ಪುಸ್ತಕ ಸಂಗಾತಿ.
‘ಒಡಲ ಬೆಂಕಿ’
ಅನಸೂಯಾ ಜಹಗೀರದಾರವರ ಕೃತಿ
ವಿಶ್ಲೇಷಣೆ,ಅನ್ನಪೂರ್ಣ ಪದ್ಮಸಾಲಿಯವರಿಂದ
“ಒಡಲ ಬೆಂಕಿ ” ನ್ನುವ ತಮ್ಮ ಕವನ ಸಂಕಲನವನ್ನು ಅನಸೂಯಾ ಜಹಗೀರದಾರ ಅವರು…
ಬೆಳಕಿಗಾಗಿ ಕಾಯುವ
ಕಾರ್ಗತ್ತಲಲ್ಲಡಗಿದ
ಕೋಟಿ ಕೋಟಿ ಕೂಸುಗಳಿಗೆ …..
ಅರ್ಪಣೆ ಮಾಡಿದ್ದಾರೆ
ಸರಕಾರಿ ಪ್ರೌಢ ಶಾಲೆ ಬೇವೂರುದಲ್ಲಿ ಕನ್ನಡ ಶಿಕ್ಷಕಿಯರಾಗಿರುವ ಇವರು ಹಿಂದೂಸ್ತಾನಿ ಸಂಗೀತ ಕಲಾವಿದೆ, ಕವಯತ್ರಿ, ಗದ್ಯ ಬರಹಗಾರರು, ಕನ್ನಡ ಪರ ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿಯೂ, ಕೆಲವು ಸಂಸ್ಥೆಗಳ ಅಧ್ಯಕ್ಷ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದವರು. ಕರ್ಕಿ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ, ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಕೊಪ್ಪಳ ಜಿಲ್ಲಾ ಮಹಿಳಾ ಒಕ್ಕೂಟ ಪುರಸ್ಕಾರ, ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ಧೆ ಪ್ರಶಸ್ತಿ, ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ…ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಗೆಯೇ ಆಕಾಶವಾಣಿ, ದೂರದರ್ಶನ, ಅನೇಕ ರಾಜ್ಯ, ಜಿಲ್ಲಾ ಕವಿಗೋಷ್ಠಿಗಳಲ್ಲಿ, ಹಲವು ಉತ್ಸವಗಳಲ್ಲಿ ಕವನ ವಾಚನ ಮಾಡಿ ಇವರು ಹೆಸರು ವಾಸಿಯಾದವರು.
ಅನಸೂಯಾ ಜಹಗೀರದಾರ ಅವರು..2014 ರಲ್ಲಿ “ಒಡಲ ಬೆಂಕಿ” ಶೀರ್ಷಿಕೆಯ ಕವನ ಸಂಕಲನ,
2021 ರಲ್ಲಿ “ಆತ್ಮಾನುಸಂಧಾನ” ಎನ್ನುವ ಶೀರ್ಷಿಕೆಯಡಿಯಲ್ಲಿ ಗಜಲ್ ಸಂಕಲನ ಮತ್ತು “ನೀಹಾರಿಕೆ” ಶೀರ್ಷಿಕೆಯಡಿಯಲ್ಲಿ ಹನಿಗವಿತೆಗಳ ಸಂಕಲಗಳನ್ನು ಹೊರತಂದಿದ್ದಾರೆ. ಇವರ…
“ಒಡಲ ಬೆಂಕಿ” ಗೆ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ದೊರಕಿದೆ.
“ಒಡಲ ಬೆಂಕಿ” ಕವನ ಸಂಕಲನದಲ್ಲಿನ ಕವಿತೆಗಳಲ್ಲಿ ಮುಖ್ಯವಾಗಿ ಆಧುನಿಕ ಎನ್ನಿಸಿಕೊಳ್ಳುವ ಇಂದಿನ ಯುಗದಲ್ಲೂ ಮಹಿಳೆ ಎದುರಿಸುತ್ತಿರುವ ಕೌಟುಂಬಿಕ ದಬ್ಬಾಳಿಕೆ, ಸಾಮಾಜಿಕ ಅನ್ಯಾಯಗಳು, ಧಾರ್ಮಿಕ ಒತ್ತಡಗಳು, ಪರಂಪರಾಗತ ಶೋಷಣೆ ಮುಂತಾದ ವಸ್ತುಗಳನ್ನು ಹೊಂದಿದ್ದು ಅವುಗಳ ವಿರುದ್ಧ ಆಕ್ರೋಶಕ್ಕೆ ಪುಟಿದೇಳುವ ಕೆಂಡದುಂಡೆಯಂತೆ ಸಶಕ್ತವಾಗಿ ಧ್ವನಿ ಎತ್ತುವ ಕವನ ಸಂಕಲನವಾಗಿದೆ.
