ವಿಶೇಷ ಲೇಖನ
ಪ್ರೇಮಾ ಟಿ ಎಂ ಆರ್
ಗೃಹಿಣಿ ಸರ್ವತ್ರಮುಚ್ಛ್ಯತೇ
ಭಾರತ ಎಂದೊಡನೆ ಜಗತ್ತಿನ ಕಣ್ಣೆದುರು ತಟ್ಟನೆ ಮೂಡುವದು ಇಲ್ಲಿನ ಸುಸಂಸ್ಕೃತ ಕುಟುಂಬ ಪದ್ಧತಿ.. ಜಗತ್ತಿಗೇ ಮಾದರಿಯಾಗಿ ಗುರುತಿಸಿಕೊಂಡ ಕುಟುಂಬ ಪದ್ಧತಿಗೆ ಮೂಲವೇ ಗೃಹಿಣಿ . ಗೃಹಿಣಿ ಸಮಾಜವೆಂಬ ಸರಪಳಿಯಲ್ಲಿ ಒಂದು ಮಜಬೂತಾದ ಕೊಂಡಿ. ಜೊತೆಗೆ ಅತ್ಯಂತ ಸೂಕ್ಮವಾದ ಕೊಂಡಿ ಎಂಬುದು ಕೂಡಾ ಅಷ್ಟೇ ಸತ್ಯ. ಇಪ್ಪತ್ತೊಂದನೆಯ ಶತಮಾನದಲ್ಲಿ ನಿಂತು ಹಿಂತಿರುಗಿ ನೋಡಿದರೆ, ಸ್ವತಂತ್ರ ಭಾರತದ ಅಂಚಿನಲ್ಲಿ , ಪುರುಷ ಪ್ರಧಾನ ಸಮಾಜದಲ್ಲಿ ಬದುಕಿದ ಭಾರತದ ಗೃಹಿಣಿಯರು.. ಮುಂಜಾನೆದ್ದು ಬೂದಿ ಬಳಿಯುತ್ತ, ಫೂಫೂ ಎಂದು ಒಲೆ ಊದುತ್ತ, ಗೂರಲು ಕೆಮ್ಮುತ್ತ, ರುಬ್ಬೋ ಕಲ್ಲಿನೊಂದಿಗೆ ಗುದ್ದಾಡಿ, ಬೀಸೋ ಕಲ್ಲಿಗೆ ಜೋತುಬಿದ್ದು , ಬಾವಿ ದಂಡಿಗೆಯಲ್ಲಿ ಬೆನ್ನು ಬಿಲ್ಲಾಗಿಸಿ, ಅಂಗಳ ತಂಗಳು ತೊಳೆದು, ಬಚ್ಚಲಿನ ಕೊಚ್ಚೆ ಕೆದರುತ್ತ, ಕೊಟ್ಟಿಗೆಯ ಗಂಜಲು ಬಳಿಯುತ್ತ, ನಸುಕಿನಿಂದ ರಾತ್ರಿಯವರೆಗೆ ತಾವೊಂದು ಸ್ವತಂತ್ರ ಜೀವ, ನಮಗೂ ವಿಶ್ರಾಂತಿ ಆಮೋದ ಪ್ರಮೋದಗಳ ಅಗತ್ಯ ಇದೆ ಎಂಬ ಅರಿವೂ ಇಲ್ಲದೇ, ಗಾಣದೆತ್ತಿನಂತೆ ಸುತ್ತುತಿದ್ದುದನ್ನು ನಾವು ಗಮನಿಸಬಹುದು.. ಆ ಜಾಗದಲ್ಲಿ ನಿಂತು ಹಾಗೇ ಹಿಂದಕ್ಕೆ ತಿರುಗಿ ಆದಿ ಮಾನವ ಕಾಲಕ್ಕೆ ಹೋದರೆ ಮೊದಲ ಒಕ್ಕಲುಗಾತಿಯೇ ಗೃಹಿಣಿ. ಬಹುಶಃ ಮೊಟ್ಟಮೊದಲು ಮನೆ ಮನೆತನ ಎಂಬ ಕಲ್ಪನೆಯೇ ಗೃಹಿಣಿಯೆಂಬ ಹೆಣ್ಣಿನ ಕನಸಿರಬಹುದು.. ಅಲ್ಲಿಂದ ವೇದಗಳ ಕಾಲವನ್ನು ಕಣ್ಣೆದುರು ಹರಡಿಕೊಂಡರೆ ಗೃಹಿಣಿಯರು ಪುರುಷರಿಗೆ ಸರಿ ಸಮಾನರಾಗಿ ಯಾಗ ಯಜ್ಞ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಬ್ರಹ್ಮರ್ಷಿಗಳ ಸಭೆಯಲ್ಲಿ ಪಾಲ್ಗೊಂಡು, ಅವರಿಗೆ ಸರಿ ಸಮಾನರಾಗಿ ಅರಿವು ಉಳ್ಳವರಾಗಿ, ವಾದ ವಿವಾದಗಳಲ್ಲಿ ಭಾಗವಹಿಸಿದ ಬಗ್ಗೆ ಸಮಾಜದ ಹಿತ ಚಿಂತನೆಗಳ ಕಾಳಜಿ ಹೊಂದಿರುವ ಬಗ್ಗೆ ಮಾಹಿತಿಗಳು ಲಭ್ಯ.. ಅಪಾಲಾ ಲೋಪಾಮುದ್ರಾ ಗಾರ್ಗಿ ಮೈತ್ರೇಯಿ ಹೀಗೇ ಅನೇಕ ಋಷಿ ಪತ್ನಿಯರ ಉದಾರಣರಗಳು ಸಿಗುತ್ತವೆ. ಇವರೆಲ್ಲರೂ ಗೃಹಿಣಿಯರೇ.. ಸಾಮಾನ್ಯ ವರ್ಗದ ಗೃಹಿಣಿಯರ ಚಿತ್ರಣ ಲಭ್ಯವಿಲ್ಲವಾದರೂ ಅವರೂ ಕೂಡ ಅವರು ನಿಂತ ನೆಲೆಯಲ್ಲಿ ಸಮ್ಮಾನದ ಬದುಕು ದಕ್ಕಿಸಿಕೊಂಡಿರಬಹುದಾದ ಎಲ್ಲ ಸಾಧ್ಯತೆಗಳೂ ಇವೆ
