ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆಗುರು ಮತ್ತು ಗುರಿ

ಲೇಖನ ಸಂಗಾತಿ

ಗುರು ಮತ್ತು ಗುರಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆ


ಜೀವನದಲ್ಲಿ ನಮಗೆ ಮಾರ್ಗದರ್ಶನ ಮಾಡುವವರೆಲ್ಲರೂ ಗುರುಗಳು. ಅದರಲ್ಲೇ ಆಧ್ಯಾತ್ಮದಲ್ಲಿ ಮಾರ್ಗದರ್ಶನ ಮಾಡುವವರು ಸದ್ಗುರುಗಳೆನಿಸುತ್ತಾರೆ. ಜೀವನದ ಸಾರ್ಥಕ್ಯ ಆಧ್ಯಾತ್ಮದಲ್ಲಿದೆ. ಒಂದು ಒಳ್ಳೆಯ ಉದ್ದೇಶ, ಧ್ಯೇಯ, ಗುರಿ ಇದ್ದಾಗ ನಿಸರ್ಗದಲ್ಲಿಯ ಪಂಚತತ್ತ್ವಗಳು ಅಂದರೆ ವೈಶ್ವಿಕ ಶಕ್ತಿ ತಾನಾಗಿಯೇ ಕಾರ್ಯರತವಾಗಿ ಎಲ್ಲವೂ ಸಾಧ್ಯವಾಗುವಂತೆ ಮಾಡುತ್ತದೆ. ಗುರಿಯನ್ನು ಸಾಧ್ಯವಾಗಿಸುವ ಏಕಾಗ್ರತೆ, ದೃಢನಿಶ್ಚಯ ನಮ್ಮಲ್ಲಿದ್ದಾಗ, ಗುರುವು ತಾನಾಗಿಯೇ ಶಿಷ್ಯನನ್ನು ಅರಸಿ ಬರುತ್ತಾನೆ. ಗುರು ಹಿಂದೆಯಿದ್ದರೆ ಶಿಷ್ಯ ಗುರಿಯನ್ನು ತಲುಪುತ್ತಾನೆ. ಗುರುವಿನ ಬಳಿಗೆ ಹೋಗುವಾಗ ಮನುಷ್ಯನಲ್ಲಿ ಈ ಮೂರು ಆಗ್ರಹಗಳು ಇರಬಾರದು. 1) ಪೂರ್ವಾಗ್ರಹ 2) ದುರಾಗ್ರಹ 3) ಪರಿಗ್ರಹ. ನಮ್ಮಲ್ಲಿರುವ ಈ ಮೂರು ಆಗ್ರಹಗಳನ್ನು ತೊರೆದರೆ ಮಾತ್ರ ಗುರುವಿನ ಅನುಗ್ರಹವಾಗುತ್ತದೆ.
1) ಪೂರ್ವಾಗ್ರಹ :- ಗುರುವಿನ ಬಳಿಗೆ ದೂಷಿತ ಮನದಿಂದ ಹೋಗಬಾರದು. ನಿಷ್ಕಲ್ಮಶ ನಿರ್ಮಲ ಮನದಿಂದ ಹೋಗಬೇಕು.
2) ದುರಾಗ್ರಹ :- ನಮ್ಮಲ್ಲಿರುವ ಅಹಂಕಾರವನ್ನು ತೊರೆದು, ಶರಣಾಗತಿ ಭಾವದಿಂದ ಗುರುವಿನ ಬಳಿಗೆ ಹೊಗಬೇಕು.
3) ಪರಿಗ್ರಹ :- ಶಂಕೆ, ಕೆಟ್ಟವಿಚಾರ ಮುಂತಾದ ಸಂಚಯಗಳನ್ನು ತ್ಯಾಗ ಮಾಡಿ, ಗುರುವಿನ ಬಳಿ ಹೋಗಬೇಕು.
ಆಚಾರ್ಯರು “ಕರತಲ ಭಿಕ್ಷಾ ತರುತಲ ವಾಸಃ” ಎಂದಿದ್ದಾರೆ. ಶರೀರಕ್ಕೆ ಎಷ್ಟು ಬೇಕೋ ಅಷ್ಟೇ ಅವಶ್ಯವಿರುತ್ತದೆ. ಮನಸ್ಸಿಗೂ ಹಾಗೆಯೇ ಅಷ್ಟೇ ಅವಶ್ಯವಿದೆ. ಮಿಕ್ಕಿದುದನ್ನು ನಿರ್ಮೂಲನೆ ಮಾಡಿ ಗುರುವಿನ ಸಾನಿಧ್ಯ ಬಯಸಬೇಕು. ಪೂರ್ವಾಗ್ರಹ, ದುರಾಗ್ರಹ, ಪರಿಗ್ರಹ ಇವನ್ನೆಲ್ಲ ಬಿಟ್ಟಾಗಲೇ ಖಂಡಿತ ಗುರುವಿನ ಅನುಗ್ರಹವಾಗುತ್ತದೆ. ಗಂತವ್ಯವನ್ನು ತಲುಪುತ್ತೇವೆ. ಒಮ್ಮೆ ಅನುಗ್ರಹವಾಯಿತೆಂದರೆ ಯೋಗ್ಯ ಸಮಯ ಬಂದಾಗ, ಗುರುಗಳು ಶಿಷ್ಯನಿಗೆ ದೀಕ್ಷೆ ಕೊಡುತ್ತಾರೆ. ‘ದೀ’ ಅಂದರೆ ಕೊಡುವದು, ‘ಕ್ಷಾ’ ಅಂದರೆ ಕ್ಷಾಲನ. ಹೀಗೆ ಗುರುಗಳು ಮಂತ್ರದೀಕ್ಷೆ, ದೃಷ್ಟಿದೀಕ್ಷೆ ಹಾಗೂ ಸ್ಪರ್ಶದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳಿಂದ  ಮಾನವನ ಅಥವಾ ಶಿಷ್ಯರ ಮನದ ಮಲೀನತೆಯನ್ನು ನಾಶ ಮಾಡುತ್ತಾರೆ.


