ಕಾವ್ಯ ಸಂಗಾತಿ
ಮಮತಾ ಶಂಕರ್
ನಾನುಪುರುಸೊತ್ತಾಗಿದ್ದೇನೆ
ಬೆಳಗಿನ ಕಸ ನೆಲ ಪಾತ್ರೆ ತಿಂಡಿ
ಸ್ನಾನ ಪೂಜೆ ಎಲ್ಲಾ ಮುಗಿದು
ಆಫೀಸಿಗೆ ಹೊರಡುವ ಮುಂಚೆ
ತಾನೇ ಮಾಡಿಕೊಂಡ ಪುಟ್ಟ
ಕೈತೋಟಕ್ಕೆ ನೀರುಣಿಸಿ
ಹೋಗುವಷ್ಟು ನಾನು
ಪುರುಸೊತ್ತಾಗಿದ್ದೇನೆ
ಮನೆಯ ಒಬ್ಬೊಬ್ಬರು ತಮ್ಮ
ಬುತ್ತಿ ಬ್ಯಾಗು ತೆಗೆದುಕೊಂಡು
ಮೊಬೈಲ್ ನೋಡುತ್ತಲೇ
ಬಾಯ್ ಹೇಳಿ ಹೋದಮೇಲೆ
ಸುಕ್ಕು ಬಿದ್ದ ಹಾಸಿಗೆ ದಿಂಬುಗಳ
ಸರಿಪಡಿಸಿ ಮೈ ಒರೆಸಿ ಎಸೆದು ಹೋದ
ಟವೆಲ್ಲುಗಳ ಒಣ ಹಾಕಿ
ಸಿಂಕಲ್ಲಿರುವ ಪಾತ್ರೆಗಳ ನೆನೆಸಿಟ್ಟು
ಅಡಿಗೆ ಕಟ್ಟೆ ಒರಸಿ
ಲಿಪ್ಸ್ಟಿಕ್ ಕಾಡಿಗೆ ಮರೆಯದೆ ಹಚ್ಚಿ
ಇಸ್ತ್ರಿ ಮಾಡಿದ ಕುರ್ತಾ ಧರಿಸಿ
ಕಚೇರಿಗೆ ಹೋಗುವಷ್ಟು ನಾನು
ಪುರುಸೊತ್ತಾಗಿದ್ದೇನೆ…
ಹಾಲಿನವನ ಲೆಕ್ಕ ಸರಿ ಇಟ್ಟು
ಹೆಚ್ಚಿಗೆ ಕೊಂಡ ಪತ್ರಿಕೆ
ವಿಶೇಷಾಂಕಗಳ ಹಣ
ಜೋಡಿಸಿಟ್ಟು
ಬ್ಯಾಂಕಿನ ಕೆಲಸ, ಪೇರೆಂಟ್ ಮೀಟಿಂಗ್ ಮುಗಿಸಿ
ರೇಶನ್ನು ತರಕಾರಿಯ ಕೊಂಡು ತರುವಷ್ಟು
ನಾನು ಪುರುಸೊತ್ತಾಗಿದ್ದೇನೆ..
ವಾರದ ರಜೆಯ ದಿನಗಳಲ್ಲಿ
ವೀಕೆಂಡ್ ವಿತ್ ಫ್ಯಾಮಿಲಿ,
ಸಿನಿಮಾ, ಔಟಿಂಗ್ ಬಯಸದ
ಈ ಪುರುಸೊತ್ತಿಗೆ ಈಗ ತೀರಾ ಫ್ರೀ
ಇದ್ದ ಬದ್ದ ವಸ್ತುಗಳೆಲ್ಲ ಧೂಳು
ಕೊಡವಿಕೊಂಡು
ಲಕಲಕ ಎಂದು ಹೊಳೆಯಿಸಿ
ವಾಷಿಂಗ್ ಮಷೀನ್ ಮೇಲೆ
ಗುಡ್ಡವಾದ ಬಟ್ಟೆಗಳ
ಯಂತ್ರಕ್ಕೆ ತುರುಕಿ ತಿರುಗಿಸಿ
ಕೂದಲು ಮುಖಕ್ಕಿಷ್ಟು
ಬ್ಯೂಟಿ ಪ್ಯಾಕ್
ಮಾಡಿಕೊಳ್ಳುವಷ್ಟು
ನಾನು ಪುರುಸೊತ್ತಾಗಿದ್ದೇನೆ…
ಆಗಾಗ ಬಿಡದೆ ಕಾಡುವ ಮಂಡಿ,
ಬೆನ್ನು,ಕಾಲು ನೋವು
ಅಲ್ಲಾಡದ ಸೊಂಟಗಳಿಗೆ
ಪೇನ್ ಕಿಲ್ಲರ್ ಸ್ಪ್ರೇ ಮಾಡಿ
ನೀವಿಕೊಂಡು
ಕಾಲು ಮುರಿದು
ಕೂರುವಂಥಾಗಬಾರದೆಂದು
