ಕಾವ್ಯಸಂಗಾತಿ
ಪ್ರತಿಭಾ ಪಾಟೀಲ
ಕಲಾವಿದೆ
ಈ ಊರು ಆ ಊರು ಹತ್ತೂರು ಸುತ್ತೂರು
ಸುತ್ತುತ್ತ ತಿರಗುತ್ತ ಮತ್ತೆಲ್ಲೊ ನೆಲೆಸುತ್ತ
ಹರಕಲು ಬಟ್ಟೆ, ಮುರುಕಲು ಜೀವನವ
ಕಟ್ಟಿಕೊಳ್ಳಲು ಕುಣಿವಳು, ನೆಗೆವಳು, ನಗುತ
ತನ್ನ ಕಾಯಕದಲ್ಲಿ ಸಂಭ್ರಮಿಸುವ ಕಲಾವಿದೆ
ಮಿಣಿಯ ಮೇಲೆ ಮಣಿಯದಂತೆ ಸಂಚರಿಸುವ
ಸಂಚಾರಿಣಿ ಅವಳು, ದೊಂಬರದವಳು
ಕೈಯ್ಯಲ್ಲೊಂದು ಬೊಂಬನು ಹಿಡಿದು
ಕಂಬದ ತುದಿಗೆ ಸರಸರ ಏರಿ
ಹಗ್ಗದ ಮೇಲೆ ತೋರುವಳು ಕರಾಮತ್ತು
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಕಾಲಿನ ಗೆಜ್ಜೆಯ ಸದ್ದೆ ಮಾಡದೆ
ತಗ್ಗದೆ ಬಗ್ಗದೆ ಹಿಗ್ಗುತ ನಡೆಯುವ
ಗೊಂಬೆಯು ಅವಳು, ದೊಂಬರದವಳು
ಬೀದಿ ಬದಿಯ ಬಯಲಿನಲ್ಲಿ
ಜನರು ಎಸೆವ ಕಾಸಿಗೆ ಹಾಸನು ಹಾಸಿ
ಬಗೆ ಬಗೆಯ ಬಂಗಿಗಳನು ಮಾಡುವಳು
ತಲೆಯ ಮೇಲಿನ ಶಿಂಬಿಯಲ್ಲಿ
ಸಾಲು ಸಾಲಿನ ತಂಬಿಗೆ ಹೊತ್ತು
ಕಣ್ಣರಳಿಸುವಂತೆ ಮಾಡುವ ನಗು ಮೊಗದ
ನಗಾರಿ ಅವಳು, ದೊಂಬರದವಳು
ಬದುಕಿನ ಭಾರವನ್ನು ಹೊತ್ತವಳಿಗೆ
ಎದೆಯ ಮೇಲೆ ಹೊರುವ ಕಲ್ಲೊಂದು ಭಾರವೆ?
ಕಲ್ಲು ಬಂಡೆ ಹೊರುವದೊಂದು ಭಂಗಿಯು
ಕಬ್ಬಿಣದ ಹೂಪಿನಲ್ಲಿ ಮೈ ಬೆಂಡಾಗಿಸಿ
ದಾಟುವ ಮೋಡಿಗೆ ಜನರು ಚಪ್ಪಾಳೆ ತಟ್ಟುವರು
ಹಗ್ಗದ ಮೇಲೆ ಕಸರತ್ತಿನ ಕರಾಮತ್ತು
ತೋರುವ ಅವಳು, ದೊಂಬರದವಳು
ಪ್ರತಿಭಾ ಪಾಟೀಲ