ಕಾವ್ಯ ಸಂಗಾತಿ
ಪ್ರೊ. ಜಿ ಎ. ತಿಗಡಿ. ಸವದತ್ತಿ
ಹಾವಿನಹಾಳ ಕಲ್ಲಯ್ಯನ ವಚನ
ಕಲ್ಲೊಳಗಣ ಕಿಚ್ಚು ಉರಿಯದ ಪರಿಯಂತೆ,
ಬೀಜದೊಳಗಣ ವೃಕ್ಷ ಉಲಿಯದ ಪರಿಯಂತೆ,
ಪುಷ್ಪದ ಕಂಪು ನನೆಯಲ್ಲಿ ತೋರದಂತೆ,
ಚಂದ್ರಕಾಂತದ ಉದಕ ಒಸರದ ಪರಿಯಂತೆ,
ಮಹಾಲಿಂಗ ಕಲ್ಲೇಶ್ವರನಲ್ಲಿ ಲಿಂಗೈಕ್ಯ.
ಇಹವೆನ್ನ ಪರವೆನ್ನ ಸಹಜವೆನ್ನ ತಾನೆನ್ನ.
ಕಲ್ಲೊಳಗಿದ್ದು ಉರಿಯದಿರುವ ಬೆಂಕಿಯಂತೆ, ವೃಕ್ಷದ ಮೂಲ, ಬೀಜದಲ್ಲಿದ್ದರೂ ಅದು ಸದ್ದು ಮಾಡದೆ ಇರುವಂತೆ, ಹೂವಿನ ಮೊಗ್ಗೆಯಲ್ಲಿ ಪರಿಮಳವಿದ್ದರೂ ಸುವಾಸನೆ ಅರಿವಾಗದ ರೀತಿಯಂತೆ, ಚಂದ್ರಕಾಂತ ಶಿಲೆಯಲ್ಲಿರುವ ನೀರು ಹೊರಬರದ ರೀತಿಯoತೆ, ನಾನು ಮಹಾಲಿಂಗಗಜೇಶ್ವರನಲ್ಲಿ ಒಂದಾಗಿರುವೆ. ಇಹ – ಪರ ಸಹಜತೆಯಲ್ಲಿ ನಾನು ನಾನಾಗಿರುವೆ ಎಂದು ಹಾವಿನಹಾಳ ಕಲ್ಲಯ್ಯ ಲಿಂಗೈಕ್ಯದ ಸ್ಥಿತಿಯನ್ನು ಹೇಳುತ್ತಾನೆ.
ಶಿಲೆಯಲ್ಲಿಡಗಿದ ಬೆಂಕಿ, ಬೀಜದಲ್ಲಡಗಿದ ವೃಕ್ಷದ ಸದ್ದು, ಹೂವಿನ ಮೊಗ್ಗಿನಲ್ಲೊಡಗಿರುವ ಸುವಾಸನೆ, ಅಮೃತ ಶಿಲೆಯಲ್ಲಡಗಿದ ನೀರು, ಇವುಗಳ ಮೇಳಾಪದ ಪರಿಯಂತೆ, ಆತ್ಮ – ಪರಮಾತ್ಮರ ಲಿಂಗೈಕ್ಯದ ಸ್ಥಿತಿ ಇರುತ್ತದೆ ಎಂಬುದು ಕಲ್ಲಯ್ಯನ ಅಭಿಪ್ರಾಯವಾಗಿದೆ.
ಲಿಂಗೈಕ್ಯದ ಸ್ಥಿತಿಯನ್ನು ಸ್ವರೂಪವನ್ನು ವಿವರಿಸುವ ಇವರ ಇನ್ನೊಂದು ವಚನವನ್ನು ನೋಡಬಹುದು.
ಬಾಲಕ ಹಾಲ ಸವಿದಂತೆ,
ಮರುಳಿನ ಮನದ ನೆನಹಿನಂತೆ,
ಮೂಗ ಕಂಡ ಕನಸಿನಂತೆ,
ಮೈಯರಿಯದ ನೆಳಲಿನಂತೆ,
ಬಂಜೆಯ ಮನದ ಸ್ನೇಹದಂತೆ,
ಮಹಾಲಿಂಗ ಕಲ್ಲೇಶ್ವರನಲ್ಲಿ ಎನಗೆ ಲಿಂಗೈಕ್ಯವು.
ಪುಟ್ಟ ಬಾಲಕ ಹಾಲು ಸವಿದಂತೆ, ಹುಚ್ಚನ ಮನದಲ್ಲಿನ ನೆನಪುಗಳಂತೆ, ಮೂಕ ಕಂಡ ಕನಸಿನಂತೆ, ತನ್ನ ನೆರಳನ್ನರಿಯದ ದೇಹದಂತೆ, ಬಂಜೆಯ ಮನದ ವಾತ್ಸಲ್ಯದಂತೆ, ಮಹಾಲಿಂಗ ಕಲ್ಲೇಶ್ವರನಲ್ಲಿ ನಾನು ಒಂದಾಗಿದ್ದೇನೆoದು ಕಲ್ಲಯ್ಯ ಹೇಳುತ್ತಾನೆ.
