ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಕಸ್ತೂರಿ ಪತ್ತಾರ್ ಅವರ

ಗಜಲ್ ಗಳಲ್ಲಿ ಒಲವಿನ ಓಕುಳಿ

ಎಲ್ಲರಿಗೂ ನಮಸ್ಕಾರಗಳು..

ಪ್ರತಿ ವಾರದಂತೆ ಈ ಗುರುವಾರವೂ ಕೂಡ ನಿಮ್ಮ ನಿರೀಕ್ಷೆಯಂತೆ ಒಬ್ಬ ಸುಖನವರ್ ಅವರ ಪರಿಚಯದೊಂದಿಗೆ ನಿಮ್ಮ ಮುಂದೆ ಬರುತ್ತಿರುವೆ. ಅವರ ಹೆಜ್ಜೆ ಗುರುತುಗಳೊಂದಿಗೆ ಗಜಲ್ ನಾಕದಲ್ಲಿ ಒಂದು ಸುತ್ತು ವಿಹರಿಸಿ ಬರೋಣವೇ.. ಬನ್ನಿ, ಮತ್ತೇಕೆ ತಡ…

“ನದಿಗೆ ಯಾವ ದೂರು ಹರಿವಿನೊಂದಿಗೆ ಇಲ್ಲ
ನನ್ನ ಬಾಯಾರಿಕೆ ಸಂಬಂಧ ನೀರಿನೊಂದಿಗೆ ಇಲ್ಲ”
-ಶಹರಯಾರ್

 ನಮ್ಮ ಈ ಭೂಮಂಡಲ ನೂರಾರು ಕೋಟಿ ಜನರನ್ನು, ಅಸಂಖ್ಯಾತ ಕೋಟಿ ಜೀವ ಸಂಕುಲಗಳನ್ನು ಹೊತ್ತು ನಿಂತಿದೆ. ನಾಗರಿಕ, ಪ್ರಜ್ಞಾವಂತ ಎಂದು ಬೀಗುವ ಮನುಷ್ಯನ ಜೀವನವನ್ನು ಗಮನಿಸಿದಾಗ ಅಳುವವರ ಸಂಖ್ಯೆಯಾಗಲಿ, ಅಳಿಸುವವರ ಸಂಖ್ಯೆಯಾಗಲಿ ಕಡಿಮೆಯೇನಿಲ್ಲ. ಹಾಗೆ ನೋಡಿದರೆ ಸಂತೃಪ್ತ ಜೀವಿಗಳ ಸಂಖ್ಯೆ ತುಸು ಕಡಿಮೆಯೇ ಎನ್ನಬಹುದು. ಇದಕ್ಕೆ ಕಾರಣವನ್ನು ಹುಡುಕುತ್ತ ಹೋದಾಗ 'Living is an art' ಎಂಬುದು ನಮ್ಮ ಗಮನಕ್ಕೆ, ಅನುಭವಕ್ಕೆ ಬರದೇ ಇರದು! ಸುಖ ಮತ್ತು ದುಃಖ ಎನ್ನುವವು ನಾವು ರಚಿಸಿಕೊಂಡಿರುವ ವರ್ತುಲಗಳು, ನಮ್ಮ ವಿವೇಚನೆಯ ಫಲಶೃತಿಗಳು. "ನಮ್ಮ ಕರಾಳ ಕ್ಷಣಗಳಲ್ಲಿ ನಾವು ಬೆಳಕನ್ನು ನೋಡಲು ಗಮನಹರಿಸಬೇಕು" ಎಂಬ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ರವರ ಮಾತು ಬದುಕಿನಲ್ಲಿ ಬಂದೊದಗುವ ಕರಾಳ ಕ್ಷಣಗಳನ್ನು ನಾವು ಹೇಗೆ ಸ್ವೀಕರಿಸಬೇಕು ಎಂಬುದನ್ನು ಸಾರುತ್ತದೆ. ವಿಶ್ವದ ಅತ್ಯುತ್ತಮ ಮತ್ತು ಸುಂದರವಾದ ವಸ್ತುಗಳನ್ನು ನೋಡಲಾಗಲಿ ಅಥವಾ ಸ್ಪರ್ಶಿಸಲಾಗಲಿ ಆಗುವುದಿಲ್ಲ. ಅವುಗಳನ್ನು ಹೃದಯದಿಂದ ಮಾತ್ರ ಅನುಭವಿಸಬಹುದು, ಅನುಭವಿಸಬೇಕು. ನಾವು ಜೀವನದಲ್ಲಿ ಏನನ್ನು ಹೊಂದಿದ್ದೇವೆ ಎಂಬುದನ್ನು ನೋಡಿದರೆ, ನಾವು ಹೆಚ್ಚಿನದನ್ನೇ ಹೊಂದಿದ್ದೇವೆ. ಆದರೆ ಜೀವನದಲ್ಲಿ ಏನನ್ನು ಹೊಂದಿಲ್ಲ ಎಂಬುದನ್ನು ಯೋಚಿಸಿದರೆ, ನಮಗೆ ಯಾವುದೂ ಎಂದಿಗೂ ಸಾಕಾಗುವುದಿಲ್ಲ. ಬೇರೆಯವರನ್ನು ಅನುಕರಣೆ ಮಾಡಿ ಯಶಸ್ವಿಯಾಗುವುದಕ್ಕಿಂತ ಸ್ವಂತಿಕೆಯಲ್ಲಿ ವಿಫಲರಾಗುವುದೆ ಉತ್ತಮ. ಕಾರಣ ಅದರಿಂದ ಅನುಭವದ ಅಮೃತವಾದರೂ ದೊರೆಯುತ್ತದೆ! "ನೀವು ಸಾಮಾನ್ಯ ಅಪಾಯಕ್ಕೆ ಸಿದ್ಧರಿಲ್ಲದಿದ್ದರೆ, ನೀವು ಸಾಮಾನ್ಯಕ್ಕೆ ನೆಲೆಗೊಳ್ಳಬೇಕಾಗುತ್ತದೆ" ಎಂಬ ಅಮೇರಿಕನ್ ಲೇಖಕ ಜಿಮ್ ರೋನ್ ರವರ ಹೇಳಿಕೆ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಪ್ರಮಾಣಿಕರಿಸುತ್ತದೆ. ನಾವು ಕೈಗೊಂಡ ಕಾರ್ಯದಲ್ಲಿ ವಿಫಲವಾದರೆ ಸಹಜವಾಗಿಯೇ ನಮಗೆ ನಿರಾಶೆಯಾಗಬಹುದು, ನಿರಾಶೆಯಾಗುತ್ತದೆ. ಆದರೆ ನಾವು ಪ್ರಯತ್ನಿಸದೇ ಇದ್ದರೆ... ಖಂಡಿತವಾಗಿಯೂ ನಾವು ಅವನತಿ ಹೊಂದುತ್ತೇವೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮಾರ್ಗವೆಂದರೆ ಮಾತನಾಡುವುದನ್ನು ಬಿಟ್ಟು, ಕ್ರಿಯೆಯಲ್ಲಿ ತೊಡಗುವುದೇ ಆಗಿದೆ. ನಾವು ಹೇಳಿದ್ದನ್ನು, ಮಾಡಿದ್ದನ್ನು ಜನರು ಮರೆಯಬಹುದು.‌ ಆದರೆ ನಾವು ಅವರನ್ನು ಹೇಗೆ ಭಾವಿಸಿದ್ದೇವೆ ಎಂಬುದನ್ನು ಜನರು ಎಂದಿಗೂ ಮರೆಯುವುದಿಲ್ಲ. ಯಾರು ಸಂತೋಷವಾಗಿರುತ್ತಾರೋ ಅವರು ತಮ್ಮ ಸಹಚರರೂ ಸಹ ಸಂತೋಷದಲ್ಲಿ ಇರುವಂತೆ ಮಾಡುತ್ತಾರೆ. ಇದೆಲ್ಲವನ್ನೂ ಗಮನಿಸಿದಾಗ ಬದುಕುವುದು ಒಂದು ಕಲೆ ಎಂಬುದು ಮನವರಿಕೆಯಾಗುತ್ತದೆ. ಈ ಕಲೆಯನ್ನು ಸಾಹಿತ್ಯದ ಹಲವು ವಿಧಗಳು ಕರಗತ ಮಾಡಿಕೊಂಡಿದ್ದು, ಸಹೃದಯ ಓದುಗರಿಗೆ ಹಂಚುತ್ತಲೇ ಬಂದಿವೆ. ಅಂಥಹ ವೈವಿಧ್ಯಮಯ ಪ್ರಕಾರಗಳಲ್ಲಿ ಗಜಲ್ ಕೂಡ ಒಂದು. ಇಂಥಹ ಗಜಲ್ ಲೋಕದಲ್ಲಿ ಮಿನುಗುತ್ತಿರುವ ಅಗಣಿತ ತಾರೆಗಳಲ್ಲಿ ಶ್ರೀಮತಿ ಕಸ್ತೂರಿ ಡಿ. ಪತ್ತಾರ್ ಅವರೂ ಒಬ್ಬರು. 

