ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಎಲ್ಲಿಂದಲೋ ಬಂದವರು :

ಎಲ್ಲಿಗೋ ಹೋಗುವವರು..

ಅವನಿಗೆ ಇಲ್ಲಿಯ ಭಾಷೆ, ಪ್ರದೇಶ, ಸಂಪ್ರದಾಯ, ಬದುಕು  ಯಾವುದರ ಪರಿಚಯವೂ ಇಲ್ಲ..!  ಆದರೂ ಎಲ್ಲರೊಂದಿಗೆ ನಗುನಗುತ್ತಾ ತನ್ನ ನೋವುಗಳನ್ನು ಮರೆತು ಬದುಕುತ್ತಾನೆ..!!ಇವಳು ಅಷ್ಟೇ ಎಲ್ಲಿಂದಲೋ ಬಂದು ಇಲ್ಲಿ ಬದುಕು ಕಟ್ಟುವಾಗ ದೂರದೂರಿನವರು ನಮ್ಮವರೇ ಆಗಿಬಿಡುತ್ತಾರೆ..!  ಹುಟ್ಟಿದ್ದು ಒಂದು ಊರು, ಬೆಳೆದದ್ದು ಒಂದು ಊರು, ಬಂದು ನೆಲೆಸಿದ್ದು ಮತ್ತೊಂದು ಊರು..!! ಮತ್ತೆ ಮುಂದೆ ಹೋಗುವುದು ಯಾವುದೋ..ಯಾರಗೆ ಗೊತ್ತು..?  ಬದುಕಂದ್ರರೆ ಹೀಗೆ ಅಲ್ಲವೇ..??  ಗೊತ್ತು ಗುರಿ ಇಲ್ಲದೆ ಬದುಕು ಪ್ರಾರಂಭವಾಗಿ ಎಲ್ಲೆಲ್ಲಿಗೋ ಪಯಣ ಬೆಳೆಸುತ್ತಲೇ ದಾರಿಯ ಮಧ್ಯದಲ್ಲಿ ಯಾರ್ಯಾರನ್ನೋ ನಾವು ಕಾಣುತ್ತೇವೆ,  ಬೇಟಿಯಾಗುತ್ತೇವೆ, ಕೈ ಕುಲುಕುತ್ತೇವೆ.  ಅವರ ನೋವುಗಳಿಗೆ ಹೆಗಲಾಗುತ್ತೇವೆ. ನಮ್ಮ ನೋವುಗಳಿಗೆ ಅವರು ಹೇಗಲಾಗುತ್ತಾರೆ. ಇಲ್ಲವೇ ಕೆಲವು ಸಲ ನೋವು ಕೊಡುತ್ತೇವೆ. ಗಹ ಗಹಸಿ ನಗುತ್ತೇವೆ. ಮತ್ತೊಂದಿಷ್ಟು ಸಲ ನಾವೇ ನೋವು ಉಣ್ಣುತ್ತೇವೆ. ಬೇರೆಯವರಿಂದ ಒಂಟಿಯಾಗಿ ಬಿಕ್ಕಿ ಬಿಕ್ಕಿ ಅಳುತ್ತೇವೆ. ಹೇಗೋ ಏನೋ ಬದುಕಿನ ಪಯಣ ತನ್ನಷ್ಟಕ್ಕೆ ತಾನೇ ಜರಗಿ ಹೋಗುತ್ತದೆ.

 ಬದುಕು ಜರುಗುವಾಗ ಬರುವ ನೆನಪುಗಳೆ ನಮಗೆ ಮಾರ್ಗದರ್ಶಿಯಾಗುತ್ತವೆ.  ಅದನ್ನು ನಾವು ಬಳಸಿಕೊಳ್ಳಬೇಕು ಅಷ್ಟೇ..!    

