ಕಾವ್ಯ ಸಂಗಾತಿ
ಅಪ್ಪ ಆಲದ ಮರ
ಪ್ರೊ. ಸಿದ್ದು ಸಾವಳಸಂಗ ಕವಿತೆ
ಅಪ್ಪ
ವಿಶಾಲ ಆಲದ ಮರ
ನೀಲಿ ಆಗಸ !
ಅವನನ್ನು ನೋಡುವುದೇ
ಕಣ್ಣಿಗೊಂದು ಸಂಭ್ರಮ !
ಬಿಳಿ ದೋತರ,ನೆಹರು ಶರ್ಟ್
ಧರಿಸಿಕೊಂಡು ಹೊರಟರೆ
ಓಣಿಯಲ್ಲಿ ಎಲ್ಲರೂ ಎದ್ದು ನಿಂತು
ಗೌರವದಿಂದ ನಮಸ್ಕರಿಸುವವರೆ!
ಆದರೆ ಅಪ್ಪನಿಗೆ
ವಿಶ್ರಾಂತಿಯೆಂಬುದಿಲ್ಲ
ಅಪ್ಪನೆಂದರೆ ದುಡಿತ
ದುಡಿತವೆಂದರೆ ಅಪ್ಪ !
ದುಡಿದದ್ದನ್ನು ತಂದು
ಅವ್ವನ ಕೈಗಿತ್ತು ನೆಮ್ಮದಿಯಿಂದ ಕುಳಿತುಬಿಡುವ !
ಅವನ ಕಿಸೆಯಲ್ಲಿ
ಒಂದು ಬೀಡಿ ಕಟ್ಟು,ಕಡ್ಡೆಬ್ಬಿ ಮಾತ್ರ
ಯಾವಾಗಲೋ ಒಮ್ಮೊಮ್ಮೆ ಕುಡಿತ
ಇರಬಹುದು ನೋವು,ಶ್ರಮ
ಮರೆಯುವ ತುಡಿತ !
ಅಪ್ಪ-ಅವ್ವ ಜಗಳವಾಡಿದ್ದು
ನಮಗೆ ಗೊತ್ತಿಲ್ಲ !
ಅವರಿಗೆ ಪ್ರೀತಿಸುವುದು
ಮಾತ್ರ ಗೊತ್ತಿತ್ತು !
ಮಕ್ಕಳೆಂದರೆ ಅವರಿಬ್ಬರಿಗೂ ಜೀವ
ಮಕ್ಕಳಿಗಾಗಿಯೇ ತೆಯ್ದರು ಗಂಧದಂತೆ ತಮ್ಮ ಜೀವ !!
ಪ್ರೊ. ಸಿದ್ದು ಸಾವಳಸಂಗ
Super lines sir