ಶಾರು ಕವಿತೆ-ಮೌನ ಕದಳಿಯ ದಾಟಿ

ಕಾವ್ಯ ಸಂಗಾತಿ

ಮೌನ ಕದಳಿಯ ದಾಟಿ

ಶಾರು

ಮನದ ಬಾನಂಗಳಕೆ ಎಲ್ಲೆ ಎಲ್ಲಿದೆ ನೋಡು,
ಸ್ವಚ್ಚಂದ ಹಾರುಡುವ ಹಕ್ಕಿ ನಾವಾಗಿರುವಾಗ!

ನೋವಿಲ್ಲದ ಕನಸೂರಿಗೆ ಕವಲುದಾರಿಗಳಿಲ್ಲ ಖರೆ,
ರಹದಾರಿಯ ಪಯಣಿಗರು ನಾವಾಗಿರುವಾಗ!

ದಡವಿಲ್ಲದ ಕಡಲಿಗೆ ನೀಲಿಯೊಂದೆ ನೀಲವಾಗಿದೆ,
ನೆಲಬಾನು ಒಪ್ಪಿ ತಬ್ಬಿದಂತೆ ನಾವಾಗಿರುವಾಗ!

ಮನದ ಲಜ್ಜೆ ಕಾಯದ ಲಜ್ಜೆಗಿಲ್ಲ ಮಡಿವಂತಿಕೆ,
ಭಾವಾಗೀತಾತ್ಮದ ಬೈಗು ಜಾವ ನಾವಾಗಿರುವಾಗ!

ನನ್ನೊಳಗೆ ನೀ ನಕ್ಕು ನಿನ್ನೊಳಗೆ ನಾ ಅರಳಿದಂತೆ,
ಕವನದ ಪದ ಪದಗಳ ಸಾಲು ನಾವಾಗಿರುವಾಗ!

ನಿನ್ನ ತೋಳು ನನ್ನ ತಬ್ಬಿ ಹಣೆಗೆ ಮುತ್ತಿಡುವಲ್ಲಿ,
ಸಮಯವೇ ಶರಣುಬಂದಂತೆ ನಾವಾಗಿರುವಾಗ

ಬೆಸೆಯದಂತೆ ಮತ್ತೆ ಬೇರೆಯಾಗದ ಮಾತೇ ಇಲ್ಲ,
ಒಂದಾದ ನುಡಿ ನಡೆ ನೆಲೆಯೆ ನಾವಾಗಿರುವಾಗ!


ಶಾರು

Leave a Reply

Back To Top