ಕನ್ನಡ ಕುಲತಿಲಕ ಕಂಬಿ ಬಸವಾರ್ಯರು ಮೀನಾಕ್ಷಿ ಸುರೇಶ್ ಭಾಂಗಿ(ಸೂಡಿ.)

ವಿಶೇಷ ಲೇಖನ

ಕನ್ನಡ ಕುಲತಿಲಕ ಕಂಬಿ ಬಸವಾರ್ಯರು

ಮೀನಾಕ್ಷಿ ಸುರೇಶ್ ಭಾಂಗಿ(ಸೂಡಿ.)

 ಬೆಳಗಾವಿ ನಾಡು ಸಾಹಿತ್ಯ ಸಂಸ್ಕೃತಿ ಕಲೆಗಳ ತವರೂರು. ಇಂತಹ ಅನನ್ಯ ನಾಡಿನಲ್ಲಿ ಕನ್ನಡ ನಾಡು ನುಡಿಗೆ ಹಲವಾರು ಸಾಹಿತಿಗಳು ಅನುಪಮ ಸೇವೆ ಸಲ್ಲಿಸಿದ್ದಾರೆ. ಅಂತಹ ಮಹೋನ್ನತ ವ್ಯಕ್ತಿಗಳಲ್ಲಿ ಶ್ರೀಯುತ ಕಂಬಿ ಬಸವಾರ್ಯರು ಒಬ್ಬರು.
ಖ್ಯಾತ ಲೇಖಕರಾದ ಶ್ರೀ ಶಿರಿಷ್ ಜೋಶಿಯವರು ಬರೆದು,ರಾಜಗುರು ಸಂಸ್ಥಾನ ಕಲ್ಮಠ,ಶರಣ ಸಾಹಿತ್ಯ ಅಕಾಡೆಮಿ ಕಿತ್ತೂರು ಇವರ ಪ್ರಕಾಶದಲ್ಲಿ ಮುದ್ರಣಗೊಂಡ ಕಂಬಿ ಬಸವಾರ್ಯರ ಬದುಕು ಮತ್ತು ಬರಹ ಎಂಬ ಗ್ರಂಥದಿಂದ ಆಯ್ದ ಕೆಲವು ಪ್ರಮುಖ ಅಂಶಗಳ ಮೂಲಕ ಸಕ್ಕರೆಯ ನಾಡಿನಲ್ಲಿ ಅಕ್ಕರೆಯಿಂದ ಕನ್ನಡ ಕಟ್ಟಿದ ಮಹನೀಯರ ಕಿರುಪರಿಚಯವನ್ನು ಓದುಗರಿಗೆ ನೀಡುತ್ತಿರುವುದು ನನಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ.


     

ಪ್ರಾರಂಭಿಕ ಜೀವನ…


ಕೆ. ಬಸವಾರ್ಯ ಎಂಬ ಅಂಕಿತದಿಂದ ಕಾವ್ಯ ಕೃಷಿ ಮಾಡಿದ ಇವರು ಕಿತ್ತೂರ ಪರಿಸರದ ಸದ್ಯ ಖಾನಾಪುರ ತಾಲ್ಲೂಕಿಗೆ ಸೇರಿದ ಪಾರೀಶ್ವಾಡ ದವರು.
ತಂದೆ ಚನ್ನಬಸವಯ್ಯ ತಾಯಿ ಶಿವಗಂಗವ್ವ.ಇವರ ಪುಣ್ಯ ಉದರದಲ್ಲಿ ಕ್ರಿ ಶ 1876 ರಲ್ಲಿ ಜನಿಸಿದರು.
ಕಡು ಬಡತನದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿ ಮುಂದೆ ಗುರುಗಳ ಹಾಗೂ ಸಹಪಾಠಿಗಳ ಸಹಾಯದಿಂದ ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು ಕಿತ್ತೂರ ನಂ 1 ಶಾಲೆಯಲ್ಲಿ 11 ರೂ ವೇತನದ ಮೇಲೆ ಶಿಕ್ಷಕರಾಗಿ ನೇಮಕಗೊಂಡರು.ಇವರ ತಂದೆ ನಿಧನರಾದ ಮೇಲೆ ಮನೆಯ ಜವಾಬ್ದಾರಿ ಇವರದಾಯಿತು.ಆದ್ದರಿಂದ ಶಿಕ್ಷಣ ಮುಂದುವರೆಸಬೇಕೆಂಬ ಇವರ ಆಸೆ ಕೈಗೂಡಲಿಲ್ಲ.

