ಭಾರತದ ಜಾನಪದ ಹಾಡುಗಳು ಮತ್ತು ವೃತ್ತಿ ಗಾಯಕರು-ಹಮೀದಾ ಬೇಗಂ ದೇಸಾಯಿ

ವಿಶೇಷ ಲೇಖನ

ಭಾರತದ ಜಾನಪದ ಹಾಡುಗಳು

ಮತ್ತು ವೃತ್ತಿ ಗಾಯಕರು-

ಹಮೀದಾ ಬೇಗಂ ದೇಸಾಯಿ

ಮಾನವ ಸಂಸ್ಕೃತಿಯನ್ನು ಅಭ್ಯಸಿಸುವ, ವ್ಯಾಖ್ಯಾನಿಸುವ, ಮುಖ್ಯ ಶಾಸ್ತ್ರಗಳಲ್ಲಿ ಜಾನಪದವೂ ಒಂದು ! ಸಹಸ್ರಾರು ವರ್ಷಗಳ ಮಾನವ ಕುಲದ ಇತಿಹಾಸದಲ್ಲಿ ಅಕ್ಷರ ಜ್ಞಾನ ಬಂದದ್ದು ಕೇವಲ ಇತ್ತೀಚೆಗೆ. ಅದಕ್ಕೆ ಮೊದಲು ಸರ್ವಜ್ಞಾನವೂ ಕಂಠಸ್ಥ ಸಂಪ್ರದಾಯದ ಮೂಲಕ ಸಾಗಿ ಬರುತ್ತಿತ್ತು. ಸಹಸ್ರಾರು ವರ್ಷಗಳ ಮಾನವನ ಅನುಭವ ಭಂಡಾರ ಅನಂತ ಶಾಖೆಗಳಲ್ಲಿ ಹಬ್ಬಿ , ಅದರಲ್ಲಿ ಬಹುಪಾಲು ಅಜ್ಞಾತವಾಗಿಯೇ ಇನ್ನೂ ಉಳಿದಿದೆ. ಸಂಗ್ರಹಿತವಾಗಿರುವ ಭಾಗ ಅಲ್ಪವೇ ಸರಿ. ಪ್ರೌಢಮೂಲದ ಸಕಲ ಜ್ಞಾನಕ್ಕೂ ಜಾನಪದ ಒಂದಲ್ಲ ಒಂದು ರೀತಿಯಲ್ಲಿ ಮಾತೃಸ್ಥಾನದಲ್ಲಿ ನಿಲ್ಲುತ್ತದೆ . ಆ ಶಾಸ್ತ್ರಗಳೆಲ್ಲ ಜಾನಪದ ನೆಲೆಗಟ್ಟಿನ ಮೇಲೆಯೇ ಕುಡಿಯೊಡೆದು ಹಬ್ಬಿಕೊಂಡಿವೆ. ಇವೆರಡರ ಕೊಳು- ಕೊಡುಗೆ ಸದಾ ನಡೆದದ್ದೇ ! ಮಾನವನ ಸಂಸ್ಕೃತಿಯ ಅಧ್ಯಯನವನ್ನು ನಡೆಸುವ ಶಾಸ್ತ್ರಗಳಲ್ಲಿ ಜಾನಪದ ಪ್ರಮುಖ ಪಾತ್ರ ವಹಿಸುತ್ತದೆ.
ಜಾನಪದ ಎಂದರೇನು ? 19- ನೇ ಶತಮಾನದ ಗಣ್ಯ ಮಾನವ ಶಾಸ್ತ್ರಜ್ಞ ಹಾಗೂ ಜಾನಪದ ವಿದ್ವಾಂಸನೆನಿಸಿದ್ದ ಆಂಡ್ರೂ ಲಾಂಗ್ ಜಾನಪದವನ್ನು ಈ ರೀತಿ ವಿವರಿಸುತ್ತಾನೆ. ಜನಾಂಗಗಳ ಪಳೆಯುಳಿಕೆಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡುವ ವಿಜ್ಞಾನವೇ ಜಾನಪದ..! ಇನ್ನೂ ವಿವರಿಸುತ್ತ…ಸಮಾಜದ ಕೆಳಗಿನ ಸ್ತರಗಳ ಐತಿಹ್ಯಗಳು, ಸಂಪ್ರದಾಯಗಳು, ನಂಬಿಕೆಗಳು ಮುಂತಾದವುಗಳ ಮೊತ್ತವೇ ಜಾನಪದ ಎಂದು ಅಭಿಪ್ರಾಯಪಡುತ್ತಾನೆ. ಎಸ್ಪಿನೋಸ್ ಎಂಬ ವಿದ್ವಾಂಸನ ಪ್ರಕಾರ, ಜಾನಪದ ಒಂದು ದೊಡ್ಡ ಅನುಭವದ ಭಂಡಾರ ; ಮಾನವಕುಲ ಅನಂತ ಕಾಲದ ಯಾತ್ರೆಯಲ್ಲಿ ಪಡೆದ ಅನುಭವ, ಕಲಿತ ಹಾಗೂ ಆಚರಿಸಿಕೊಂಡು ಬಂದ ಜನಪ್ರಿಯ ಹಾಗೂ ಸಾಂಪ್ರದಾಯಿಕ ಜ್ಞಾನ. Folklore is a lively fossil which refuses to die.. ಎಂದಿರುವ C.F.Potter ಅವರು ಜಾನಪದದ ಜೀವಂತಿಕೆಯನ್ನು ಗುರುತಿಸುತ್ತಾರೆ.