ತಪ್ಪದೇ ವ್ಯಾಯಾಮ ವಾಕಿಂಗ್ಗೆ
ಹೋಗುವಷ್ಟು
ನಾನು ಪುರುಸೊತ್ತಾಗಿದ್ದೇನೆ…
ಪಾಪ ಪುರುಸೊತ್ತಿಲ್ಲದ ಇವನು
ಮೊಬೈಲ್ ಸವರುವುದು ಬಿಟ್ಟು
ನನ್ನ ಕೆಲಸಕ್ಕೆ ಕೈಜೋಡಿಸಿ
ಹೆಚ್ಚಿಟ್ಟ ತರಕಾರಿಗಳಿಗೆ ಒಗ್ಗರಣೆ
ಹಾಕಿದರೆ
ಲಟ್ಟಿಸಿದ ಚಪಾತಿಗಳ
ಬೇಯಿಸಿಬಿಟ್ಟರೆ
ಒಂದಷ್ಟು ಹಾಯೆನಿಸುವ ಚಹ
ಕಾಫಿಗಳ ಒದಗಿಸಿ ಬಿಟ್ಟರೆ
ನಾನು ಓಹೋ…. ಈ ಲೋಕದ
ಪರಮ ಪುಣ್ಯವಂತೆ ….
ಎಲ್ಲಾ ಮಾಡಿಕೊಡುವ ಗಂಡ
ಸಿಕ್ಕಿದ್ದಾನೆ ಎಂದು ಕರುಬುವ,
ಮಾಡಿದ ಎರಡು ಕೆಲಸಗಳಿಗೆ
ಅನಾಮತ್ತಾಗಿ ಮೇಲೆ ಕೂರಿಸುವ
ಗೆಳೆಯರ ಬಳಗ ಕಂಡು
ನಕ್ಕು ಬಿಡುವಷ್ಟು
ನಾನು ಪುರುಸೊತ್ತಾಗಿದ್ದೇನೆ….
ಪುರುಸೊತ್ತಿನಲ್ಲಿ
ಫೋನಾಯಿಸಿದ ಗೆಳತಿ
ಮತ್ತೆಂತ ಹೊಸದು ಬರೆದೆ?
ಸಂಗೀತ ಎಲ್ಲಿಗೆ ಬಂತು?
ನಾಟಕ ನೋಡಲು ಹೋಗುವಾ?
ಹೋಗಲಿ ಪುಟ್ಟ ಪಿಕ್ನಿಕ್?
ಎಂದು ಕೇಳಿದಾಗ ಓಹೋ
ಮರೆತೇ ಹೋಗಿದೆ ಕಣೆ
ಬರೆಯಬೇಕು….
ಹಾಡಬೇಕು….
ಹೌದು ನಾಟಕ ನೋಡಬೇಕು…
ಪಿಕ್ನಿಕ್ ಗೆ ಬರಬೇಕು…
ಬರುವೆ….
ಈಗ ಪುರುಸೊತ್ತಿಲ್ಲ ಕಣೆ
ನೋಡು
ಎಂದು ಮಳ್ಳ ನಗೆ ನಕ್ಕು
ಫೋನ್ ಇಡುತ್ತೇನೆ….
ಮಮತಾ ಶಂಕರ್
ಚಂದದ ಕವಿತೆ
ಧನ್ಯವಾದಗಳು
Very nice.. every woman’s feelings expressed in nice words..
ಥ್ಯಾಂಕ್ಯೂ
ಇಂದಿನ ಮಹಿಳೆಯ ವಾಸ್ತವ ಪರಿಸ್ಥಿತಿ ಬಿಂಬಿಸುವ ಕವನ ಚೆನ್ನಾಗಿ ಮೂಡಿ ಬಂದಿದೆ.
ಹಮೀದಾ ಬೇಗಂ. ಸಂಕೇಶ್ವರ.
ಧನ್ಯವಾದಗಳು ಮೇಡಂ
ಸಖತ್.
ಥ್ಯಾಂಕ್ಯೂ ಡಿಯರ್
ಕವಿತೆ ಪ್ರಸ್ತುತ ಕಾಲದಲಿ ಮಹಿಳೆಯ ಪಾಡನ್ನು
ವ್ಗವಾಡಿದೆ
ಚೆಂದಾದ ಕವಿತೆ
ಯಮುನಾ.
ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿಯ ಸ್ಪಂದನೆಗೆ