ಹುಟ್ಟಿದ ಮನುಷ್ಯ ಗಂಡಾದರೆ ಸಾಕು ಗಂಭೀರನಾಗಿ ಗಂಡಾಳಿಕೆಯ ತೆವಲುಗಳನ್ನು ಎದೆಯ ತುಂಬಾ, ಮೈತುಂಬ ತುಂಬಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ತನ್ನದೇ ಛಾಪು ಮೂಡಿಸುತ್ತಾನೆ.  ಪಯಣದ ಹಾದಿಯಲ್ಲಿ ಕೆಲವರಿಗೆ ಮುಳ್ಳನ್ನು ಚೆಲ್ಲುತ್ತಲೇ, ಇನ್ನೂ ಕೆಲವರಿಗೆ ಹೂವನ್ನು ಚೆಲ್ಲುತ್ತಾನೆ.  ತನ್ನದೇ ಪಯಣ ಸಾಗಿಸುತ್ತಾ ಹೆಜ್ಜೆ ಇಡುತ್ತಾನೆ. ಸೂರ್ಯೋದಯಕ್ಕೆ ಹೂವು ಅರಳಿ, ಇಬ್ಬನಿಗೆ ಮೈಚಾಚಿಕೊಂಡು ಮತ್ತೆ ಪುಳಕಗೊಳ್ಳುವ ಬಾಲ್ಯ…! ಆ ಬಾಲ್ಯ  ಹಾಗೆಯೇ ಕಳೆದು ಹೋಗುತ್ತದೆ.  ಕೆಲವು ಸಲ ಬಡತನದ ಬೇಗುದಿಯಲ್ಲಿ ನೋವು, ಹತಾಶೆಯ, ನಿರಾಶೆ.. ಇವೇಲ್ಲವನ್ನು ಅನುಭವಿಸುತ್ತದೆ.

 ಬಾಲ್ಯ ಕಳೆದು ಯೌವ್ವನಕ್ಕೆ ಕಾಲಿಡುತ್ತೇವೆ. ಯೌವ್ವನವು ನಮ್ಮ ಕನಸುಗಳಿಗೆ ಬಣ್ಣ ಬಳಿಯುತ್ತದೆ. ಕೆಲವು ಸಲ  ಹುಂಕರಿಸುತ್ತದೆ. ‘ಏನೋ ಸಾಧಿಸಿ ಬಿಡುತ್ತೇನೆ’ ಎನ್ನುವ ಅಹಂವಿಕೆಯಲ್ಲಿ ಮೆರೆದಾಡುತ್ತೇವೆ.  ಎಲ್ಲಿಯೋ ಹುಟ್ಟಿ, ಎಲ್ಲಿಂದಲೋ ಬಂದ ಅವಳ ಕೈ ಹಿಡಿಯುತ್ತೇವೆ. ಕೈಹಿಡಿದವಳು ನಮ್ಮ ಬದುಕನ್ನೇ ಬದಲಾಯಿಸಲು ಪ್ರಯತ್ನಿಸಿ, ಕೆಲವು ಸಲ ಗೆಲುತ್ತಾಳೆ. ಇನ್ನೂ ಕೆಲವು ಸಲ ಸೋತು ಹೋಗುತ್ತಾಳೆ.

 ಮೊದ ಮೊದಲು ಅಶಿಸ್ತಿನ ಆಗರವಾಗಿದ್ದ ನಾವುಗಳು ಶಿಸ್ತನ್ನು ರೂಢಿಸಿಕೊಳ್ಳಲು ಹೆಣಗಾಗುತ್ತೇವೆ. ಬದುಕನ್ನು ಕಟ್ಟಿಕೊಳ್ಳುತ್ತಾ.. ಕಟ್ಟಿಕೊಳ್ಳುತ್ತಾ… ಹಾಗೆ ಪಯಣವನ್ನು ಮುಗಿಸಿ ಬಿಡುತ್ತೇವೆ.

 ಅದೇ ರೀತಿ ಹುಟ್ಟಿದ ಹೆಣ್ಣು ಮಕ್ಕಳು ತಂದೆ ತಾಯಿಯರು ಮದುವೆ ಮಾಡಿಕೊಟ್ಟ ಮನೆಗೆ ಬಂದು,ತನ್ನದಲ್ಲದವರ ನಡುವೆ ತನ್ನವರನ್ನಾಗಿ ಮಾಡುವ ಕರುಳ ಬಳ್ಳಿಯ ಸಂಬಂಧ..! ವಾತ್ಸಲ್ಯ, ಪ್ರೀತಿ ಹಂಚುವ ಕಾಯಕ ಅವಳದಾಗುತ್ತದೆ. ಅಲ್ಲಿಯ ನೋವುಗಳು, ಅಲ್ಲಿಯ ಹತಾಶಯಗಳು, ಸಂತೋಷಗಳು, ಎಲ್ಲವನ್ನು ತನ್ನೊಡನೆ ಹಂಚಿಕೊಳ್ಳುತ್ತಾ, ಗುದ್ದಾಡುತ್ತಾ, ಬೈದಾಡುತ್ತಾ, ಹೊಗಳುತ್ತಾ, ಹೊಗಳಿಸಿಕೊಳ್ಳುತ್ತಾ, ನಗುನಗುತ್ತಾ, ಬದುಕನ್ನು ಸ್ವೀಕರಿಸುತ್ತಾ ಬದುಕನ್ನು ಮುಗಿಸುವ ಹಂತಕ್ಕೆ ಬಂದಾಗ ಎಲ್ಲವೂ ಅವಳಿಗೆ ಕ್ಷಣಿಕವೆನಿಸಿಬಿಡುತ್ತದೆ.