ಗುರುಗಳಲ್ಲಿ ನಾಲ್ಕು ಪ್ರಕಾರಗಳಿವೆ.

1) ಪ್ರೇರಕ ಗುರು 2) ಸೂಚಕ ಗುರು 3) ಬೋಧಕ ಗುರು 4) ದರ್ಶಕ ಗುರು.
1) ಪ್ರೇರಕ ಗುರು :- ಕೇವಲ ಪ್ರೇರಣೆ ನೀಡುತ್ತಾರೆ. ತಸ್ಮಾತ್ ಜಾಗೃತ ಜಾಗೃತ ಎಂದು ಹೇಳುತ್ತಾರೆ.
2) ಸೂಚಕ ಗುರು :- ಶರೀರದ ಬಗ್ಗೆ ಅನಾಸಕ್ತಿ, ಹಾಗೂ ಶರೀರದ ಗತಿಯ ಬಗ್ಗೆ ತಿಳಿಸುತ್ತಾರೆ.
3) ಬೋಧಕ ಗುರು :- ಒಬ್ಬ ಶಿಷ್ಯನಿಗೆ ಗುರುವು ಬಿಸಿಲಲ್ಲಿ ನಿಲ್ಲಿಸಿ, ನಿನ್ನ ನೆರಳಿನ ಮೇಲೆ ಕೈಯಿಡು ಎಂದಾಗ ಸಾಧ್ಯವಾಗುವದಿಲ್ಲ; ಕೊನೆಗೆ ನಿನ್ನ ತಲೆಯ ಮೇಲೆ ನೀನೇ ಕೈಯಿಟ್ಟುಕೊ ಎಂದಾಗ ಸಾಧ್ಯವಾಗುತ್ತದೆ. ಹೀಗೆ ಬೋಧಕ ಗುರು ಪ್ರತ್ಯಕ್ಷ ಬೋಧಿಸುತ್ತಾರೆ.
4) ದರ್ಶಕ ಗುರು :- ಇವರು ಅಧ್ಯಾತ್ಮ ವಿದ್ಯೆ ಮಾರ್ಗದಲ್ಲಿ ಬರುವ ಅಡಚಣಿ ಹಾಗೂ ಸಂಕಟಗಳ ಬಗ್ಗೆ ತಿಳಿಸುತ್ತಾರೆ.