      ಶ್ರೀಮತಿ ಕಸ್ತೂರಿ ಡಿ.ಪತ್ತಾರ್ ರವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಶ್ರೀ ಶೇಖರಪ್ಪ ಬಡಿಗೇರ ಮತ್ತು ಶ್ರೀಮತಿ ಪಾರ್ವತಮ್ಮ ಬಡಿಗೇರ ದಂಪತಿಗಳ ಮಗಳಾಗಿ ಜನಿಸಿದರು. ಪಿ.ಯು.ಸಿ ಮತ್ತು ಜೆ.ಒ.ಡಿ.ಸಿ ಪೂರೈಸಿರುವ ಇವರು ಪಂಡಿತ್ ದೇವೇಂದ್ರ ಕುಮಾರ ಅವರನ್ನು ಮದುವೆಯಾಗಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ಕಸ್ತೂರಿ ಪತ್ತಾರ್ ಅವರು ಸಹಜವಾಗಿಯೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದು, ಕಾವ್ಯ, ಹನಿಗವನ, ಚುಟುಕು, ವಚನ, ಭಾವಗೀತೆ, ನುಡಿಮುತ್ತುಗಳು, ಶಾಯರಿ, ಲೇಖನ ಹಾಗೂ ಗಜಲ್... ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಇವರು 'ಅಂತರಂಗದರಿವು' ಎಂಬ ಆಧುನಿಕ ವಚನ ಸಂಕಲನ, 'ಭಾವಜೇನು', 'ಕಾವ್ಯಾಂತರಂಗ' ಹಾಗೂ 'ಭಾವತೊರೆ' ಎಂಬ ಭಾವಗೀತೆ ಸಂಕಲನಗಳು, 'ನುಡಿಬೆಳಗು' ಎಂಬ ಸುಭಾಷಿತ ಸಂಕಲನ, 'ಪ್ರೀತಿ ಘಮಲು' ಎಂಬ ಶಾಯರಿ ಸಂಕಲನ ಮತ್ತು 'ಹೃದಯಗಳು ಮಾತಾಡಿವೆ' ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. 'ಭಾವ ಪ್ರವಾಹ' ಎಂಬ ಕೃತಿಯು ಅಚ್ಚಿನಲ್ಲಿದೆ. ಇವುಗಳೊಂದಿಗೆ ಇವರ ಸಾಹಿತ್ಯದ ಹಲವು ಬಿಡಿ ಪ್ರಕಾರಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

      ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ನಿರತರಾಗಿರುವ ಶ್ರೀಮತಿ ಕಸ್ತೂರಿ ಡಿ. ಪತ್ತಾರ್ ಅವರು ಅನೇಕ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ವಚನಗೋಷ್ಠಿ, ಕವಿಗೋಷ್ಠಿ ಮತ್ತು ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ವಾಚನ ಮಾಡಿದ್ದಾರೆ. ಜೊತೆಗೆ ಹಲವಾರು ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿ ತಮ್ಮ ಸಾಹಿತ್ಯ ಪ್ರೀತಿಯನ್ನು ಅರುಹಿದ್ದಾರೆ. ಸಾಂದರ್ಭಿಕವಾಗಿ ಉಪನ್ಯಾಸಗಳನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಇವರ ಈ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಕ್ರೀಯತೆಗೆ ಬಹಳ ಸಂಘ, ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಕಾವ್ಯಶ್ರೀ ಪ್ರಶಸ್ತಿ, ಕಾವ್ಯಸಿಂಚನ ಕಲಾ ಐಸಿರಿ ಪ್ರಶಸ್ತಿ, ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ... ಮುಂತಾದವಗಳನ್ನು ಹೆಸರಿಸಬಹುದು. 

