ಲೇಖನ ಸಂಗಾತಿ
“ಪುರಾಣ ಹೇಳೋಕೆ ಬದನೆಕಾಯಿ ತಿನ್ನೋಕೆ”
ಡಾ ಅನ್ನಪೂರ್ಣ ಹಿರೇಮಠ
“ಪುರಾಣ ಹೇಳೋಕೆ ಬದನೆಕಾಯಿ ತಿನ್ನೋಕೆ”
ನಮ್ಮ ಈ ಭರತ ಭೂಮಿ ಒಳ್ಳೆಯ ಸಂಸ್ಕೃತಿಯಿಂದ, ಒಳ್ಳೆಯ ಆಚಾರ ವಿಚಾರಗಳಿಂದ ತುಂಬಿದ, ಬುದ್ಧಿಮತ್ತೆ , ಜಾಣ್ಮೆ ,ಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಿದೆ ಎಂದರೆ ತಪ್ಪಾಗಲಾರದು. ಅನೇಕ ಸಾಧು ಸಂತರು, ಸ್ವಾಮಿಗಳು, ದಾರ್ಶನಿಕರು ಹುಟ್ಟಿ ನೆಲೆಸಿದ ಭವ್ಯ ನಾಡಿದು ಎಂಬುದು ಎಷ್ಟು ಸತ್ಯವೊ, ನಿತ್ಯವೂ ಹಾಗೆಯೇ ಸೋಮಾರಿಗಳು ಹೇಳದಂತೆ ನಡೆಯದವರೂ,” ಮಾಡುವುದು ಒಂದು ಆಡುವುದು ಮತ್ತೊಂದು” ಎಂಬಂತಿಹ ಜನರಿಗೇನು ಕಡಿಮೆ ಇಲ್ಲ. ಎಲ್ಲರೂ ಶೂರರೇ, ಧೀರರೇ ,ಜ್ಞಾನಿಗಳೇ ಆದರೆ ಆ ಜ್ಞಾನ, ಆ ಶೂರತನ, ಆ ಧೀರತೆ ನಿಜವಾಗುವುದು ಅವನು ನುಡಿದಂತೆ ನಡೆದಾಗ .ಅದರಂತೆ ನಡೆದುಕೊಳ್ಳದಿದ್ದರೆ ಏನು ಪ್ರಯೋಜನ ?ಹೇಳುವವರ ಸಂಖ್ಯೆ ಹೆಚ್ಚು, ನಡೆದುಕೊಳ್ಳುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
ಬಸವಣ್ಣನವರು ಹೇಳಿದಂತೆ “ನುಡಿದಂತೆ ನಡೆ ಇದೇ ಜನ್ಮ ಕಡೆ “ನುಡಿಯೊಂದು ರೀತಿ ,ನಡೆಯೊಂದು ರೀತಿ ಸಲ್ಲದು” ನುಡಿಯೊಳಗಾಗಿ ನಡೆಯದಿದ್ದರಿಂದ ಎಂತೊಲಿವನು ನಮ್ಮ ಕೂಡಲಸಂಗಮ” ಎಂದೆಲ್ಲಾ ಹೇಳಿರುವುದು ಇಂಥವರ ನಡೆ ಕಂಡೆ ಇರಬೇಕು .ಇದನ್ನ ಸರ್ವಜ್ಞರು ಹೇಳಿದ್ದಾರೆ” ಆಡದಲೆ ಮಾಡುವವನು ರೂಡಿಯೊಳಗುತ್ತಮನು, ಆಡಿ ಮಾಡುವವ ಮಧ್ಯಮನು, ಜಗದೊಳಗೆ ಅಧಮ ತಾನಾಡಿ ಮಾಡದವ” ಎಂದು ಎಲ್ಲಾ ದಾರ್ಶನಿಕರು ಹೇಳಿದ್ದು ,ಹೇಳಿದಂತೆ ನಡೆ, ನುಡಿದಂತೆ ನಡೆ ಎಂದು .ಆದರೆ ಜಗದಾಟ ಬೇರೇನೇ ಇದೆ ನೂರಕ್ಕೆ ಒಬ್ಬರು ಈ ರೀತಿಯ ಮನುಜರು ನಮ್ಮಲ್ಲಿ ಸಿಗಬಹುದೇನೋ?