ಮೇಲಿನ ಎರಡು ವಚನಗಳಲ್ಲಿ ಲಿಂಗೈಕ್ಯದ ಸ್ಥಿತಿಯ ಸ್ವರೂಪವನ್ನು ಕಲ್ಲಯ್ಯ ಶರಣರು ವಿವರಿಸುತ್ತಾರೆ. ಮೊದಲ ವಚನದಲ್ಲೇ ಶಿಲೆಯಲ್ಲಿಡಗಿದ ಬೆಂಕಿ, ಬೀಜ ವೃಕ್ಷ ಸದ್ದು, ಹೂವಿನ ಮೊಗ್ಗು, ಸುವಾಸನೆ ಇತ್ಯಾದಿ ಅಚೇತನದ ವಸ್ತುಗಳ ಭೌತಿಕ ಸಂಬಂಧ ಮತ್ತು ಮೇಳಾಪಗಳ ಒoದಾಗುವಿಕೆಯ ರೀತಿಯನ್ನು ವಿವರಿಸುತ್ತಾರೆ. ಎರಡನೇ ವಚನದಲ್ಲಿ, ಸಚೇತನರಾದ ಹಾಲಸವಿದ ಬಾಲಕ, ಕನಸು ಕಂಡ ಹುಚ್ಚ, ನೆನಹುಗಳನ್ನು ಕನವರಿಸುವ ಮೂಕ, ನೆರಳನರಿಯದ ದೇಹ
ಹಾಗೂ ವಾತ್ಸಲ್ಯವುಳ್ಳ ಬಂಜೆ ಇವರುಗಳ ಅಂತರಂಗಿಕ ತುಮುಲಗಳನ್ನು ವಿವರಿಸುತ್ತಾರೆ. ಬಾಲಕ, ಮೂಕ, ಹುಚ್ಚ ಮತ್ತು ಬಂಜೆಯರು ತಮಗಾದ ಅನುಭವಗಳನ್ನು ಹಂಚಿಕೊಳ್ಳಲಾಗುವುದಿಲ್ಲ.
ಮೊದಲ ವಚನ ಆತ್ಮ ಪರಮಾತ್ಮಗಳ ಐಕ್ಯದ ರೀತಿಯನ್ನು ಮೂರ್ನಾಲ್ಕು ನಿದರ್ಶನಗಳ ಮೂಲಕ ಐಕ್ಯದ ಸ್ಥಿತಿಯನ್ನು ಮನಗಾಣಿಸುವ ಕಲ್ಲಯ್ಯ, ಪರಸ್ಪರ ಅಂಶಗಳನ್ನು ವಿಷಯಗಳನ್ನು ವಿಂಗಡಿಸಿ ವಿವರಿಸಲಾಗುವುದಿಲ್ಲ. ಕಲ್ಲಿನಲ್ಲಿರುವ ಬೆಂಕಿ, ಹೂ ಮೊಗ್ಗಿನಲ್ಲಿರುವ ಪರಿಮಳ, ಬೀಜದೊಳಗಿನ ವೃಕ್ಷದ ಉಲುಹಿನ ಧ್ವನಿಯಿರುವುದು ಸುಳ್ಳಲ್ಲ ಆದರೆ ಅವು ಪರಸ್ಪರ ಹೇಗೆ ಮಿಳಿತಗೊಂಡಿವೆ ಎಂದರೆ ವಿಂಗಡಿಸಿ ತೋರಿಸಲು ಬರುವುದಿಲ್ಲ. ಆತ್ಮ ಪರಮಾತ್ಮಗಳ ಮಿಲನವು ಕೂಡ ಇದೇ ರೀತಿ ಆಗಿದೆ ಇದನ್ನು ಬಿಡಿಸಿ ತೋರಿಸಲು ಬರುವುದಿಲ್ಲ. ಆದರೆ ಮುಂದಿನ ವಚನ ಈ ಐಕ್ಯದ ರೀತಿಯನ್ನು ಯಾಕೆ ಹೇಳಲು ಸಾಧ್ಯವಾಗುವುದಿಲ್ಲ ಎಂಬುದರತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಇನ್ನು ಮಾತು ಬಾರದ ಬಾಲಕ, ಹಾಲ ಸವಿಯನೇನು ಬಣ್ಣಿಸಿಯಾನು ? ಹುಚ್ಚನ ಮನದ ನೆನೆಹು ಹೇಳಲು ಸಾಧ್ಯವೇ ತಾನು ಕಂಡ ಕನಸನ್ನು ಮೂಕ ಹೇಳಬಹುದೇ ? ಬಂಜೆ ತನ್ನ ಮನದ ಮಮತೆ ವಾತ್ಸಲ್ಯಗಳನ್ನು ವ್ಯಕ್ತಪಡಿಸಬಲ್ಲಳೇ ಇಲ್ಲಿನ ಬಾಲಕ ಮರುಳ ಹುಚ್ಚ ಬಂಜೆಯರು ತಮಗಾದ ಅನುಭವದ ನೆನಪುಗಳನ್ನು ಹೇಗೆ ವ್ಯಕ್ತಪಡಿಸಲಾರರು ಹಾಗೆಯೇ ಐಕ್ಯ ಸ್ಥಿತಿ ಹೊಂದಿದವರು ಅದನ್ನು ಹೇಳಲಾರರು, ವಿವರಿಸಲಾರರು. ಹೀಗೆ ಐಕ್ಯ ಸ್ಥಿತಿ ಶರಣರಲ್ಲಿ ಶೂನ್ಯವಾಗಿದೆ, ಬಯಲಲ್ಲಿ ಬಯಲಾಗಿದೆ.
ಪ್ರೊ. ಜಿ ಎ. ತಿಗಡಿ. ಸವದತ್ತಿ