ಮಳೆರಾಯ- ಲಲಿತಾ ಮು ಹಿರೇಮಠ

ಲಹರಿ ಸಂಗಾತಿ

ಲಲಿತಾ ಮು ಹಿರೇಮಠ.

ಮಳೆರಾಯ

ಇನ್ನೇನು  ಬೇಸಿಗೆಯ ಸುಡು ಬಿಸಿಲು ಕರಗಿ ಮಳೆರಾಯನ ಆಗಮನದ ಹೊತ್ತು. ಎಲ್ಲರೂ ಮಳೆ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಮಳೆರಾಯನಂತೂ ನವ ವಧುವಿನಂತೆ ಹೆಜ್ಜೆಯ ಮೇಲೆ ಹೆಜ್ಜೆ ಇರಿಸುತ ಮೆಲ್ಲ ಮೆಲ್ಲನೆ ಆಗಮಿಸುತ್ತಿದ್ದಂತೆ, ಎಲೆಲ್ಲೂ ಹೊಸ ಸಂತಸ. ಈ ಮಳೆ ಹನಿಗಳ ವೈಭೋಗವೇ ಅಂತಹದ್ದು. ಎಲ್ಲಿ ನೋಡಿದಲ್ಲೆಲ್ಲ ಹಸಿರು ಮೂಡುವ ಘಳಿಗೆ. ಕಣ್ಣಿಗೆ ಮನಸ್ಸಿಗೆ ಅದೇನೋ ನವಿರಾದ ಕಂಪನ. ಮನದಲ್ಲಿ ಅಡಗಿರುವ ಅದೆಷ್ಟೋ ಪ್ರೀತಿ ಮಾತುಗಳು ನಲ್ಲ ನಲ್ಲೆಯರ ನಡುವೆ ಹೂ ಬಿಡುವ ಕಾಲ.
     ಮಳೆ ಬರುವ ಹೊತ್ತು
     ನಿನ್ನ ನೆನಪ ಹೊತ್ತು
     ನೂರೆಂಟ ಕನಸುಗಳ ಹೆತ್ತೆ ನಾ….  ಎಂದು ಕವಿಗಳೆಲ್ಲ ಲೇಖನಿ , ಪೆನ್ನು ಹಿಡಿದು ಕೂಡುವ ಹೊತ್ತು ಎಂದರೂ ತಪ್ಪಾಗಲಾರದು. ಬೀದಿಯಲ್ಲಿ ತುಂತುರು ಮಳೆ ಹನಿಯ ಸಂಗಮದಲ್ಲಿ ಕೊಡೆ ಹಿಡಿದು ನಡೆವ ವೈಯಾರಿಯ ಕುರಿತು ಯಾವ ಕವಿಯು ತಾನೇ ಕವನ ಬರೆಯದಿರಲಾರ ಹೇಳಿ. ಮಾತು ಬಾರದ ಮನಗಳಿಗೆ ಮಾತು ಕಲಿಸುವ ಈ ಮಳೆರಾಯನ ತುಂಟತನ ನಿಜಕ್ಕೂ ಈ ಜಗದ ಸೂಜಿಗ.

      ತುಂತುರು ಮಳೆಯಲ್ಲಿ ದಣಿದು ಮನೆಗೆ ಬಂದಾಗ ಬಿಸಿ ಬಿಸಿ ಹಬೆಯಾಡುವ ಚಹಾ ಹಾಗೂ ಬಿಸಿಯಾದ ಪಕೋಡಗಳ ಜೊತೆಗೆ ಮನೆಯ ಅಂಗಳದಲ್ಲಿ ಕುಳಿತು ಚಹಾ ಹೀರುವ ಅನುಭವ ನಿಜಕ್ಕೂ ಅದನ್ನು ಅನುಭವಿಸಿದವರಿಗೆ ಗೊತ್ತು. ಅಂದು ಆ ಸುಡು ಬಿಸಿಲಿನಲ್ಲಿ ಕಷ್ಟಪಟ್ಟು ಅವ್ವ ಹಾಕಿದ ಅಕ್ಕಿ ಶ್ಯಾಂಡಿಗೆ, ಹಲಸು ಹಪ್ಪಳ ಹೀಗೆ ಕುರುಕಲು ತಿಂಡಿಗಳನ್ನು ಹೀಗೆ ಮಳೆ ಬರುವ ಸಮಯದಲ್ಲಿ ಕುರು ಕುರು ಎಂದು ಮೆಲ್ಲುತ್ತಿದ್ದರೆ ಆಗ ನಿಜಕ್ಕೂ ಅಮ್ಮನ ಕೈ ರುಚಿಯ  ಅನುಭವ ಅನುಭವಕ್ಕೆ ಬರುವದಂತೂ ಸುಳ್ಳಲ್ಲ.

