯಾಡಿ ಉತ್ಸವದಲ್ಲಿ ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆದಿದೆ. ಸಮೂಹಿಕವಾಗಿ  ತಮ್ಮ ಕಲಾವಿದ ಮಿತ್ರರೊಟ್ಟಿಗೆ ಹಲವಾರು ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿ ಚಿತ್ರ ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಥರ್ಮಾಕೋಲ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮದುವೆ ಸಮಾರಂಭಗಳ ವೇದಿಕೆಗೆ ಆಕರ್ಷಕ ಅಕ್ಷರ ವಿನ್ಯಾಸ ಮಾಡಿಕೊಡುತ್ತಾರೆ. ಸ್ತಬ್ದ ಚಿತ್ರ. ಪ್ರಾಣಿಗಳ ಮುಖವಾಡ, ಫ್ಯಾನ್ಸಿ ಡ್ರೆಸ್, ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಲ್ಲಿ ಮಾಡಲ್‌ಗಳು.ಥರ್ಮಾಕೋಲ್ ಮಂಟಪಗಳು, ತುಳಸಿಕಟ್ಟೆ, ವೀಣೆ, ಇತ್ಯಾದಿ ಶಂಕರ್‌ ಕೈಯಲ್ಲಿ ಪಡಿಮೂಡಿವೆ. ಸಿಮೆಂಟ್ ವಕ್೯ ನಲ್ಲಿ ಮಹಿಷಾಸುರ ಮರ್ಧಿನಿ ಶಿಲ್ಪ ರೂಪಿಸಿದ ಶಿಲ್ಪಿಇವರು.  ಅರವಿಂದ ಕಾನ್ವೆಂಟ್‌ನಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವಾಗ  ಸ್ವಾತಂತ್ರೋತ್ಸವಕ್ಕೆ ರೂಪಿಸಿದ್ದ ಚಿತ್ರದುರ್ಗದ ಕಲ್ಲಿನ ಕೋಟೆ, ಒನಕೆ ಓಬವ್ವನ ಕಿಂಡಿ ಸ್ಥಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಪಡೆದಿದ್ದು, ಗುಜರಾತ್ ಭೂಕಂಪ ವೇಳೆ ಚಿಣ್ಣರ ಚಿತ್ರಕಲಾ ಪ್ರದರ್ಶನ ನಡೆಸಿದನ್ನು ಸ್ಮರಿಸುತ್ತಾರೆ.


ಹಾಸನದ ಕಲಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ಗೀತಗಾಯನ ಕುಂಚ ಸಾಂಸ್ಕೃತಿಕ ಸೌರಭದಲ್ಲಿ, ಹಾಸನದ ಸೀತಾ ರಾಮಾಂಜನೇಯ ಸೇವಾ ಸಮಿತಿಯ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವದಲ್ಲಿ, ವಾಲ್ಮೀಕಿ ರಾಮಾಯಣ ವೀಣಾ ವಾದನ. ಅರಸೀಕೆರೆ ಸೀತಾರಾಮ ಕಲ್ಯಾಣ ಮಂದಿರದಲ್ಲಿ ನಡೆದ ಕುಮಾರವ್ಯಾಸ ಭಾರತ ಗಮಕ ಚಿತ್ರರಚನೆ. ಹಾಸನ, ಶಿವಮೊಗ್ಗದ ಮದುವೆ ಸಮಾರಂಭಗಳಲ್ಲಿ ಗೀತ ಚಿತ್ರರಚನೆ, ಪಂಜರದೊಳಗೂ ಇಂಚರ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಇವರು ಕವನಗಳಿಗೆ ಕುಂಚದ ಮೆರಗು ನೀಡಿದ್ದಾರೆ. ಛಾಯಾಗ್ರಹಣ ಇವರ ಹವ್ಯಾಸ. ಯೋಗ, ಕಸದಿಂದ ರಸ, ವಿಜ್ಞಾನ ಮಾದರಿ ತಯಾರಿಕೆ ಪೇಪರ್‌ ಡಿಸೈನ್, ಛದ್ಮವೇಶ, ನವೀನ ಮಾದರಿ ನಕ್ಷೆ ತಯಾರಿಕೆ ಹೀಗೆ ಹಲವು ಕಲಾ ಕುಸರಿಯಲ್ಲಿ ಕ್ರಿಯಾಶೀಲರು. ಇವರ ಕಲಾ ಸಾಧನೆಗೆ ಕಲಾ ತಪಸ್ವಿ, ಕಲಾ ಚಿಂತಕ, ಕರುನಾಡ ಲಲಿತ ಕಲಾ ತಿಲಕ, ಕುಂಚ ಲಾಂಛನ ಮಾಂತ್ರಿಕ, ಲಾಂಛನ ಶಿಲ್ಪಿ ಪ್ರಶಸ್ತಿಗಳು ಸಂದಿವೆ. ಹಾಸನ ಜಿಲ್ಲಾಡಳಿತ ೨೦೦೫ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇದೇ ವರ್ಷ ನವದೆಹಲಿಯ ಅಗ್ನಿ ಪಥ್‌ ಆಲ್‌ ಇಂಡಿಯ ಆಟ್೯ ಸ್ಫರ್ಧೆಯಲ್ಲಿ ರಾಷ್ಪ್ರ ಮಟ್ಟದ ಸಿಲ್ವರ್ ಮೆಡಲ್ ಪ್ರಶಸ್ತಿ ಗೆದ್ದಿದ್ದಾರೆ. ೨೦೦೫ರಲ್ಲಿ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ನಿರ್ಮಾಣಕ್ಕಾಗಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡ ರವರಿಂದ, ೨೦೧೭ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ನಿರ್ಮಾಣಕ್ಕಾಗಿ ಅಂದಿನ ಲೋಕೋಪಯೋಗಿ ಸಚಿವರು ಶ್ರೀ ಹೆಚ್.ಸಿ.ಮಹಾದೇವಪ್ಪರವರಿಂದ,  ೨೦೧೮ರಲ್ಲಿ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಲಾಂಛನ ನಿರ್ಮಾಣಕ್ಕಾಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿರವರಿಂದ ಸನ್ಮಾನಿತರು. ಹಾಸನ ಜಿಲ್ಲೆಯ ಹೊಯ್ಸಳ ಕಲೆಯ ಯಥಾವತ್‌ ಚಿತ್ರಣ ರೂಪಿಸುವಲ್ಲಿ ಸಿದ್ಧಹಸ್ತರಾಗಿ ತಮ್ಮ ಚಿತ್ರಕಲೆಯಲ್ಲಿ ಗುಬ್ಬಿಗಳ ಮೇಲೆ ವಿಶೇಷ ಪ್ರೀತಿ ಮಮತೆಯಿಂದ ಅವುಗಳು ಈ ದೇಗುಲಗಳಲ್ಲಿ ವಾಸಕ್ಕೆ ಆಶ್ರಯ ಪಡೆಯುತ್ತಿರುವುದರ ಬಗ್ಗೆ ಗಮನ ಸೆಳೆದಿರುವರು.  ಕೆ.ಎನ್.ಶಂಕರಪ್ಪರವರ ದೂರವಾಣಿ ಸಂಖ್ಯೆ ೯೪೪೮೨೩೭೮೯೭.


ಗೊರೂರುಅನಂತರಾಜು

Leave a Reply

Back To Top