ನಮ್ಮ ಚಿತ್ತಶುದ್ಧಿಯನ್ನು ಸತ್ಸಂಗ, ಸದ್ವಿಚಾರ, ಸದುಪದೇಶ, ಉಪಾಸನೆ, ಆರಾಧನೆ, ಸದ್ಗುರು ಕೃಪೆಯಿಂದ ಮಾಡಿಕೊಳ್ಳುವುದಾಗಿದೆ. ಇದನ್ನು ನಿಷ್ಠೆ ಶ್ರದ್ಧೆಯಿಂದ ಮಾಡಬೇಕು. ಬೆನ್ನಹಿಂದೆ ಸದ್ಗುರುಯಿರುವಾಗ ನಿರ್ಭಯನಾಗಿ ಗುರಿ ಮುಟ್ಟುವುದಾಗಿದೆ.
ಗುರುದೇವ ಎಂದಾಗ ದತ್ತಾತ್ರೇಯರೇ ಕಣ್ಮುಂದೆ ಬರುತ್ತಾರೆ. ಗುರುದೇವದತ್ತ, ಅವಧೂತಚಿಂತನ ಗುರುದೇವದತ್ತ ಎನ್ನುತ್ತಾರೆ. ‘ಅವ’ ಎಂದರೆ ಕೆಳಗೆ, ‘ಧೂತ’ ಎಂದರೆ ಮನಸ್ಸಿನ ಮಲೀನತೆಯನ್ನು ತೊಳೆಯುವವ, ಹಾಗೂ ಗುರುವಿನ ಬಗ್ಗೆ ಚಿಂತನ ಮಾಡುವವ ಎಂದು ಅರ್ಥ. ಗುರುಶಿಷ್ಯರ ಸಂಬಂಧದ ಬಗ್ಗೆ ಹೇಳಬೇಕೆಂದರೆ, ಶರಣಾಗತಿ ಹಾಗೂ ಸಮರ್ಪಣಭಾವಗಳ ಬಗ್ಗೆ ಮೂರು ಪ್ರಕಾರವಾಗಿ ಹೇಳಿದ್ದಾರೆ.