      ಮನೆಯಂಗಳದಲ್ಲಿ ಹುಲ್ಲು ಹಾಸಿನ ಮೇಲೆ ಬೀಳುತ್ತಿರುವ ಆನೆಕಲ್ಲುಗಳನ್ನು ಆರಿಸಿ ಕುಣಿಯುತ್ತಿರುವ ಚಿನ್ನರನ್ನು ನೋಡಿದಾಗ ನಾನು ನನ್ನ ಬಾಲ್ಯದ ಒಂದು ಸುತ್ತು ಸುತ್ತಿ ಬಂದಾಯಿತು. ದಿನವೆಲ್ಲಾ ಮನೆಯಲ್ಲಿರಲು ಹೇಳಿದರೂ ಕೇಳಿದ ನಮ್ಮ ಮನೆಯ ಚಿಂಟು ನಾಯಿಮರಿ ಇಂದು ಮಳೆರಾಯನ ಆರ್ಭಟಕ್ಕೆ ಬೆಚ್ಚಗೆ ನನ್ನ ಪಕ್ಕವೇ ಕುಳಿತಿದ್ದಾನೆ .ಬೆರಗು ಗಣ್ಣಿ ನಿಂದ ಮಳೆಯನ್ನೇ ನೋಡುತ್ತಿದ್ದಾನೆ .ಆಗಾಗ ತನ್ನ ಪುಟ್ಟ ಬಾಲವನಲ್ಲಾಡಿಸುತ್ತಾ.

    ರಸ್ತೆ ಮಧ್ಯದ ಗುಂಡಿಗಳಲ್ಲಿ ತುಂಬಿರುವ ನೀರಿನ ನಡುವೆ ರಸ್ತೆಯುದ್ದಕ್ಕೂ ಆಟವಾಡುತ್ತಾ ಸಾಗುವ ಆ ಶಾಲಾ ಮಕ್ಕಳನ್ನು ನೋಡುವುದೇ ಒಂದು ಸೊಗಸು. ಹಾಲುಗಲ್ಲದ ಹಸುಳೆಗೆ ಬೆಚ್ಚನೆಯ ಉಣ್ಣೆಯ ಉಡುಪು ತೊಡಿಸಿ ಮುದ್ದಾಗಿ ಅದನ್ನು ಮಳೆ ಹನಿಗಳಿಂದ ರಕ್ಷಿಸಿ, ಮಡಿಲಲ್ಲಿ ಅಪ್ಪಿಕೊಂಡು ಹೋಗುವ ಆ ತಾಯಿಯ ಪರಿಯನ್ನು ನೋಡಿ ಎಂತವರಿಗಾದರೂ ತಮ್ಮ ಬಾಲ್ಯ ನೆನಪಾಗದಿರಲು ಸಾಧ್ಯವೇ,,?
ಇಷ್ಟು ದಿನಗಳಿಂದ ಸಾಕು ಸಾಕೆನಿ ಸುವಷ್ಟು ಬಿಸಿಲಧಗೆಯನ್ನ  ನೀಡಿದ್ದ ಆ ಬಾಸ್ಕರ ಇನ್ನು ಅಪರೂಪ ಹಾಗೂ ಆಪ್ಯಾಯಮಾನ.

      ನಮ್ಮೆಲ್ಲರ ಅನ್ನದಾತರಾದ ರೈತರ ಮೊಗದಲ್ಲಿ ಮನದಲ್ಲಿ ನಗುವನ್ನು ಬಿತ್ತಿ ಸೃಷ್ಟಿಯ ಜೀವಸಂಕುಲಕ್ಕೆ ಉಸಿರಾಗಿರುವ ಮಳೆರಾಯನ ಅದೆಷ್ಟೋ ತುಂಟಾಟಗಳಿಗೆ ಇದೋ ನಮ್ಮೆಲ್ಲರ ಹರ್ಷದ ಸ್ವಾಗತ.


Leave a Reply

Back To Top