ಇಂಗ್ಲೀಷ್ ಕವಿತೆಯ ಅನುವಾದ- ಡಾ.ಶ್ರೀಲಕ್ಷ್ಮಿ

ಅನುವಾದ ಸಂಗಾತಿ

ಅದ್ಭುತ ಹೆಣ್ಣು

ಆಂಗ್ಲಮೂಲ:ಮಾಯಾ ಆಂಗ್ಲೂ


ಕನ್ನಡಕ್ಕೆ:ಶ್ರೀಲಕ್ಷ್ಮಿ

ಚೆಲುವಿನರಸಿಯರು ಕೇಳುವುದುಂಟು
ಏನು ನನ್ನ ಗುಟ್ಟು.
ಮುಖವು ಮುದ್ದಾಗಿಲ್ಲ ದೇಹ ಸಪೂರವಲ್ಲ
ಹೇಳಹೊರಟರೆ ಸುಳ್ಳಾಡುವೆನೆಂದು
ನಂಬುವುದಿಲ್ಲ.

ನಾ ಹೇಳಿದೆ, ಗುಟ್ಟು
ನನ್ನ ಬಾಹುಗಳ ಚಾಚಿನಲ್ಲಿದೆ,
ನನ್ನ ನಿತಂಬದ ವ್ಯಾಪ್ತಿಯಲ್ಲಿದೆ,
ನನ್ನ ಹೆಜ್ಜೆಗಳ ನಿಲುಕಿನಲ್ಲಿದೆ,
ನನ್ನ ತುಟಿಗಳ ಬಾಗಿನಲ್ಲಿದೆ.
ನನ್ನ ಹೆಣ್ತನ,
ಅದ್ಬುತವೇ.
ಅದ್ಬುತ ಹೆಣ್ಣು,
ಅದು ನಾನೇ.

ಸಭೆಯಲೊಬ್ಬನೆಡೆಗೆ ನನ್ನ ನಡಿಗೆ,
ಆತ್ಮವಿಶ್ವಾಸದೊಡನೆ.
ಅವನೊಡನಾಡಿಗಳು ನಿಂತರೋ, ಬಿದ್ದರೋ
ಗೂಡಿಗೆ ಜೇನಿನಂತೆ ಮುತ್ತಿದರೊ.
ನಾ ಹೇಳಿದೆ, ಗುಟ್ಟು
ನನ್ನ ಕಂಗಳ ಬೆಳಕಿನಲ್ಲಿದೆ,
ನನ್ನ ಹಲ್ಲಿನ ಮಿಂಚಿನಲ್ಲಿದೆ,
ನನ್ನ ಸೊಂಟದ ಬಳುಕಿನಲ್ಲಿದೆ,
ನನ್ನ ಪಾದದ ನಲಿವಿನಲ್ಲಿದೆ.
ನನ್ನ ಹೆಣ್ತನ,
ಅದ್ಬುತವೇ.
ಅದ್ಬುತ ಹೆಣ್ಣು,
ಅದು ನಾನೇ.

ಪುರುಷರಾಲೊಚಿಸುವರು ಇವಳಲ್ಲೇನಿದೆ?
ಬಗೆದಷ್ಟೂ ಆಳವಾಗುವ ನಿಗೂಢತೆ.
ತೊರಿಸಿದರೂ ಕಾಣಲಾರರು ಕಾಣ್ಕೆ.

ನಾ ಹೇಳಿದೆ, ಗುಟ್ಟು
ನನ್ನ ಬೆನ್ನಿನ ಸೊಬಗಿನಲ್ಲಿದೆ,
ನನ್ನ ನಗುವಿನ ಚೆಲುವಿನಲ್ಲಿದೆ,
ನನ್ನ ಎದೆಯ ಏರಿನಲ್ಲಿದೆ,
ನನ್ನತನದ ಲಾಲಿತ್ಯದಲ್ಲಿದೆ.
ನನ್ನ ಹೆಣ್ತನ,
ಅದ್ಬುತವೇ.
ಅದ್ಬುತ ಹೆಣ್ಣು,
ಅದು ನಾನೆ.

ಮನದಟ್ಟಾಯಿತೇ ನನ್ನ ಬಾಗದ ತಲೆಯ ಗುಟ್ಟು?
ನಾ ಚೀರುವುದಿಲ್ಲ, ಕುಣಿದಾಡುವುದಿಲ್ಲ.
ಕೇಳಲಾರಿರಿ ನನ್ನ ಜೋರಾದ ಸೊಲ್ಲ.
ಆದರೂ ನಾ ಸಾಗಿದರೆ ನಿಮ್ಮ ಮನದೊಳಗೆ ಅವ್ಯಕ್ತ ಹೆಮ್ಮೆ.

ನಾ ಹೇಳುವೆ, ಗುಟ್ಟು
ನನ್ನ ಹಿಮ್ಮಡಿಯ ಪಡಿನುಡಿಯಲ್ಲಿದೆ,
ನನ್ನ ಕುರುಳಿನ ಸುರುಳಿಯಲ್ಲಿದೆ,
ನನ್ನ ಅಂಗೈ ಹರವಿನಲ್ಲಿದೆ,
ನನ್ನ ಆರೈಕೆಯ ಹಾರೈಕೆಯಲ್ಲಿದೆ.
ನನ್ನ ಹೆಣ್ತನ,
ಅದ್ಬುತವೇ.
ಅದ್ಬುತ ಹೆಣ್ಣು,
ಅದು ನಾನೇ.


ಆಂಗ್ಲಮೂಲ:ಮಾಯಾ ಆಂಗ್ಲೂ
ಕನ್ನಡಕ್ಕೆ:ಶ್ರೀಲಕ್ಷ್ಮಿ

2 thoughts on “ಇಂಗ್ಲೀಷ್ ಕವಿತೆಯ ಅನುವಾದ- ಡಾ.ಶ್ರೀಲಕ್ಷ್ಮಿ

  1. ತುಂಬಾ ಮನಮುಟ್ಟುವ ಕವನ…ಅನುವಾದ ಸರಿಯಾಗಿ ಬಂದಿದೆ..ಅಭಿನಂದನೆಗಳು ನಿಮಗೆ..
    ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top