ಹಾಗೆಯೇ ಪುರಾಣಗಳ ಕಾಲದಲ್ಲಿಯೂ ಬಹುತೇಕ ಯುದ್ಧಗಳು ಗೃಹಿಣಿಯರಾದ ಸೀತೆ ದ್ರೌಪದಿಯರಂತ ಗೃಹಿಣಿಯರ ಸಮ್ಮಾನ ಕಾಯುವದಕ್ಕಾಗಿಯೇ ನಡೆದದ್ದನ್ನು ನೋಡುತ್ತೇವೆ. ಶಕ್ತಿ ದೇವತೆಗಳೆಂದು ಪೂಜೆಗೊಂಡ ಸರಸ್ವತಿ ಲಕ್ಷ್ಮಿ ಪಾರ್ವತಿಯರು ಗೃಹಿಣಿಯರಾಗಿದ್ದು ತಮ್ಮ ಪುರುಷರ ಸರಿಸಮಾನ ಸ್ಥಾನಮಾನದಲ್ಲಿ ನಿಂತು ಆದಿಶಕ್ತಿ ರೂಪಗಳೆಂದು ಪೂಜಿಸಲ್ಪಟ್ಟಿದ್ದು ಇಂದಿಗೂ ಪೂಜಿಸಲ್ಪಡುತ್ತಿದ್ದುದು ಸರ್ವ ಸತ್ಯ.. ಹಾಗೆಯೇ ಜನಮನದಲ್ಲಿ ನಿಂತು ಮಾತೃ ಶಕ್ತಿಯ ದ್ಯೋತಕ ಅನ್ನಿಸಿಕೊಂಡವರಿವರು. ಶಂಕರಾಚಾರ್ಯರ ಸರಿಸಮಕ್ಕೆ ನಿಂತು ವಾದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದ ಉಭಯಭಾರತಿಯಂತ ಹೆಣ್ಣುಗಳು ಗೃಹಿಣಿಯರ ಅಂದಿನ ಸ್ಥಾನಮಾನದ ಘನತೆಯನ್ನು ಸಾರುವ ಉದಾರಣೆಗಳು..ಹನ್ನೆರಡನೆಯ ಶತಮಾನದಲ್ಲಿ ಬಿಜ್ಜಳ ದೊರೆಯ ಆಸ್ಥಾನದಲ್ಲಿ ಮಹಾ ಮಂತ್ರಿಯಾಗಿದ್ದ ಭಕ್ತಿ ಭಂಡಾರಿ ಬಸವಣ್ಣನವರು ವಿಶ್ವದ ಮೊದಲ ಧಾರ್ಮಿಕ ಸಂಸತ್ತು ಎನ್ನಿಸಿಕೊಂಡ ತಮ್ಮ ಅನುಭವ ಮಂಟಪದಲ್ಲಿ ಲಿಂಗ ಸಮಾನತೆಯನ್ನು ಸಾರಿ ಸ್ತ್ರೀಯರನ್ನು ಅದರಲ್ಲೂ ವಿಶೇಷವಾಗಿ ಗೃಹಿಣಿಯರನ್ನು ಗೌರವ ಸಮ್ಮಾನಗಳಿಂದ ನಡೆಸಿಕೊಂಡಿದ್ದನ್ನು ನಾವು ಕಾಣಬಹುದು. ಮತ್ತೆ ಇತಿಹಾಸದ ಪುಟ ಮೊಗಚಿದರೆ ಪುರುಷರಿಗೆ ಸರಿಸಮಾನವಾಗಿ ಸಾಮ್ರಾಜ್ಯ ಕಟ್ಟಿ ಆಳಿದ.. ಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿ ಆಳಲುಬಿಟ್ಟ , ಸಾಲು ಸಾಲು ಗೃಹಿಣಿಯರರೆಂಬ ರಾಣಿಯರು, ವೀರ ವನಿತೆಯರು ನಮ್ಮ ಕಣ್ಮುಂದೆ ಹಾದು ಹೋಗುತ್ತಾರೆ. ಉದಾರಣೆಗೆ ಮರಾಠಾ ಸಾಮ್ರಾಜ್ಯ, ರಜಪೂತ ರಾಣಿಯರು, ಝಾನ್ಸಿ , ಕರ್ನಾಟಕದ ಕೆಳದಿ ಸಾಮ್ರಾಜ್ಯ, ಕಿತ್ತೂರು.. ಹೀಗೆ ಸಾವಿರಾರು ನಿದರ್ಶನಗಳನ್ನು ನೀಡಬಹುದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಇಡೀ ಭಾರತದ ತುಂಬ ಹರಡಿಕೊಂಡಿದ್ದ ವೀರ ಗೃಹಿಣಿಯರ ಸಾಹಸ ಗಾಥೆಗಳು ಬರೆದು ಮುಗಿಸಲಾಗದಷ್ಟು ವಿಸ್ತಾರ. ಕೇವಲ ಹೆಸರು ಪಟ್ಟಿ ಮಾಡಿತ್ತ ಹೋದರೆ ಒಂದು ಮಹಾನ್ ಹೊತ್ತಿಗೆಯೇ ಆದೀತು..