ಕಾವ್ಯ ಸಂಗಾತಿ
ನಯನ ಜಿ.ಎಸ್
ಒಡಲ ಸ್ವಗತ
ಬೈಗು ನಾಲ್ಕರ ವೇಳೆ !
ನಗುವ ಚಿಲುಮೆಗೆ ಬುಗ್ಗೆಯಾಗಳಾರೆನೇನೋ ?
ನೆನಪುಗಳ ಕದ ತೆರೆದು ಓದುತ್ತಿದ್ದೇನೆ ಬಾಳ ಅಧ್ಯಾಯಗಳನು,
ಎಲ್ಲವೂ ವಿಧಿ ಲಿಖಿಸಿದಂತೆ..
“ಏನಿತ್ತು ಆಗೆಲ್ಲ ?” ಹೀಗೆ ಕೇಳಲಾರೆನೇನೋ..
“ಏನಿರಲಿಲ್ಲ ಆಗ ?” ಎಂದರಷ್ಟೇ ಸೂಕ್ತ.
ಕಾಮನೆಯ ಕೈಗೆಟಕುವ ತೃಪ್ತಿ, ಬಯಕೆಗೆ ಸಗ್ಗಯೀವ ಮಿಡಿತ..
ಎಲ್ಲವೂ ಅಂಗೈಯೊಳಗೆ..ನನ್ನದೇ ಪಾರುಪತ್ಯ.
ಜೀಕಿದ್ದು.. ಜೀಕಿಸಿದ್ದು ಎಲ್ಲವೂ ಮನ ಎಣಿಸಿದಂತೆ !
ಎಣಿಕೆಗೆ ದಕ್ಕದ ಭಾವಾಂಶುವಾದರೂ ಏನು ?
ಸಂಸಾರ ವರ್ತುಲದಿ ಹಿತಭಾವಗಳ ಸಾಂಗತ್ಯ,
ಎಲ್ಲವೂ ಸ್ವಪ್ನಿಸಿದಂತೆ.. ಹೃದಯಕ್ಕೆ ನಿಲುಕಿದಂತೆ.
ಭಾವಗಳು ನಿರ್ಮಿಸಿದ ಮಹಲಿಗೆ ಸಕಾಲದಿ ಸುಯೋಗ !
ಭಗ್ನಾವಶೇಷಗೊಳ್ಳಲಿಲ್ಲ ವಾಂಛೆಗಳ ಕಾವ್ಯ ಕುಸುರಿ.
ಹಿಗ್ಗಿದ ಹಿಗ್ಗಿಗೆ ವಿಕಸನದ ಅಭಿಧಾನ,
ಎಲ್ಲವೂ ಮಧುರವಾದಂತೆ.. ಮನೋಜ್ಞಗೊಂಡಂತೆ.
ಬಿತ್ತಿದ ಬೀಜಕ್ಕೆ ಅಂಕುರಿಸಲೇನಿದೆ ಕುಂದು ?
ಪಾಲಿಸಿ ಲಾಲಿಸಿ ಮುದ್ದುಗರೆಯುವುದಕ್ಕಿಲ್ಲ ಕೊರತೆ.
ಹಸನಾಗಿ ಹಬ್ಬಿತ್ತು ನಗುವಿನಲಿ ಸಾರ್ಥಕ್ಯ ಹಂದರ,
ಎಲ್ಲವೂ ರೇಖಿಸಿದಂತೆ.. ಸರ್ವವೂ ಸುಖಕರ.
ಚಿಗುರಿದ ಹಸಿರು ದಟ್ಟವಾದದ್ದು ಗೊತ್ತಾಗಲೇ ಇಲ್ಲ !
ಬದಲಾವಣೆ ಪ್ರಕೃತಿ ನಿಯಮವೇ ಹೌದಷ್ಟೇ ?
ಚಿಗುರಾಗಿ ಶೋಭಿಸಿದ್ದು ಕೊನೆಗೂ ಫಲವನಿತ್ತಿತ್ತು,
ಎಲ್ಲವೂ ಋತುಗಳ ಚರ್ಯೆಗೆ ಬದ್ಧವಾದಂತೆ.
ಕರುಳ ಕುಡಿಗೊಂದು ಮುದ್ದಾದ ಕುಸುಮ,
ಪ್ರಶ್ನೆಗಳ ಓಘಗರೆಯುತ್ತಿದ್ದವಳೀಗ ಉತ್ತರಿಸಬೇಕಿದೆ !
ಸಾಸಿರ ಸೊಲ್ಲುಗಳ ಸಾರ ಉಂಡಿತ್ತು ಬಾಳ್ವೆಯ ಯಾಣ,
ಎಲ್ಲವೂ ಅದೇ ಅದೇ ಪರಿವರ್ತಿತವೆಂಬಂತೆ.
ಜೀವ ವೃಕ್ಷ ಬೆಳೆಯಲೇಬೇಕು, ತಡೆಯೊಡ್ಡಲುಂಟೇ ?
ಬಿರಿದು, ಅರಳಿ, ಮಾಗಿ, ಮಾಸುವುದು ಭವದ ನಿಯಮ.
ನೆನಪುಗಳ ಬುತ್ತಿಯಲಿ ಅನುಭವಗಳ ಭಿನ್ನ ಪಾಕ,
ಎಲ್ಲವೂ ಸಹಜವೆಂಬಂತೆ..ಸತ್ಯವ ಸಾರುವಂತೆ.
ಕಾಲೆಳೆಯುತ್ತಿದ್ದರೂ ಕನವರಿಸಬೇಕು ಕಾಲವಿತ್ತ ಮರ್ಮವನು.
ವ್ಯಾಖ್ಯಾನಕ್ಕೆ ನಿಲುಕದ ತಥ್ಯವನೇ ಅರಸುತ್ತಾ..
ಸುಖ ದುಃಖಗಳು ನೇಯ್ದ ಜಾಲದಿ ಸವೆದಿದೆ ಬದುಕು..
ಎಲ್ಲವೂ ಪ್ರಶ್ನಾತೀತ.. ಸ್ವೀಕೃತಾರ್ಹ.
ಅನಿಸುತ್ತಿದೆ ಈಗೀಗ ಯಾವುದೂ ಸರಿಯಾಗುತ್ತಿಲ್ಲವೆಂದು ?
ಆಧರಿಸಲು ಆಧಾರಗಳು ಮಾತ್ರ ಗಗನ ಸುಮವಾಗಿದೆ.
ಸೋಲು ಗೆಲುವುಗಳ ಸಖ್ಯದಿ ಸಂದ ಅಸುವಿಗೆ ಇದೆಲ್ಲವೂ ನೈಜ,
ಎಲ್ಲವೂ ಸಹ್ಯವಾದಂತೆ..ಒಪ್ಪಲರ್ಹವೆಂಬಂತೆ.
ಕೊಲ್ಲುತ್ತಿದ್ದೇನೆ ಕ್ಷಣಗಳನು, ಭಿನ್ನ ಹಾದಿ ತೋಚದೇ.
ಸುಕ್ಕಾದ ಚರ್ಮ, ತೊದಲುವ ಮಾತು..
ಆಸ್ಥೆಯಿಂದಲೆ ಸೃಜಿಸಿದ ದಿನಗಳಲೇ ಸಾರ್ಥಕ್ಯ..
ಎಲ್ಲವೂ ನಿಯಮಿತ..ನಿಯತಿ ಲಿಖಿತ.
———–
ನಯನ. ಜಿ. ಎಸ್.