ಈ ಗಾದೆ ನಮ್ಮ ಅಜ್ಜಿ ಹೇಳಿದ್ದು ನೆನಪು” ಹೇಳೋದು ಪುರಾಣ ತಿನ್ನೋದು ಬದನೆಕಾಯಿ” ಮಾಡೋದು ಅನಾಚಾರ, ಹೇಳೋದು ಆಚಾರ” ಎಂದು. ಜ್ಞಾನ ನಮ್ಮಲ್ಲಿರುವುದು ಇನ್ನೊಬ್ಬರಿಗೆ ಹೇಳಲು ಎಂಬುದು ಸರಿ ಆದರೆ ಹೇಳುವ ಮೊದಲು ನಡೆದು ತೋರಿ ದಾರ್ಶನಿಕನಾಗಿ ಅದನ್ನು ಹೇಳಿದರೆ ಅದು ತುಂಬಾ ತೂಕವಾಗಿರುತ್ತದೆ. ಹೇಳುವ ಪುರಾಣ ಸಫಲವಾಗುತ್ತದೆ .ಓದಿ ಜ್ಞಾನಗಳಿಸಿ ಬುದ್ದಿ ಬೆಳೆಸಿಕೊಂಡು ತಲೆವಾನನೆನೆಸಿಕೊಂಡು ತಾಸುಗಟ್ಟಲೆ ಪುರಾಣ ಹೇಳಿ ಮತ್ತೆ ನಾಯಿ ಬಾಲ ಡೊಂಕ ಎಂಬಂತೆ, ಮತ್ತೆ ತನಗೆ ತಿಳಿದದ್ದನ್ನೇ ಮಾಡಿದರೆ ಏನು ಪ್ರಯೋಜನ ಅಲ್ಲವೇ? ನೀತಿ ಬೋಧೆ ಮಾಡಿ ಅನೀತಿಯ ಕೆಲಸಗಳನ್ನು ಮಾಡಿದರೆ ಹೇಗೆ? ಇಂಥವರಿಗೆ ಈ ಗಾದೆಯನ್ನು ನಮ್ಮ ಹಿರಿಯರು ಹೇಳಿರಬೇಕು .ನಿಜವಾದ ಮನುಜನಾದವ ಹೇಳಿದಂತೆ ನಡೆದುಕೊಳ್ಳುವ ಧೈರ್ಯವಿದ್ದರೆ ಮಾತ್ರ ಹೇಳಬೇಕು. ಇಲ್ಲದಿದ್ದರೆ ಸುಮ್ಮನೆ ತನ್ನ ಪಾಡಿಗೆ ಇರುವುದನ್ನು ಕಲಿಯಬೇಕು. ದೊಡ್ಡ ದೊಡ್ಡ ಮಾತು ಭಾರಿ ಬುದ್ಧಿವಂತನಂತೆ ಪ್ರವಚನ ಮಾಡಿ ತೆರೆ ಮರೆಯಲ್ಲಿ ತನ್ನ ಆಟ ಶುರುಮಾಡುವಂತವರಿಗೆ ಈ ಗಾದೆ ಸಲ್ಲುತ್ತದೆ.
ಗಾದೆ ವೇದಕ್ಕೆ ಸಮಾನ ಎಂದಿದ್ದಾರೆ. ಅದಕ್ಕೆಂದೆ ನಮ್ಮೆಲ್ಲರ ಮನೆ ಮನೆಯಲ್ಲಿ .ಎಲ್ಲರ ಬಾಯಿಯಲ್ಲಿ ಗಾದೆಗಳು ಹಾಸು ಹೊಕ್ಕಾಗಿದೆ.
ನಾವೆಷ್ಷು ಜಾಣರಾಗಿದ್ದರೂ ಪ್ರಯೋಜನವಿಲ್ಲ. ಆ ಜಾಣತನ ನಮ್ಮನ್ನು ಒಳ್ಳೆ ಮನುಷ್ಯನನ್ನಾಗಿ. ನಿಜ ಮಾನವನನ್ನಾಗಿ. ಸತ್ಯ ಸಂಧನನ್ನಾಗಿ ಮಾಡದ ಬುದ್ಧಿ, ಪ್ರಬುದ್ಧತೆ ಎಷ್ಷಿದ್ದರೂ ಏನು ಫಲ ನೀಡದು ಎಂಬುದು ಸತ್ಯವಾದ ಮಾತು. ಜೀವನದಲ್ಲಿ ನೀ ಒಳ್ಳೆಯ ಮಾರ್ಗದಲ್ಲಿ ನಡೆದು ತೋರು ,ಯಾರಿಗೂ ಏನೂ ಹೇಳಬೇಕಾಗಿಲ್ಲ .ನಿನ್ನ ನಡೆ ನುಡಿ ಅನುಕರನೀಯವಾಗಿದ್ದರೆ ಸಾಕು. ಹೇಳುವ ಪುರಾಣಕ್ಕಿಂತ ಆಚರಣೆ ಶ್ರೇಷ್ಠವಾದ ಸಾಧನೆ. ಈ ಗಾದೆಯಂತೆ ಆದರೆ ಏನು ಉಪಯೋಗವಿಲ್ಲ ಎಂದು ವ್ಯಂಗ್ಯವಾಗಿ ಈ ಗಾದೆ ವ್ಯಕ್ತವಾಗಿದೆ.
ಡಾ ಅನ್ನಪೂರ್ಣ ಹಿರೇಮಠ