    ವೈವಾಹಿಕ ಜೀವನ…

 ಬಸವಾರ್ಯರದು ಸುಸಂಸ್ಕೃತ ಕುಟುಂಬ.ಇವರು 1892 ರಲ್ಲಿ ಸ್ವಗ್ರಾಮದವರೆ ಅದ ಬಸವಮ್ಮ ಎಂಬುವರನ್ನು ವಿವಾಹವಾಗಿ 2 ಗಂಡು ಮಕ್ಕಳ ತುಂಬು ಜೀವನ ನಡೆಸಿದ ಸುದೈವಿ.
ಪತ್ನಿಯೂ ಕೂಡ ಸಾಹಿತ್ಯಾಭಿಮಾನಿಯಾಗಿದ್ದರು.
ಅತ್ಯಂತ ಬಡತನದಲ್ಲಿ ಜೀವನ ಕಳೆದರೂ ಅವರು ತಮ್ಮ ಸ್ವಾಭಿಮಾನವನ್ನು ಬಿಡಲಿಲ್ಲ.ಇಂತಹ ಕಷ್ಟದ ಸಮಯದಲ್ಲಿ ಅವರಿಗೆ ಅಸರೆಯಾದವರು ರಾವ್ ಬಹಾದ್ದೂರ ಅರಟಾಳ್ ರುದ್ರಗೌಡರು.
ಬಸವಾರ್ಯರು ಇವರನ್ನು
ಸಾಕ್ಷಾತ್ ಶಿವನಿಗೆ ಹೋಲಿಸಿ ಅನೇಕ ಕವನಗಳನ್ನು ರಚಿಸಿದ್ದಾರೆ.ಒಟ್ಟಾರೆ 27 ಕವಿತೆಗಳು ಲಭ್ಯವಿದೆ.


    ಶಿಕ್ಷಕರಾಗಿ…


ಪವಿತ್ರವಾದ ಶಿಕ್ಷಣ ರಂಗವನ್ನು ಇವರು ತಮ್ಮಕಾರ್ಯಕ್ಷೇತ್ರವಾಗಿ ಆರಿಸಿಕೊಂಡು ಅದರಲ್ಲಿ ತನ್ಮಯರಾದರು.ಅವರಲ್ಲಿ ಹುದುಗಿದ್ದ ಕಾವ್ಯ ಶಕ್ತಿಯ ಕಂಪು ಅವರ ಶಿಷ್ಯ ವೃಂದದ ಮೇಲೂ, ನಾಡಜನತೆಯ ಮೇಲೂ ಪ್ರಭಾವ ಬೀರಿತು.ಇವರು ಕೇವಲ ಶಿಕ್ಷಕರಾಗದೆ ತಮ್ಮ ಕೈಲಾದ ಸಮಾಜಸೇವೆಯನ್ನು ಕೈಗೊಂಡರು.
ಇವರ ಸಾಹಿತ್ಯ ಕೃಷಿ ಅಮೋಘ ಹಾಗೂ ಅನನ್ಯ.ಇವರು ತಮ್ಮ ಸಾಹಿತ್ಯದಲ್ಲಿ ಸ್ತ್ರೀ ಶಿಕ್ಷಣ,ಬಾಲ್ಯ ವಿವಾಹ ಹಾಗೂ ವಿಷಮ ವಿವಾಹದ ದುಷ್ಪರಿಣಾಮ,ಮದ್ಯಪಾನ ನಿಷೇಧ, ದುಂದುಗಾರಿಕೆಗೆ ಕಡಿವಾಣ,ಜಂಗಮರ ಕಪಟತನ ಈ ಎಲ್ಲ ಅನಿಷ್ಟಗಳು ಸಮಾಜಕ್ಕೆ ಮಾರಕ ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು.ಬಸವಾರ್ಯಾರ ಅನೇಕ ಬಿಡಿ ಕವಿತೆಗಳು ಆಗಿನ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದವು.ಆದರೆ ಅವನ್ನೆಲ್ಲ ಗ್ರಂಥ ರೂಪದಲ್ಲಿ ತರಲು ಅವರಿಗೆ ಆಗಲಿಲ್ಲ.
ತಾವು ಕಂಡ ಸನ್ನಿವೇಶ, ಸಂದರ್ಭಗಳನ್ನು ತಮ್ಮ ಕಾವ್ಯ ವಸ್ತುವಾಗಿಸುವ ಜಾಣ್ಮೆ ಇವರಿಗಿತ್ತು.ಇವರು ರುದ್ರಗೌಡರ ಸಂಪರ್ಕಕ್ಕೆ ಬಂದ ಮೇಲೆ ಅವರ ಧೀಮಂತ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಅವರ ಮೇಲೆ ಕವನ ರಚಿಸಿದ್ದಾರಲ್ಲದೇ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ.
ಇಲ್ಲಿ ಲೇಖಕರು ಉಲ್ಲೇಖಿಸಿದಂತೆ ಇವರು ರಚಿಸಿದ ಕೆಲವು ಗ್ರಂಥಗಳು ಹೀಗಿವೆ.
1 ಚಂದ್ರಿಕಾ ವಿಜಯ (ನಾಟಕ)
2 ಶಿರಸಂಗಿ ಲಿಂಗರಾಜ ಸ್ತವನ
3 ಬಡವನ ಬಯಕೆ ಅರ್ಥಾತ್ ನನ್ನ ಚರಿತೆ
4 ಅರಟಾಳ ರುದ್ರಗೌಡರ ಚರಿತ

