ಎ.ಎನ್.ರಮೇಶ್.ಗುಬ್ಬಿ ಒಂದಿಷ್ಟು ಹನಿಗಳು

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

ಒಂದಿಷ್ಟು ಹನಿಗಳು

  1. ಪವಾಡ..!

ವರ್ಷಕೊಮ್ಮೆ ಭೀಮನಮಾವಾಸ್ಯೆಯ
ಗುಂಡಮ್ಮನ ಪತಿಪೂಜೆಯ ಪವಾಡ
ಪತಿ ತಿಕ್ಕುವನು ವರ್ಷವೆಲ್ಲ ಪಾತ್ರೆಪಗಡ
ಗುಂಡಮ್ಮ ಪೂಜಿಸಿದ್ದಕ್ಕೆ ಗಂಡನ ಪಾದ
ವರ್ಷವೆಲ್ಲ ಗಂಡನ ಕೈಅಡಿಗೆಯ ಸ್ವಾದ

  1. ಆಶಯ..!

ಹೆಂಡತಿ ಪೂಜಿಸುವುದಲ್ಲ ಮುಖ್ಯ
ಹಬ್ಬದಂದು ರುಬ್ಬದಿರುವುದೇ ಪುಣ್ಯ
ಕನಿಷ್ಟ ತಿಂಗಳಿಗೊಮ್ಮೆಯಾದರೂ..
ಬರಬಾರದೆ ಭೀಮನ ಅಮಾವಾಸ್ಯ.!

  1. ಹರಕೆ ಕುರಿ..!

ಪಾದನೀಡಿ ತೊಳೆಸಿಕೊಳ್ಳುತ್ತಿದ್ದ
ಅಪ್ಪ ಅಮ್ಮನೆದುರು ಬೀಗುತ್ತಿದ್ದ
ಕಂಡು ಮಕ್ಕಳಂದರು ಮೆಲ್ಲನೆ
“ಪಡು ಪಡು ಈದಿನ ಸಂಭ್ರಮ
ನಾಳಿನಿಂದ ಇದ್ದಿದ್ದೇ ಕರ್ಮ.!”

  1. ನಿದರ್ಶನ.!

ಇಂದು ಗುಂಡಣ್ಣನವರ ಮನೆಯಲ್ಲಿ
ಭೀಮನಮಾವಾಸೆ ಬಲುಜೋರು.!
ಇದಕೆ ಸಾಕ್ಷಾತ್ ಸತ್ಯ ನಿದರ್ಶನ..
ಗುಂಡಣ್ಣನ ಬಕ್ಕತಲೆ ಮೇಲ್ಭಾಗದಲ್ಲಿ
ಎದ್ದಿದೆ ದೊಡ್ಡದೊಂದು ಬೋರು..!!

  1. ವಿಶೇಷ..!

ಇಂದು ನನ್ನವಳು ಚೂರೂ ಕುಟುಕಲಿಲ್ಲ
ತಲೆ ಮೇಲೆ ಒಂದೇಟೂ ಮೊಟಕಲಿಲ್ಲ
ಕಾರಣ ಇಂದು ಭೀಮನ ಅಮಾವಸ್ಯ
ವರ್ಷಕೊಮ್ಮೆ ಗಂಡ ದೇವರಾಗುವ ಭಾಗ್ಯ.!

  1. ಪೂಜಾಫಲ..!

ಗುಂಡಮ್ಮನ ಗಂಡನಪೂಜೆಯ ಕ್ರಮ
ಪತಿಭಕ್ತಿಯ ಸಂಪ್ರದಾಯ ಸಂಭ್ರಮ
ಕಂಡು ಸಂತುಷ್ಟರಾಗಿ ಗುಂಡುರಾಯರು
“ಕೇಳು ಏನು ಬೇಕು ವರ” ಎಂದರು.!

ರಸೀತಿ ಕೈಗಿಡುತ ಗುಂಡಮ್ಮ ನುಡಿದರು
“ನಿನ್ನೆ ಪಕ್ಕದ ಸೇಠು ಅಂಗಡಿಯಿಂದ
ತಂದಿರುವೆ ಒಂದು ಚಿಕ್ಕ ಚಿನ್ನದ ಸರ
ಅದರ ಬೆಲೆ ಕೇವಲ ಐವತ್ತು ಸಾವಿರ
ಹೋಗೀಗಲೇ ಕಟ್ಟಿಬನ್ನಿ ಅದರ ದರ..!”


ಎ.ಎನ್.ರಮೇಶ್.ಗುಬ್ಬಿ

One thought on “ಎ.ಎನ್.ರಮೇಶ್.ಗುಬ್ಬಿ ಒಂದಿಷ್ಟು ಹನಿಗಳು

Leave a Reply

Back To Top