ಕಾವ್ಯ ಸಂಗಾತಿ
ಜೀವನ ಜೀವಂತ
ಡಾ.ಡೋ ನಾ ವೆಂಕಟೇಶ


ಎಪ್ಪತ್ತರ ಮೇರೆ ಮೀರಿದಂತೆ
ಚಿನ್ನಾ
ಉಳಿಯದೀ ಕೂದಲಿನ
ಬಣ್ಣ
ಮಿರಮಿರನೆ ಮಿಂಚುವ
ತಲೆಗೆ ಟೋಪಿ
ಕಣ್ಣಿಗೆ ಬಣ್ಣದ ಚಾಟಿ
ನಾನೀಗ ಬುದ್ಧಿವಂತ
ಪ್ರಪಂಚಕ್ಕೆ ಧೀಮಂತ
ವಿಶ್ವಾಸಕ್ಕೆ ಶ್ರೀಮಂತ
ಅನುಭವದ ಮೂಸೆಯಲ್ಲಿ ಅರಳಿದ
ಕಷ್ಟ ಸುಖದ ಪರೀಕ್ಷೆಯಲ್ಲಿ
ಗೆದ್ದ
ಜಿಜ್ಞಾಸೆಗಳ
ಮೆದ್ದ
ನಂಬಿದವರ ಗಮ್ಯ ಸ್ಥಾನ
ಸೇರಿಸಿದ್ದ
ಬದುಕಿನ ಚಕ್ರಕ್ಕೆ
ಅದರ ರಾಗಕ್ಕೆ
ಬದ್ಧ!
ಮರೆತಿದ್ದ ತಲೆ ಉಳಿಸಿಕೊಂಡು
ತಲೆಚಪ್ಪಡಿಯ ಒಳಗೇ
ನಳ ನಳಿಸಿ ಕೊಂಡು
ಮೌನದಾಸರೆಯಲಿ
ಮೆರೆದಿದ್ದು
ಜೀವನದ ಸಾರ್ಥಕತೆ ಚಿನ್ನಾ
ಬಣ್ಣ ಬದಲಿಸದೆ ನಲಿದದ್ದು
ಶುಭ್ರ ನೀಲಾಕಾಶದ
ಅನಂತ
ಆದರೆ ಚಿನ್ನಾ ಅರವತ್ತಕ್ಕೆ
ನಿನಗೇಕೆ ಈ ಅಲವತ್ತು !
ನೆನೆಸಿ ಕೊಂಡು ನಿನ್ನುದ್ದ ಜಡೆಯ
ಕೂರಲೊಲ್ಲದು ಯಾಕೆ ಈ
ತುಟಿಯ ಬಣ್ಣ
ಮೆರೆಯಲೊಲ್ಲದು ಯಾಕೆ ಈ
ಪೀತಾಂಬರಿಯ ಚಿನ್ನ !
ಎಲ್ಲಿ ಹೋಯಿತು
ಆ ಒನಪು
ಆ ಝಲಕು!
ಮರುಗದಿರು ಚಿನ್ನ
ಉಳಿಯುವುದೊಂದೇ ಬಣ್ಣ
ಚೆನ್ನ!
ಪ್ರಪಂಚಕ್ಕೆ
ಬಂದಾಗಿನಿಂದ ಇದ್ದ
ಮಾತು!
ಮಾತು
ಮಾತಿನರಗಿಣಿಯಾಗದೇ
ದುಃಖ ದುಮ್ಮಾನಗಳ
ಮೀರಿದ ಆತ್ಮ ಸಮ್ಮಾನ
ಅದಮ್ಯ ವಿಶ್ವಾಸ
ಅವಿರತ ಪ್ರೀತಿ ನೀತಿ
ನಿನ್ನದಾಗಲಿ ಚೆನ್ನ
ಅರವತ್ತು ಎಪ್ಪತ್ತೇ ಆಗಲಿ
ಯಾರನ್ನು ಯಾರೇ ಅಗಲಲಿ
ಜೀವನ ಜೀವಂತವಾಗಿರಲಿ
ಸತ್ಯ ನಿರಂತರವಾಗಿರಲಿ
ತಥಾಸ್ತು!!
ಡಾ.ಡೋ ನಾ ವೆಂಕಟೇಶ
ನಿಮ್ಮ , “ಜೀವನ ಜೀವಂತ” ಕವನ ನಿಮ್ಮ ಮಾಗಿದ ಜೀವನಚರಿತ್ರೆಯ ಥರ ಅನ್ನಿಸಿತು. ನಿಜ ಒಂದು ಉತ್ತಮ ರಚನೆ. “ಜೀವನದ ಸಾರ್ಥಕತೆ ಚಿನ್ನಾ
ಬಣ್ಣ ಬದಲಿಸಿದೆ ನಲಿದದ್ದು
ಶುಭ್ರ ನೀಲಾಕಾಶದ
ಅನಂತ”
ಬಣ್ಣ ಬದಲಿಸದಿರುವುದೆ ನಮ್ಮ ನಿಮ್ಮಂಥವರ ವೀಕ್ನೆಸ್ ಮತ್ತು ಬದುಕಿನಲ್ಲಿ ಗೆದ್ದ ನೆಮ್ಮದಿ…!
ಈ ಕವನಕ್ಕಾಗಿ ನಿಮಗೆ ಧನ್ಯವಾದ!