ಮೇಲ್ನೋಟಕ್ಕೆ ಗೃಹಿಣಿ ದೈಹಿಕವಾಗಿ ಅಬಲೆಯಾಗಿ ಕಂಡುಬಂದರೂ ಅವಳೊಳಗಿರುವದು ಅದ್ಭುತವಾದ ಅಂತ:ಶಕ್ತಿಯ ಆಗರ..ಈ ಅಂತ:ಶಕ್ತಿಯ ಅರಿವಿನಲ್ಲೇ ವೈದಿಕ ಯುಗದ ಗೃಹಿಣಿ ತನ್ನನ್ನು ತಾನು “ಅಹಂ ರಾಷ್ಟ್ರೀ ಸಂಗ್ರಾಮಿನಿ” ಎಂದು ಕರೆದುಕೊಂಡಿರಬಹುದು..
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ:, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೇ, ತೊಟ್ಟಿಲು ತೂಗುವ ಕೈ ಜಗತ್ತನ್ನು ತೂಗೀತು ಎಂಬಿತ್ಯಾದಿ ತಾಯೆಂಬ ಹೆಣ್ಣೆಂಬ ಗೃಹಿಣಿಯರನ್ನು ಕುರಿತ ಶ್ರೇಷ್ಠ ವಚನಗಳನ್ನು ಒಪ್ಪಿಕೊಂಡಂತ ದೇಶದಲ್ಲಿ , ಈ ಎಲ್ಲವೂ ಸುಮ್ಮನೆ ಕೊಟ್ಟ ಬಿರುದಾಗಿರಲಿಕ್ಕಿಲ್ಲ.. ಗೃಹಿಣಿ ತನ್ನನ್ನು ತಾನು ಆ ಎತ್ತರಕ್ಕೆ ಸಾಬೀತು ಪಡಿಸಿಕೊಂಡಿರಬಹುದಾದ ಎಲ್ಲ ಸಾಧ್ಯತೆಗಳೂ ಇವೆ.. ಸ್ವಯಂವರ ಪದ್ಧತಿ, ಯುದ್ಧವಿದ್ಯೆಗಳು, ನೃತ್ಯ ,ಸಂಗೀತ, ಶಿಕ್ಷಣ, ಈ ಎಲ್ಲದರಲ್ಲೂ ಗೃಹಿಣಿಯರು ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಿಹೋಗಿದ್ದು ಮಾತ್ರವಲ್ಲ ಮಹಿಳಾ ಸಾಹಿತ್ಯಗಳು ಕೂಡ ಪುರಾತನ ಕಾಲಗಳಲ್ಲಿ ಕಾಣಸಿಗುವದರಿಂದ ಪ್ರಾಚೀನ ಭಾರತದ ಗೃಹಿಣಿಯರು ಸಮೃದ್ಧವಾಗಿದ್ದ ಸುವರ್ಣ ಯುಗವೊಂದನ್ನು ಕಂಡಿದ್ದರು ಎಂಬುದಕ್ಕೆ ಎರಡು ಮಾತಿಲ್ಲ…
ಇದೆಲ್ಲವೂ ಮೇಲ್ವರ್ಗದ ಮಹಿಳೆಯರ ಉದಾರಣೆಗಳಾಗಿದ್ದರಿಂದ ಸಾಮಾನ್ಯ ಗೃಹಿಣಿಯರ ಬದುಕಿನ ಮೇಲೆ ಬೆಳಕು ಚೆಲ್ಲುವ ಪುರಾವೆಗಳ ಕೊರತೆ ಎದ್ದು ಕಾಣದೇ ಇರದು.. ಹಾಗಿದ್ದಾಗ್ಯೂ ಕೂಡ ಮೇಲ್ವರ್ಗದ ಸ್ರೀಯರಿಗಿಂತ ತೀರ ವಿರುದ್ಧ ಪರಿಸ್ಥಿತಿಯಲ್ಲಿ ಸಾಮಾನ್ಯ ಗೃಹಿಣಿಯರ ಸ್ಥಿತಿ ಇರಲಿಕ್ಕಿಲ್ಲ. ಅವರೂ ಕೂಡ ಒಂದು ಗೌರವಪೂರ್ಣ ಬದುಕು ಕಂಡುಕೊಂಡಿರಬಹುದೆಂದು ನಂಬ ಬಹುದಾದ ವಿಷಯ .ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆರ್ಥಿಕತೆ, ರಾಜಕೀಯ, ಧಾರ್ಮಿಕ, ಎಲ್ಲ ಕ್ಷೇತ್ರಗಳಲ್ಲಿ ಒಂದು ಸುವರ್ಣ ಯುಗವನ್ನು ಭರತಖಂಡದ ಗೃಹಿಣಿಯರು ಕಂಡಿರಬಹುದಾದ ಪದ ಚಿನ್ಹೆಗಳು ಕಾಣ ಸಿಗುತ್ತವೆ.. ಕೃಮೇಣ ಪರಕೀಯರ ಸತತ ದಾಳಿಯ ಪರಿಣಾಮವಾಗಿ, ಜೊತೆಗೆ ಪರಕೀಯ ಸಂಸ್ಕೃತಿಗಳು ಇಲ್ಲಿ ನೆಲೆಯೂರತೊಡಗಿದ ನಂತರ ಹೆಣ್ಣುಗಳು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರಬಹುದಾದ ಸಾಧ್ಯತೆಗಳಿವೆ. ಇದಕ್ಕೆ ಗೃಹಿಣಿಯರೆಂಬ ಜೀವಗಳೂ ಹೊರತಾಗುವದು ಹೇಗೆ ಸಾಧ್ಯ..ಗೃಹಿಣಿ ಗೃಹಮುಛ್ಯತೆ ಎಂದು ನಾಲ್ಕು ಗೋಡೆಗಳ ಚಚ್ಚೌಕದಲ್ಲಿ ಈ ಗೃಹಿಣಿಯರೂ ಬಂಧಿಸಲ್ಪಟ್ಟರು. ಈ ಬದಲಾವಣೆ ಕೇವಲ ಭರತಖಂಡದ ಭೂಭಾಗಗಳ ಮೇಲೆ ಮಾತ್ರ ಆಗದೇ ಅದು ಇಡೀ ಜಗತ್ತಿನ ಹೆಣ್ಣುಗಳ ಸ್ಥಿತಿಗತಿಗಳ ಮೇಲೆ ತೀವ್ರ ತರವಾದ ದುಷ್ಪರಿಣಾಮ ಬೀರಿರಬಹುದಾದ ಸಾಧ್ಯತೆಗಳಿವೆ. ಹೆಣ್ಣಿನ ರಕ್ಷಣೆಯ ಕಾರಣವನ್ನು ಮುಂದಿಟ್ಟುಕೊಂಡು ಬಾಲ್ಯ ವಿವಾಹ, ಸಹಗಮನ, ಪರದಾ ಪದ್ಧತಿ, ವಿಧವೆಯರ ಕೇಶ ಮುಂಡನ, ಕತ್ತಲು ಕೋಣೆಯ ವಾಸದಂತ ಹೀನ ಪದ್ಧತಿ ಗಳನ್ನು ಅನುಸರಿಸಬೇಕಾದ ಪರಿಸ್ಥಿತಿ ಇದು ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಗೃಹಿಣಿಯರ ಚಿತ್ರಣ. ಅಲ್ಲಿ ನಿಂತು ಇಲ್ಲಿಯ ತನಕದ ಅವಳ ನಡಿಗೆಯನ್ನು ಅವಲೋಕಿಸಿದರೆ ಬರೀ ಗೃಹಿಣಿಯೆಂಬ ಜೀವ ಅದೆಷ್ಟು ಬದಲಾಗಿದ್ದಾಳೆ ಎಂಬುದರ ಅರಿವಾಗಿ ಅಚ್ಚರಿ ನಮ್ಮನ್ನು ಕಾಡದಿರದು. ಅವಳು ತನ್ನ ಮಾತೃ ಶಕ್ತಿಯನ್ನು ಜಾಗೃತಗೊಳಿಸಿಕೊಂಡ ರೀತಿಯೇ ಅದ್ಭುತ. ಅವಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಬಾಹ್ಯಾಕಾಶ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ತನ್ನನ್ನು ತಾನು ಎತ್ತರಿಸಿಕೊಂಡು, ಬೆಳೆದು ನಿಂತ ರೀತಿಯೇ ವಿಸ್ಮಯ. ಅವಳ ಈ ನಡಿಗೆ ಹೂವ ಹಾಸಿನ ಮೇಲಿನದ್ದಲ್ಲ. ಅವಳಿಗೆ ಹೆಜ್ಜೆ ಹೆಜ್ಜೆಗೂ ಎದುರಾದ ಬಂಧನಗಳನ್ನು ಮೆಟ್ಟಿ, ಸಂಘರ್ಷಗಳನ್ನೆಲ್ಲ ಎದುರಿಸಿಯೇ ಮುಂದುವರಿದವಳು ಇವಳು.
ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ ಬರೀ ದುಡಿಮೆಯನ್ನು ಕಚ್ಚಿಕೊಂಡು ಬದುಕಿದ ಇವಳು ಮೊದಲು ದನಿಯೆತ್ತಿದ್ದು ಬಹುಶಃ ತನ್ನದೇ ಸಂತಾನಕ್ಕಾಗಿ..ತನ್ನದೇ ಕರುಳು ಕುಡಿಗಳ ಹಕ್ಕಿಗಾಗಿ. ಅವರ ವಿದ್ಯಾಭ್ಯಾಸಕ್ಕಾಗಿ…. ತದನಂತರ ಅವರನ್ನು ಹೆರುವದೊಂದೇ ನನ್ನ ಕೆಲಸವಲ್ಲ ಅವರ ಭವಿಷ್ಯ ರೂಪಿಸುವಲ್ಲಿ ಕೂಡ ನಾನಿರಬೇಕು ಎಂಬುದನ್ನು ಕಂಡುಕೊಂಡು ಅದರತ್ತ ತನ್ನ ಲಕ್ಷ್ಯವನ್ನು ಕೊಟ್ಟವಳಿವಳು. ತನ್ನ ಸಂತತಿ ಸುಸಂಸ್ಕೃತ ವಾಗಬೇಕೆಂದರೆ ಮೊದಲು ನಾನು ಶಿಕ್ಷಿತಳಾಗಬೇಕೆಂಬ ಅರಿವಿನಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟವಳು ಇವಳು . ಜೊತೆಗೆ ಆ ಹಕ್ಕಿನ ರಕ್ಷಣೆಗೆ ಸೊಂಟ ಬಿಗಿದವಳಿವಳು. ಹೀಗೆ ನಡುಮನೆಗೆ ಕಾಲಿಟ್ಟ ಹೆಣ್ಣು ನಿಧಾನಕ್ಕೆ ಜಗುಲಿಗೆ ಬಂದು ತನ್ನ ಸ್ತ್ರೀ ಸಂಕುಲದ ಗುಂಪು ಕಟ್ಟಿಕೊಂಡು ವಿಚಾರ ವಿಮರ್ಶೆಗೆ ತೊಡಗಿದಳು.. ಈ ಹಂತದಲ್ಲಿಯೇ ಅವಳ ವಿಚಾರ ವಿಶಾಲವಾಗಿ ತನ್ನ ಏಳ್ಗೆಗೆ ಆರ್ಥಿಕ ಸ್ವಾತಂತ್ರ್ಯದ ಅಗತ್ಯವನ್ನು ಕಂಡುಕೊಂಡು ಆರ್ಥಿಕ ವಾಗಿ ಸಬಲವಾಗುವ ಚಿಂತನೆಗಳಿಗೆ ಜೋತುಬಿದ್ದವಳಿವಳು. ಜೊತೆಗೆ ಬರೀ ಮನೆಗೆಲಸ ಹೊಲಗದ್ದೆ ತೋಟಗಳಿಗಷ್ಟೇ ಮೀಸಲಾಗದೇ ಅದರಾಚೆಯೂ ಉದ್ಯೋಗಕ್ಕಾಗಿ ಕಾಲು ಚಾಚಿ ಅಲ್ಲಿಯೂ ಸಫಲಳಾದಳು. ಹೀಗೆ ಅಂಗಳ ದಾಟಿದ ಗೃಹಿಣಿಗೆ ರಾಜಕೀಯವಾಗಿ ತಾನು ತೊಡಗಿಕೊಳ್ಳಬೇಕು, ಆಮೂಲಕ ತನ್ನ ಸಮಾಜ ತನ್ನ ದೇಶ ಸದೃಢ ವಾಗಬೇಕೆಂಬ ವಿಚಾರ ಬಂದಿದ್ದೇ ತಡ ಆ ನಿಟ್ಟಿನಲ್ಲಿ ಸತತ ಪರಿಶ್ರಮದಲ್ಲಿ ತೊಡಗಿದಳು. ಇಂದು ಗೃಹಿಣಿ ಹಳ್ಳಿಯ ಪಂಚಾಯತ ರಾಜಕೀಯದಿಂದ ಇಡೀ ರಾಷ್ಟ್ರದ ಅಧ್ಯಕ್ಕಳಾಗುವವರೆಗಿನ ಹೊಣೆಗಾರಿಕೆಯನ್ನು ಹೊರುವಷ್ಟು ಸಬಲಳಾದಳೆಂದರೆ ಅವಳ ಆತ್ಮಬಲ, ಸಂಕಲ್ಪ ಶಕ್ತಿ ನಿಜಕ್ಕೂ ಅದ್ಭುತ. ಗಂಡು ಸಂತಾನಕ್ಕೆ ಸಿಗುವ ಮೊದಲ ಆದ್ಯತೆ ಆಯ್ಕೆ ಹೆಣ್ಕಂದಮ್ಮಗಳಿಗೂ ಸಿಗಬೇಕೆಂಬುದನ್ನು ಲಕ್ಷ್ಯದಲ್ಲಿಟ್ಟುಕೊಂಡು ಹೆಣಗಿದವಳಿವಳು.
ಹೆಣ್ಣು ಗಂಡಿನ ನಡುವೆ ತಾರತಮ್ಯ ಅಳಿಯಬೇಕಾದರೆ ತಾನು ಆರ್ಥಿಕ ವಾಗಿ ಸದೃಢಳಾಗಬೇಕೆಂಬುದನ್ನು ಮನಗಂಡವಳು ಗೃಹಿಣಿ. ಕೇವಲ ಸಣ್ಣಪುಟ್ಟ ಗೃಹೋಧ್ಯಮಗಳಲ್ಲಿ ಮಾತ್ರವಲ್ಲ ಮಹಾನ್ ಉಧ್ಯಮ ಕ್ಷೇತ್ರವಾದ ತಂತ್ರಜ್ಞಾನದಲ್ಲಿ ಕೂಡ ಗೃಹಿಣಿ ಪುರುಷನಿಗೆ ಸರಿಸಮಾನವಾಗಿ ತೊಡಗಿಕೊಂಡು ತನ್ನ ಯಶೋಗಾಥೆ ಮೆರೆದಿದ್ದಾಳೆ. ಕಿರಣ ಮುಜುಂದಾರ ಸುಧಾ ಮೂರ್ತಿ ಯಂತ ಅದೆಷ್ಟೋ ಗೃಹಿಣಿಯರನ್ನಿಲ್ಲಿ ಉದಾಹರಣೆಯಾಗಿ ನೋಡಬಹುದು. ಅದಷ್ಟೇ ಅಲ್ಲ ಹಳ್ಳಿಯ ತೀರಾ ಸಾಮಾನ್ಯ ಹೆಣ್ಣುಗಳೂ ಕೂಡ ಮನೆಯಾಚೆಯೂ ದುಡಿಮೆ ಕಚ್ಚಿಕೊಂಡು ಆರ್ಥಿಕ ಸಬಲತೆಯನ್ನು ಸಾಧಿಸಿತ್ತಿದ್ದಾರೆ. ಹಾಗೆ ಇಂದು ಎಲ್ಲ ಕ್ಷೇತ್ರಗಳಲ್ಲಿ ತನ್ನಪ್ರತಿಭೆಯನ್ನು ಸಾಬೀತುಪಡಿಸುತ್ತಲೇ ನಡೆದವಳು ಈ ಗೃಹಿಣಿ ಎಂಬ ಹೆಣ್ಣು ಜೀವ.. ಅವಳ ಈ ನಾಗಾಲೋಟದಲ್ಲಿ ಅವಳು ಒಂಟಿಯಾಗಿಯೇ ಎಲ್ಲವನ್ನೂ ಸಾಧಿಸಿದಳು ಎಂದರೆ ತಪ್ಪಾದೀತು. ಮೊದಲಿಗೆ ಆರ್ಯ ಸಮಾಜ ಬ್ರಹ್ಮ ಸಮಾಜಗಳ ನೆರವಿನ ಮೂಲಕ ಗೃಹಿಣಿ ಎಂಬ ಹೆಣ್ಣಿನ ಬದುಕು ನೇವರಿಸುವ ಸಂಕಲ್ಪ ತೊಟ್ಟ ರಾಜಾರಾಮ್ ಮೋಹನ ರಾಯ್, ಈಶ್ವರ ಚಂದ್ರ ವಿದ್ಯಾ ಸಾಗರ ಅಂಥ ಅನೇಕ ಹಿರಿಯರನ್ನು ನೆನೆಯಲೇ ಬೇಕು. ಹೆಣ್ಮಕ್ಕಳನ್ನು ಸಮಾನ ಪ್ರೀತಿಯಿಂದ ಕಂಡ ನಮ್ಮ ಬಾಪೂಜಿಯವರನ್ನು