ಬಡಿಗೇರ ಮೌನೇಶ್ ಕವಿತೆ-ತಾರುಣ್ಯ

ಕಾವ್ಯ ಸಂಗಾತಿ

ತಾರುಣ್ಯ

ಬಡಿಗೇರ ಮೌನೇಶ್

ತಾರುಣ್ಯ
ಬರಿಯ ಸಂವತ್ಸರಗಳ
ನಿರ್ಣಯವಲ್ಲ
ಸದಾ ನವೋಲ್ಲಾಸ,
ನವೋತ್ಸಾಹಕೆ ತುಡಿವ
ಅಂತರಂಗದ ಮಿಡಿತ

ತಾರುಣ್ಯ
ರಂಗಿನಾಸೆಗಳ ತುಡಿತವಲ್ಲ
ಹೃದಯದಗ್ಗಿಷ್ಟಿಕೆಯಲಿ
ಧಗ್ಗನೆ ಹೊತ್ತಿ ಉರಿವ ಜ್ವಾಲೆ
ಎಪ್ಪತ್ತರ ಹೃದಯದಲಿ
ಇಪ್ಪತ್ತರ ಹರೆಯದ ತೂಗುಯ್ಯಾಲೆ

ತಾರುಣ್ಯ
ಮೊಗದಲಿ
ಕುಡಿಮೀಸೆ ಚಿಗುರಿದ
ಬರಿಯ ಹರೆಯವಲ್ಲ
ಬಿತ್ತಿದ ಬಯಕೆಗೆ
ನೀರೆರೆದು ಫಲವಾಗಿಸುವ ಪುಣ್ಯಕಾಲ

ತಾರುಣ್ಯ
ಹೂಮಧುವನರಸಿ
ಝೇಂಕರಿಸಿ ಹಾರುವ
ಕೇವಲ ದುಂಬಿಯಲ್ಲ
ಹನಿಹನಿಯ ಕೂಡಿಟ್ಟು
ಜೇನಾಗಿಸುವ ಮಧುರಕಾಲ

ತಾರುಣ್ಯ
ಸಪ್ತಸಾಗರಗಳ ದಾಟುವ
ನಕ್ಷತ್ರಗಳ ಹಿಡಿದು ತರುವ
ವ್ಯರ್ಥ ಕನಸಲ್ಲ
ಅವಕಾಶ ಸಿಕ್ಕರೆ
ಆಕಾಶಕೇ ಏಣಿ ಹಾಕುವ
ಸಾರ್ಥಕ ಹೊಂಗನಸು

ತಾರುಣ್ಯ
ಬರಿ ದೇಹ ಸಂಬಂಧಿಯಲ್ಲ
ಆತ್ಮ ಮನಸುಗಳ ಬಂಧಿ
ಹೊಸತನಕೆ ಕಾತರಿಸುವ ಅನುಬಂಧಿ
ಅಸಾಧ್ಯವ ಸಾಧ್ಯವಾಗಿಸುವ
ಭಾವಾಂಬುಧಿ.


 ಬಡಿಗೇರ ಮೌನೇಶ್

5 thoughts on “ಬಡಿಗೇರ ಮೌನೇಶ್ ಕವಿತೆ-ತಾರುಣ್ಯ

  1. ಕವನವೂ ತರುಣ್ಯದಲ್ಲಿ ಮಿಂದೆದ್ದಿದೆ ಮೌನೇಶ್.

Leave a Reply

Back To Top