ಕೆ. ಎನ್.ಚಿದಾನಂದ-ವಿಶ್ವ ಪ್ರೇಮವು ಹೃದಯ ವೈಶಾಲ್ಯತೆಯ ಸಂಕೇತ!

ಲೇಖನ

ಕೆ. ಎನ್.ಚಿದಾನಂದ

ವಿಶ್ವ ಪ್ರೇಮವು ಹೃದಯ ವೈಶಾಲ್ಯತೆಯ ಸಂಕೇತ!

ವಸುದೈವ ಕುಟುಂಬಕಂ ಅಂದರೆ ಇಡೀ ಪ್ರಪಂಚವೇ ಒಂದು ಕುಟುಂಬವಾಗಿದೆ. ನಾವೆಲ್ಲರೂ ವಿಶ್ವ ಕುಟುಂಬದ ಸದಸ್ಯರಾಗಿದ್ದೇವೆ. ವಿಶ್ವ ಪ್ರೇಮ ಎಂಬ ಮನೋಭಾವನೆ ನಮಗೆ ಅತ್ಯಗತ್ಯವಾಗಿ ಬೇಕಾಗಿದೆ. ವಿಶ್ವ ಪ್ರೇಮ ಎಂಬುದು ಒಂದು ವಿಶಾಲವಾದ ಮನೋಭಾವವಾಗಿದ್ದು, ಹೃದಯ ವೈಶಾಲ್ಯತೆಗೆ ಸಂಬಂಧಿಸಿದ್ದಾಗಿದೆ. ಈ ವಿಶ್ವವು ನಾವು ಕೇಳುವುದಕ್ಕಿಂತ ಮೊದಲೇ ನಮಗೆ ಅಗತ್ಯವಾದುದನ್ನೆಲ್ಲಾ ನೀಡಿದೆ. ಪಂಚಭೂತಗಳಿಂದ ಬ್ರಹ್ಮಾಂಡದ ಸೃಷ್ಟಿಯಾಗಿದೆ ಎನ್ನುವುದಾದರೆ ಆ ಎಲ್ಲಾ ಪಂಚಭೂತಗಳಾದ ನೀರು ಗಾಳಿ ಬೆಂಕಿ ಭೂಮಿ ಆಕಾಶ ಇವೆಲ್ಲವೂ ನಮಗೆ ಈ ವಿಶ್ವದ ಕೊಡುಗೆಯಾಗಿದೆ. ನಾವೆಲ್ಲರೂ ವಿಶ್ವವೆಂಬ ಒಂದೇ ಕುಟುಂಬದ ಸದಸ್ಯರಾದರೂ ಎಲ್ಲರಲ್ಲೂ ಅಭಿಪ್ರಾಯಗಳು , ಮನೋಭಾವಗಳು, ಆಸೆಗಳು, ನೋಟಗಳು, ಕ್ರಿಯಾತ್ಮಕ ಚಟುವಟಿಕೆಗಳು, ಆಲೋಚನೆಗಳು, ನಡೆವಳಿಕೆಗಳು, ವಿಚಾರಗಳು, ಅಭಿವ್ಯಕ್ತಿಗಳು, ಕೌಶಲ್ಯಗಳು, ನೀತಿಗಳು, ಸಿದ್ಧಾಂತಗಳು, ಆಚರಣೆಗಳು, ಕೆಲಸಗಳು ಮತ್ತು ಅನುಭವಗಳು ವಿಶಿಷ್ಠ, ವಿಭಿನ್ನ , ವೈರುಧ್ಯತೆ ಹಾಗೂ ವೈವಿಧ್ಯತೆಗಳಿಂದ ಕೂಡಿವೆ. ವಿಶ್ವ ಪ್ರೇಮ ಮೂಡಿಸುವಲ್ಲಿ ವಿಭಿನ್ನ ವೈರುಧ್ಯತೆಯ ಮನೋಭಾವಗಳು ಅಡಚಣೆಗಳಾಗಿವೆ.