ಬಸವಾರ್ಯರ ದೃಷ್ಟಿ ಸಾಮಾಜಿಕವಾಗಿದ್ದಂತೆಯೇ ಸ್ವದೇಶಾಭಿಮಾನವುಳ್ಳದ್ದೂ ಆಗಿತ್ತು.ರಾಷ್ಟ್ರಾಭಿಮಾನದಿಂದ ಕೂಡಿದ ಇವರ ಅನೇಕ ಪದ್ಯಗಳು ಒಂದು ಕಾಲಕ್ಕೆ ಕಿತ್ತೂರ ಸುತ್ತ ಮುತ್ತಲೂ ಭಾರಿ ರಾಷ್ಟ್ರ ಕ್ರಾಂತಿಯನ್ನೇ ಉಂಟುಮಾಡಿದ್ದವು.
ಇವರ ಎಲ್ಲ ಸಾಹಿತ್ಯಿಕ ರಚನೆಗಳನ್ನು ಕೇವಲ ಸಾಹಿತ್ಯದ ದೃಷ್ಟಿಯಿಂದ ಮುಖ್ಯವಾಗಿರದೇ ಅವು ಆ ಕಾಲದ ಸಾಮಾಜಿಕ,ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ವಲಯಗಳ  ಅಧ್ಯಯನ ಸಂಗತಿಗಳಾಗಿಯೂ ಮುಖ್ಯವೆನಿಸುತ್ತವೆ.
ಬಸವಾರ್ಯರ ವೈಚಾರಿಕ ನಿಲುವನ್ನು ಬಿಂಬಿಸುವ ಕೆಲವು ಪದ್ಯಗಳು ಓದುಗರ ಗಮನ ಸೆಳೆಯುತ್ತವೆ.ಅಂದಿನ ಕಾಲದಲ್ಲಿ ಜನರನ್ನು ಬಲಿ ತೆಗೆದುಕೊಂಡ ಮಹಾಮಾರಿ ಪ್ಲೇಗ್ ರೋಗದ ಬಗ್ಗೆ ಹಾಗೂ ಅದು ತಂದಿತ್ತ ಸಾವು ನೋವಿನ ಬಗ್ಗೆ ಹೂಮನದ ಕವಿಯಾಗಿ ತಮ್ಮ ಸಾಹಿತ್ಯದ ಮೂಲಕ ಸ್ಪಂದಿಸಿದ್ದಾರೆ.ಮರುಗಿದ್ದಾರೆ. ಸುಮಾರು 64 ಕಂದ ಪದ್ಯಗಳ ಮೂಲಕ ದಾರುಣ ಸ್ಥಿತಿಯ ವಿವರಣೆ ನೀಡಿದ್ದಾರೆ.
ಹೀಗೆ ಹಳಗನ್ನಡದ ಛಂದೋಬದಿಯ ಶೈಲಿಯಲ್ಲಿ ಅನೇಕ ಕವಿತೆ,ನಾಟಕ,ಜೀವನಚರಿತಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ ಮಹಾನ್ ಚೇತನ ಶ್ರೀ ಬಸವಾರ್ಯರು.
ಇವರು ತಮ್ಮ 45 ನೇ ವಯಸ್ಸಿನಲ್ಲಿ ಅಂದರೆ 1921 ರಲ್ಲಿ ಅಕಾಲ ಮರಣಕ್ಕೆ ತುತ್ತಾದರು.
ಅವರಿಗೆ ತಾವು ರಚಿಸಿದ ಸಾಹಿತ್ಯ ಸಂಪತ್ತು ಪ್ರಚಾರ ಪಡೆಯಬೇಕೆಂಬುದು ಅವರ ಕನಸಾಗಿತ್ತು. ಅವರ ನಂತರ ಅವರ ಕುಟುಂಬವರ್ಗ ಆ ಕೆಲಸ ಮಾಡಿತ್ತಾದರೂ ಇನ್ನೂ ಮಾಡುವ ಕೆಲಸ ಬಹಳಷ್ಟಿದೆ. ಪ್ರಸ್ತುತ ವಿರುವ ಸಾಹಿತ್ಯ ಸಂಘಟನೆಗಳು ಇತ್ತ ಗಮನಹರಿಸಿದರೆ ಶ್ರೇಷ್ಠ ಸಾಹಿತಿ ಶ್ರೀ ಬಸವಾರ್ಯರ ಬರಹ ಮತ್ತು ಅವರ ಬದುಕಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ.

ಆಧಾರ
ಕಂಬಿ ಬಸವಾರ್ಯರು
ಲೇಖಕರು,ಶಿರಿಷ್ ಜೋಶಿ.


ಮೀನಾಕ್ಷಿ ಸುರೇಶ್ ಭಾಂಗಿ(ಸೂಡಿ.)

3 thoughts on “ಕನ್ನಡ ಕುಲತಿಲಕ ಕಂಬಿ ಬಸವಾರ್ಯರು ಮೀನಾಕ್ಷಿ ಸುರೇಶ್ ಭಾಂಗಿ(ಸೂಡಿ.)

  1. ಒಂದೆರಡು ಮಾದರಿ ಕವನಗಳನ್ನು ಹಾಕಿದ್ದರೆ ಚೆನ್ನಾಗಿತ್ತು.

Leave a Reply

Back To Top