ಜಗತ್ತಿನ ಎಲ್ಲ ಭಾಗಗಳಲ್ಲಿ ಜಾನಪದ ತನ್ನದೇ ಆದ ರೀತಿಯಲ್ಲಿ ಹಬ್ಬಿಕೊಂಡಿದೆ. ವಿವಿಧ ಭಾಷೆಗಳಲ್ಲಿ, ವಿವಿಧ ರೀತಿಗಳಲ್ಲಿ, ಶಾಬ್ದಿಕ ರೂಪಗಳಲ್ಲಿ , ಆಚರಣೆಗಳಲ್ಲಿ, ಅದು ಹಾಸುಹೊಕ್ಕಾಗಿದೆ. ಭಾರತವೂ ಕೂಡ ಇದಕ್ಕೆ ಹೊರತಾಗಿಲ್ಲ. ಉಳಿದ ರಾಷ್ಟ್ರಗಳಿಗಿಂತ ಈ ವಿಷಯದಲ್ಲಿ ಭಾರತ ಒಂದು ಹೆಜ್ಜೆ ಮುಂದಿದೆ ಎಂದು ಹೇಳಿದರೆ ಉತ್ಪ್ರೇಕ್ಷೆ ಆಗಲಾರದು. ಭಾರತ ವಿಭಿನ್ನ ಭಾಷೆಗಳ, ವಿಭಿನ್ನ ಜನಾಂಗಗಳ , ವಿಭಿನ್ನ ರೀತಿ- ನೀತಿಗಳನ್ನು ಹೊಂದಿರುವ ವಿಶೇಷ ದೇಶ ! ಭಾರತೀಯ ಜಾನಪದ ಅಧ್ಯಯನದ ಪ್ರಥಮ ಕೃತಿಯಾಗಿ ಅಬ್ಬೆ ಡುಬಾಯಿಸ್ ನ Hindu Manners, Customs and Ceremonies ಎಂಬ ಗ್ರಂಥವನ್ನು ಹೆಸರಿಸಲಾಗುತ್ತದೆ. ಈ ಗ್ರಂಥ ಭಾರತೀಯ ಜನಜೀವನ, ಸಂಸ್ಕೃತಿಗಳ ಮೇಲೆ ವಿಶೇಷ ಬೆಳಕನ್ನು ಚೆಲ್ಲುತ್ತದೆ. ಡುಬಾಯಿಸ್ ಬಹಳ ವರ್ಷಗಳ ಕಾಲ ಕನ್ನಡನಾಡಿನಲ್ಲೇ ಪಾಂಡವಪುರದ ಹತ್ತಿರ ಇದ್ದವನು. ಭಾರತದ ವಿವಿಧೆಡೆಗಳಲ್ಲಿ ಜಾನಪದದ ಸೊಗಡು ಬೇರೆಬೇರೆಯಾಗಿ ಹೊಮ್ಮಿದರೂ, ಅದರ ಮೂಲಸ್ವರೂಪ ಕೆಲವು ವಿಶಿಷ್ಟ ಅಂಶಗಳನ್ನು ಒಳಗೊಂಡಿದೆ. ಭಾರತದ ಜಾನಪದ ಹಾಡುಗಳನ್ನು ನಾವು ವರ್ಗೀಕರಣಗೊಳಿಸಿದರೆ ಈ ಕೆಳಗಿನಂತೆ ಅವು ಬಿಡಿಯಾಗುತ್ತವೆ.


