ಕಾಡಿಗೆಯ ಹೆಜ್ಜೆ
ಪೂರ್ಣಿಮಾ ಸುರೇಶ್
ಹುಣ್ಣಿಮೆಯಂತಹ ಹೆಣ್ಣೊಂದು
ಶುಕ್ಲ-ಕೃಷ್ಣ ಪಕ್ಷಗಳಲಿ ಹೊರಳಿ
ತುಸುತುಸುವೇ ಅರಳಿ
ಒಂದಿಷ್ಟು ಬಾಡಿ,ಕರಗಿ
ಮತ್ತೆ ಹುಡುಹುಡುಕಿ
ಅಮಾವಾಸ್ಯೆಯಂತಹ
ಗಂಡನ್ನು ಪ್ರೇಮಿಸಿದಳು!
ಕಪ್ಪು- ಎಲ್ಲಿರಿಸುವೆ
ಕುಹಕಕೆ ಉತ್ತರಿಸುವಂತೆ
ಬಚ್ಚಿಟ್ಟುಕೊಂಡಳು ಕಣ್ಣೊಳಗೆ
ಅವನನ್ನು ಕಾಡಿಗೆಯಾಗಿಸಿ!
ಅವನೀಗ ಅವಳ ನಗುವಿಗೆ ನೀಲ ಆಗಸವಾಗುತ್ತಾನೆ.
ಅವಳ ನೋವಿಗೆ
ಕರಿನೀರಾಗಿ ಧುಮುಕಿ
ಜಲಪಾತವಾಗುತ್ತಾನೆ
ಕಡಲಾಗಿ ಸುಯ್ಲಿಟ್ಟು
ಆವಿಯಾಗಿ
ಮಳೆಯಾಗಿ
ಅವಳ ತೋಯಿಸುತ್ತಾನೆ.
ಜಗಕೆ
ಕಾಣುವ ಕಣ್ಣಿನ ಬೆಳಕು,
ಮೊರೆವ ಕಡಲಲೆಯ ಸುಯ್ಲು
ಸುರಿವ ಮಳೆ ಹನಿಗಳು ಅರ್ಥವಾಗುವುದೇ
ಇಲ್ಲ.
*******
Very meaningful
ಧನ್ಯವಾದಗಳು
Very nice Madum
Good…,
ಚನ್ನಾಗಿದೆ
ನನಗಿಷ್ಟವಾಯಿತು