ಕಾವ್ಯ ಯಾನ
ಅಮ್ಮನ ಬಿಟ್ಹೋಗೊ ಮುನ್ನ|
ಆದಪ್ಪ ಹೆಂಬಾ ಮಸ್ಕಿ
ಅವಳೆಂದಾದರೂ
ಅತ್ತಿದ್ದಳೇ……
ನೋಡವಳ ಹಾಲ್ಚುಕ್ಕಿ ಕಣ್ಣುಗಳ
ಎಲ್ಲ ಹೇಳುತಿವೆಯಲ್ಲ ?
ತೊಳೆದ ಮಲ್ಲಿಗೆ ಮೊಗ್ಗವಳ ಕೆನ್ನೆ
ಕಣ್ಣ ಬಿಂದುಗಳೆಂದೂ ಇಬ್ಬನಿಯಾಗಿಲ್ಲ ||
ಆ ಬಿಂದುಗಳೇ ಇಂದು
ಹನಿ ಹನಿಸಿ
ಸಾಲಿಗಟ್ಡವೆಯೇಕೋ
ನೆರೆದ ಹೃದಯಗಳು
ಮಣಭಾರ
ತೂಗುತಿವೆಯೇಕೋ…||
ಸುತ್ತಲೂ ಮಬ್ಬುಗತ್ತಲು
ಕುಳಿತಿಹಳು
ಎತ್ತಲೋ ದಿಟ್ಟಿ ನೆಟ್ಡು
ಹೊರಡ ಬೇಕಿದೆ ಇಂದೇ
ಅವನ್ಹಿಂದೆ
ಅಪ್ಪ ಅಮ್ಮನ ಬಿಟ್ಡು ||
ನಡೆ ಭಾರ, ನುಡಿ ಭಾರ
ಮುಡಿ ಭಾರ
ಮುಡಿದ ಮಲ್ಲಿಗೆ ಭಾರ !
ಅಮ್ಮ ಕರೆದಳು
“ಒಂದಷ್ಡು ಉಣ್ಣು ಬಾರಾ
ನಿಮ್ಮವರ ಮನೆ ದೂರ” ||
ಸದ್ದಿಲ್ಲದೇ ಸೂರ್ಯ
ದೂರ ಸರಿಯುತಲಿದ್ದ
ಹೊಸ ಬದುಕಗಳಿಗೆ
ಶುಭ ಕೋರುತಲಿದ್ದ
ಗಂಟಲುಕ್ಕಿತ್ತು…….
ಕಟ್ಟೆಯೊಡೆದಿತ್ತು…..
ದಾರಿ ಸಾಗಿತ್ತು…….
ಕವಿತೆಯ ಕೈ
ಟಾ…ಟಾ…ಹೇಳುತಲೇ ಇತ್ತು ||
ಆ ರಾತ್ರಿ ಉರುಳಿತು
ಕಣ್ಣೀರು ಕರಗಿತು
ಹೊಸ ಬೆಳಗು
ಹೊಸ ಮನೆ
ಹೊಸ ನೀರು ಹೊಸಗಾಳಿ
ಎಲ್ಲವೂ ಹೊಸತು ಬದುಕು
ನಡು ನಡುವೆ
ಅಪ್ಪ ಅಮ್ಮನ ನೆನಪು
ಅವನೋ ಬಿಟ್ಟಿರಲಾರ
ಮುತ್ತಿಡದೇ…..
ಮುಂದಡಿ ಇಡಲಾರ
ನಿತ್ಯದಪ್ಪುಗೆಯಲಿ
ಕರಗಿ ಹೋದಳವನ ಕವಿತೆ ||
ಅಂದೊಂದು ರಾತ್ತಿ ಅವನಂದ,
“ತಿಂಗಳಾಯಿತು ನೀ
ನಮ್ಮನೆಗೆ ಬಂದು, ನೆನೆಯುತಿಹುದೇ ಮನ
ತವರು ಮನೆ ಎಂದು ?
ಬಯಸಿಯಾದರೆ ನೀ
ಹೋಗುವ ನಿನ್ ತೌರು ಮನಗೆ
ಬರಬಹುದು ಹೊರನಾಡ
ಸುತ್ತಿ ಮನೆಗೆ”
“ಬರುವುದಲ್ಲವೇ ಹಬ್ಬ
ತಿಂಗಳನು ಸರಿದೊಡನೆ ?
ಅಪ್ಪ ಬರುವಾ ತನಕ
ನಾನಿರುವೆ ನಿಮ್ಮೊಡನೆ
ನಾಲ್ಕು ದಿನ
ಅಮ್ಮನಲಿ ಹೋಗಿಬರುವೆ
ಬಲು ಬೇಗ
ನಿಮ್ಮೊಡಲ ಸೇರಿ ಬಿಡುವೆ”
ಎಂದೆನುತ
ಅವನೆದೆಯ ಸೇರಿದಳು ಕವಿತೆ
ಆದಪ್ಪ ಹೆಂಬಾ ಮಸ್ಕಿ