1- ಮದುವೆ ಹಾಡುಗಳು
2- ಭಾವಗೀತೆಗಳು ( ಹೆಚ್ಚಾಗಿ ಪ್ರೇಮ ಗೀತೆಗಳು )
3- ಕೌಟುಂಬಿಕ ಕೆಲಸದ ಹಾಡುಗಳು
4- ಮರಣ ಸಂಬಂಧದ ಹಾಡುಗಳು
5- ಮಕ್ಕಳ ಹಾಡುಗಳು
6- ಜೀವನದ ವಿವಿಧ ಘಟ್ಟಗಳಿಗೆ ಸಂಬಂಧಿಸಿದ ಹಾಡುಗಳು
7- ಕೆಲವು ನಿರ್ದಿಷ್ಟ ಹಬ್ಬದ ಸಾಂಪ್ರದಾಯಿಕ ಹಾಡುಗಳು
8- ವ್ಯವಸಾಯ ಸಂಬಂಧ ಹಾಡುಗಳು
9- ಮಳೆ ಸಂಬಂಧ ಹಾಡುಗಳು
10- ವಿನೋದದ ಹಾಡುಗಳು
11- ನೃತ್ಯ ಗೀತೆಗಳು
13- ಅಣಕದ ಹಾಡುಗಳು.