ಈಗಾಗಲೇ ವಿಶ್ವವು ಎರಡು ಮಹಾ ಯುದ್ಧಗಳನ್ನು ಕಂಡಿದೆ. ಮೊದಲನೇ ಮಹಾಯುದ್ಧವು  ( 1914 ರಿಂದ 1918 ) ವಿಶ್ವ ಇತಿಹಾಸದಲ್ಲಿ ನಡೆದ ಇತರೆಲ್ಲಾ ಯುದ್ಧಗಳಿಗಿಂತ ವಿಭಿನ್ನತೆಯಿಂದ ಕೂಡಿದೆ. ಇತರೆ ಯಾವ ಯುದ್ಧವೂ ಉಂಟು ಮಾಡದಷ್ಟು ಹಾನಿಯನ್ನೂ ಮತ್ತು ನಷ್ಟವನ್ನೂ ಉಂಟು ಮಾಡಿತು. ಮಿತಿಮಿರಿದ ಸಾವು ನೋವುಗಳುಂಟಾದವು. ಅದೆಷ್ಟೋ ಚಿಕ್ಕಪುಟ್ಟ ರಾಷ್ಟ್ರಗಳ ಬೆಳವಣಿಗೆ ನಿಂತೇ ಹೋಯಿತು. ಮೊದಲನೇ ಮಹಾಯುದ್ಧಕ್ಕಿಂತಲೂ ಎರಡನೇ ಮಹಾಯುದ್ಧ (1939 ರಿಂದ 1945) ಭೀಕರತೆಯ ರೌದ್ರ ನರ್ತನವನ್ನು ಮಾಡಿತು. ಅಮಾನುಷ ಘಟನೆಗಳು ಸಂಭವಿಸಿದವು. ಬರ್ಬರತೆ ಎಲ್ಲೆ ಮೀರಿ ನಿಂತು ಮಾನವ ಜನಾಂಗದ ಹಾನಿಯಾಯಿತು. ಅದೆಷ್ಟೋ ರಾಷ್ಟ್ರಗಳ ಲೆಕ್ಕವಿಲ್ಲದಷ್ಟು ಸಂಪತ್ತು ನಷ್ಟವಾಯಿತು. ಅದೆಷ್ಟೋ ರಾಷ್ಟಗಳು ಪುನಃ ಚೇತರಿಕೆಯನ್ನು ಕಾಣಲು ದಶಕಗಳನ್ನೆ ಸವೆಸಿದವು. ಈಗಲೂ ನಾವು ಅಲ್ಲಲ್ಲಿ ರಾಷ್ಟ್ರ – ರಾಷ್ಟ್ರಗಳ ನಡುವೆ ಹೊಡೆದಾಟ , ಬಡಿದಾಟಗಳನ್ನು ದಿನಪತ್ರಿಕೆ ಸಮೂಹ ಮಾಧ್ಯಮಗಳ ಮೂಲಕ ತಿಳಿಯುತ್ತಲೆ ಇದ್ದೇವೆ. ಹಾಗಾದರೆ ಮನುಷ್ಯ ಬದಲಾಗುವುದು ಯಾವಾಗ? ಎಂಬುದೇ ಜಿಜ್ಞಾಸೆ.

ಇಪ್ಪತ್ತೊಂದನೇ ಶತಮಾನದ ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವು ನಾವು ಭಾರತದ ಮಹಾಕಾವ್ಯಗಳಾದ ಯುಗಯುಗಗಳ ಚಾರಿತ್ರಿಕ ಹಿನ್ನೆಲೆಯುಳ್ಳ ಮಹಾಭಾರತ ಮತ್ತು ರಾಮಾಯಣದಲ್ಲಿ ದ್ವೇಷ , ವ್ಯಾಮೋಹ ಮತ್ತು ಕ್ರೌರ್ಯದ ಮನೋಭಾವಗಳಿಂದ ಉಂಟಾದ ಕೇಡನ್ನು ತಿಳಿದಿದ್ದೇವೆ. ಭಗವದ್ಗೀತೆಯು ನಾವು ಬದುಕ ಬೇಕಾದ ರೀತಿ ನೀತಿಗಳನ್ನು, ನಮ್ಮ ಕರ್ಮಫಲದ ಸಂದೇಶವನ್ನು ನಮಗೆ ತಿಳಿಸಿಕೊಟ್ಟಿದೆ. ಉಪನಿಷತ್ ಗಳು ವಿಶ್ವ ಶಾಂತಿಯ ಮತ್ತು ವಿಶ್ವಪ್ರೇಮದ ಸಂದೇಶವನ್ನು ಸಾರಿವೆ. ಪ್ರಭು ಯೇಸುವಿನ ಜೀವನದ ಅಂತಿಮ ಕ್ಷಣದಲ್ಲೂ ತನಗೆ ಹಾನಿ ಮಾಡಿದವರನ್ನು ಕ್ಷಮಿಸೆಂದು ಭಗವಂತನಲ್ಲಿ ಬೇಡುವ ಸಾವಧಾನದ ಮನೋಭಾವವು ವಿಶ್ವಪ್ರೇಮವನ್ನು  ಗಟ್ಟಿಯಾಗಿಸುತ್ತದೆ. ಹೀಗೆಯೆ ಇಸ್ಲಾಂ , ಬೌದ್ಧ, ಜೈನ, ಪಾರ್ಸಿ ಧರ್ಮಗಳೂ ಕೂಡಾ ವಿಶ್ವ ಪ್ರೇಮವನ್ನು ಎತ್ತಿಹಿಡಿಯುತ್ತವೆ.