    ಸಮಯವು ಕೇವಲ ಗಡಿಯಾರದ ಮುಳ್ಳಲ್ಲ. ಇದು ಕೇವಲ ಋತುಗಳ ಬದಲಾವಣೆಯಲ್ಲ. ಇದು ಅಮೂಲ್ಯ ಕ್ಷಣಗಳು, ಅನಂತ ಸಣ್ಣ ಸಂತೋಷಗಳು ಮತ್ತು ಆಶೀರ್ವಾದಗಳು, ಅಮೂಲ್ಯವಾದ ನಗು, ಕಣ್ಣೀರು ಮತ್ತು ಹೃದಯ ಬಡಿತಗಳ ನಿಧಿಯಾಗಿದೆ. ಪರಿಸ್ಥಿತಿ, ಸನ್ನಿವೇಶಗಳು ಪ್ರಭಾವ ಬೀರಿದಾಗಲೆಲ್ಲ ಮಾನವನ ಪ್ರೇಮದ ಬಗ್ಗೆಯ ದೃಷ್ಟಿಕೋನಗಳು ವ್ಯತ್ಯಾಸವಾಗುತ್ತ ಬಂದಿವೆ. ಪ್ರೀತಿ ಎಂಬುದು ಜೀವನದ ಹೃದಯ ಬಡಿತ. ಹೃದಯದ ಭಾಷೆ ಮತ್ತು ಸಂದರ್ಭವೇ ಗಜಲ್ ಹೃದಯ ಬಡಿತ. ಗಜಲ್ ನ ಅಶಅರ್ ಅನ್ನು ಒಟ್ಟಿಗೆ ಹಾಡಿದಾಗ, ಸಹೃದಯಿಗಳ ಹೃದಯಗಳು ಒಟ್ಟಿಗೆ ಬಡಿಯಲು ಪ್ರಾರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಗಜಲ್ ಜೀವಂತ ವಸ್ತುವಾಗಿದೆ. ಇದೊಂದು ಹಕ್ಕಿ; ಇದು ಮಧುರವಾದ ಧ್ವನಿಯನ್ನು ಹೊಂದಿದೆ. ಗಜಲ್ ನ ಅಶಅರ್ ರೆಕ್ಕೆಗಳು. ಗಜಲ್ ಗೆ ಹೃದಯ ಬಡಿತವಿದೆ. ಓದುಗರು ಓದಿದಾಗ ಅವರು ಅವುಗಳನ್ನು ಅನುಭವಿಸುತ್ತಾರೆ. ಇದುವೇ ಗಜಲ್ ನ ತಾಕತ್ತು. ನಮ್ಮ ಹೃದಯ ಬಡಿತವನ್ನು ನಮ್ಮ ಮನಸ್ಸಿನ ಶಾಂತಿಯೊಂದಿಗೆ ಹೊಂದಿಸಿದಾಗ ಗಜಲ್ ಕಲಾಕೃತಿಯೊಂದನ್ನು ರಚಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಯರಾ ಶ್ರೀಮತಿ ಕಸ್ತೂರಿ ಡಿ. ಪತ್ತಾರ್ ಅವರ 'ಹೃದಯಗಳು ಮಾತಾಡಿವೆ'ಎಂಬ ಗಜಲ್ ಸಂಕಲನವನ್ನು ಗಮನಿಸಿದಾಗ ಮಹಿಳಾ ಅಸ್ಮಿತೆಯ ವಿವಿಧ ಮಜಲುಗಳು, ಪ್ರೇಮಾರಾಧನೆಯ ಸಿಂಚನ, ಕನವರಿಕೆ, ನಿರೀಕ್ಷೆ, ನಿವೇದನೆ, ಸಾಮಿಪ್ಯ, ತುಂಟಾಟದ ರಂಗೋಲಿ, ಮಿಲನದ ರಸ ಯಾತ್ರೆ, ಅಗಲಿಕೆಯ ಬೇಗುದಿ, ನಯವಂಚನೆಯ ಕಣ್ಣಾಮುಚ್ಚಾಲೆ, ಮೋಸದ ಜ್ವಾಲೆ, ಏಕಾಂತದ ಕರಾಳತೆ, ಸಾಮಾಜಿಕ ಸಮಸ್ಯೆಗಳ ತಲ್ಲಣ, ಪ್ರಕೃತಿಯ ಬೆಡಗು, ಸಂಬಂಧಗಳ ತೊಳಲಾಟ, ವಾಸ್ತವದ ಪ್ರತಿಬಿಂಬ.... ಎಲ್ಲವೂ ಒಪ್ಪವಾಗಿ ಜೋಡಿಸಲಾಗಿದೆ ಎಂಬ ಭಾವ ಈ ಸಂಕಲನ ಓದಿದಾಗ ಓದುಗರ ಸ್ಮೃತಿ ಪಟಲದಲ್ಲಿ ಮೂಡುತ್ತದೆ. 