ತಮ್ಮ ಸುತ್ತಲಿನ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಸ್ವಾರ್ಥ, ವಂಚನೆ, ಜಾತೀಯತೆ, ಭ್ರಷ್ಟಾಚಾರ ಮುಂತಾದವುಗಳ ಕುರಿತು ಇಲ್ಲಿ ಕವಯತ್ರಿ ಕವಿತೆಗಳ ಮೂಲಕ ಅಸಮಾಧಾನ ಎತ್ತುತ್ತಾರೆ.
ಮಹಿಳೆ ಪ್ರಾಚೀನ ಕಾಲದಿಂದಲೂ ತ್ಯಾಗದ ಹೆಸರಿನಲ್ಲಿಯೇ ಶೋಷಣೆಗೆ ಒಳಗಾಗುತ್ತ ಬಂದವಳು. ‘ಇನ್ನೆಷ್ಟು ತ್ಯಾಗಿಯಾಗುತ್ತೀಯೇ?’ ಕವಿತೆಯ ಕೆಲ ಸಾಲುಗಳನ್ನು ಗಮನಿಸ ಬಹುದು :
ಇನ್ನೆಷ್ಟು ತ್ಯಾಗಿಯಾಗುತ್ತೀಯೇ?
ಸ್ವಾರ್ಥಿಯಾಗಿ ಬಿಡು
ನಿನ್ನತನವ ಬಿಂಬಿಸಿ ಬಿಡು..
ಬಲಿದಾನದಲ್ಲಿಯೇ ಬಲಿಪಶುವಾಗಿ
ನಿರಂತರ ಕಳೆದದ್ದೇ ಬಂತು
ಈಗಿಲ್ಲ ಬಿಡು ಸ್ವಂತಿಕೆ ಪ್ರದರ್ಶಿಸಿ ಬಿಡು
ಸಮಾನತೆ ಗಳಿಸಿ ಬಿಡು..
….. ಕಣ್ಣೀರ ತೊಡೆದು ಬಿಡು
ಕಳೆದ ಕಾರಿರುಳ ಮರೆತು ಬಿಡು..
ಜಹಾಗೀರದಾರ ಅವರ ಈ ಸಂಕಲನದ ಕವಿತೆಗಳಲ್ಲಿ ಹಲವು ಈ ದೇಶದಲ್ಲಿ ಆಗಾಗ ನಡೆಯುತ್ತಿರುವ ಸ್ತ್ರೀಯರ ಮೇಲಿನ ಲೈಂಗಿಕ ದೌರ್ಜನ್ಯಗಳು, ಬಲತ್ಕಾರಗಳು, ಪ್ರಮುಖವಾಗಿ ಮುಗ್ಧ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಹಿಂಸೆಗಳ ಕುರಿತು ತಮ್ಮ ವಿಷಾದ ಮತ್ತು ಹತಾಶೆಗಳನ್ನು ಒಳಗೊಂಡಿವೆ.
“ಮತ್ತೊಂದು ರಕ್ಕಸೀ ಕೃತ್ಯ” ಕವಿತೆಯ ಕೆಲ ಸಾಲುಗಳನ್ನು ಗಮನಿಸ ಬಹುದು :
ಇನ್ನೆಷ್ಟು ಬಾಲೆಯರು
ಬಲಿಯಾಗುತ್ತಾರೋ?
ಸಮಾಜದ ಕ್ರೌರ್ಯಕ್ಕೆ
ರಕ್ಕಸೀ ಕೃತ್ಯಕ್ಕೆ..
ರಾಕ್ಷಸರ ಕೈಗಳಿಗೆ
ನಲು ನಲುಗಿ ಮುದುಡಿ
ಅರಳಬಲ್ಲ ಮೊಗ್ಗಿನ
ದಳಗಳೆಲ್ಲ ಉದುರಿ
ಒಂದೊಂದೇ ಚದುರಿ
ಹರಿಯುತ್ತವೆ ತುಂಡು ತುಂಡಾಗಿ
ಹಸಿ ಮಾಂಸದ ಮುದ್ದೆಯಾಗಿ..