ವಿಶ್ವಚರಿತ್ರೆಯಲ್ಲಿ ದಾಖಲಾದ ಎರಡು ಮಹಾಯುದ್ಧಗಳ ನಂತರ ಸ್ಥಾಪನೆಯಾದ ವಿಶ್ವಸಂಸ್ಥೆಯ ಮಹದುದ್ದೇಶವು ವಿಶ್ವಶಾಂತಿಯನ್ನು ಕಾಪಾಡುವುದು, ಸುಭದ್ರತೆಯನ್ನು ಒದಗಿಸುವುದು, ಅಂತರ್ರಾಷ್ಟ್ರೀಯ ಸ್ನೇಹ ಸಹಕಾರವನ್ನು ಕಾಯ್ದುಕೊಳ್ಳುವುದೇ ಆಗಿದೆ. ಸಾರ್ವತ್ರಿಕವಾಗಿ ವಿಶ್ವಪ್ರೇಮದ ಮನೊಭಾವವನ್ನು ಉಂಟು ಮಾಡುಮದಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಪದೇ ಪದೇ ಹಾಕಿಕೊಳ್ಳುತ್ತಲೇ ಇರುತ್ತದೆ.

ಮಾನವನು ಪ್ರಕೃತಿಯ ಮಡಿಲ ಮಗು. ಅದರೊಂದಿಗೆ ನಿತ್ಯ ನಿರಂತರ ನಿಕಟ ಸಂಪರ್ಕದಲ್ಲಿ ಇದ್ದೇ ಇರುತ್ತಾನೆ. ಹೀಗಿರುವಾಗ ಪ್ರಕೃತಿ ಶೋಷಣೆ ಸರಿಯಲ್ಲ. ಅರಿವೆ , ಆಹಾರ , ಆಶ್ರಯಗಳನ್ನು ನಮಗೆ ನೀಡಿರುವುದು ನಮ್ಮ ಪ್ರಕೃತಿ. ಪ್ರಕೃತಿಯಿದ್ದರೆ ಮಾತ್ರ ನಮ್ಮ ಅಸ್ತಿತ್ವ ಸಾಧ್ಯ. ಅದರ ಹೊರತು ನಮ್ಮಿಂದ ಪ್ರಕೃತಿಯಲ್ಲ. ಪ್ರಕೃತಿಯಲ್ಲಿ ಲಭ್ಯವಾಗುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುವ ಮನುಷ್ಯನಿಗೆ ಪ್ರಕೃತಿಯು ‘ನೀಡುವಿಕೆ’ ಅಥವಾ ‘ಕೊಡುವಿಕೆ’ಯ  ಗುಣ ಸ್ವಭಾವವನ್ನು ಕಲಿಸುತ್ತದೆ. ಆದರೆ ಮನಷ್ಯ ಮಾತ್ರ ಪ್ರಕೃತಿಗಾಗಿ ಏನು ಮಾಡಿದ್ದಾನೆಂದು ನೆನೆಸಿಕೊಂಡರೆ ಅದು ತೀರಾ ಕಡಿಮೆ. ಇಲ್ಲಿ ನಮಗೆ ವಿಶ್ವ ಪ್ರೇಮದಲ್ಲಿ ಒಂದಾದ ನಿಸರ್ಗ ಪ್ರೇಮದ ಅರಿವು ಅಗತ್ಯವೆನಿಸುತ್ತದೆ.

