ಇಂದಿರಾ ಮೋಟೆಬೆನ್ನೂರ-ಓ ಮೇಘವೇ..

ಕಾವ್ಯ ಸಂಗಾತಿ

ಓ ಮೇಘವೇ..

ಇಂದಿರಾ ಮೋಟೆಬೆನ್ನೂರ.

ಒಡಲ ತುಂಬ ಮಡಿಲ ತುಂಬ
ಕಡಲ ಪ್ರೀತಿ ಹೊತ್ತು
ಸಾಗಿದ ಕರಿ ಕಪ್ಪು ಮೋಡವೇ…
ನಾಲ್ಕಾರು ಹನಿ ಪ್ರೀತಿ
ನನ್ನೆದೆಯ ಅಂಗಳದಲೂ
ಹನಿಸಿ ಮುನ್ನಡೆ…
ಮುಗಿಲ ದಾರಿಯಲಿ
ನಿನ್ನೂರು ಬಲು ದೂರ..

ತುಂಬಿ ತುಳುಕುವ ಒಲವ
ಬಟ್ಟಲಿನಲ್ಲಿ ಒಂದೆರಡು
ಸ್ನೇಹಾಮೃತ ಬಿಂದುಗಳ
ನನಗೂ ಉಣಿಸಿ ಮುನ್ನಡೆ…
ಮೇಘ ರಾಜನೇ..
ನಿನ್ನ ಸಿಂಧುವಿನಂತ
ಒಲವ ಅಂಬುಧಿಯಲ್ಲಿ
ಕೊರತೆಯಾಗದು…
ಎರಡು ಹನಿ ಹನಿದರೆ.,..

ಏನು ಕಾರಣವೋ..
ಈಗ ಬಾರದಿದ್ದರೂ
ಇನ್ನೊಮ್ಮೆ, ಮುಂದೆ
ಎಂದಾದರೂ ಬರಲೇಬೇಕು
ಈ ಬಾರಿ ಬಾರದ ಮಳೆ…
ಬಳಲಿ ಬಾಯಾರಿದ ಅವನಿಯಿಲ್ಲಿ
ಅನುದಿನವೂ ಕಾಯುತಿಹಳು..

ಬಾರದ ಆ ಮಳೆಯ ಹಾದಿಯನು
ಕಾಯುವಿಕೆಯ ಈ ತಪಸ್ಸಿಗೆ…
ಬಾರದೇ ಮುನಿದು ಹೋದ
ಮಳೆರಾಯ ಒಲಿದು
ಹನಿಯಲೇ ಬೇಕು..
ಬಿತ್ತಿದ ಸ್ನೇಹ ಪ್ರೀತಿಯ ಬೀಜ
ಮೊಳಕೆಯೊಡೆದು ಸಸಿಯಾಗಿ
ಹೂ ಬಿಡಲೇ ಬೇಕು…

ಪರಿಮಳ ಬುಗ್ಗೆ ಚಿಮ್ಮಿ
ಹೊರ ಹೊಮ್ಮಲೇ ಬೇಕು..
ಮೊದಲ ಮುತ್ತಿನ ಕಾಣಿಕೆ
ಮೊದಲ ಮಳೆ ಮಣ್ಣಿನ ಘಮಲು..
ಮುತ್ತಿದ ಹನಿ ಸ್ನೇಹದಮಲು…
ಬಾರದೇ ಹೋದ ಮಳೆಯೇ
ನೀ ತಿಳಿ….ಮರಳಿ ಬಂದಿಲ್ಲಿ ಹನಿ
ಪ್ರೀತಿಯ ಪನ್ನೀರ ಹನಿ ಹನಿ
ಒಲವ ಜೇನಹನಿ…..

ಯಾರ ಪ್ರೇಮ ಸಂದೇಶ ಹೊತ್ತು
ಅವಸರದಲಿ ಓಡುತಿರುವೆ…
ನೀಲ ಶ್ಯಾಮ ಮೇಘರಾಜನೇ….
ಬಾರದ ಮಳೆ ಬಂದಾಗ..
ಮತ್ತೆ ಆಗ ನಗುವಳು ಅವನಿ..
ನಿಲ್ಲು ನಿಲ್ಲಲೇ ಮೋಡ….
ನಾನು ಬರುವೆ ನಿನ್ನ ಕೂಡ…
ಜೊತೆಯಾಗಿ ಹಾಡುವ ಮಳೆ ಇಳೆಯ
ನಗುವ ನಲಿವ ಚೆಲುವ ಹಾಡ…..


ಇಂದಿರಾ ಮೋಟೆಬೆನ್ನೂರ.

Leave a Reply

Back To Top