ಭಾರತದ ವಿವಿಧ ರಾಜ್ಯಗಳಲ್ಲಿ ಜಾನಪದ ತನ್ನದೇ ಆದ ಶೈಲಿಯನ್ನು ಉಳಿಸಿಕೊಂಡಿದೆ. ಉತ್ತರ ಭಾರತದಲ್ಲಿ ಪೌರಾಣಿಕ, ಧಾರ್ಮಿಕ ಆಚರಣೆಗಳ ಹಿನ್ನೆಲೆಯಲ್ಲಿ ಸ್ವರೂಪ ತಾಳಿದರೆ ; ಮಧ್ಯಪ್ರದೇಶದಲ್ಲಿ ಪಾಂಡವಿ ಎಂದು ಪ್ರಸಿದ್ಧಿ ಹೊಂದಿರುವ ಜಾನಪದ ಹಾಡು ಇದೇ ವಸ್ತುವನ್ನು ಹೊಂದಿದೆ. ರಾಜಸ್ಥಾನ, ಗುಜರಾತ್ ಗಳಲ್ಲಿ ಕೃಷ್ಣನ ಲೀಲೆಗಳನ್ನು ವಿವರಿಸುವ ಗರ್ಭಾ ಬಹು ಜನಪ್ರಿಯ. ಮಹಾರಾಷ್ಟ್ರದಲ್ಲಿ ಪ್ರೇಮಗೀತೆ , ಯೋಧರ, ವೀರನಾಯಕರ ಕತೆಗಳನ್ನು ಹೊಂದಿರುವ ತಮಾಷಾ ಲಾವಣಿಗಳು ಯಾರಿಗೆ ಗೊತ್ತಿಲ್ಲ..? ಕರ್ನಾಟಕದಲ್ಲಂತೂ ಕಲ್ಗಿ ತುರಾಗಳು ,ವೃತ್ತಿ
ಗಾಯಕರ ಲಾವಣಿಗಳು, ಸಾಮಾನ್ಯ ಲಾವಣಿಗಳು, ಸಂಪ್ರದಾಯದ ಲಾವಣಿಗಳು, ವೀರರ ಲಾವಣಿಗಳು, ಸಂಪ್ರದಾಯದ ಲಾವಣಿಗಳು ಪ್ರಮುಖವಾದವುಗಳು. ಇವಲ್ಲದೆ ಭಾರತದಾದ್ಯಂತ ಪ್ರತಿಯೊಬ್ಬರ ಮನವನ್ನು ಸೂರೆಗೊಳ್ಳುವ ಕೋಲಾಟದ ಪದಗಳು, ರೈತರ ಹಾಡುಗಳು, ವ್ಯವಸಾಯ ಪದಗಳು, ಮದುವೆಯ ಹಾಡುಗಳು, ಬೀಸೋ- ಕುಟ್ಟೋ ಹಾಡುಗಳು , ಸೋಬಾನೆ ಪದಗಳು, ತೊಟ್ಟಿಲ ಪದಗಳು, ನೃತ್ಯ ಗೀತೆಗಳು, ಕಥನ ಗೀತೆಗಳು, ಒಗಟಿನ ಹಾಡುಗಳು, ಹಬ್ಬಗಳ ಹಾಡುಗಳು, ವಿವಿಧ ಕ್ರೀಡೆಗಳ ಹಾಡುಗಳು , ನಂಬಿಕೆಗಳಿಗೆ ಸಂಬಂಧಿಸಿದ ಹಾಡುಗಳು, ದೇವರ ಪದಗಳು, ಬಯಲಾಟದ ಹಾಡುಗಳು , ಕಥನ ಗೀತೆಗಳು…ಒಂದೇ ಎರಡೇ ? ಅಗಣಿತ ಜ್ಞಾನ ಭಂಡಾರ ಈ ಜಾನಪದ ! ನಾಗರಿಕತೆಯ ಕೃತಕ ಆನಂದವನ್ನು ತೊರೆದು ಇಂದಿನ ಆಧುನಿಕ ಜನಾಂಗ ಮತ್ತೆ ಜಾನಪದದ ಮೊರೆ ಹೊಕ್ಕಿದೆ. ಇಂದಿನ ಚಲನಚಿತ್ರರಂಗ ಕೂಡ ಜಾನಪದದ ಹಿರಿಮೆಯನ್ನು ಮೆಚ್ಚಿ , ಅದನ್ನು ತನ್ನ ಬಂಡವಾಳವನ್ನಾಗಿ ಮಾಡಿಕೊಂಡಿದೆ. ಕೃತಕತೆಗೆ ಬೇಸತ್ತ ಮನಸ್ಸಿಂದು ನೈಜತೆಯನ್ನು ಅರಸಿ ಜಾನಪದ ಹಾಡುಗಳತ್ತ ಸಾಗಿದೆ .