ಏನೇ ಬರೆದರೂ, ಎಷ್ಟೇ ಬರೆದರೂ ಮಹಿಳೆಯರು ಮುಕ್ತವಾಗಿ, ತಮಗೆ ತೋಚಿದ್ದನ್ನು ಬರೆಯಲಾರರು ಎಂಬ ಒಂದು ಆರೋಪವಿದೆ, ಸಾಹಿತ್ಯ ವಲಯದಲ್ಲಿ. ಅವರು ಮುಕ್ತವಾಗಿ ಬರೆದರೆ ಎಲ್ಲಿ ಜನ ತಮ್ಮನ್ನು ಕನಿಷ್ಠವಾಗಿ ಕಾಣುತ್ತಾರೆ ಮತ್ತಿತರ ಆರೋಪಗಳಿಗೆ ಹೆದರಿ ಬರೆಯುತ್ತಾರೆ ಅಂತ. ಉದಾ: ಕೆಲ ಬಣ್ಣ ಕೆಲ ಕೋಮಿನವರ ಗುತ್ತಿಗೆ, ಕೆಲ ಜಾತಿ ಸೂಚಕ ಕಸುಬು ಕೆಲವರ ಗುತ್ತಿಗೆ ಮುಂತಾಗಿ ನಿರ್ಭಿಡೆಯಿಂದ ಬರೆಯಲಾಗುವುದಿಲ್ಲ ಅಂತ ಮಹಿಳೆಯರು ಗಾಸಿಪ್ ಗಳಿಗೆ ಹೆದರಿ ಮುಕ್ತವಾಗಿ ಬರೆಯಲಾಗುತ್ತಿಲ್ಲ ಎಂಬ ಅನಿಸಿಕೆಯೂ ಉಂಟು. ಅಂತೆಯೇ ಬರೆಯ ಬೇಕಿರುವುದನ್ನು ಸಂಸ್ಕರಿಸಿಯೇ ಬರೆಯುತ್ತಾರೆ ಎನ್ನುವ ಆರೋಪಕ್ಕೆ ಪೂರಕವಾಗಿ ಈ ಸಂಕಲನದಲ್ಲಿ ಒಂದು ಕವಿತೆ ಇದೆ.. ಅದರ ಶೀರ್ಷಿಕೆ “ಆತಂಕವಾದಿಗಳು” ಅಂತ. ಅದರ ಕೆಲ ಸಾಲುಗಳು ಹೀಗಿವೆ :
ಸ್ವಚ್ಛಂದವಾಗಿ ಬರೆಯಲಾಗುವುದಿಲ್ಲ ನಮಗೆ
ನಾವೆಲ್ಲ ಆತಂಕವಾದಿಗಳು ಒಳಗೊಳಗೆ
… ಸಮಾಜ ಸಮುದಾಯದ ಗೆರೆಗಳ ಆತಂಕ
ಧರ್ಮ-ಕೋಮಿನ ಛಲದ ಆತಂಕ
ನೋವು ನಿಟ್ಟುಸಿರುಗಳ ಭಯದ ಆತಂಕ.
ಅವರ ” ನನ್ನ ಕವನಗಳು “.. ಕವಿತೆ ನಿಜಕ್ಕೂ ನನ್ನ ಕಣ್ಮನ ಸೆಳೆಯಿತು. ಸಾಮಾನ್ಯ ಪ್ರಜೆಯ ಬದುಕಿಗಾಗಿ ನಡೆಸುವ ಹೋರಾಟ, ತನ್ನೊಳಗಿನ ತವಕಗಳಿಗೆ ಜೀವ ಕೊಡುವ ಪರಿ ಹಾಗೂ ಹಕ್ಕುಗಳಿಗಾಗಿ ನಡೆಯುವ ಪರದಾಟ ವಿಷಯದ ಅಂಶಗಳು ಮುಖ್ಯವಾಗಿವೆ.
ಹಾಗೆಯೇ..”ಹೋಲಿಸದಿರಿ ಸಾಕು” ಕವಿತೆಯಲ್ಲಿ ಹೆಣ್ಣಿನ ಬಗೆಗಿನ ವಾಸ್ತವ ಚಿತ್ರಣ ಮೂಡಿಬಂದಿದೆ…
ಹೆಣ್ಣನ್ನು ಹೂವಿಗೆ, ನದಿಗಳಿಗೆ, ಬೆಳದಿಂಗಳಿಗೆ, ನಕ್ಷತ್ರಗಳಿಗೆ ಹೋಲಿಸದಿರಿ ಎನ್ನುವ ಅವರ ಕೂಗು… ಬಿಕ್ಕುವ ದುಃಖಕ್ಕೆ ಸಾಂತ್ವನ ನೀಡಿ ನೆಮ್ಮದಿ ನೆಲೆಸುವಂತೆ ಮಾರ್ಮಿಕವಾಗಿದೆ..
ಬದಲಾಗಿ….
ಹೆಣ್ಣುಗಳನ್ನು ಬರಿ ಮನುಷ್ಯರೆನ್ನಿ ಸಾಕು,
ನಿಮ್ಮೊಂದಿಗೆ ಅವಳು ಅವಳೊಂದಿಗೆ ನೀವು
ಸಮಾನ ವ್ಯಕ್ತಿತ್ವದ ಸಮಾನತೆಯ ಬಾಳು
ತುಂಬು ಗುಣಗಳ ಮೆರೆಯಬಲ್ಲರು.