  ಇದು ಸಂಸಾರದ ಒಂದು ಮಗ್ಗುಲಾದರೆ, ಇನ್ನೊಂದು ಬದುಕು ಕಟ್ಟುವ ಅನಿವಾರ್ಯತೆಯ ಪಯಣ…!!

ಹೌದು…

ಕೋಗಿಲೆಯು ತನ್ನ ಮರಿಗಳಿಗೆ ರೆಕ್ಕೆ ಬಂದ ಕೂಡಲೇ ಗೂಡಿನಿಂದ ಹೊರ ಹಾಕಿಬಿಡುತ್ತದೆ. ನಮ್ಮ ಬದುಕು ಕೂಡ ಬೇರೆಯಲ್ಲ..!  ” ಇಲ್ಲಿಯವರೆಗೆ ಮೈಯಲ್ಲಿ ಕಸುವಿತ್ತು ದುಡಿದು ಹಾಕಿದೇವೆ. ಇನ್ನೂ ನಿಮ್ಮ ಬದುಕು ನೀವು ಕಟ್ಟಿಕೊಳ್ಳಿ…” ಎನ್ನುವ ತಂದೆ ತಾಯಿಯರ ಅಳಲು…!!

ಕೆಲಸ ಸಿಗದ ಹತಾಶೆಯದೊಂದಿಗೆ ಮತ್ತೆ ನಮ್ಮ ಪಯಣ ಭಾಷೆ, ಪ್ರದೇಶ, ದೇಶದ ಗಡಿಯಾಚೇಗೂ ಬದುಕು ಕಟ್ಟಿಕೊಂಡು ಬಿಡುತ್ತೇವೆ.

ಕರ್ನಾಟಕದ ಈ ಪ್ರದೇಶಕ್ಕೆ ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶದ, ಗೋವಾ,ಮಹಾರಾಷ್ಟ್ರ, ಕೇರಳ…ಹತ್ತು ಹಲವಾರು ರಾಜ್ಯಗಳಿಂದ, ದೇಶಗಳಿಂದ ವಲಸೆ ಬಂದವರಿದ್ದಾರೆ. ಹಾಗೇಯೇ ಕರ್ನಾಟಕ ರಾಜ್ಯದಿಂದ ವಿವಿಧ ರಾಜ್ಯಕ್ಕೆ, ದೇಶಕ್ಕೆ ವಲಸೆ ಹೋದವರು ನಮ್ಮವರು ಇದ್ದಾರೆ.  

ಬದುಕು ಅಂದ್ರೆ ಅದೇ ಅಲ್ಲವೇ…?

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲಿಯೋ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಗಳು ನಮ್ಮೆದುರು ದುತ್ ನೆ ಬಂದು ನಿಲ್ಲುತ್ತವೆ. ಓದು ಮುಗಿಸಿದರೆ ಸಾಕು, ದೊಡ್ಡ ದೊಡ್ಡ ಹುದ್ದೆಯಿಂದ ಸಣ್ಣ ಸಣ್ಣ ವ್ಯಾಪಾರ ಮಾಡುವವರಾಗುತ್ತೇವೆ. ಆಗ  ನಾವು ಒಂದು ಊರಿನಿಂದ ಇನ್ನೊಂದು ಊರಿಗೆ ಸಾಗಲೇಬೇಕು. ನಾವು ದುಡಿಯುವ ಊರೇ ;  ನಮ್ಮ ಊರು..!  ನಾವು ವಾಸಿಸುವ ಊರೇ  ನಮ್ಮೂರು..!!  ಆ ಊರಿನವರೇ ನಮ್ಮವರು..!!  ಎಂದು ಬದುಕಿ ಬಿಡುತ್ತೇವೆ.  ಹಾಗೆ ಬದುಕಲೇಬೇಕು..!  ಅದು ಬದುಕಿನ ಅನಿವಾರ್ಯವೂ ಕೂಡ.

