ಲೇಖನ ಸಂಗಾತಿ
ಕನ್ನಡ ಮಾತಾಡಿ
ಇರಾಜ ವೃಷಭ ಎ.
ಭಾಷೆ ಒಂದು ಸಂವಹನ ಮಾಧ್ಯಮ. ಪ್ರಪಂಚದ 6000 ಕ್ಕೂ ಹೆಚ್ಚು ಭಾಷೆಗಳಲ್ಲಿ ಭಾರತದಲ್ಲಿ ದ್ರಾವಿಡ ಭಾಷೆ ಅತ್ಯುನ್ನತ ಸ್ಥಾನಮಾನದಲ್ಲಿ ನಿಂತಿದೆ. ದ್ರಾವಿಡ ಭಾಷೆಯಲ್ಲಿ ಪ್ರಮುಖ ಲಿಪಿಯಾಗಿ ಹೊರಹೊಮ್ಮಿದ್ದು ನಮ್ಮ ಹೆಮ್ಮೆಯ ಕನ್ನಡ. ಕನ್ನಡ ಭಾಷೆ ಮತ್ತು ಲಿಪಿಗೆ 2000 ವರ್ಷಗಳ ಸುಧೀರ್ಘ ಇತಿಹಾಸ ಇದೆ. ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡವಾಗಿ ಕನ್ನಡ ಭಾಷೆ ರೂಪತಾಳಿದೆ.
ಕಲೆ ವಾಸ್ತುಶಿಲ್ಪಕ್ಕೆ ಹೆಚ್ಚಿನ ಒತ್ತು ಕೊಟ್ಟ ಗಂಗ, ಕದಂಬ, ಚಾಲುಕ್ಯ , ಹೊಯ್ಸಳ ಸೇರಿದಂತೆ ಅನೇಕ ರಾಜ ಮನೆತನಗಳು ಕನ್ನಡವನ್ನು ಶ್ರೀಮಂತ ನಾಡಾಗಿ ಪರಿವರ್ತಿಸಿವೆ.
ಪುರಾತನ ದೇವಾಲಯಗಳಲ್ಲಿ ಈಗಲೂ ಹಳೆಗನ್ನಡದ ಶಾಸನಗಳು ಮತ್ತು ಗುರುತುಗಳನ್ನು ಕಾಣಬಹುದು. ದುರಾದೃಷ್ಟವೆಂದರೆ ಆ ಸಾಲಿನಲ್ಲಿ ಇರುವ ಕೆಲವು ದೇವಸ್ಥಾನಗಳು ಈಗ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಕ್ಕೆ ಪಾಲಾಗಿವೆ.
ಅತಿಹೆಚ್ಚು (8)ಜ್ಞಾನ ಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆ, ಸರಳ ಭಾಷೆ, ಸುಂದರ ಭಾಷೆ, ಪುರಾತನ ಭಾಷೆ, ಕನ್ನಡ. ಕನ್ನಡ. ಕನ್ನಡ.
ಪ್ರಸ್ತುತ ದಿನಮಾನದಲ್ಲಿ ಕರ್ನಾಟಕದಲ್ಲಿ ಹಿಂದಿ,ತಮಿಳು, ತೆಲುಗು, ಮಲಯಾಳಂ, ಮರಾಠಿ, ಇಂಗ್ಲಿಷ್,ಕೊಂಕಣಿ, ಸೇರಿದಂತೆ ಗುಜರಾತಿ, ಬಂಗಾಳಿ ಭಾಷೆಗಳೇ ರಾರಾಜಿಸುತ್ತಿವೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಅತ್ಯಮೂಲ್ಯ ಸ್ಥಾನ ಮಾನ ದೊರೆಯುತ್ತಿಲ್ಲ. ಕರ್ನಾಟಕದಲ್ಲಿ ಹತ್ತು ವರ್ಷದಿಂದ ಪಾನಿಪುರಿ ಮಾರುವ ವ್ಯಾಪಾರಿ, ತಲೆಮಾರುಗಳಿಂದ ಕನ್ನಡ ಮಣ್ಣಿನಲ್ಲೇ ವ್ಯಾಪಾರ, ವಹಿವಾಟು ಮಾಡುವ ಅನ್ಯ ರಾಜ್ಯದ ಜನತೆಗೆ ಈಗಲೂ ಕನ್ನಡ ಭಾಷೆ ಗೊತ್ತಿಲ್ಲ ಎಂದು ಹೇಳುವರು. ಕನ್ನಡ ಸರ್ವವ್ಯಾಪಿ ಇದ್ದ ದಿನಮಾನ ಇಂದು ಕನ್ನಡ ಮಾತನಾಡುವರೆ ವಿರಳ ಎಂಬ ಹಂತಕ್ಕೆ ಬಂದು ತಲುಪಿದೆ. ಕಾರಣ ಪರ ಭಾಷೆಗಳ ವ್ಯಾಮೋಹ ಮತ್ತು ಪರ ಭಾಷೆಗಳ ಅರಿವು ಇದೆ ಎಂಬ ಅಹಂ ನಾವು ತುಂಬಿಕೊಂಡಿದ್ದೇವೆ. ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಕೆಂಪು ಮೂತಿಯ ಜನರಂತೆ ಇಂದು ಆಂಧ್ರ, ತಮಿಳ್ನಾಡು, ಕೇರಳ, ಮಹಾರಾಷ್ಟ್ರ ದ ಜನರು ಕರ್ನಾಟಕದಲ್ಲಿ ನುಗ್ಗಿ ತಮ್ಮ ಭಾಷೆಗಳನ್ನು ಬಿತ್ತಿ ಪ್ರಸ್ತಾಪಿಸುತ್ತಾ ಇದ್ದಾರೆ. ಇದಕ್ಕೆ ಅನುವು ಕೊಟ್ಟದ್ದು ನಾವೇ. ಅದರ ಫಲವಾಗಿ ಕನ್ನಡ ಭಾಷೆ ಬಳಸದೆ ಇರುವುದು ತೀರಾ ವಿರಳವಾಗಿದೆ. ಕನ್ನಡ ಬೆಳೆಸಬೇಕು. ಉಳಿಸಬೇಕು. ಕನ್ನಡಕ್ಕೆ ಗೌರವ ನೀಡಬೇಕು. ಆದ್ರೆ ಹೇಗೆ?? ಇದೆಲ್ಲದಕ್ಕೂ ಒಂದೇ ಉತ್ತರ ಕನ್ನಡ ಬಳಸಿ/ ಮಾತಾಡಿ.
——————————
ಇರಾಜ ವೃಷಭ ಎ.