ಮಾನವತೆಯ ಪೊರೆಯಬಲ್ಲರು..
ಎನ್ನುವ ಮಾತು ಎಷ್ಟೋಂದು ಸತ್ಯ..
ಪ್ರತಿ ಹೆಣ್ಣು ಬಯಸುವುದು…ಇದನ್ನೇ..ಅಲ್ಲವೇ?
” ಇಲ್ಲಿ ಮಕ್ಕಳು ಅಳುವುದಿಲ್ಲ ” ಈ ಕವಿತೆಯಲ್ಲಿ ಉದ್ಯೋಗಸ್ಥ ಮಹಿಳೆಯ ಮಕ್ಕಳ ಪರಿಪಾಟಲು ಒಳಗೊಳಗೆ ಹುದುಗಿ ಸುಮ್ಮನಾಗುವ ಪರಿ ವ್ಯಕ್ತವಾಗಿದೆ…
ಅಂದರೆ…
ಉದ್ಯೋಗಸ್ಥ ಮಹಿಳೆಯ ಮಕ್ಕಳು..
ಬಾಟ್ಲಿ ಹಾಲಿನಲಿ ಕಾಲುಗಳ ಬಡಿಯುತ್ತವೆ.
ರೆಡಿಮೇಡ್ ತಿಂಡಿಗಳ ನಿತ್ಯ ಸವಿಯುತ್ತವೆ.
ಯಾವುದಕ್ಕೂ ತಕರಾರು ಎಂಬುದೇ ಇಲ್ಲ
ಅವುಗಳಿಗೆ ಗೊತ್ತು ಹಠವಿಲ್ಲಿ ನಡೆಯುವುದೇ ಇಲ್ಲ.
ಇದು ಉದ್ಯೋಗಸ್ಥ ಮಹಿಳೆಯ ಮಕ್ಕಳ ವಾಸ್ತವ ಚಿತ್ರಣ. ಅಲ್ಲದೆ ” ಇಲ್ಲಿ ಮಕ್ಕಳು ಅಳುವುದಿಲ್ಲ ” ಪದ್ಯ ಬಳ್ಳಾರಿಯ ವಿ. ಕೃ. ವಿ ದಲ್ಲಿ ಪಠ್ಯವಾಗಿದೆ.
” ಕವನಗಳು ಬೆಂಕಿಯಲ್ಲಿ ಅರಳುತ್ಯವೆ,” “ಪ್ರೀತಿಯ ಮೆರೆದವರು”, ನಿರಾಸೆ , ಗಾಂಧಾರಿಗೆ ಹೀಗೆ ಈ ಕವನ ಸಂಕಲನವು ಅವರಲ್ಲಿರುವ ಸಾಂಪ್ರದಾಯಿಕ ಕಟ್ಟುಪಾಡುಗಳ ಬಗೆಗಿನ ಪ್ರತಿಭಟನಾ ಭಾವವನ್ನೂ ಜೊತೆಗೆ ಅವರ ಪ್ರಾಮಾಣಿಕ, ಸಾಮಾಜಿಕ ಕಳಕಳಿಯನ್ನು ಸಾಕಷ್ಟು ಸಮರ್ಥವಾಗಿ ಧ್ವನಿಸುತ್ತವೆ.
” ಒಡಲ ಬೆಂಕಿ ” ಕವನ ಸಂಕಲನದಲ್ಲಿ ಒಟ್ಟು 80 ಕವಿತೆಗಳಿವೆ. ಬಹುಪಾಲು ಕವಿತೆಗಳು ಓದಿಸಿಕೊಂಡು ಹೋಗುತ್ತಾ ಕಾಡುತ್ತವೆ, ಕಣ್ಣೀರಾಗಿಸುತ್ತವೆ. ಇಂತಹ ಕವಿತೆಗಳನ್ನು ಬರೆದಿರುವ ಶ್ರೀಮತಿ ಅನಸೂಯಾ ಜಹಗೀರದಾರ ಮೇಡಂ ಅವರಿಂದ ಇನ್ನಷ್ಟು, ಮತ್ತಷ್ಟು, ಮಗದಷ್ಟು ಕವಿತೆಗಳು ಹೊರಹೊಮ್ಮಲಿ, ಈ ಕವನ ಸಂಕಲನವು ಇನ್ನಷ್ಟು ಓದುಗರನ್ನು ತಲುಪಲೆಂದು ಆಶಿಸುತ್ತೇನೆ.
ಅನ್ನಪೂರ್ಣ ಪದ್ಮಸಾಲಿ
ಧನ್ಯವಾದಗಳು ಅನ್ನಪೂರ್ಣ ಮೇಡಮ್.
ಧನ್ಯವಾದಗಳು ಸಂಗಾತಿ ಬಳಗಕ್ಕೆ.ಧನ್ಯವಾದಗಳು ಸರ್.