1) ಮಾರ್ಜಾಲ ಕಿಶೋರನ್ಯಾಯ 2) ಮತ್ಸ್ಯ ಕಿಶೋರನ್ಯಾಯ 3) ಮರ್ಕಟ ಕಿಶೋರನ್ಯಾಯ


1) ಮಾರ್ಜಾಲ ಕಿಶೋರನ್ಯಾಯ :- ಇಲ್ಲಿ ತಾಯಿ ಬೆಕ್ಕು ತನ್ನ ಮರಿಗಳನ್ನು ಸುರಕ್ಷಿತವಾಗಿಡಲು, ಅವುಗಳಿಗೆ ನೋವಾಗದಂತೆ ತನ್ನ ಹಲ್ಲುಗಳಿಂದ ಅವುಗಳ ಮೇಲ್ಭಾಗದ ಕುತ್ತಿಗೆಯನ್ನು ಬಾಯಿಂದ ಕಚ್ಚಿ ಹಿಡಿದು, ಬೇರೆ ಸ್ಥಳದಲ್ಲಿ ಹೊತ್ತೊಯ್ದು ಇಡುತ್ತದೆ. ಇಲ್ಲಿ ತಾಯಿಯ ಜವಾಬ್ದಾರಿ ಹೇಗಿದೆಯೋ ಹಾಗೆ, ಭಕ್ತಿಯೋಗದಲ್ಲಿ ಸದ್ಗುರುವಿನ ಜವಾಬ್ದಾರಿಯಿದೆ.
2) ಮತ್ಸ್ಯ ಕಿಶೋರನ್ಯಾಯ :- ಮೀನು ಆಹಾರ ಸಂಪಾದನೆಗೆ ತನ್ನ ಮರಿಯನ್ನು ಸಾಗರದಲ್ಲಿ ಬಿಟ್ಟು ದೂರ ಹೋಗಿರುತ್ತದೆ. ಮರಿಮೀನು ತಾಯಿಯ ಸ್ಮರಣೆ ಮಾಡಿದ ಮಾತ್ರಕ್ಕೆ, ತಾಯಿಮೀನು ಎಲ್ಲಿದ್ದಲ್ಲಿಂದ ಧಾವಿಸಿ ಬರುತ್ತದೆ. ಇಲ್ಲಿ ಶಿಷ್ಯನ ಜವಾಬ್ದಾರಿ ಇದೆ. ಆರ್ತನಾಗಿ ಉತ್ಕಟೇಚ್ಛೆಯಿಂದ ಸ್ಮರಿಸಿದಾಗ ಗುರು ಧಾವಿಸಿ ಬರುತ್ತಾನೆ.
3) ಮರ್ಕಟ ಕಿಶೋರನ್ಯಾಯ :- ತಾಯಿ ಮಂಗ ಗಿಡದಿಂದ ಗಿಡಕ್ಕೆ ಜಿಗಿಯುವಾಗ, ಅದರ ಮರಿ ತಾಯಿಯನ್ನು ಗಟ್ಟಿಯಾಗಿ ಅಪ್ಪಿಕೊಂಡಿರುತ್ತದೆ. ತಾಯಿ ಎಷ್ಟೇ ಎತ್ತರಕ್ಕೆ ಹಾರಿದರೂ, ಗಿಡದಿಂದ ಗಿಡಕ್ಕೆ ಜಿಗಿದರೂ, ಒಂದು ಸೆಕಂದು ಕೂಡ ಕೈ ಬಿಡುವದಿಲ್ಲ. ತಾಯಿಗೂ ಕೂಡ ಅಷ್ಟೇ ಭರವಸೆ ಮತ್ತು ಕಾಳಜಿ ಇರುತ್ತದೆ. ಜ್ಞಾನಯೋಗದಲ್ಲಿ ಗುರು-ಶಿಷ್ಯರ ಜವಾಬ್ದಾರಿಯೂ ಹೀಗೆಯೇ ಇದೆ.


“ಹರ ಮುನಿದರೂ ಗುರು ಕಾಯ್ವನು”
“ಶಿವಪಥವನರಿವೊಡೆ ಗುರುಪಥವೇ ಮೊದಲು”
“ಗುರುವಿನ ಗುಲಾಮನಾಗುವ ತನಕ
ದೊರೆಯದೆನಗೆ ಮುಕುತಿ”
“ಶ್ರೀಗುರುಪದೇಶವನಾಲಿಸಿದಾಗಳೇ ಮುಕುತಿ”


ಎಂದು ಎಲ್ಲ ಸಂತರು, ಶರಣರು, ದಾಸರು, ಅನುಭವಿಗಳು ಹೇಳಿದ್ದಾರೆ.
ಗುರಿ ಮುಟ್ಟಿಸುವ ಗುರುವನ್ನು ಪಡೆದವರೇ ಧನ್ಯರು…

—————————-

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ  ಪುಣೆ

Leave a Reply

Back To Top