 ಅಪರಿಚಿತರು ಪರಿಚಿತರಾಗುತ್ತಾರೆ. ಪರಿಚಿತರು ಸ್ನೇಹಿತರಾಗುತ್ತಾರೆ‌ ಸ್ನೇಹಿತರು ಕೆಲವು ಸಲ ಸಂಬಂಧಿಗಳು ಆಗಬಹುದು. ಸಂಬಂಧಿಗಳು ಆಗದೇ ಹೋದರು ಸಂಬಂಧ ಸೂಚಕದಂತೆ ಬದುಕಿ ಬಿಡುತ್ತೇವೆ.  ಹಾಗೆ ಬದುಕುತ್ತಾ ಬದುಕುತ್ತಾ ನಮ್ಮತನವನ್ನು ಹುಡುಕುವ ಧಾವಂತದಲ್ಲಿ ಬದುಕಿನ ಬೇರುಗಳು ಅಲುಗಾಡಿ ಬಿಡುತ್ತವೆ.

 ಹುಟ್ಟಿದ ಊರನ್ನು ನೋಡಲು ಹೋದರೆ ಕೆಲವು ಸಲ ನನ್ನವರು ಅನ್ನುವವರು ಕಾಣೆಯಾಗಿ ಬಿಡುತ್ತಾರೆ.  ಮತ್ತೆ ಬೆಳೆದ ಊರಿನಲ್ಲಿ ಸುತ್ತಾಡಿದರೂ ನಮ್ಮವರು ಎಂದುಕೊಂಡವರು ಸಿಗುವುದು ತುಂಬಾ ಅಪರೂಪವಾಗಿ ಬಿಡುತ್ತಾರೆ.

ಅರೇ  ಹೌದಲ್ಲ..!!

 ಅವರು ನಮ್ಮಂತೆ ಬದುಕು ಕಟ್ಟಿಕೊಳ್ಳಲು ಎಲ್ಲೆಲ್ಲಿಗೋ ಹೋಗಿ ಬಿಟ್ಟಿರುತ್ತಾರೆ. ಹಾಗೆ ಹೋಗುವ ಪಯಣದಲ್ಲಿ ಕೆಲವರು ಬಹುದೂರ ಸಾಗಿರುತ್ತಾರೆ.

 ಸ್ನೇಹಿತರೆ,
ಬದುಕು ಎಷ್ಟೊಂದು ವಿಚಿತ್ರವಲ್ಲವೇ..?  ಏನು ಇಲ್ಲದೆ, ಏನೂ ತಾರದೆ ಬರಿ ಕೈಯಲ್ಲಿ ಹುಟ್ಟಿದ ನಾವುಗಳು, ಬದುಕಿನೂದ್ದಕ್ಕೂ ನೆನಪುಗಳನ್ನೇ ತುಂಬಿಕೊಂಡು ಪ್ರೀತಿಯನ್ನು ಹಂಚುವುದು ಬಿಟ್ಟು, ದ್ವೇಷ, ಅಸೂಯೆ, ಜಾತಿ, ಮತ, ಪಂಥ, ದೇಶ, ಭಾಷೆಯನ್ನುವ ಎಲ್ಲಾ ಅಡ್ಡಗೋಡೆಗಳನ್ನು ನಿರ್ಮಾಣ ಮಾಡಿಕೊಂಡು ಎಷ್ಟೊಂದು ಸಂಕುಚಿತರಾಗಿಬಿಟ್ಟಿರುತ್ತೇವೆ..!

 ಹಾಗೆ, ಒಂದು ಸಲ ತಿರುಗಿ ನೋಡಿದಾಗ ಬದುಕು ಶೂನ್ಯವೇನಿಸಿ ಬಿಡುತ್ತದೆ. ಮತ್ತೆ ಮತ್ತೆ ನಮ್ಮ ಬದುಕು ಶೂನ್ಯದಿಂದ ಕಟ್ಟಲೇಬೇಕು. ಎಲ್ಲಿಂದಲೋ ಬಂದವರು ನಾವು.. ಎಲ್ಲಿಗೋ ಹೋಗುವಾಗ ಭಾರವಾದ ಹೃದಯವೊಂದೆ ನಮ್ಮ ಜೊತೆಗಿರುವುದು. ಅಂತಹ ಹೃದಯವಂತರೂ ಕೂಡ ನಮ್ಮ  ಜೊತೆಯಾಗಲೆಂದು ಆಶಿಸೋಣ.


 ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

Leave a Reply

Back To Top