ಡಾ.ವಿಜಯಲಕ್ಷ್ಮೀ ಪುಟ್ಟಿ ಕವಿತೆ-ತುಂತುರು ಹನಿಗಳು…

ಕಾವ್ಯ ಸಂಗಾತಿ

ತುಂತುರು ಹನಿಗಳು…

ಡಾ.ವಿಜಯಲಕ್ಷ್ಮೀ ಪುಟ್ಟಿ

ಮುದುರಿದ ಭಾವಗಳು
ಬೋರೆಂದು ಸುರಿವ ಮಳೆ ಹನಿಗಳಿಗೆ ಗರಿಗೆದರಿ ಅರಳುತಿವೆ,
ಮತ್ತೆ ಭಾವ ಪಯಣಕ್ಕೆ ಬೇಡವೆಂದರೂ ಅವಳ ನೂಕುತಿವೆ.

ಮಳೆಯ ಹನಿಸುತ್ತ
ತನುವ ತಂಪು ಮಾಡುವ
ಹನಿಗಳಿಗೆ ಹಾಡಿಕೊಂಡು ನಲಿಯಲು ಮುಂಗಾರು ಮಳೆ ಸುಂದರ ಲೋಕ ಹಾಗಾಗಿ ಅವಳು ಸದಾ ಹಾಡು ಗುನುಕುವುದರಲ್ಲಿ ತೃಪ್ತಳು

ಮಳೆಯ ಸುತ್ತಮುತ್ತ ಭಾವನೆಗಳದ್ದೇ ಕಾರುಬಾರು
ಸುರಿವ ಪ್ರತಿಯೊಂದು ಹನಿಯೂ ಪಿಸುಗುಡುತ್ತಿದೆ ಹೆಸರಿಲ್ಲದ ಅಗಾಧ ಒಲವು

ರಬಸದಿ ಸುರಿಯುವ ಮಳೆ
ಬರೆಯಲು ಕಲಿಸಿ ಪ್ರೇಮ ಕವನ,
ಹಾಡಲು ಬಾರದ ಹುಡುಗಿಯು ಗುನುಗಿಕೊಂಡಳು ಮನದೊಳಗೆ
ಪ್ರೀತಿ ಹರಿಸುವ ಭಾವಗೀತೆ

ಸುರಿಯುತಿದೆ ಮಳೆಯು ಬಿಡದೆ,
ಎಲ್ಲ ಹನಿಗಳು ಸುರಿದು
ನೆಲ ಸೇರುವ ಹಠ,
ಮನದೊಳಗೆ ಶುರುವಾಗಿದೆ
ಪ್ರೀತಿ ಕಲಿಸಿದ ಆತ್ಮಾವಲೋಕನದ ಪಾಠ.

ತಂಪು ತುಂತುರು ಹನಿಗಳು
ನೆಪಕ್ಕೆ ಮಾತ್ರ ಮಳೆ
ಮನದ ಬೆಚ್ಚಗಿನ ಭಾವಗಳಿಗೆ
ಕಾವು ಕೊಡುವ ಕವನಗಳು

ಎಡಬಿಡದೆ ಹೊಯ್ಯುವ ಮಳೆ
ಮೆಲ್ಲಗೆ ಬಿಕ್ಕಿದಂತೆ ಅವಳು
ಮರೆಮಾಚಲು ಪ್ರಯತ್ನಿಸಿದೆ ಮಳೆ
ಅವಳ ಕಂಡು ಕಾಣದ ಕಣ್ಣೀರು

ಅದೇ ಮುಂಗಾರು,
ಅದೇ ಮಳೆ ಹನಿಗಳು
ಪ್ರೀತಿಯ ಕೊಡೆ ಹಿಡಿದು,
ನಡೆವ ಹೊಸ ನಡೆ,
ಮುಂಗಾರಿನ ಮಳೆಯ ರಭಸದ ಕಡೆ,
ಭಾವಗಳಿಗೆ ಶ್ರೀರಕ್ಷೆ ನಿನ್ನ ಪ್ರೀತಿಯ ನಡೆ..


ಡಾ. ವಿಜಯಲಕ್ಷ್ಮೀ ಪುಟ್ಟಿ

One thought on “ಡಾ.ವಿಜಯಲಕ್ಷ್ಮೀ ಪುಟ್ಟಿ ಕವಿತೆ-ತುಂತುರು ಹನಿಗಳು…

Leave a Reply

Back To Top