   ಪ್ರೀತಿ ಎಂಬುದು ಅಕ್ಷಯ ಪಾತ್ರೆ, ಕಡಲ ಮುತ್ತು. ಇದಕ್ಕೆ ಕೊನೆಯೆಂಬುದೆ ಇಲ್ಲ, ನಿತ್ಯ ನೂತನವೇ ಇದರ ಸ್ಥಾಯಿ ಭಾವ. ಇದರ ಕುರಿತು ಮಾತಾಡದ, ಬರೆಯದ, ಓದದ ವ್ಯಕ್ತಿ, ಸಾಹಿತಿಗಳೇ ಇಲ್ಲ ಎಂಬುದು ಸೂರ್ಯ, ಚಂದ್ರರಷ್ಟೇ ಸತ್ಯ. ಗಜಲ್ ಗೋ ಕಸ್ತೂರಿ ಪತ್ತಾರ್ ಅವರು ಹೆಣ್ಣಿನ ಅಂತರಂಗದ ಪ್ರೀತಿಯ ಸರೋವರವನ್ನು ಈ ಷೇರ್ ನಲ್ಲಿ ಸೆರೆ ಹಿಡಿದಿದ್ದಾರೆ. 

“ಬೆಳಗು ಮುಂಜಾವಲಿ ನಿನ್ನ ಕನಸಿನ ಸದಾಶೆಯಗಳ ಬೇಡಿರುವೆ ದೇವನಲ್ಲಿ
ನನಬಾಳ ಮಂದಾರ ನನ್ಹಣೆಯ ಸಿಂಧೂರವಾಗಿ ಪ್ರೀತಿಸುತ್ತೇನೆ ಸರದಾರ”

ಕನಸುಗಳು ಮನುಷ್ಯನ ಜೀವಂತಿಕೆಯ ಲಕ್ಷಣ, ಬತ್ತದ ಭಾವನೆಗಳ ಒರತೆ. ಅದರಲ್ಲೂ ಮುಂಜಾನೆಯ ಕನಸುಗಳು ದಿಟವಾಗುತ್ತವೆ ಎಂಬುದು ಹಲವರ ಬಲವಾದ ನಂಬಿಕೆ. ತನ್ನ ಕನಸಿನಲ್ಲೂ ಇನಿಯನನ್ನು ಕನವರಿಸುತ್ತ, ಅವನ ಆಸೆಗಳೆಲ್ಲ ಈಡೇರಲಿ ಎಂದು ದೇವರಲ್ಲಿ ಮೊರೆಯಿಡುವ ಹಾಗೂ ಸಿಂಧೂರದ ಪ್ರತೀಕವಾಗಿ ಪ್ರೀತಿಸುವ ಪ್ರಿಯತಮೆಯ ಮನದ ಮಾತುಗಳು ಇಲ್ಲಿ ಅಚ್ಚಳಿಯದೆ ಉಳಿದಿವೆ.

