ಶಂಕರಾನಂದ ಹೆಬ್ಬಾಳ ಕವಿತೆ- ಸೀರೆ ಪುರಾಣ

ಕಾವ್ಯ ಸಂಗಾತಿ

ಸೀರೆ ಪುರಾಣ

ಶಂಕರಾನಂದ ಹೆಬ್ಬಾಳ

ಇದೆ ಸೀರೆಯಲ್ಲವೆ….
ಅತ್ತಾಗ ನಮ್ಮ ಕಂಬನಿ ಒರೆಸಿದ್ದು
ಮಳೆಗಾಲದಿ ನಮ್ಮ ಶಿರವ ರಕ್ಷಿಸಿದ್ದು

ಇದೆ ಸೀರೆಯಲ್ಲವೆ….
ಈಗ ಧೂಳುಗಟ್ಟಿ ಬಣ್ಣ ಮಾಸಿ
ಟ್ರಂಕಿನಲಿ ಲಕಲಕ ಹೊಳೆದು
ಜೀರುಂಡೆಗಳ ವಾಸದಲಿ ಮಿಂದದ್ದು

ಇದೆ ಸೀರೆಯಲ್ಲವೆ….
ಮಾವಿನ ಮಾಟದ ಅಂಚು
ಧಡಿಯ ಸೊಬಗಿನ ಸೊಗಸಿನಲಿ
ರಾಣಿಯಂತೆ ಮೆರೆದದ್ದು…

ಇದೆ ಸೀರೆಯಲ್ಲವೆ…
ಮೊದಲ ಸೀಮಂತಕ್ಕೆ ಕಾಣಿಕೆ
ಪಡೆದು ವರ್ಷಗಳ ಸವೆಸಿ
ನೆನೆಪಿನ ಬುತ್ತಿಯಲಿ ಉಳಿದದ್ದು….

ಇದೆ ಸೀರೆಯಲ್ಲವೆ…
ಸಭೆಯಲ್ಲಿ ದ್ರೌಪದಿಗೆ ಅಕ್ಷಯ
ವಸ್ತ್ರವಾಗಿ ಮಾನ ಕಾಪಾಡಿ
ಮಾನಿನಿಯನ್ನು ರಕ್ಷಿಸಿದ್ದು….

ಇದೆ ಸೀರೆಯಲ್ಲವೆ…
ಬಡವರ ಮಕ್ಕಳ ತೊಟ್ಟಿಲಾಗಿ
ಜೋಗುಳ ಹಾಡಿ ನಲಿಸಿದ್ದು…

ಇದೆ ಸೀರೆಯಲ್ಲವೆ…
ಕೊನೆಗೆ ಉಳಿದಾಗ ಮಕ್ಕಳ
ಕುಲಾವಿಯಾಗಿ ಶಿರದಲ್ಲಿ ನಲಿದು
ಮರಳಿ ಕೌದಿಯಲ್ಲಿ ರಾರಾಜಿಸಿದ್ದು….

ಇದೆ ಸೀರೆಯಲ್ಲವೆ….
ಮಲಗಲು ಹಾಸಿಗೆ ಇಲ್ಲದಾಗ
ಬೆಳದಿಂಗಳ ರಾತ್ರಿಯಲಿ
ಕೈತುತ್ತುಂಡು ನಿದಿರೆಯಲ್ಲಿ
ಸವಿಕನಸಿನಲ್ಲಿ ತೇಲಿಸಿದ್ದು….

ಸೀರೆ ಈಗಲೂ ಇದೆ
ಭಾವಚಿತ್ರದಲ್ಲಿ ನೂರು ಭಾವಗಳ
ಅರಳಿಸಿ ಸ್ಮೃತಿ ಪಟಲದಲಿ
ಅದ್ಬುತ ವೈಚಿತ್ರ್ಯ ಸೃಷ್ಟಿಸಿ
ವೈಭವದಲಿ ಹಾಗೆ ಕುಳಿತಿದೆ
ತೊಟ್ಟಿಲಿನ ಮಗುವಂತೆ
ಧ್ಯಾನಕ್ಕೆ ಕುಳಿತ ಯೋಗಿಯಂತೆ
ಮಡಚಿಟ್ಟ ಪದರುಗಳು
ಅಂಚು, ಸೆರಗು
ಇನ್ನು ಉಳಿದಿದೆ ಅದೆ ಹಳೆಯ
ಕಬ್ಬಿಣದ ಟ್ರಂಕಿನಲಿ….


ಶಂಕರಾನಂದ ಹೆಬ್ಬಾಳ

Leave a Reply

Back To Top