ಇಂದಿರಾ ಮೋಟೆಬೆನ್ನೂರ ಕವಿತೆ-ಹಸಿದೊಡಲು

ಕಾವ್ಯ ಸಂಗಾತಿ

ಹಸಿದೊಡಲು

ಇಂದಿರಾ ಮೋಟೆಬೆನ್ನೂರ.

ಬಿರು ಬಿಸಿಲಿನ ಬೇಗೆ
ಬಾಯಾರಿ ಬಳಲಿ ಬಾಯಿ
ಬಿರಿ ಬಿಟ್ಟಿದೆ ಭುವಿಯೊಡಲು
ಬಾರದ ಮಳೆಗಾಗಿ ತಪಗೈದ
ಹಸಿದ.. ನೆಲದೊಡಲು

ಕಂಬನಿಯ ಕುಡಿದು
ಕುದಿದು ಪಸೆಯಾರಿದೆ
ಬೆಳಕಿಲ್ಲದ ಬಯಲಾಗಿದೆ
ಹನಿ ಪ್ರೀತಿ ತನಿ ಸ್ನೇಹಕಾಗಿ
ಹಸಿದ.. ಕಂಗಳೊಡಲು

ಒಡಲಲಿ ಉರಿವ ಬೆಂಕಿಯ
ಧಗೆ ಹೊಗೆಯ ಬೇನೆಯಲಿ
ನರಳಿದೆ ಹಿಡಿ ಕೂಳಿಗಾಗಿ
ತುತ್ತು ಅನ್ನ ಚೂರು ರೊಟ್ಟಿಗಾಗಿ
ಹಸಿದ..ಉದರದೊಡಲು

ಜಾತಿ ಮತಗಳ ಪಾಚಿ
ಕಂಡು ನಾಚಿ ಕೈ ಚಾಚಿ
ಶಾಂತಿ ಸೌಹಾರ್ದ ಸಹಬಾಳ್ವೆ
ಭಾವೈಕ್ಯತೆ ಅಮೃತ ಧಾರೆಗಾಗಿ
ಹಸಿದ.. ಭಾರತಿಯೊಡಲು

ಅರಳಿ ನಿಂತ ಹೂವಿಗೆ
ಮಕರಂದ ಮೈದುಂಬಿ
ಪಾಡುವ ದುಂಬಿ ಝೇಂಕಾರ
ಓಂಕಾರ ಸಾಕ್ಷಾತ್ಕಾರಕೆ
ಹಸಿದ…ಹೂವಿನೊಡಲು

ಭೋರ್ಗರೆವ ಕಡಲಲಿ
ಉಕ್ಕೇರುವ ತೆರೆಗಳಿಗೆ
ಮತ್ತೇರುವ ಮುತ್ತಿಡುವ
ಚಂದಿರನ ಚಂದ್ರಿಕೆಗೆ
ಹಸಿದ… ಕಡಲಿನೊಡಲು

ನಲಿವ ನರ್ತನಕೆ
ಮುಗಿಲ ಮನೆ ಮಾಡಿನ
ಕಾರ್ಮೋಡ ಸುರಿಸುವ
ಮಳೆ ಮೆಲು ಸ್ಪರ್ಷಕೆ..
ಹಸಿದ ..ಮಯೂರದೊಡಲು

ಬಾಯ್ದೆರೆದು ನಿಂತ
ತೀರದ ದಾರಿ ದಾಹದ
ಸ್ವಾತಿ ಮಳೆ ಸಿಂಚನದ
ಪ್ರೀತಿಯ ಸವಿ ಮುತ್ತಿಗಾಗಿ
ಹಸಿದ ..ಸಿಂಪಿಯೊಡಲು

ಬೀಜದೊಡಲಲಿ ಹುದುಗಿ
ಮೊಗ ಮರೆಸಿಹ ಮೊಳಕೆಗೆ
ಭುವಿಯೊಡಲ ಸೇರಿ
ಚಿಗುರ ಕೊನರಿ ಹಸಿರಿಗಾಗಿ
ಹಸಿದ…ಬೀಜದೊಡಲು

ಜ್ಞಾನದ ಬೆಳಕಿನಲಿ
ಅಕ್ಷರಗಳ ಹೊಳಪಿನಲಿ
ಗುಡಿಸಲ ಮಡಿಲ ಕಂದನಿಗೆ
ಸಾಕ್ಷರತೆಯ ಸೂರ್ಯನಾಗಿ
ಜಗವ ಬೆಳಗುವ
ಹಸಿದ.. ಮನದೊಡಲು

ಹಸಿದೊಡಲ ಜಾತ್ರೆಯಲಿ
ಬಸವಳಿದು ಕುಸಿದು ಬೀಳುವ
ಮುನ್ನ ಕೈ ಹಿಡಿದು ನಡೆಸಿ
ಕರುಣಿಸೆಲ್ಲರ ಹರಸು..
ದೇವ ಪ್ರೀತಿ ಉಣಿಸಿ
ತಣಿಸು ಸ್ನೇಹದಿ ವಸುಧೆಯೊಡಲ…


ಇಂದಿರಾ ಮೋಟೆಬೆನ್ನೂರ.

Leave a Reply

Back To Top