ಕನ್ನಡದ ವಿಶ್ವ ಮಾನವ ಕವಿ, ಮಹಾಕವಿ, ರಸಋಷಿ ಕುವೆಂಪುರವರು ವಿಶ್ವದ ಹಾಗೂ ವ್ಯಕ್ತಿಯ ವಿಕಾಸಕ್ಕೆ ಪೂರಕವಾದ ಪಂಚ ಮಹಾ ತತ್ವಗಳನ್ನು ನೀಡಿದ್ದಾರೆ. ” ಓ ನನ್ನ ಚೇತನ ಆಗು ನೀ ಅನಿಕೇತನ ” ಎನ್ನುವ ಮೂಲಕ ಕವಿ ಕುವೆಂಪುರವರು ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಎಂಬ ವಿಶ್ವ ಮಾನವ ಸಂದೇಶವನ್ನು ನೀಡಿದ ಮಹಾನ್ ಚೇತನರಾಗಿದ್ದಾರೆ. ಆಗ ತಾನೇ ಹುಟ್ಟಿದ ಮಗು ವಿಶ್ವ ಮಾನವನಾಗಿಯೇ ಇರುತ್ತದೆ. ಆದರೆ ಅದೇ ಮಗು ಬೆಳೆಯುತ್ತಾ ಬೆಳೆಯುತ್ತಾ ವಿಶ್ವ ಮಾನವ ಪರಿಕಲ್ಪನೆಯನ್ನೇ ಮರೆತು ಬಿಡುತ್ತದೆ. ತನ್ನ ಕುಲ, ಜಾತಿ, ಮತ, ಪಂಥ ಮತ್ತು ಧರ್ಮ ಇವುಗಳ ಬಲೆಯಲ್ಲಿ ಸಿಕ್ಕಿಕೊಂಡು ಸಂಕುಚಿತ ಮನೋಭಾವದಿಂದ ಬೆಳೆಯ ತೊಡಗುತ್ತದೆ. ಸ್ವಾರ್ಥ, ದ್ವೇಷ, ಮದ, ಮಾತ್ಸರ್ಯಗಳಿಂದ ತುಂಬಿಕೊಂಡ ಮಗು ಲೋಭದ ಮೋಹಿತವಾಗುತ್ತದೆ. ಭವಿಷ್ಯದಲ್ಲಿ ಬೆಳೆದು ದೊಡ್ಡವನಾಗಿ ಕಾಮುಕನಾಗುತ್ತಾನೆ. ಕ್ರೋಧಿತನಾಗುತ್ತಾನೆ. ಸಮಾಜಕ್ಕೆ ಕಂಟಕಪ್ರಾಯನಾಗುತ್ತಾನೆ. ಏಕೆಂದರೆ ಹಿರಿಯರಾದ ನಾವುಗಳು ಮಗುವಿನಲ್ಲಿ ಹೃದಯ ವೈಶಾಲ್ಯತೆ, ಹೃದಯ ಶ್ರೀಮಂತಿಕೆಯನ್ನು ತುಂಬುವ ಜಾಗದಲ್ಲಿ ವಿಷ ಮನಸ್ಸಿನ ಸಂಕುಚಿತ ಬುದ್ಧಿಯನ್ನು ತುಂಬಿ ವಿಶ್ವಮಾನವನನ್ನು ಅಲ್ಪಮಾನವನನ್ನಾಗಿಸಿ ಬಿಡುತ್ತೇವೆ. ಈ ರೀತಿ ಆಗಬಾರದು. ವಿಶ್ವಮಾನವನಾದ ಮಗು ಮುಂದೆ ಬೆಳೆದು ದೊಡ್ಡವನಾದಾಗಲೂ ವಿಶ್ವ ಮಾನವನಾಗಿಯೇ ಬಾಳಿ ಬದುಕಬೇಕು. ಮನುಷ್ಯತ್ವವುಳ್ಳ ಮಾನವೀಯತೆಯ ಮನುಜಮತವನ್ನು ನಾವು ಪಾಲಿಸಬೇಕು. ನಮ್ಮ ಜೀವನಯಾನ ವಿಶ್ವಪಥದಲ್ಲಿ ಸಾಗಬೇಕು. ವಿಶಾಲವಾದ ದೃಷ್ಟಿಕೋನವಿರಬೇಕು. ಸರಳ ಜೀವನ ಉದಾತ್ತ ಚಿಂತನೆಗಳಿಂದ ಮಾನವನ ಮನಸ್ಸು ತುಂಬಿರಬೇಕು. ನಮ್ಮ ಚಿಂತನೆಗಳು ಜಾಗತಿಕ ಸುಧಾರಣೆಗಾಗಿ ಇರಬೇಕು. ನಮ್ಮ ಬದುಕೇ ಶಾಂತಿಯ ತಪೋವನವಾಗಬೇಕು. ನಮ್ಮ ಗುರಿ ಅನಂತಡೆಗೆ ವಿಶಾಲವಾಗಿರಬೇಕು. ಜಗದ ಸರ್ವ ಜನರ ಉದ್ಧಾರವನ್ನು ಬಯಸುವುದು ಮತ್ತು ಅದಕ್ಕಾಗಿ ತನ್ನ ಶ್ರಮವನ್ನು ಮೀಸಲಿಡುವುದು ಸರ್ವೋದಯವಾಗುತ್ತದೆ. ಸರ್ವೋದಯ ತತ್ವವು ಸ್ವಾತಂತ್ರ್ಯವನ್ನು ನೀಡುತ್ತದೆ. ಆದರೆ ಅದು ಸ್ವೇಚ್ಛಾಚಾರಕ್ಕೆ ಮಾರ್ಗವಾಗಬಾರದು. ಯೋಧ ಮತ್ತು ರೈತರಂತೆ ನಿಸ್ವಾರ್ಥ ಮನೋಭಾವ ಬೆಳೆಸಿಕೊಂಡು ಜಗದೇಳಿಗೆಯೇ ಮೂಲ ಮಂತ್ರವಾಗಬೇಕು. ಎಲ್ಲಾ ಜಾತಿ, ಮತ, ಪಂಥ, ಧರ್ಮಗಳನ್ನು ಮೀರಿದ ಸಮಾನತೆಯ ಸಮನ್ವಯತೆಯನ್ನು ಸಾಧಿಸಬೇಕು. ಬಡವ ಬಲ್ಲಿದರ ನಡುವಿನ ಅಂತರ ಕಡಿಮೆಯಾಗಬೇಕು. ಆಗ ಮಾತ್ರವೇ ಸಮನ್ವಯತೆ ಸಾಧಿಸಬಹುದು ಎನ್ನುತ್ತಾರೆ ಕವಿ ಕುವೆಂಪು. ಪ್ರಸ್ತುತದಲ್ಲಿ ಸಮನ್ವಯತೆಯ ಕೊರತೆಯಿಂದಾಗಿ ವಿಶ್ವವು ವೈವಿಧ್ಯಮಯವಾದ ಹಾಗೂ ವಿಭಿನ್ನವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಭಿವೃದ್ಧಿಗೆ ಸರ್ವ ಕ್ಷೇತ್ರಗಳ ಸಮನ್ವಯ ಅಗತ್ಯವಿದೆ. ಇದಕ್ಕಾಗಿ ಮನುಷ್ಯನಿಗೆ ಪೂರ್ಣದೃಷ್ಟಿ ಬೇಕಾಗುತ್ತದೆ. ಇಂದು ಪೂರ್ಣದೃಷ್ಟಿಯ ಕೊರತೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಮನಷ್ಯನಲ್ಲಿ ಇಂದು ಸಹಕಾರ ತತ್ವ ಅಗತ್ಯವಾಗಿ ಬೆಳೆಯಬೇಕಿದೆ. ಅಂತರರಾಷ್ಟ್ರೀಯ ಶಾಂತಿ ಸ್ಥಾಪನೆಯಲ್ಲಿ ವಿಶ್ವ ಪ್ರೇಮದ ಮನೋಭಾವವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ಸಮಷ್ಠಿಯ ಪ್ರಗತಿಯ ಕುರಿತು ಚಿಂತಿಸುವ ಮತ್ತು ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲರೂ ವಿಶ್ವ ಪ್ರೇಮದ ಮನೋಭಾವವನ್ನು ಬೆಳೆಸಿಕೊಳ್ಳೊಣ. ಸರ್ವೇ ಜನಾಃ ಸುಖಿನೋ ಭವಂತು.

———————

ಕೆ. ಎನ್.ಚಿದಾನಂದ 

Leave a Reply

Back To Top