ಅಕ್ಷರ ಜ್ಞಾನವಿಲ್ಲದ ಒಬ್ಬ ಮಹಿಳೆ ತನ್ನ ಬೇಸರ ಕಳಯಲೋಸುಗವೋ, ಆನಂದ- ನೋವುಗಳನು ವ್ಯಕ್ತಮಾಡಲೋ, ಮಕ್ಕಳನ್ನು ರಮಿಸಲೋ ಆಡಿದ ಮಾತುಗಳು ಹರಳುಗಟ್ಟಿ ನಿಂತಿವೆ ಈ ಜಾನಪದ ಹಾಡುಗಳಲ್ಲಿ..! ಅವುಗಳನ್ನು ಕೂಲಂಕಷವಾಗಿ ಅಭ್ಯಸಿಸಿದಾಗ ಅವರ ಪ್ರಾಸಬದ್ಧತೆ, ಶಬ್ದ ಜೋಡಣೆ, ಅರ್ಥ ಗರ್ಭಿತ ಧಾಟಿ, ಇವೆಲ್ಲ ಸಾಹಿತ್ಯದಲ್ಲಿ ಪಿ.ಎಚ್. ಡಿ. ಪಡೆದ ವಿದ್ವಾಂಸರನ್ನೂ ಬೆರಗುಗೊಳಿಸುವ, ನಾಚಿಸುವ ಸ್ಥೈರ್ಯವನ್ನು ಹೊಂದಿವೆ ಎಂದರೆ ತಪ್ಪಾಗಲಾರದು.

ಬೆಳಗಾಗೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆವಂಥ / ಭೂತಾಯ್ನ
ಎದ್ದೊಂದು ಗಳಿಗೀ ನೆನೆದೇನ /

ಕಲ್ಲಮ್ಮ ತಾಯಿ ಮೆಲ್ಲವ್ವ ಜೋಳವ
ಜಲ್ಲ ಜಲ್ಲನೆ ಉದುರವ್ವ/ ನಮ್ಮನೆಯ
ಬೆಲ್ಲದಾರುತಿ ಬೆಳಗೇನ/

ಆಡಿ ಬಾ ನನ ಕಂದ ಅಂಗಾಲ ತೊಳದೇನ
ತೆಂಗಿನ ಕಾಯಿ ಎಳನೀರ/ ತಕ್ಕೊಂಡ
ಬಂಗಾರ ಮಾರಿ ತೊಳದೇನ

ಮಲ್ಲಿಗೆ ಬನದಾಗ ಮುತ್ತು ಗಂಬಳಿ ಹಾಸಿ
ಮುದ್ದು ಹನುಮಯ್ಯ ಪಗಡೇಯ/ ಆಡ್ಯಾನೆ

ವೃತ್ತಿ ಗಾಯಕರು

ಹಾಡುಗಾರಿಕೆ ಕೆಲವರಿಗೆ ಒಂದು ವಿಶೇಷವಾದ ವೃತ್ತಿ. ಪರಂಪರಾಗತವಾಗಿ ಹಾಡುಗಾರಿಕೆಯನ್ನು ಒಂದು ವೃತ್ತಿಯನ್ನಾಗಿ ನಡೆಸಿಕೊಂಡು ಬರುವ ಕೆಲವು ವರ್ಗದ ಗಾಯಕರನ್ನು ವೃತ್ತಿ ಗಾಯಕರು ಎಂದು ಕರೆಯಬಹುದು. ಕೋಲೆ ಬಸವನವರು, ಕರಡಿಕುಣಿತದವರು, ಬಹುರೂಪಿಗಳು ಮೊದಲಾದ ಜನಪದ ಮನೋರಂಜಕರು ಒಂದೊಂದು ವೃತ್ತಿಯನ್ನು ಅವಲಂಬಿಸಿ, ಜನರನ್ನು ರಂಜಿಸಿ, ಜೀವನೋಪಾಯಕ್ಕೆ ಮಾರ್ಗವನ್ನು ಕಂಡುಕೊಂಡಿದ್ದಾರೆ.

ವೃತ್ತಿ ಗಾಯಕರ ಬಗ್ಗೆ ಜಗತ್ತಿನ ದೃಷ್ಟಿಯನ್ನು ಮೊದಲು ಸೆಳೆದವನು ಚಿಷಪ್ ಪೆರ್ಸಿ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಜನಪದ ವೃತ್ತಿಗಾಯಕರನ್ನು ಗುರುತಿಸಲಾಗಿದೆ. ಭಾರತದ ವೃತ್ತಿ ಗಾಯಕರ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಕೆಲವು ಪ್ರದೇಶಗಳಲ್ಲಿ ಗುರುತಿಸಲಾಗಿದೆ. ರಾಜಸ್ಥಾನದ ಭೋಪ ಕಿನ್ನರಿಯಂಥ ವಾದ್ಯವನ್ನು ಹಿಡಿದು ವೀರಕಾವ್ಯಗಳನ್ನು ಹಾಡುತ್ತಾನೆ. ಪಂಜಾಬಿನಲ್ಲಿ ಭಟ್ಟ , ದಾದಿ ಮುಂತಾದ ಗಾಯಕರು ಏಕತಾರಿ, ಸಾರಂಗಿ ವಾದ್ಯಗಳೊಂದಿಗೆ ಹಾಡುತ್ತಾರೆ. ಓರಿಸ್ಸಾದಲ್ಲಿ ಯೋಗಿ ಎಂಬವರು ಲಾವಣಿಗಳನ್ನು ಹಾಡುತ್ತಾರೆ. ಬಂಗಾಲದಲ್ಲಿ ಕಥಕ, ವಾಚಕ, ಚಾಲುಬ್, ಕಬಿವಾಲ ಎಂದು ಗುರುತಿಸುತ್ತಾರೆ. ಆಸ್ಸಾಮ್ ನಲ್ಲಿ ಬರಾಗಿ ಎಂಬ ವೃತ್ತಿ ಗಾಯಕರು ಇದ್ದಾರೆ. ಮಹಾರಾಷ್ಟ್ರದಲ್ಲಿ ಗೊಂದಲಿಗರು ಕಂಡು ಬರುತ್ತಾರೆ. ಆಂಧ್ರ ಮತ್ತು ತಮಿಳು ನಾಡುಗಳಲ್ಲಿ, ಕೇರಳದಲ್ಲಿ ಇವರ ಬಗ್ಗೆ ಅಷ್ಟು ಅಧ್ಯಯನ ಇಲ್ಲ. ಕರ್ನಾಟಕ ವೃತ್ತಿಗಾಯಕರ ದೊಡ್ಡ ತೌರು!. ಚೌಡಿಕೆಯವರು, ಹೆಳವರು, ದೇವರಗುಡ್ಡರು, ಗೊರವರು, ನೀಲಗಾರರು, ಗೊಂದಲಿಗರು, ಗಣೆಯವರು, ಲಂಬಾಣಿಗಳು, ಕುರುಬರ ಮೇಳ, ಮಂಟೇಸ್ವಾಮಿ ಮೇಳ, ತಂಬೂರಿಯವರು, ಕಿನ್ನರಿ ಜೋಗಿಗಳು….ಹೀಗೇ ಇನ್ನೂ ಎಷ್ಟೋ ವೃತ್ತಿ ಗಾಯಕರು ಇದ್ದಾರೆ. ಇನ್ನೂ ಅಧ್ಯಯನ ನಡೆಯುತ್ತಿದೆ. ಹೀಗೆ ಜಾನಪದ ಅಪಾರ ಬಗೆಯ ಮೇಳಗಳು, ಗಾಯಕರು, ಅಸಂಖ್ಯಾತ ಕಾವ್ಯಗಳನ್ನು ಒಳಗೊಂಡ ಒಂದು ಸಮೃದ್ಧ ನೆಲೆ..!

( ವಿವಿಧ ಮೂಲಗಳಿಂದ ಆಧಾರಿತ )


ಹಮೀದಾ ಬೇಗಂ ದೇಸಾಯಿ

One thought on “ಭಾರತದ ಜಾನಪದ ಹಾಡುಗಳು ಮತ್ತು ವೃತ್ತಿ ಗಾಯಕರು-ಹಮೀದಾ ಬೇಗಂ ದೇಸಾಯಿ

  1. ಜಾನಪದ ಲೋಕದ ಸ್ಥೂಲ ಪರಿಚಯ ಬಹಳ ಸೊಗಸಾಗಿ ಅರ್ಥಪೂರ್ಣವಾಗಿ ಮೂಡಿಬಂದಿದೆ.

Leave a Reply

Back To Top