“ಜೇನಿನಂಥ ನಿನ್ನ ಮಾತು ನೋವಿಗೆ ಔಷಧಿಯಾಗಿತ್ತು ಈಗ ನಂಜಾಗಿದ್ದೇಕೆ
ಗೀಚಿದ ಕವನದ ಸಾಲುಗಳ ಮೇಲೆ ಪ್ರೀತಿ ತುಂಬಿತ್ತು ಈಗ ನಂಜಾಗಿದ್ದೇಕೆ”

ಮಾತಿಗೆ ಬಹುದೊಡ್ಡ ಶಕ್ತಿಯಿದೆ. ಅದು ಕಲ್ಲನ್ನೂ ಕರಗಿಸಬಲ್ಲದು, ನರಕವನ್ನೂ ನಾಕವಾಗಿಸಬಲ್ಲದು. ಎಷ್ಟೋ ನೋವುಗಳಿಗೆ ಮುಲಾಮು ಹಚ್ಚಿ ಮನಸ್ಸಿಗೆ ಮುದ ನೀಡಬಲ್ಲದು. ಇಂಥಹ ಮಾತು ಪ್ರೇಮಿಗಳ ಸಾಂಗತ್ಯದಲ್ಲಿ ಹೇಗೆ ಇರುತ್ತದೆ ಎಂದು ಯೋಚಿಸಿದರೆ ಒಂದು ಕ್ಷಣ ಮೈ ರೋಮಾಂಚನ ಉಂಟುಮಾಡುತ್ತದೆ. ಇಲ್ಲಿ ಬಳಕೆಯಾದ ‘ಈಗ ನಂಜಾಗಿದ್ದೇಕೆ’ ಎಂಬ ರದೀಫ್ ಮೌನದ ತೀವ್ರತೆಯನ್ನು, ಮಾತಿಗಿರುವ ಸಂಜೀವಿನಿಯನ್ನು ಸಾಕ್ಷಿಕರಿಸುತ್ತದೆ. ಈ ಮೇಲಿನ ಷೇರ್ ನಲ್ಲಿ ದೂರಾದ ಪ್ರೇಮಿಗಳ ತೊಳಲಾಟದ ಚಿತ್ರಣವನ್ನು ಓದುಗರ ಕಣ್ಣಿಗೆ ಕಟ್ಟುವಂತೆ ಸುಖನವರ್ ಕಸ್ತೂರಿ ಪತ್ತಾರ್ ಅವರು ಚಿತ್ರಿಸಿದ್ದಾರೆ.‌

    ಸಂಗೀತವು ಬರಹಗಾರನ ಹೃದಯ ಬಡಿತವಾಗಿದೆ. ಹೃದಯದ ಸಂಪೂರ್ಣ ಮಿಡಿತದೊಳಗೆ ರೂಪುಗೊಂಡ ಅದಮ್ಯ ಕ್ಷಣದಲ್ಲಿಯೇ ಗಜಲ್ ರೂಪ ತಾಳುತ್ತದೆ. ಹೃದಯದಿಂದ ಗಜಲ್ ಬರೆಯುವಾಗ ಅಶಅರ್ ಮುಖಮ್ಮಲ್ ಆಗುತ್ತವೆ. ಈ ದಿಸೆಯಲ್ಲಿ ಶಾಯರಾ ಶ್ರೀಮತಿ ಕಸ್ತೂರಿ ಡಿ. ಪತ್ತಾರ್ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ಮೂಡಿಬರಲಿ ಎಂದು ಶುಭ ಹಾರೈಸುತ್ತೇನೆ. 

“ಸಾವನ್ನು ಸಹ ಗುಣಪಡಿಸಬಹುದು
ಜೀವನಕ್ಕೆ ಯಾವ ಚಿಕಿತ್ಸೆಯೂ ಇಲ್ಲ”
-ಫಿರಾಕ್ ಗೋರಕಪುರಿ

ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ವಿಶೇಷವಾಗಿ ಗಜಲ್ ನ ಪರಂಪರೆ ಬಗ್ಗೆ ಬರೆಯುತಿದ್ದರೆ ಕಾಲದ ಗೊಡವೆಯೇ ಇರುವುದಿಲ್ಲ. ಆದಾಗ್ಯೂ ಆ ಕಾಲದ ಮುಂದೆ ಮಂಡಿಯೂರಲೆಬೇಕಲ್ಲವೇ.‌ ಅಂತೆಯೇ ಈ ಲೇಖನಿಗೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top