ಹಾಗೂ ಅಂತಹ ಅದೆಷ್ಟೋ ನಾಯಕರನ್ನು ಮರೆಯಕೂಡದು. ಎಲ್ಲಕ್ಕೂ ಮಿಗಿಲಾಗಿ ನಮ್ಮ ಸಂವಿಧಾನವು ಲಿಂಗ ಸಮಾನತೆಯ ಮೂಲಕ ಸದಾ ಅವಳ ಬೆನ್ನಿಗೆ ನಿಂತಿದೆ. ಪುರುಷನಿಗೆ ಸರಿಸಮಾನವಾಗಿ ಎಲ್ಲ ಮೂಲಭುತಹಕ್ಕುಗಳನ್ನು ನೀಡುವದರೊಂದಿಗೆ ಅವಳ ನಡಿಗೆಗೆ ವಜ್ರಬಲ ನೀಡಿದೆ. ನ್ಯಾಯಾಂಗ ಸದಾ ಇವಳ ಹಿಂದೆ ನಿಂತು ಬೆನ್ನಿಗೆ ಬಲ ನೀಡಿತೆಂಬುದನ್ನು ಒಪ್ಪಿಕೊಂಡು ಅವಳು ಸದಾ ಕೃತಜ್ಞಳಾಗಿರಬೇಕು. ಜೊತೆಗೆ ಸರ್ಕಾರಗಳು ಅವಳ ಜೊತೆಗಿದ್ದು ಅವಳಿಗಾಗಿ ಅನೇಕ ಯೋಜನೆಗಳನ್ನ ರೂಪಿಸಿದ್ದನ್ನ ನೆನಸಿಕೊಳ್ಳಬೇಕು.. ಜೊತೆಗೆ ಸಹೃದಯ ಪುರುಷ ಸಮೂಹವೂ ಕೂಡ ಅವಳ ಜೊತೆಗಿದ್ದುದಿದೆ. ಅವರಿಗೂ ಕೃತಜ್ಞಳಾಗಿರಲೇಬೇಕು.
ಇಷ್ಟಾಗಿಯೂ ಕೂಡ ನೂರಕ್ಕೆ ನೂರು ಪ್ರತಿಶತ ಗೃಹಿಣಿಯರು ಸುಖಿಗಳು ಎಂದುಕೊಳ್ಳು ವಂತಿಲ್ಲ ಇಂದಿಗೂ ಅದೆಷ್ಟೋ ಜನ ಗೃಹಿಣಿಯರು ಆಧುನಿಕ ಸುಖ ಸೌಲಭ್ಯಗಳ ಜೊತೆಗೆ ಸ್ವಾತಂತ್ರ್ಯ ದಿಂದ ವಂಚಿತರಾಗಿ ನರಳುತ್ತಲೇ ಇದ್ದಾರೆ. ಕೊಟ್ಟ ಕೊನೆಯ ಹೆಣ್ಣಗೂ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ , ವೈಚಾರಿಕತೆ ಮುಟ್ಟಲಿ ಎನ್ನುವದು ಎದೆಯ ಆಶಯ… ಇಂದಿಗೂ ನಸ್ತ್ರೀ ಸ್ವಾತಂತ್ರ್ಯ ಮರ್ಹಸಿ ಎಂಬ ಕಟ್ಟಾ ಸಂಪ್ರದಾಯಸ್ಥವಾದಿಗಳ ಪುರಷನೆಂಬ ಪೌರುಷ್ಯದ ಕಪಿಮುಷ್ಠಿಯಲ್ಲಿ ಸಿಕ್ಕು ನಲುಗುವ ಗೃಹಿಣಿಯರು ನಮ್ಮ ನಡುವೆ ಇದ್ದಾರೆ. ಹಾಗಂತ ಅವರು ಇಂದಿಗೂ ತಮ್ಮ ಸಹನೆ ಸಂಯ್ಯಮ ಮೀರದೇ ಸಮಾಜದ ಹಾಗೂ ಅದರ ಮೂಲವಾದ ಕುಟುಂಬದ ಸ್ವಾಸ್ಥ್ಯ ಕಾಯುತ್ತಿರುವದು ಗೃಹಿಣಿಯೆಂಬ ಹೆಣ್ಣಿನ ವಿಶೇಷ ಹಾಗೂ ವಿಸ್ಮಯದ ನಡೆ. ಕುಟುಂಬದಲ್ಲಿ ಗೃಹಿಣಿ ಎಂಬ ಪದಕ್ಕೆ ಪುಲ್ಲಿಂಗ ಪದ ಗೃಹಸ್ಥ , ತನ್ನ ಅಹಂ ನ್ನು ತಾನಾಗಿ ಅಡಗಿಸಿಕೊಳ್ಳುವದು ಮಾತ್ರವಲ್ಲ ಗೃಹಿಣಿಗೂ ಹೃದಯ ಮನಸ್ಸು ಇದೆ ಎನ್ನುವದನ್ನು ಅರಿವಿಗೆ ತಂದುಕೊಳ್ಳಬೇಕಾದ ಅಗತ್ಯ ಅಂದಿಗೂ ಇಂದಿಗೂ ಎಂದಿಗೂ ಸರ್ವ ಸಮ್ಮತ. ಗೃಹಿಣಿ ಗೃಹಲಕ್ಷ್ಮಿ ಎಂದು ಅಟ್ಟಕ್ಕೇರಿಸಿ ಕಾರ್ಯ ಸಾಧಿಸಿಕೊಳ್ಳುವದಕ್ಕಿಂತ ಅವಳೂ ಒಂದು ಜೀವ ಎಂಬ ಮಾನವೀಯತೆ ಮೆರೆದರೆ ಬಹುಶಃ ಗೃಹಿಣಿಯರ ಈ ತನಕದ ಸಂಘರ್ಷ ಸಾರ್ಥಕ. ತಾನುರಿದು ಜಗವ ಬೆಳಗುವ ಜ್ಯೋತಿಯಂತೆ, ತನ್ನ ತಾನು ತೇದುಕೊಂಡು ಕಂಪಡರುವ ಗಂಧದ ಕೊರಡಿನಂತೆ ಈ ಗೃಹಿಣಿ ಎಂಬ ಗರತಿಯರು. ಒಂದು ಕಾಲಕ್ಕೆ ನಾಲ್ಕು ಗೋಡೆಯೊಳಗೆ ತಮ್ಮೆದೆಯ ಉಮ್ಮಳಗಳನ್ನು ನುಂಗಿಕೊಂಡು ಇದ್ದರೂ ಇರದಂತೆ ಸದ್ದಿಲ್ಲದೇ ಬದುಕುವ ಗೃಹಿಣಿಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಮರ್ಥವಾಗಿ ಅಥವಾ ಅವರಿಗಿಂತ ತುಸು ಮಿಗಿಲಾಗಿ ತಮ್ಮನ್ನು ತಾವು ಸಾಬೀತು ಪಡಿಸಿಕೊಂಡು ಗೃಹಿಣಿ ಸರ್ವತ್ರಮುಚ್ಛ್ಯತೆ ಎನ್ನುವದನ್ನು ಜಗಕೆ ಸಾರಿದ್ದಾರೆ. ಇಂದಿಗೂ ಸಂಸ್ಕಾರ ಸಂಸ್ಕೃತಿ ಸೌಜನ್ಯ ಸಹನೆ ಸಂಯ್ಯಮಗಳೆಂಬ ಜೀವನ ಮೌಲ್ಯಗಳ ಮಾತು ಬಂದಾಗೆಲ್ಲ ಇಡೀ ವಿಶ್ವವೇ ಭಾರತದ ತಾಯೆಂಬ, ಅಜ್ಜಿ ಅಕ್ಕ ತಂಗಿ ಅತ್ತೆ ಅತ್ತಿಗೆಯರೆಂಬ ಗೃಹಿಣಿಯರ ಕಡೆ ತಿರುಗಿ ನೋಡುತ್ತಾರೆಂಬುದು ಗೃಹಿಣಿ ಕುಲಕ್ಕೆ ಸಲ್ಲುವ ಅನನ್ಯ ಗೌರವ. ಇವರಿಲ್ಲದ ಒಂದು ಕುಟುಂಬವನ್ನು ಒಂದು ಸಮಾಜವನ್ನು ಅಷ್ಟೇ ಏಕೆ ಇವರಿಲ್ಲದ ಇಡೀ ವಿಶ್ವವನ್ನು ಊಹಿಸಿಕೊಳ್ಳುವದು ಕೂಡ ಅಸಾಧ್ಯ. ಇಂಥಹ ಗೃಹಿಣಿಯರಿಗೆ ಶತಶತ ಸಲಾಮು ಸಲ್ಲಿಸುತ್ತ…….
ಪ್ರೇಮಾ ಟಿ ಎಂ ಆರ್