ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಕಾರಣವ ನೀ ಹೇಳು.
ಭಾವ ಬುತ್ತಿಯ ಕಿರು
ತುತ್ತುಣಿಸಿ ಜೀವವನೇ
ದೂರ ತಳ್ಳುತಿರುವ
ಕಾರಣವ ನೀ ಹೇಳು….
ಕಾಯುತಿಹ ಜೀವಕೊಂದು
ಮುದದಿ ಕಿರು ನಗುವ
ನೀಡದೇ ನಡೆದಿರುವ
ಕಾರಣವ ನೀ ಹೇಳು…
ಮಾತಿಲ್ಲದ ನೀರಸ
ಮೌನದ ಪಲಕುಗಳ
ಕಾಣಿಕೆಯ ನೀಡಿರುವ
ಕಾರಣವ ನೀ ಹೇಳು…
ನೀನೇ ಬಿತ್ತಿದ ಭಾವಗಳ
ತೆನೆ ತೊನೆದು ಪಾಡಿರಲು
ತೊರೆಯುವ ಹವಣಿಕೆಗೆ….
ಕಾರಣವ ನೀ ಹೇಳು….
ಹೃದಯ ಹಂದರದಿ
ಪ್ರೀತಿ ಹೂಬಳ್ಳಿ ಹಬ್ಬಿಸಿ
ಅಡಿಯಿಡದೇ ನಿಲ್ಲೆನ್ನಲು
ಕಾರಣವ ನೀ ಹೇಳು….
ಕಂಗಳ ಅಂಗಳದ ಚೆಲು
ಚಂದಿರನ ಚಂದ್ರಿಕೆಯ
ಕರಗಿಸಿ ಕತ್ತಲಾಗಿಸುವ
ಕಾರಣವ ನೀ ಹೇಳು…
ಕವನ ಧವನ ಪರಿಮಳ
ಮಲ್ಲಿಗೆಯೇ ನೀನೆನುತ
ಸೊಲ್ಲಿಗೂ ಓಗೊಡದಿರುವ
ಕಾರಣವ ನೀ ಹೇಳು….
ಇಂದಿರಾ ಮೋಟೆಬೆನ್ನೂರ