ಪುಸ್ತಕ ಸಂಗಾತಿ
ಪಾರ್ವತಿ ಎಸ್. ಬೂದೂರ ಕೃತಿ
“ನನ್ನೊಳಗಿನ ನಾನು”..ಒಂದು ಅವಲೋಕನ.
ನರಸಿಂಗರಾವ ಹೇಮನೂರ
82 ವೈವಿಧ್ಯಮಯ ಕವನಗಳನ್ನೊಳಗೊಂಡ ಸಂಕಲನ “ನನ್ನೊಳಗಿನ ನಾನು” ಸಗರನಾಡಿನ ಶರಣರ ನಾಡು ನಗನೂರಿನ ಶ್ರೀಮತಿ ಪಾರ್ವತಿ ಬೂದೂರ್ ಅವರ ಚೊಚ್ಚಲ ಕೃತಿ. ಡಿಸೆಂಬರ್ 2021 ರಿಂದ ನನಗಿವರು ಮುಖಪುಟದ ಮೂಲಕ ಪರಿಚಿತರು.
ಮುಖಪುಟದಲ್ಲಿ ಬಂದ ಇವರ ಕವನ, ಗಜಲ್, ವಿಮರ್ಶಾತ್ಮಕ ಬರಹಗಳನ್ನುಆಗಾಗ ಓದಿ ಸಂಭ್ರಮಿಸಿದವರಲ್ಲಿ ನಾನೂ ಒಬ್ಬ.
ಬೂದೂರ ಅವರ ಅದ್ಭುತ ಪ್ರತಿಭೆ ಅವರ ಜೀವನದಲ್ಲಿ ಅನವರತವಾಗಿ ಅನುಭವಿಸಿದ ವೈವಿಧ್ಯಮಯ ಘಟನೆಗಳ ಪ್ರತೀಕವಾಗಿ ಕಾವ್ಯರೂಪದಲ್ಲಿ ಅನಾವರಣ ಗೊಂಡಿದೆ. ಬದುಕಿನಲ್ಲಿ ತಾವು ಕಂಡುಂಡ ಸಿಹಿ ಕಹಿಯ ಅನುಭವಗಳು, ದುಃಖ ದುಮ್ಮಾನಗಳು, ಹತಾಶೆ, ಸಂಕಟ ,ನೋವು, ನಲಿವುಗಳಿಗೆಲ್ಲ ಸ್ಪಂದಿಸಿದ ಕವಿಯತ್ರಿ ಬುದ್ಧಿ ಭಾವಗಳನ್ನು ಮೇಳೈಸಿ ಇಲ್ಲಿಯ ಕವಿತೆಗಳನ್ನು ಹೆಣೆದಿದ್ದಾರೆ. ಹಾಗೆ ನೋಡಿದರೆ ಕವನ ಹುಟ್ಟುವುದಕ್ಕೆ ಇಂಥದೇ ಕಾರಣ ಬೇಕಂತೇನಿಲ್ಲ. ದೈನಂದಿನ ಜೀವನದಲ್ಲಿ ಜರುಗುವ ಅತಿ ಸಾಮಾನ್ಯ ಘಟನೆಗಳು ಕವಿತೆಯ ಹುಟ್ಟಿಗೆ ಕಾರಣವಾಗುವವು. ಇದಕ್ಕೆ ನಿದರ್ಶನ “ನನ್ನೊಳಗಿನ ನಾನು ” ಸಂಕಲನದ ಈ ಕವಿತೆಗಳು. ಕವಿಯ ಪ್ರತಿಭೆಗೆ ಇಂಥ ಸನ್ನಿವೇಶಗಳನೇಕ ಸ್ಫೂರ್ತಿದಾಯಕವಾಗಿ ಕವನಗಳಾಗಿ ಹೊರಹೊಮ್ಮಲು ಪ್ರೇರೇಪಿಸುತ್ತವೆ.
ಹಾಗೆ ಹೊಮ್ಮಿದ ಅದಮ್ಯ ಭಾವನೆಗಳನ್ನು ಹಿಡಿದಿಡದೆ ಕಾವ್ಯರೂಪದಲ್ಲಿ ಹೊರಹಾಕುವಲ್ಲಿಯೇ ಕವಿಯ ಸಾರ್ಥಕತೆಯುಂಟು. ” ಇದು ಹುಟ್ಟದಿದ್ದರೆ ಚಿಂತೆ ಇಲ್ಲ,ಹುಟ್ಟಿ ಸತ್ತರೂ ದುಃಖವಿಲ್ಲ, ಆದರೆ ಒಡಲೊಳಗೆ ಸತ್ತರೆ ನನಗೆ ಬದುಕೇ ಇಲ್ಲ”, ಎಂದು ಈ ಭಾಗದ ಹಿರಿಯ ಕವಿ ಗುರುನಾಥ ರೆಡ್ಡಿ ಕೆರಳ್ಳಿ ಅವರ ಮಾತು ಇಲ್ಲಿ ಅದೆಷ್ಟು ಅರ್ಥಗರ್ಭಿತ!
ಕಲ್ಪನೆಗಳು ಕಣ್ಣು ಬಿಟ್ಟು ಎದೆ ತಟ್ಟಿದಾಗ ಹುಟ್ಟುವ ಅಂತರಂಗ ಸ್ಪಂದನದ ಫಲಶ್ರುತಿಯೇ ಕವಿತೆ. ಆ ಕಾರಣಕ್ಕಾಗಿ ಸುತ್ತಲಿನ ಪರಿಸರದ ಪ್ರಪಂಚಕ್ಕೆ ತೀವ್ರವಾಗಿ ಸ್ಪಂದಿಸಿದ ಬುದೂರ ಅವರ ಕವಿತೆಗಳಲ್ಲೆಲ್ಲ ಜೀವಕಳೆ ತುಂಬಿದೆ. ಇಲ್ಲಿ ಬರುವ… ಮಹಿಳೆ, ಸಂಸ್ಕೃತಿ, ಬಂಗಾರದ ಬಾಲ್ಯ, ಮಾಸದ ಸವಿ, ಮುನ್ನುಡಿ, ಪರದೆ, ಹೆತ್ತೊಡಲು, ಮುಖಪುಟ, ಹಸಿವು, ಗುಳೆ, ತಂಗಳ ಹೋಳಿಗೆ, ಸಿರಿಗನ್ನಡ, ಕನಸು, ಪುರಸ್ಕಾರ, ನನ್ನೊಳಗೆ ನಾನು, ಸರಳತೆ, ಸುಳ್ಳಿನ ಪೇಚಾಟ, ನಿತ್ಯದ ಪಾಲನೆ, ಭಕ್ತಿ ಸಿಂಚನ, ಹಿತ್ತಾಳೆ ಕಿವಿ, ಕಾರ್ಮಿಕರ ಕೂಗು, ಹೃದಯ ಸಂಗಮ, …..ಮುಂತಾದ ಕವನಗಳಲ್ಲಿ ಬದುಕಿನ ವಿವಿಧ ಆಯಾಮಗಳ ಪರಿಪಾಟಗಳನ್ನು ಹೃದಯಂಗಮವಾಗಿ ತೆರೆದಿಟ್ಟಿದ್ದಾರೆ.
ಹೆತ್ತೊಡಲಿನ ಸಂದೇಶ
“ನಿನ್ನೊಳಿರಲಿ ವಿನಯದಭಿಸಾರ, ದೇಶಾಭಿಮಾನದಾಗರ, ನೀನಾಗು ಮಾನವತ್ವದ ಅಕ್ಷಯಸಾಗರ”…
ಹಸಿವಿನ:
“ಕಳಚಲಿ ವಿಕೃತ ಮನಸುಗಳು ಪೊರೆ, ಬೀಳಲಿ ವಿನಾಶದ ಹಸಿವುಗಳಿಗೆ ತೆರೆ, ಹಬ್ಬಿದರೆ ಸದೃಢ ಸಂಸ್ಕೃತಿಯ ಮೊರೆ,ನೀಗುವುದು ಎಲ್ಲಾ ಬಾಗೆ ಹಸಿವಿನ ಕರೆ”
ತಂಗಳ ಹೋಳಿಗೆಯ..
“ಅನ್ನದ ಮುಂದೆ ಇಲ್ಲ ದೇವರು, ಅನ್ನವೇ ಸಕಲ ದೈವ, ಚಿನ್ನಕ್ಕಿಂತ ಮಿಗಿಲು ಅನ್ನ, ಅನ್ನಪ್ಪನ ಮುಂದಿಲ್ಲ ಇನ್ಯಾವಪ್ಪ”
ಅ ಪವಿತ್ರದ…
“ಮುಟ್ಟು ಮೈಲಿಗೆ ಅಪವಿತ್ರವೆಂದರೆ
ಕಟ್ಟಕಡ್ಯಾದಿತು ಹೊಸಹುಟ್ಟು, ಮುಟ್ಟು ಹುಟ್ಟಿಗೆ ಮೂಲ,
ಮುಟ್ಟ ಬೇಡವೆಂದರೆ ತೊತ್ತಂತೆ ಕೋಲ “
ಸರಳತೆಯ…
“ಮಿತವಿಲ್ಲದ ಹಿತವಚನ,ಆಚಾರವಿಲ್ಲದ ನಿರ್ಲಜ್ಜ ಮನ,
ಉದ್ವೆಗದಲಿ ಮಿಂದು, ಭೋಗ ಭಾಗ್ಯದ ತಾ ಮುಂದು “
ಭಕ್ತಿ ಸಿಂಚನದ…..
ದುಡಿಮೆಯೊಂದೆ ದಾರಿದೀಪ, ದುಃಖವಳಿಯೋ ಸಾಧನ,
ದುಡಿ ದುಣ್ಣಲು ಕೆಡುಕಿಲ್ಲವು, ಅದುವೇ ದೇವನ ಬೋಧನಾ…
ಜಂಗಮವಾಣಿಯ :
ಅಜ್ಜ ಅಜ್ಜಿಯ ಹಾಡು ಕಥೆ ಹಳಸಿದ ಅಡುಗೆಗೆ ಸಮ, ಮೊಬೈಲ್ ಮಸಾಲೆಗಳ ಸುರಿವ ಜಿನುಗು ಘಮ ಘಮ…
ಕವನಗಳಲ್ಲಿಯ ಈ ಸಾಲುಗಳು ತುಂಬಾ ಹಿಡಿಸಿದವು.
ಒಟ್ಟಾರೆ ಎಲ್ಲಾ ಕವನಗಳು ಭಾವನಾತ್ಮಕವಾಗಿದ್ದು ಉತ್ತಮ ಸಂದೇಶಗಳನ್ನು ಹೊತ್ತಿವೆ.
ಪ್ರತಿಯೊಂದು ಕವನವನ್ನು ವಿಮರ್ಷಿಸುವಷ್ಟು ನಾನು ಸಮರ್ಥನಲ್ಲ. ಕವಿಯಾಗಿ, ಕವಿ ಹೃದಯದಿಂದ ಈ ಎಲ್ಲಾ ಕವನಗಳನ್ನು ಓದಿರುವೆ, ಗಮನಿಸಿರುವೆ, ಅಂತರಾರ್ಥ ಗಳನ್ನೂ ಅರಿತಿರುವೆ. ಸಹೋದರಿ ಪಾರ್ವತಿಯವರು “ನನ್ನೊಳಗಿನ ನಾನನ್ನು” ತಿಳ್ಕೊಂಡು ರಚಿಸಿದ ಈ ಕವನಗಳು ನಿಜ ಜೀವನದ ನ್ಯೂನತೆ, ರಸಿಕತೆ,ಸಾರ್ಥಕತೆ ಮತ್ತು ಬದುಕಿಗಾಗಿ ಪಡುವ ಬವಣೆಗಳಿಗೆ ಹಿಡಿದ ಕನ್ನಡಿಯಂತಿವೆ.
ಶ್ರೀಮತಿ ಪಾರ್ವತಿ ಬುದೂರ್ ಅವರ ಕಾವ್ಯ ಸೆಲೆ ಬತ್ತದಂತಿರಲಿ, ಅವರಿಂದ ಇನ್ನೂ ಅನೇಕ ಕೃತಿಗಳರಳಿ ಸಾಹಿತ್ಯ ಸರಸಿಗೆ ಸಲ್ಲಲಿ, ಸಗರನಾಡಿನ ಅವರ ಕೀರ್ತಿ ಇನ್ನೂ ಉತ್ತರೋತ್ತರವಾಗಿ ಹೊರಹೊಮ್ಮಲಿ ಎಂದು ಹಾರೈಸುವೆ.
ನರಸಿಂಗರಾವ ಹೇಮನೂರ